ರಾಕೇಶ್ ಎನ್. ಎಸ್.
ಭಾರತದ ಅರಣ್ಯದಿಂದ 25ವರ್ಷಗಳ ಹಿಂದೆ ಮರೆಯಾಗಿದ್ದ ಚೀತಾಗಳು ಮತ್ತೆ ಕಾಣಿಸಿಕೊಳ್ಳುವ ಸುಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ ಮೂರು ಗಂಡು ಮತ್ತು ಐದು ಹೆಣ್ಣು ಚಿರತೆಗಳು ಹುಲಿಯ ಚಿತ್ರದ ವಿಮಾನವೇರಿ ಭಾರತದ ಭೂಸ್ಪರ್ಶ ಮಾಡಿವೆ. ಎರಡರಿಂದ ಆರು ವರ್ಷದೊಳಗಿನ ಈ ಚೀತಾಗಳಿಗೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿರುವ ಕುನ್ಹೋ ರಾಷ್ಟ್ರೀಯ ಉದ್ಯಾನ ಆವಾಸ ಸ್ಥಾನವಾಗಿದೆ.
1947ರಲ್ಲಿ ಕೊನೆಯ ಬಾರಿ ಚೀತಾ ಭಾರತದಲ್ಲಿ ಕಾಣಿಸಿಕೊಂಡಿತ್ತು. 1953ರಲ್ಲಿ ಚೀತಾ ಭಾರತದಲ್ಲಿ ಅವನತಿ ಹೊಂದಿದೆ ಎಂದು ಘೋಷಿಸಲಾಗಿತ್ತು. ಇದೀಗ ಸಾಕಷ್ಟು ಪೂರ್ವ ತಯಾರಿ, ಸಿದ್ಧತೆ ಮತ್ತು ಯೋಜನೆಗಳೊಂದಿಗೆ ಚೀತಾವನ್ನು ಭಾರತದ ಕಾಡಿಗೆ ಮರು ಪರಿಚಯಿಸಲಾಗುತ್ತಿದೆ.
ಚಿರತೆಗೂ, ಚೀತಾಕ್ಕೂ ವ್ಯತ್ಯಾಸ
ಭಾರತದಲ್ಲಿ ಚಿರತೆಗಳು ಇವೆ. ಇತ್ತಿಚಿನ ದಿನಗಳಲ್ಲಿ ಮಾನವ – ವನ್ಯಜೀವಿಗಳ ಸಂಘರ್ಷ ಹೆಚ್ಚುತ್ತಿದ್ದು ಇದರಲ್ಲಿ ಚಿರತೆಯ ಪಾತ್ರ ತುಸು ಜಾಸ್ತಿಯೇ ಇದೆ. ಚಿರತೆ ಮತ್ತು ಚೀತಾ ಒಂದೇ ಎಂದು ಹಲವರು ಭಾವಿಸಿದ್ದರು. ಆದರೆ ಚಿರತೆಗೂ ಚೀತಾಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಚೀತಾಗಳಿಗೆ ತೆಳು ಕಪ್ಪು ಬಣ್ಣದ ಮಚ್ಚೆ ಇದ್ದರೆ, ಚಿರತೆಗಳಿಗೆ ಕಡುಕಪ್ಪು ಬಣ್ಣದ ಗುಲಾಬಿ ಪಕಳೆ ಅಕಾರ ಇರುತ್ತದೆ. ಸಣ್ಣ ತಲೆ, ಸಪೂರ ದೇಹ ಚೀತಾದ ವಿಶೇಷತೆ. ಚಿರತೆಯ ದೇಹ ಭಾರ ಹೆಚ್ಚಿದ್ದರೆ ಚೀತಾ ಹಗುರ ಆಗಿರುತ್ತದೆ. ಚಿರತೆ ಗಂಟೆಗೆ 58 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದ್ದರೆ ಚೀತಾ ಗಂಟೆಗೆ 110 ಕಿ.ಮೀ. ವೇಗ ತಲುಪಬಲ್ಲದು ಕೇವಲ ಮೂರೇ ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ ತಲುಪಬಲ್ಲದು. ಆದರೆ ಈ ಮಿಂಚಿನ ವೇಗವನ್ನು ಕೆಲವೇ ಕೆಲವು ಸೆಕೆಂಡ್ ಮಾತ್ರ ಕಾಯ್ದುಕೊಳ್ಳಲು ಚೀತಾಗಳಿಂದ ಸಾಧ್ಯವಾಗುತ್ತದೆ.
ಚೀತಾಗಳಿಗೆ ಈಗ ಕ್ವಾರಂಟೈನ್ ಸಮಯ. ಅವುಗಳ ಓಡಾಟಕ್ಕೆ ಗಡಿ ಹಾಕಲಾಗಿದೆ. ನವೆಂಬರ್ ಹೊತ್ತಿಗೆ ಗಡಿ ಹಿಗ್ಗಲಿದೆ. ಆದರೆ ಸಾರ್ವಜನಿಕರಿಗೆ ಚೀತಾಗಳ ದರ್ಶನ ಆಗಬೇಕಾದರೆ ಮುಂದಿನ ವರ್ಷದ ಜನವರಿ ತನಕ ಕಾಯಬೇಕಾಗುತ್ತದೆ. ಜನವರಿಯ ಹೊತ್ತಿಗೆ ಚೀತಾಗಳನ್ನು ಗಡಿಮುಕ್ತಗೊಳಿಸಲಾಗುತ್ತದೆ. ಆ ಬಳಿಕ ಕುನ್ಹೋದ ಹುಲ್ಲುಗಾವಲಿನಲ್ಲಿ ಖುದ್ದು ಬೇಟೆಯಾಡಿ ಆಹಾರ ಸಂಪಾದಿಸುವ ಜೊತೆಗೆ ಸಂತಾನಾಭಿವೃದ್ಧಿಗೊಳಿಸಿ ತಮ್ಮ ವಂಶವನ್ನು ಹಿಗ್ಗಿಸುವ ಗುರುತರ ಹೊಣೆ ಈ ಎಂಟು ಚೀತಾಗಳ ಮೇಲಿದೆ. ಹಾಗೆಯೆ ಜಾಗತಿಕವಾಗಿ ವನ್ಯಜೀವಿಗಳ ಸ್ಥಳಾಂತರದ ಯೋಜನೆಗಳ ಭವಿಷ್ಯ ನಿರ್ಧರಿಸುವಲ್ಲಿ ಈ ಯೋಜನೆ ಮಹತ್ವದ್ದಾಗಿದೆ.
ನಮಗೂ ಪಾಠವಾಗಲಿ
ಭಾರತದಲ್ಲಿದ್ದ ಚೀತಾಗಳಿಗೂ, ನಮೀಬಿಯಾದ ಚೀತಗಳಿಗೂ ಜೈವಿಕವಾಗಿ ಸಾಮ್ಯತೆಯಿದ್ದ ಕಾರಣ ಖಂಡದ ಆಚೆಗಿನ ವನ್ಯಜೀವಿಯನ್ನು ತರುವ ಯೋಜನೆ ಸುಗಮವಾಯಿತು. ಇಲ್ಲದೇ ಹೋದಲ್ಲಿ ಈ ನಾಡು ಚೀತಾಗಳನ್ನು ಮುಂದೆoದೂ ಕಾಣಲು ಸಾಧ್ಯವಿರಲಿಲ್ಲ. ಭಾರತವು ಹತ್ತು ಹಲವು ವನ್ಯಜೀವಿಗಳು, ಮರಗಿಡಗಳು, ಹುಳಹುಪ್ಪಡಿಗಳ ತವರೂರು. ಜೀವ ವೈವಿಧ್ಯತೆ ಮತ್ತು ಜೀವ ಸಂತುಲನ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸೃಷ್ಟಿಯ ಪ್ರತಿ ಚರಾಚರಗಳಿಗೂ ಅದರದ್ದೆ ಆದ ಮಹತ್ವವಿದೆ. ಮನುಷ್ಯ ತನ್ನ ದುರಾಸೆಗೆ ಪ್ರಕೃತಿಯ ನಾಶ ಮಾಡುತ್ತಾ ಸಾಗಿದರೆ ಪ್ರಕೃತಿಯ ಸಮತೋಲನ ಭಂಗಗೊಳ್ಳುತ್ತದೆ. ಇಂತಹ ಹಿನ್ನೆಲೆಯಲ್ಲಿ ಭಾರತ ಮೂಲದ ಯಾವುದೇ ವೈಶಿಷ್ಟ್ಯ ಪೂರ್ಣ ಜೀವ ಪ್ರಬೇಧ ನಾಶಗೊಂಡರೆ ಅದನ್ನು ಮರಳಿ ತರಲು ಸಾಧ್ಯವಿಲ್ಲ. ಆದ್ದರಿಂದ ಆಗಬಹುದಾದ ಅನಾಹುತಗಳಿಗೆ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ. ನಮ್ಮ ತಂದೆತಾಯಿ, ಅಜ್ಜ ಅಜ್ಜಿ ಅವರ ಬಾಲ್ಯದ, ಯೌವ್ವನದ ದಿನಗಳನ್ನು ನೆನಪುಮಾಡಿಕೊಳ್ಳುವಾಗ ಅದೇಷ್ಟೋ ಪ್ರಾಣಿ ಪಕ್ಷಿಗಳು, ಹುಳ ಹುಪ್ಪಡಿಗಳನ್ನು ಉಲ್ಲೇಖಿಸಿ ಅವುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದುದನ್ನು, ಕಣ್ಣಿಗೆ ಬೀಳುತ್ತಿದ್ದುದ್ದನ್ನು ಉಲ್ಲೇಖಿಸುವುದನ್ನು ನೀವು ಗಮನಿಸಿರಬಹುದು. ಇಂದು ಆ ಜೀವಿ ನಮ್ಮ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದಾದರೆ ಅವುಗಳು ಅಳಿದೇ ಹೋಗಿರಬಹುದು ಅಥವಾ ಅಳಿವಿನ ಅಂಚಿಗೆ ತಲುಪಿರಬಹುದು ಎಂದರ್ಥ. ಅಂತಹ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ.