ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ

ಕಳೆದ ಸಂಚಿಕೆಯಲ್ಲಿ ‘ಶ್ರದ್ಧಾಕೇಂದ್ರಗಳ ಸ್ವಚ್ಛತೆ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳಲಾಯಿತು. ಈ ಸಂಚಿಕೆಯಲ್ಲಿ ಪೂಜ್ಯ ಹೆಗ್ಗಡೆಯವರು ಗ್ರಾಮೀಣ ಶಿಕ್ಷಣಕ್ಕೆ ಯೋಜನೆಯ ಮೂಲಕ ಕೈಗೊಂಡ ಅಮೂಲಾಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ತಿಳಿದುಕೊಳ್ಳೋಣ.
ನಾಲ್ಕು ದಶಕಗಳ ಹಿಂದೆ ಅಂದರೆ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾರಂಭದ ದಿನಗಳಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಸಿಗುತ್ತಿದ್ದ ಶಿಕ್ಷಣ ಸೌಲಭ್ಯಗಳ ಬಗ್ಗೆ ಇಂದು ಕಲ್ಪನೆ ಮಾಡಿಕೊಳ್ಳುವುದೂ ಕಷ್ಟ. ಬಹುತೇಕ ಹಳ್ಳಿಗಳಲ್ಲಿ ಶಾಲೆಗಳೇ ಇರಲಿಲ್ಲ. ಇನ್ನು ಅರೆಪಟ್ಟಣ ಪ್ರದೇಶಗಳಲ್ಲಿ ಶಾಲೆಗಳಿದ್ದರೂ, ಅಲ್ಲಿಗೆ ಹಳ್ಳಿಗಳಿಂದ ಬಡ ಮಕ್ಕಳು ಹೋಗಿ ಬರುವುದಕ್ಕೆ ಇದ್ದ ಒಂದೇ ಮಾರ್ಗ ಎಂದರೆ ಅದು ಕಾಲ್ನಡಿಗೆ. ಬಡತನ ಮತ್ತು ಇತರ ಸಾಮಾಜಿಕ ಸಮಸ್ಯೆಗಳಿಂದ ಬಡ ಮಕ್ಕಳನ್ನು ಕೃಷಿ ಕೆಲಸಕ್ಕೋ ಅಥವಾ ಕೂಲಿಗಾಗಿ ಕಾರ್ಮಿಕ ಕೆಲಸಕ್ಕೋ ಕಳುಹಿಸುವುದು ಸರ್ವೇ ಸಾಮಾನ್ಯವಾಗಿತ್ತು. ಸಹಜವಾಗಿಯೇ ಹೆಚ್ಚಿನ ಹಳ್ಳಿಗಾಡಿನ ಬಡ ಮಕ್ಕಳು ಶಾಲೆಯ ಮೆಟ್ಟಿಲನ್ನು ಹತ್ತಿಯೇ ಇಲ್ಲ. ಗ್ರಾಮೀಣ ಭಾಗದಲ್ಲಿ ವಯಸ್ಸಾದ ಹಿರಿಯರನ್ನು ಕೇಳಿದರೆ, ‘ನಾವ್ಯಾರೂ ಶಾಲೆಯ ಮೆಟ್ಟಿಲನ್ನು ಹತ್ತಿಲ್ಲ’ ಎಂದು ಹೇಳುತ್ತಾರೆ. ಗ್ರಾಮೀಣ ಭಾಗದಲ್ಲಿ ಅಂದಿನ ಕಾಲದಲ್ಲಿ ಯಾರಾದರೂ ಶಿಕ್ಷಣ ಪಡೆದಿದ್ದಾರೆಂದರೆ ಸರ್ವೇಸಾಮಾನ್ಯವಾಗಿ ಅವರು ಶ್ರೀಮಂತರ ಮಕ್ಕಳಾಗಿರುತ್ತಿದ್ದರು. ಆದಾಗ್ಯೂ ಅತ್ಯಂತ ಬಡತನದಲ್ಲಿಯೂ ಕೆಲವು ಗ್ರಾಮೀಣ ಪ್ರತಿಭೆಗಳು ಕಷ್ಟಪಟ್ಟು ಹತ್ತಾರು ಕಿಲೋ ಮೀಟರ್ ಕಾಲ್ನಡಿಗೆ ಮೂಲಕ ತಮ್ಮ ಶಿಕ್ಷಣವನ್ನು ಪಡೆದು ದೇಶಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ಶೈಕ್ಷಣಿಕ ಅಭಿವೃದ್ಧಿಯಿಂದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂಬುವುದನ್ನು ಕಂಡುಕೊoಡವರು ಪೂಜ್ಯ ಹೆಗ್ಗಡೆಯವರು. ಆದುದರಿಂದ ಶಿಕ್ಷಣ ಕ್ಷೇತ್ರಕ್ಕೆ ಯಾವ ವಿಧದ ಪ್ರೋತ್ಸಾಹ, ಸಹಕಾರ ನೀಡಬಹುದು ಎಂಬುವುದನ್ನು ಸುದೀರ್ಘವಾಗಿ ಯೋಚಿಸಿ ಅನೇಕ ಕಾರ್ಯಕ್ರಮಗಳನ್ನು ಪೂಜ್ಯ ಹೆಗ್ಗಡೆಯವರು ಹಾಕಿಕೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮೂಲಕ ಗ್ರಾಮೀಣ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದು ಒಂದು ಕಡೆಯಾದರೆ, ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಡ ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಇತರ ಸವಲತ್ತುಗಳನ್ನು ನೀಡುವ ಅನೇಕ ಕಾರ್ಯಕ್ರಮಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮೂರು ದಶಕಗಳ ಹಿಂದೆಯೇ ಆರಂಭಿಸಿದರು. ಆ ಕಾರ್ಯಕ್ರಮವೇ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ’.
ಸರಕಾರವು ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ನಿರ್ಮಿಸಿರುವುದು ಒಂದು ಸಾಧನೆಯೇ ಸರಿ. ಅಂತಹ ಶಾಲೆಗಳಿಗೆ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಮೂಲಕ ಪೂಜ್ಯ ಹೆಗ್ಗಡೆಯವರು ವಿಶೇಷವಾಗಿ ಸಾಥ್ ನೀಡಿದರು. ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ ಅಥವಾ ವಿಸ್ತರಣೆಯ ಸಂದರ್ಭದಲ್ಲಿ ಶಾಲಾ ಆಡಳಿತ ಸಮಿತಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದರು.
ಹಾಗೆಯೇ 1990 ರಿಂದ ಇಲ್ಲಿಯವರೆಗೆ 6,893 ಶಾಲಾ ಕಟ್ಟಡಗಳ ರಚನೆ, 1,553 ಶಾಲೆಗಳಿಗೆ ಬೋಧನಾ ಸಾಮಾಗ್ರಿಗಳ ಒದಗಣೆ, 1,950 ಶಾಲೆಗಳಿಗೆ ಕ್ರೀಡಾ ಸಾಮಾಗ್ರಿಗಳ ಒದಗಣೆ, 320 ಕುಡಿಯುವ ನೀರಿನ ವ್ಯವಸ್ಥೆ, 354 ವಿದ್ಯುತ್ ಸಂಪರ್ಕ, 803 ಶೌಚಾಲಯ ರಚನೆ, 338 ಶಾಲಾ ಕಟ್ಟಡ ದುರಸ್ತಿ, 558 ಶಾಲಾ ಆವರಣ ರಚನೆ, 369 ಆಟದ ಮೈದಾನ ರಚನೆಯನ್ನು ಮಾಡಲಾಗಿದೆ. ಇಂದಿಗೂ ಜ್ಞಾನದೀಪ ಕಾರ್ಯಕ್ರಮ ಮುಂದುವರಿದಿದ್ದು ಇದಕ್ಕಾಗಿ ಪ್ರತಿ ವರ್ಷ ಬಹುದೊಡ್ಡ ಮೊತ್ತವನ್ನು ಗ್ರಾಮಾಭಿವೃದ್ಧಿ ಯೋಜನೆ ವಿನಿಯೋಗಿಸುತ್ತಿದೆ.
ಗ್ರಾಮೀಣ ಶಾಲೆಗಳಲ್ಲಿ ಇಂತಹ ಮೂಲಭೂತ ಸೌಕರ್ಯಗಳ ಒದಗಣೆಯು ಶಿಕ್ಷಣ ಕ್ರಾಂತಿಗೆ ಸಹಕಾರಿಯಾಯಿತು. ಹಳ್ಳಿಗಳಲ್ಲಿ ಶಾಲೆಯ ಮೆಟ್ಟಿಲು ಹತ್ತದೆ ಕೂಲಿ ಕೆಲಸಕ್ಕೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರಾರಂಭಿಸಿದರು. ಪೂಜ್ಯರ ಮಾರ್ಗದರ್ಶನದಂತೆ ಒಂದು ವಿಶೇಷ ಶಿಕ್ಷಣ ಅಭಿಯಾನವನ್ನು ಕೈಗೊಳ್ಳಲಾಯಿತು. ಯೋಜನೆಯ ಕಾರ್ಯಕರ್ತರು ಮನೆಮನೆಗೆ ತೆರಳಿ ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಇದರ ಜೊತೆಗೆ ಸರಕಾರವು ಶಿಕ್ಷಣ ಕ್ಷೇತ್ರಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆಯನ್ನು ನೀಡಿತು. ಇವೆಲ್ಲದರ ಫಲಶ್ರುತಿ ಮತ್ತು ಪೂಜ್ಯರ ಈ ಜ್ಞಾನದೀಪ ಕಾರ್ಯಕ್ರಮದಿಂದಾಗಿ ಅಂದು ಗ್ರಾಮೀಣ ಶಿಕ್ಷಣದಲ್ಲಿ ಒಂದು ಅಮೂಲಾಗ್ರವಾದ ಅಭಿವೃದ್ಧಿಯ ಬದಲಾವಣೆ ಕಂಡಿತು. ಶಾಲೆಯ ಪ್ರವೇಶಾತಿಯ ಸಂಖ್ಯೆ ಗಣನೀಯವಾಗಿ ಏರಿತು. ಅತ್ಯುತ್ತಮ ಮೂಲಭೂತ ಸೌಕರ್ಯಗಳಿರುವ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಮಕ್ಕಳು ಅತ್ಯಂತ ಉತ್ಸುಕರಾದ ಪರಿಣಾಮವಾಗಿ ಒಮ್ಮೆಲೆ ರಾಜ್ಯದ ಸಾಕ್ಷರತೆಯ ಪ್ರಮಾಣವು ಹೆಚ್ಚಿತು.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

Facebook
Twitter
WhatsApp
LinkedIn
Telegram