ಚಾರ ಶೌರ್ಯ ಘಟಕದ ಛಲ ಬಿಡದ ಸಾಧನೆ ಒಂದು ತಿಂಗಳು ಸ್ವಚ್ಛತೆಗೆ ಮೀಸಲು

ರಾಜ್ಯದಲ್ಲಿರುವ ಶೌರ್ಯ ತಂಡದ ಸದಸ್ಯರು ನಿತ್ಯ ಒಂದಲ್ಲೊ0ದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುತ್ತಾರೆ. ಎಲ್ಲೆ ಅವಘಡಗಳು ಸಂಭವಿಸಿದರೂ ಅಲ್ಲಿ ಶೌರ್ಯ ತಂಡದವರಿರುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀ ಹೆಗ್ಗಡೆಯವರು ಹಾಕಿಕೊಟ್ಟ ‘ಸಮಾಜ ಸೇವೆ’ ಎಂಬ ಮಾರ್ಗದಲ್ಲಿ ನಡೆಯುವ ಪ್ರತಿಯೊಂದು ಶೌರ್ಯ ತಂಡಗಳು ತಮ್ಮದೇ ಆದ ಬೇರೆ ಬೇರೆ ಸಾಧನೆ, ಪ್ರಯತ್ನಗಳಿಂದ ಮನೆ ಮಾತಾಗಿವೆ. ಅವುಗಳನ್ನು ನಿರಂತರದ ಪ್ರತಿ ಸಂಚಿಕೆಯಲ್ಲಿ ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಹೆಬ್ರಿಯ ಸರ್ಕಲ್‌ನಿಂದ-ಬೇಳ0ಜೆ, ದೂಪದ ಕಟ್ಟೆಯ ಅರಣ್ಯ ಪ್ರದೇಶ, ಬೇಳಂಜೆ ಗರಡಿ ರಸ್ತೆ, ಹಾಲಿ ಕೊಡ್ಲು, ಕುಚ್ಚೂರು ರಸ್ತೆ, ಚಾರ ಬಸದಿ ರಸ್ತೆಗಳ ಇಕ್ಕೆಲಗಳು ಸಂಪೂರ್ಣ ಕಸದಿಂದ ತುಂಬಿದ್ದವು. ವಾಹನದಲ್ಲಿ ಪ್ರಯಾಣಿಸುವವರು ಪ್ಲಾಸ್ಟಿಕ್ ಚೀಲ, ಬಾಟಲ್, ತಮ್ಮ ಮನೆಯ ಎಲ್ಲಾ ತ್ಯಾಜ್ಯಗಳನ್ನು ಇಲ್ಲಿ ತಂದು ಸುರಿದ ಪರಿಣಾಮ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಈ ರಸ್ತೆಗಳಲ್ಲಿ ಪ್ರಯಾಣಿಸಬೇಕಿತ್ತು.
ಒಂದು ತಿಂಗಳ ಪ್ರಯತ್ನ
ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ‘ಶೌರ್ಯ ವಿಪತ್ತು ನಿರ್ವಹಣಾ ಘಟಕ ಚಾರ, ಬೇಳಂಜೆ’ಯ ಸದಸ್ಯರು ಈ ರಸ್ತೆಗಳನ್ನು ಸ್ವಚ್ಛಗೊಳಿಸುವ ಪಣ ತೊಟ್ಟರು. ಶೌರ್ಯ ತಂಡದಲ್ಲಿರುವ ಲತಾ, ಚಂದ್ರನಾಯ್ಕ, ಸಂಗೀತಾ, ಸುಮಲತಾ, ಗಂಗಾರತ್ನ, ಶ್ರೀನಿವಾಸ ನಾಯ್ಕ, ಸಂತೋಷ್ ನಾಯ್ಕ, ಸತೀಶ ನಾಯ್ಕ, ಕುಮಾರ ನಾಯ್ಕ, ಮಹೇಶ ನಾಯ್ಕ, ಸಂತೊಷ ಪೂಜಾರಿ, ರಾಘವೇಂದ್ರ ಎಸ್., ಸುಬ್ರಹ್ಮಣ್ಯ, ಸುರೇಂದ್ರ ನಾಯ್ಕ, ಕೆ. ಕೃಷ್ಣ ನಾಯ್ಕ, ನಿಖಿತ್ ಕುಮಾರ್, ನಯನ ಕುಮಾರ್, ಶಶಿಕಲಾ, ರಾಘವೇಂದ್ರ, ರಾಧಿಕಾ, ಅನಿತಾ, ಸಹದೇವ್ ಹೀಗೆ 22 ಮಂದಿಯೂ ವಾಹನ ಚಾಲಕ, ಹುಲ್ಲು ಕಟಾವು, ಗಾರೆ ಕೆಲಸ, ಛಾಯಾಚಿತ್ರಗ್ರಾಹಕ, ಗೇರು ಬೀಜದ ಫ್ಯಾಕ್ಟರಿಯಲ್ಲಿ ಹೀಗೆ ಬೇರೆ ಬೇರೆ ನಿತ್ಯ ಕಸುಬನ್ನು ನಂಬಿ ಬದುಕುವವರು. ಒಂದೆರಡು ದಿನಗಳ ಕಾಲ ಕೆಲಸಕ್ಕೆ ರಜೆ ಹಾಕಿ ರಸ್ತೆಯ ಇಕ್ಕೆಲಗಳ ಕಸ ಹೆಕ್ಕಿದರೆ ಅದು ಮುಗಿಯಲಾರದು ಎಂಬ ಅರಿವು ಇವರಿಗಿತ್ತು. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ತಮ್ಮ ಕೆಲಸದ ಬಿಡುವಿನ ಸಮಯ ಅಂದರೆ ಸಂಜೆ ಗಂಟೆ 5.45 ರಿಂದ ಕತ್ತಲಾಗುವವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆಯನ್ನು ಮಾಡುವ ನಿರ್ಧಾರ ಮಾಡಿದರು. ಅಕ್ಟೋಬರ್ 02, 2023ರ ಗಾಂಧೀಜಯoತಿಯoದು ಆರಂಭವಾದ ಸ್ವಚ್ಛತಾ ಕಾರ್ಯಕ್ರಮ ಬರೋಬ್ಬರಿ ಒಂದು ತಿಂಗಳುಗಳ ಕಾಲ ನಡೆಯಿತು. ಆರಂಭದಲ್ಲಿ ರಸ್ತೆ ಬದಿಯ ಕಸ ಹೆಕ್ಕುವ ಇವರ ಸಾಹಸವನ್ನು ಕಂಡು ಒಂದಷ್ಟು ಮಂದಿ ಇದೊಂದು ಹುಚ್ಚು ಸಾಹಸವೆಂದದ್ದು ಇದೆ. ಆದರೆ ಇವರು ಮಾತ್ರ ಆ ಮಾತುಗಳಿಂದ ವಿಚಲಿತರಾಗಲಿಲ್ಲ. ರಸ್ತೆಯುದ್ದಕ್ಕೂ ಸಿಗುವ 14 ಬಸ್‌ಸ್ಟಾö್ಯಂಡ್‌ಗಳನ್ನು ನೀರು ಹಾಕಿ ತೊಳೆದು ಶುಭ್ರಗೊಳಿಸಿದರು. ನಿತ್ಯ ಸಂಜೆಯಾಗುತ್ತಿದ್ದoತೆ ರಸ್ತೆ ಬದಿ ಸ್ವಚ್ಛತಾ ಕೆಲಸಗಳಲ್ಲಿ ತೊಡಗುತ್ತಿದ್ದ ಶೌರ್ಯ ಘಟಕದ ಪ್ರಯತ್ನವನ್ನು ಕಂಡು ಪ್ರಯಾಣಿಕರು ಕಸ ಹಾಕುವುದನ್ನು ಕಡಿಮೆ ಮಾಡಿದರು. ಊರವರು ಕಸ ತಂದು ಸುರಿಯುವುದನ್ನು ನಿಲ್ಲಿಸಿದರು. ವಿದ್ಯಾರ್ಥಿ, ಯುವಕರಲ್ಲಿ ಜಾಗೃತಿ ಮೂಡಿತು. ಇವರ ಕೆಲಸಕ್ಕೆ ಚಾರ, ಬೇಳಂಜೆ, ಕುಚ್ಚೂರು ಗ್ರಾಮ ಪಂಚಾಯತ್ ಕಸವನ್ನು ಹೊತ್ತೊಯ್ಯುವ ಮೂಲಕ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿತು. ಊರ ಗಣ್ಯರು ಇವರ ಪ್ರಯತ್ನವನ್ನು ಪ್ರೋತ್ಸಾಹಿಸಿದರು. ಅಂತೂ ಒಂದು ತಿಂಗಳಲ್ಲಿ ರಸ್ತೆಗಳು ಕಸಮುಕ್ತಗೊಂಡವು.
ಕಸದ ಪ್ರಮಾಣ ಇಳಿಕೆ : ಕೇವಲ ಒಂದು ವರ್ಷದಲ್ಲಿ ಒಂದು ತಿಂಗಳುಗಳ ಕಾಲ ಕಸ ಹೆಕ್ಕಿ ಮುಗಿಸಿದರೆ ಅದರಿಂದ ಅಷ್ಟೇನು ಪ್ರಯೋಜನವಾಗಲಾರದು. ಬದಲಾಗಿ ಪ್ರತಿವರ್ಷ ಈ ಕೆಲಸವನ್ನು ಒಂದು ಅಭಿಯಾನದಂತೆ ಮಾಡಬೇಕೆಂಬ ನಿಟ್ಟಿನಲ್ಲಿ 2024 ಗಾಂಧಿ ಜಯಂತಿ ಸಂದರ್ಭದಲ್ಲೂ ಒಂದು ತಿಂಗಳುಗಳ ಕಾಲ ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತಾ ಕೆಲಸವನ್ನು ಮಾಡಿದ್ದಾರೆ. ಆರಂಭದ ವರ್ಷ 11 ಟನ್ ದೊರೆತ ಕಸದ ಪ್ರಮಾಣ ಕಳೆದ ವರ್ಷ 8 ಟನ್‌ಗೆ ಇಳಿದಿರುವುದು ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿರುವುದಕ್ಕೆ ಸಾಕ್ಷಿಯಾಗಿದೆ. ಈ ಊರಿನ ಅಂಗಡಿ ಮಾಲಕರಲ್ಲೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿರುವುದು ಇವರಿಗೆ ಖುಷಿ ನೀಡಿದೆ.
ಇನ್ನು ಇಲ್ಲಿನ ಅಜೆಕಾರು, ಮುದ್ರಾಡಿ, ಚೇರ್ಕಡಿ, ಹೆಬ್ರಿ, ಬೆಳ್ವೆ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳು ಸದಾ ಒಂದಲ್ಲೊoದು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಊರ ಮಂದಿಯ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಯೋಜನಾಧಿಕಾರಿ ಲೀಲಾವತಿ, ಮೇಲ್ವಿಚಾರಕಿ ರೇವತಿ, ಕೃಷಿ ಮೇಲ್ವಿಚಾರಕ ಉಮೇಶ್‌ರವರು ನೀಡಿದ ಪ್ರೋತ್ಸಾಹವನ್ನು ಇವರು ನೆನಪಿಸಿಕೊಳ್ಳುತ್ತಾರೆ.
ದೇವಸ್ಥಾನ, ಶಾಲೆ, ಆಸ್ಪತ್ರೆ, ಬಾವಿ ಸ್ವಚ್ಛತೆ, ಹೂತೋಟ, ಕೈತೋಟ ರಚನೆ, ಬೇಸಿಗೆಗಾಲದಲ್ಲಿ ಪಕ್ಷಿಗಳಿಗೆ ನೀರು ಒದಗಣೆ, ಬೀಜದುಂಡೆ ತಯಾರಿ, ರಸ್ತೆ, ಮನೆಯ ಮೇಲೆ ಬಿದ್ದ ಮರ ತೆರವು, ಮನೆ ರಿಪೇರಿ, ಅಪಘಾತವಾದಾಗ ನೆರವು, ಅಸಹಾಯಕರಿಗೆ ಸಹಾಯ ಹೀಗೆ ಚಾರ-ಬೇಳಂಜೆ ಘಟಕದ ಸಮಾಜಸೇವೆಯ ಪಟ್ಟಿ ಬಹುದೊಡ್ಡದಿದೆ.
ಸ್ವಚ್ಛತಾ ಕಾರ್ಯಕ್ರಮವನ್ನು ಒಂದು ದಿನಕ್ಕೆ ಮೀಸಲಿರಿಸದೆ ಎರಡು ವರ್ಷಗಳಿಂದ ಒಂದು ತಿಂಗಳನ್ನು ಈ ಕೆಲಸಕ್ಕೆ ಮೀಸಲಿಟ್ಟಿರುವ ಇವರ ಪ್ರಯತ್ನ, ಸಾಧನೆ, ಆಸಕ್ತಿ, ಸಮಾಜ ಸೇವೆ ಇತರರಿಗೆ ಮಾದರಿಯಾಗಿದೆ. ಎಲ್ಲೆಡೆ ಇಂತಹ ಕೆಲಸಗಳು ನಡೆದಲ್ಲಿ ಸ್ವಚ್ಛ ಸಮಾಜ ನಿರ್ಮಾಣದ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *