ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಚಿತೆ ಮತ್ತು ಚಿಂತೆಗೆ ಬಿಂದು ಮಾತ್ರ ವ್ಯತ್ಯಾಸ ಎಂಬುದನ್ನು ನಾವು ಕೇಳಿದ್ದೇವೆ. ಚಿಂತೆಯಿoದ ಮನುಷ್ಯನ ದೇಹ, ಇಂದ್ರಿಯ, ಮನಸ್ಸು ಮತ್ತು ಕರ್ಮ ಎಲ್ಲವೂ ಕರಗಲು ಪ್ರಾರಂಭವಾಗುತ್ತದೆ. ಚಿಂತೆಯನ್ನುoಟು ಮಾಡುತ್ತಿರುವ ವಿಷಯದ ಬಗ್ಗೆ ನಮಗಿರುವ ಕಾಳಜಿ, ಅವಶ್ಯಕತೆ, ಪ್ರೀತಿ, ಪ್ರೇಮ ಮುಂತಾದ ಭಾವಗಳು ಈ ಚಿಂತೆಯ ಮೂಲ. ಊಹಾತ್ಮಕ ಚಿಂತೆಗಳು ಕೂಡಾ ಮನುಷ್ಯನನ್ನು ದಹಿಸಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಸಂಸಾರದಲ್ಲಿ ಬರುವಂಥ ಸಣ್ಣಪುಟ್ಟ ವಿಚಾರಗಳೂ, ದಾಂಪತ್ಯದಲ್ಲಿ ತಂದೆ ತಾಯಿ ಮತ್ತು ಮಕ್ಕಳ ಮಧ್ಯೆ, ವ್ಯವಹಾರದಲ್ಲಿ, ಆಪ್ತಸ್ನೇಹಿತರೊಂದಿಗೆ ಬರುವಂಥ ಸಣ್ಣಪುಟ್ಟ ವ್ಯತ್ಯಾಸಗಳು, ತಪ್ಪು ಗ್ರಹಿಕೆಗಳೂ ಚಿಂತೆಗೆ ಕಾರಣವಾಗುತ್ತದೆ. ಹಾಗಾದರೆ ಚಿಂತೆಯ ವಿಷಯಗಳನ್ನು ಹೇಗೆ ಸ್ವೀಕರಿಸಬೇಕು ಎಂಬುವುದು ಬಹುದೊಡ್ಡ ಪ್ರಶ್ನೆಯಾಗಿದೆ.
ಸುಲಭವಾಗಿ ಪರಿಹರಿಸಿಕೊಳ್ಳಬಹುದಾದ ಕೆಲವೊಂದು ವಿಷಯಗಳನ್ನು ಜಟಿಲ ಮಾಡಿಕೊಂಡು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳಾಡುವವರನ್ನು ನಾವು ನೋಡುತ್ತೇವೆ. ಉದಾಹರಣೆಗೆ ತಂದೆ-ತಾಯಿ ತಾವು ಮಾಡಿಟ್ಟ ಆಸ್ತಿಯಿಂದ ಮಕ್ಕಳು ನೆಮ್ಮದಿಯಿಂದ ಇರಬೇಕೆಂದುಕೊoಡು ಆಸ್ತಿಯನ್ನು ಸಮಾನವಾಗಿ ಹಂಚುವ ಪ್ರಯತ್ನವನ್ನು ಮಾಡುತ್ತಾರೆ. ಭೂಮಿಯನ್ನು ಕೇಕ್ ತುಂಡರಿಸಿದAತೆ ತುಂಡರಿಸಲು ಸಾಧ್ಯವಿರದ ಕಾರಣ ಕೆಲವೊಮ್ಮೆ ಪಾಲು ಒಂಚೂರು ಹೆಚ್ಚು ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ. ಎಷ್ಟೋ ವೇಳೆ ಇದು ಹೆತ್ತವರ ಮತ್ತು ಮಕ್ಕಳ ಚಿಂತೆಗೂ ಕಾರಣವಾಗುವುದಿದೆ. ಸಹೋದರ ಸಂಬoಧಗಳೇ ಕಳಚಿಕೊಂಡು ಹೆತ್ತವರ ಸಮ್ಮುಖದಲ್ಲೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಸಾಕಷ್ಟು ಉದಾಹರಣೆಗಳಿವೆ. ಹತ್ತು ಸಾವಿರ ಬೆಲೆಬಾಳುವ ಅಂಗೈಯಗಲದ ಭೂಮಿಯನ್ನು ಪಡೆಯಲು ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡುವವರನ್ನು ನಾವು ಕಾಣುತ್ತೇವೆ. ಇಲ್ಲಿ ಇಡೀ ಕುಟುಂಬ ನೆಮ್ಮದಿಯನ್ನು ಕಳೆದುಕೊಂಡು ಆಳವಾದ ಚಿಂತೆಗೆ ಒಳಗಾಗುತ್ತದೆ. ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದಲ್ಲಿ ಅಥವಾ ಆಸ್ತಿಯ ತಾರತಮ್ಯಕ್ಕಿಂತ ಬಂಧುತ್ವ ದೊಡ್ಡದು ಎಂಬ ವಿಶಾಲ ಹೃದಯವಂತಿಕೆಯನ್ನು ಬೆಳೆಸಿಕೊಂಡಿದ್ದರೆ ಆಸ್ತಿಗಿಂತ ಬೆಳೆಬಾಳುವ ಬಾಂಧವ್ಯ, ಆರೋಗ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿದೆ.
ಇನ್ನು ಸಾಕಷ್ಟು ಮಂದಿ ಮಕ್ಕಳಿಗೆ ಮದುವೆಯಾಗಲಿಲ್ಲ ಎಂದು ಚಿಂತಿಸುತ್ತಿರುತ್ತಾರೆ. ಈ ಪ್ರಯತ್ನಕ್ಕೆ ಪಾರಲೌಕಿಕ ಮತ್ತು ಲೌಕಿಕ ಹೀಗೆ ಎರಡು ದಾರಿಗಳಿವೆ. ಗಂಡು ಅಥವಾ ಹೆಣ್ಣು ಹುಡುಕುವುದು ಒಂದು ಕಾರ್ಯವಾದರೆ, ದೇವತಾ ಪ್ರಾರ್ಥನೆ ಎರಡನೆ ಕಾರ್ಯ. ಇದನ್ನು ಬಿಟ್ಟು ಮದುವೆಯ ಬಗ್ಗೆ ಚಿಂತಿಸುತ್ತಾ ಕುಳಿತರೆ ಆರೋಗ್ಯ ಹಾನಿಯಾಗುತ್ತದೆ. ಕಾಲ ಪಕ್ವವಾದಾಗ ನಮ್ಮ ಊಹೆಗೂ ನಿಲುಕದಂತೆ ‘ಕ್ಷಣದಲ್ಲಿ ಆಯಿತು’ ಎಂಬoತೆ ಯಾರೋ ಬಂದರು, ನೋಡಿದರು, ಒಪ್ಪಿಗೆಯಾಯಿತು – ಹೀಗೆ ಮದುವೆ ನಿಶ್ಚಯವಾಗಿ ಮದುವೆಯೂ ಆಗಿಬಿಡುತ್ತದೆ. ಆದರೆ ಹೆತ್ತವರು ಹಾಳು ಮಾಡಿಕೊಂಡ ಆರೋಗ್ಯ ಮಾತ್ರ ಸುಧಾರಿಸುವುದಿಲ್ಲ.
ಜೀವನ ಎನ್ನುವಂಥದ್ದು ಸದಾ ಕಾಲ ಚಿಂತೆಯಿoದ ಕೂಡಿರುತ್ತದೆ. ಅವುಗಳಿಂದ ದೂರವಿರಲು ಹಲವಾರು ಉಪಾಯಗಳಿವೆ. ಮನೆಯಲ್ಲಿರುವ ಹಿರಿಯರೊಂದಿಗೆ ಅಥವಾ ಉತ್ತಮ ಸ್ನೇಹಿತರಿದ್ದರೆ ಅವರೊಂದಿಗೆ, ಸ್ನೇಹಿತೆಯಂತಹ ಮಡದಿಯಿದ್ದರೆ ಅವಳೊಂದಿಗೆ ವಿಷಯವನ್ನು ಹಂಚಿಕೊoಡಾಗ ಚಿಂತೆ ಹಗುರವಾಗುತ್ತದೆ. ಯೋಗ ಮತ್ತು ಪ್ರಾಣಾಯಾಮಗಳು ಸಿಟ್ಟನ್ನು, ಹತಾಶೆಯನ್ನು ಹಾಗೂ ರಕ್ತದೊತ್ತಡವನ್ನು ಹತೋಟಿಗೆ ತರಬಲ್ಲದು. ಹಾಸ್ಯ ಎಲ್ಲರಿಗೂ ಇಷ್ಟವಾದುದು. ಇದು ಕೂಡಾ ಚಿಂತೆಯನ್ನು ದೂರ ಮಾಡಬಲ್ಲದು. ಅದಕ್ಕಾಗಿಯೇ ಹಿಂದಿನ ಕಾಲದಲ್ಲಿ ರಾಜರ ಆಸ್ಥಾನಗಳಲ್ಲಿ ಹಾಸ್ಯಗಾರರನ್ನು ನೇಮಿಸಿಕೊಳ್ಳುತ್ತಿದ್ದರು. ಇನ್ನೊಬ್ಬರ ಚುಚ್ಚು ಮಾತುಗಳಿಗೆ, ಸುಳ್ಳು ಕಥೆ, ವದಂತಿಗಳಿಗೆ ಹೆಚ್ಚು ಗಮನ ಕೊಡದೆ, ನಮ್ಮಷ್ಟಕ್ಕೆ ನಾವಿದ್ದು ಸಾಧನೆಯ ಪಥದಲ್ಲಿ ಸಾಗಿದರೆ ಚಿಂತೆ ದೂರವಾಗುತ್ತದೆ. ಅತಿಯಾಸೆ ಕೂಡಾ ಚಿಂತೆಯ ಇನ್ನೊಂದು ಮುಖ. ಇದ್ದುದರಲ್ಲೇ ಸುಖವನ್ನು ಕಾಣುವ ಜಾಯಮಾನವನ್ನು ಬೆಳೆಸಿಕೊಳ್ಳಬೇಕು. ಹೊಟ್ಟೆಕಿಚ್ಚಿನಿಂದ ದೂರವಿದ್ದರೆ ಆತ ಜೀವನದಲ್ಲಿ ಗೆದ್ದಂತೆಯೆ ಸರಿ. ಇನ್ನೊಬ್ಬರ ಸಂತೋಷ, ಸಾಧನೆಯನ್ನು ಕಂಡು ನಾವು ಅವರಂತೆ ಆಗಲು ಪ್ರಯತ್ನಿಸಬೇಕೇ ಹೊರತು ಮತ್ಸರಪಟ್ಟರೆ ಬದುಕು ಸದಾ ಚಿಂತೆಯಿoದಲೇ ಕೂಡಿರುತ್ತದೆ. ಯಾವುದೇ ಕೆಲಸವನ್ನು ತಕ್ಷಣ ಮಾಡಿ ಮುಗಿಸುವುದರಿಂದ, ವಿಶಾಲ ಹೃದಯವಂತಿಕೆಯನ್ನು ಬೆಳೆಸಿಕೊಳ್ಳುವುದರಿಂದ, ಇನ್ನೊಬ್ಬರ ಕಷ್ಟ – ಸುಖದಲ್ಲಿ ಭಾಗಿಯಾಗುವುದರಿಂದ, ಧನಾತ್ಮಕ ಯೋಚನೆ ಗಳನ್ನು ಮಾಡಿದಾಗ ಚಿಂತೆ ತನ್ನಿಂತಾನಾಗಿಯೇ ದೂರವಾಗುತ್ತದೆ.
ಮನಸ್ಸಿಗೆ ಚಿಂತೆ ತರುವಂಥ ವಿಷಯಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಸಣ್ಣಪುಟ್ಟ ವಿಷಯಗಳನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಸಮಾಜಮುಖಿ ಕೆಲಸಗಳಲ್ಲಿ ನಮ್ಮನ್ನು ಹರಿಯಬಿಟ್ಟಾಗ ಮನಸ್ಸು ಚಿಂತಮುಕ್ತವಾಗುತ್ತದೆ. ಬಡವರಿಂದ ಹಿಡಿದು ಎಷ್ಟೇ ಶ್ರೀಮಂತರೆನಿಸಿಕೊoಡವರಿಗೂ ಅವರದ್ದೆ ಆದ ಹತ್ತಾರು ಸಮಸ್ಯೆಗಳು ಇರುತ್ತವೆ. ಸಮಸ್ಯೆಗಳಿಲ್ಲದೆ ಜೀವನ ಸಾಗಿಸಲು ಸಾಧ್ಯವೇ ಇಲ್ಲ. ಆದರೆ ಸಮಸ್ಯೆಗಳು ಎದುರಾದಾಗ ಎದೆಗುಂದದೆ ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ, ಅವುಗಳಿಗೆ ಸ್ಪಂದಿಸುವ ಮನೋಧರ್ಮವನ್ನು ಎಲ್ಲರೂ ಬೆಳೆಸಿಕೊಂಡಾಗ ಬದುಕು ಸುಂದರವಾಗುತ್ತದೆ.