ಜನಪದರ ವೇದ – ಗಾದೆ

ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಗಾಥಾ, ನಾಣ್ಣುಡಿ, ನಾಡುನುಡಿ, ಲೋಕೋಕ್ತಿ ಈ ಪದಗಳು ಸಮಾನಾರ್ಥಕಗಳು. ‘ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.’ ಈ ಗಾದೆಗಳು ಅರ್ಥವೈಶಿಷ್ಟö್ಯವನ್ನಲ್ಲದೆ ನೀತಿಯನ್ನೂ ಹೇಳುತ್ತವೆ. ಆದ್ದರಿಂದ ಮನುಷ್ಯನ ಜೀವನಕ್ಕೆ ಗಾದೆಗಳು ಮಹದುಪಕಾರಿಗಳಾಗಿವೆ.
ಇವುಗಳು ಮನುಕುಲದ ನಂದಾದೀಪ, ಮಾನವನ ಬಾಳಿನ ಅನಂತಸಾಗರದಿoದ ಆರಿಸಿ ತೆಗೆದ ಅಣಿಮುತ್ತುಗಳು. ಅವು ಸಂದರ್ಭಾನುಸಾರವಾಗಿ ಹೊರಹೊಮ್ಮುವ ನುಡಿಗಳು. ಹುಟ್ಟಿ ಬಾಳಿದ ದೇಶ, ಕಾಲ, ಪರಿಸರಗಳನ್ನು ಸಾರ್ಥಕವಾಗಿ ಪ್ರತಿಬಿಂಬಿಸುವ ನುಡಿಗನ್ನಡಿ. ‘ಸಮುದ್ರದಲ್ಲಿ ಸೇರದ ವಸ್ತುವಿಲ’್ಲ ಎಂಬ ಉಕ್ತಿಯು ಗಾದೆಗೇ ಹೇಳಿದಂತಿದೆ. ಅಂದರೆ ಇಲ್ಲಿ ಪ್ರಸ್ತಾಪಿಸದ ವಿಷಯವಿಲ್ಲ, ಕಾಣದ ವಸ್ತುವಿಲ್ಲ, ಹೇಳದ ತತ್ವವಿಲ್ಲ, ಬದುಕಿಗೆ ತೋರದ ಮಾರ್ಗವಿಲ್ಲ. ಸಮಾಜದಲ್ಲಿ ಸಾಮಾನ್ಯವಾಗಿ ಕಂಡುಬರುವ ಒಳಿತು-ಕೆಡುಕು, ರೂಪ-ಕುರೂಪ, ಶೀಲ-ಅಶ್ಲೀಲ, ಓರೆ-ಕೋರೆಗಳೆಲ್ಲದರ ವ್ಯಾಖ್ಯಾನಗಳನ್ನು ಇಲ್ಲಿ ಕಾಣಬಹುದು. ‘ನಡೆಯುವವನು ಎಡವುತ್ತಾನೆ’ ಎಂಬ ಮಾತಿನಂತೆ ಎಡವಿದಾತ ಮತ್ತೊಮ್ಮೆ ಎಡವಿ ಮುಗ್ಗರಿಸದಂತೆ ಎಚ್ಚರಿಕೆ ನೀಡಿ ಮೊನಚು ನುಡಿಯ ಚಾಟಿ ಬೀಸಿ ಆತನನ್ನು ಸರಿದಾರಿಯಲ್ಲಿ ನಡೆಯುವಂತೆ ಗಾದೆ ಮಾತುಗಳು ಪ್ರೇರೇಪಿಸುತ್ತವೆ.
ಗಾದೆಗಳ ಮೂಲ ಆಶಯಗಳಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳಿವೆ. ಸಂಕ್ಷಿಪ್ತತೆ ಅಥವಾ ಸಂಕೀರ್ಣತೆ, ವಿವೇಚನೆ, ತೀಕ್ಷ÷್ಣತೆ ಅಥವಾ ಒಗಟುತನ, ಜನಪ್ರಿಯತೆ. ಗಾದೆಯು ಅಲ್ಪ ಅವಕಾಶದಲ್ಲಿ ಒತ್ತಡದಲ್ಲಿ ಕೂಡಿಟ್ಟ ಸಿಡಿಮದ್ದಿನಂತೆ ಅಲ್ಲ, ಅವು ಪಟಾಕಿಗಳಂತೆ. ವೃಕ್ಷವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಆಲದ ಬೀಜದಂತೆ. ಸ್ವಲ್ಪ ಆಲೋಚಿಸಿದರೂ ಅವುಗಳ ಅರ್ಥದ ವೃಕ್ಷ ಚಿಗುರೊಡೆಯುತ್ತದೆ. ಇವುಗಳು ಅರ್ಥವತ್ತಾಗಿ ಹೇಳಲ್ಪಟ್ಟ ನಮ್ಮ ಹಿರಿಯರ ಸ್ವಾನುಭವದ ಮಾತುಗಳೇ ಆಗಿವೆ. ಹಾಗಾಗಿ ಪ್ರಾಸಬದ್ಧ ಅರ್ಥಪೂರ್ಣವಾದ ಜೋಡಣೆಯನ್ನು ಹೊಂದಿರುತ್ತವೆ. ಅನೇಕ ಉಪಮೆ, ದೃಷ್ಟಾಂತಗಳಿoದ ಇವನ್ನು ವಿವರಿಸಬಹುದು. ಇವುಗಳು ಅರ್ಥಪೂರ್ಣವಾದ ನೀತಿ ಬೋಧಕಗಳು. ಹಾಗಾಗಿ ಅರ್ಥವನ್ನು ವಿವರಿಸುವವರ ಜ್ಞಾನ, ಅನುಭವ, ವಯಸ್ಸುಗಳನ್ನು ಅನುಸರಿಸಿ ಅರ್ಥವು ಎಷ್ಟು ಬೇಕಾದರೂ ವಿಸ್ತಾರ ಪಡೆಯಬಹುದು.
ಹಿಂದೆ ನಮ್ಮ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವಗಳಿಂದ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ಉದಾಹರಣೆಗೆ ನೋಡುವುದಾದರೆ ‘ಕೃತಿಕಾ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು’, ‘ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ’, ‘ಭರಣಿ ಸುರಿದರೆ ಧರಣಿ ಬದುಕೀತು’ ಇತ್ಯಾದಿಗಳು. ಇದು ಈಗಿನ ಕಾಲದಲ್ಲೂ ಅಕ್ಷರಶಃ ಸತ್ಯವಾಗಿದೆ. ಈ ಪಾರಂಪರಿಕರ ಜ್ಞಾನವು ಆಯಾಯ ಋತು, ನಿಯಮಕ್ಕನುಸಾರವಾಗಿ ಬೆಳೆದು ಬಂದಿತ್ತು. ಇವುಗಳಿಗೆ ಗತಿಸಿದ ವರ್ಷಗಳ ಅನುಭವವೇ ಆಧಾರ. ಇಂತಿoಥ ಮಳೆ ಇಂಥ ದಿನಗಳಲ್ಲಿ ಬರುತ್ತದೆ ಎಂದು ಗುರುತಿಸಿ ನಮೂದಿಸಿದ ಪಂಚಾoಗವೇ ರೈತನ ಕೃಷಿ ಕಾರ್ಯದ ವೇಳಾಪಟ್ಟಿಗೆ ಆಧಾರವಾಗಿತ್ತು. ಅದರಂತೆಯೇ ರೈತ ತನ್ನ ಕೃಷಿ ಕಾರ್ಯ ಮುಂದುವರಿಸುತ್ತಿದ್ದನು. ಇದಲ್ಲದೆ ಆಚಾರ, ಉಡುಗೆ ತೊಡುಗೆ, ಆಹಾರ ಪದ್ಧತಿ, ಜೀವನಕ್ರಮ, ಕಷ್ಟ-ಸುಖ ಇತ್ಯಾದಿ ವಿಚಾರಗಳನ್ನೊಳಗೊಂಡ ನಾಣ್ಣುಡಿಗಳು ಪ್ರಚಲಿತದಲ್ಲಿವೆ.
ವೇದಗಳು ಜ್ಞಾನದ ಸಾಗರದoತೆ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರುೆ. ಆದರೆ ಅದನ್ನು ಪಂಡಿತರು-ಜ್ಞಾನಿಗಳ ವಿನಃ ಸಾಮಾನ್ಯರಿಗೆ ಅರ್ಥಮಾಡಿಕೊಳ್ಳಲು ಅಸಾಧ್ಯ. ಆದರೆ ಗಾದೆಗಳೆಂದರೆ ಹಾಗಲ್ಲ, ಎಲ್ಲಾ ಜನ ಸಾಮಾನ್ಯರು ಅತ್ಯಂತ ಸುಲಭವಾಗಿ ತಮ್ಮ ಆಡುಭಾಷೆಗಳಲ್ಲೇ ಅರ್ಥಮಾಡಿಕೊಳ್ಳಬಹುದಾದಂತದ್ದು. ಆದ್ದರಿಂದ ಹಿರಿಯರು ನಾಣ್ಣುಡಿಗಳ ರೂಪದಲ್ಲಿ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’, ‘ಗಾದೆ ವೇದಕ್ಕೆ ತಲೆದಿಂಬು’, ‘ಗಾದೆಯ ಮರ್ಮವನ್ನರಿತವನು ವೇದದ ಮರ್ಮವನ್ನರಿತಾನು’, ‘ಗಾದೆ ವೇದಕ್ಕೆ ಸಮಾನ’ ಎಂದು ಹೇಳಿದ್ದಾರೆ. ಇದು ಸಮಾಜದಲ್ಲಿ ಗಾದೆಗಿರುವ ಮಹತ್ವಕ್ಕೆ ಕೊಟ್ಟ ಉನ್ನತ ಸ್ಥಾನವಾಗಿದೆ.
ಗಾದೆಗಳು ನಮ್ಮ ಜನಪದದಿಂದ ನಮಗೆ ಒದಗಿ ಬಂದ ಸಂಪತ್ತು. ನಮ್ಮ ಹಿರಿಯರು ಗಾದೆ ಮಾತುಗಳನ್ನು ಸಂದರ್ಭೋಚಿತವಾಗಿ ಉಪಯೋಗಿಸುತ್ತಿದ್ದರು. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬoತೆ ಗಾದೆಗಳಲ್ಲಿ ಹೇಳಲ್ಪಡದ ವಿಷಯಗಳೇ ಇಲ್ಲ. ಗಾದೆಯ ಮೂಲಕ ಮಾನವನ ಬದುಕಿಗೆ ಅಗತ್ಯವಾದ ಸಂದೇಶ, ಮಾಹಿತಿ, ನೀತಿ-ನಿಯಮಗಳನ್ನು ಕಟ್ಟಿಕೊಡುವ ಕೆಲಸವಾಗಿದೆ. ಆಳವಾದ, ದೀರ್ಘವಾದ ವಿಷಯವನ್ನು ಒಂದೆರಡು ವಾಕ್ಯಗಳ ಮೂಲಕ ಹೇಳುವ ಜಾಣ್ಮೆ ಗಾದೆಯಲ್ಲಡಗಿದೆ. ಗಾದೆಯ ಒಳಾರ್ಥವನ್ನು ನಾವು ತಿಳಿದುಕೊಳ್ಳಬೇಕು ಅಷ್ಟೇ. ಆದರೆ ಈಗ ಇದರ ಉಪಯೋಗ ಕಡಿಮೆಯಾಗುತ್ತಿದೆ. ಹೆಚ್ಚಿನವರಿಗೆ ಮರೆತೇ ಹೋಗಿದೆ ಎಂದರೂ ತಪ್ಪಾಗಲಾರದು. ವಿಶ್ವ ತುಳು ಸಮ್ಮೇಳನದ ಸಂದರ್ಭದಲ್ಲಿ ದಿನಪತ್ರಿಕೆಯೊಂದರಲ್ಲಿ ದಿನಕ್ಕೊಂದು ಪ್ರಮುಖ ಗಾದೆಯನ್ನು ಪ್ರಕಟಿಸಲಾಗುತ್ತಿತ್ತು. ಈಗಲೂ ಗಾದೆಗಳಿಗೆ ಸಂಬoಧಿಸಿದ ಅನೇಕ ಪುಸ್ತಕಗಳು ಲಭ್ಯವಿದ್ದು ನಾವು ನಮ್ಮ ಎಳೆಯರಿಗೆ ಕೆಲವನ್ನಾದರೂ ಕಲಿಸಿದರೆ ನಮ್ಮ ಹಿರಿಯರ ಪರಂಪರೆಯನ್ನು ಮುಂದುವರಿಸಿದoತೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಿಸೋಣ.

Facebook
Twitter
WhatsApp
LinkedIn
Telegram