ಡಿಜಿಟಲ್ ವ್ಯವಹಾರದ ಹೊಸ ಹೆಜ್ಜೆ ‘ಇ – ರುಪಿ’

ಡಿಜಿಟಲ್ ವ್ಯವಸ್ಥೆಗೆ ಹೆಚ್ಚಿನ ವೇಗ ನೀಡುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರಕಾರ ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್ ಹೀಗೆ ಹಲವಾರು ಡಿಜಿಟಲ್ ಮಾಧ್ಯಮಗಳನ್ನು ಪರಿಚಯಿಸಿದೆ. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಮೂಲಕ ಮಧ್ಯವರ್ತಿಮುಕ್ತ ದುನಿಯಾವನ್ನು ಪರಿಚಯಿಸುವ ಕೆಲಸವು ವೇಗವಾಗಿ ನಡೆಯುತ್ತಿದೆ. ಆದರೆ ಫಲಾನುಭವಿಗಳಿಗೆ ಸರಕಾರದಿಂದ ನೀಡಿದ ಹಣವನ್ನು ಅವರು ಅದೇ ಕೆಲಸಕ್ಕೆ ಬಳಸುತ್ತಿಲ್ಲ, ಅರ್ಹತೆ ಇಲ್ಲದವರು ಕೆಲವು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಸರಕಾರದ ಬಳಿ ಇತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಇಟ್ಟ ಹೊಸ ಡಿಜಿಟಲ್ ಹೆಜ್ಜೆಯ ಹೆಸರೇ ‘ಇ – ರುಪಿ’. ಡಿಜಿಟಲ್ ಕರೆನ್ಸಿಯನ್ನು ಭಾರತದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇದೊಂದು ಬಹುಮುಖ್ಯ ಹೆಜ್ಜೆ ಎಂದರೆ ತಪ್ಪಾಗಲಾರದು.
ಏನಿದು ‘ಇ – ರುಪಿ’
ಮುಂದಿನ ದಿನಗಳಲ್ಲಿ ಸರಕಾರದಿಂದ ಸೌಲಭ್ಯ ಪಡೆಯುವ ಫಲಾನುಭವಿಗಳ ಖಾತೆಗೆ ನೇರವಾಗಿ ನಗದನ್ನು ಜಮಾಕರಿಸುವ ಬದಲು ನೇರವಾಗಿ ಫಲಾನುಭವಿಗಳ ಮೊಬೈಲ್ ಫೋನುಗಳಿಗೆ ಕ್ಯೂ ಆರ್‌ಕೋಡ್ ಅಥವಾ ಎಸ್ಸೆಮ್ಮೆಸ್ ಮೂಲಕ ‘ಇ – ವೋಚರ್’ ಅನ್ನು ಕಳುಹಿಸಿಕೊಡಲಾಗುತ್ತದೆ. ಸ್ಕ್ಯಾನ್ ಮಾಡಿದಾಗ ಅದು ಕರೆನ್ಸಿಯಾಗಿ ಕೆಲಸ ಮಾಡುತ್ತದೆ.
ಪ್ರಯೋಜನ
ಯಾವ ಉದ್ದೇಶಕ್ಕೆ ವೋಚರ್ ಕಳುಹಿಸಲಾಗಿದೆಯೋ ಆ ಉದ್ದೇಶಕ್ಕೆ ಮಾತ್ರ ಅದನ್ನು ಬಳಸಬೇಕಾಗುತ್ತದೆ. ಬೇರೆ ಉದ್ದೇಶಗಳಿಗೆ ಬಳಸಲು, ಕರೆನ್ಸಿಯಾಗಿ ಹಿಂಪಡೆಯಲು ಇಲ್ಲಿ ಅವಕಾಶಗಳಿಲ್ಲ. ಇದಕ್ಕೆ ಕಾರ್ಡ್, ಡಿಜಿಟಲ್ ಪಾವತಿ ಆ್ಯಪ್, ಇಂಟರ್ನೆಟ್ ಬ್ಯಾಂಕಿ0ಗ್ ವ್ಯವಸ್ಥೆಯ ಅಗತ್ಯವಿಲ್ಲ. ಉದಾಹರಣೆಗೆ ಅಂಗವಿಕಲರಿಗೆ ಸಲಕರಣೆ ಖರೀದಿಗಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಿ ‘ಇ – ರುಪಿ’ಯನ್ನು ಪಡೆದಿದ್ದರೆ ಅದನ್ನು ಅಂಗವಿಕಲ ಸಲಕರಣೆ ಖರೀದಿಗಷ್ಟೇ ಬಳಸಬಹುದಾಗಿದೆ. ಅದರಿಂದ ಬೇರೆ ಏನನ್ನೂ ಖರೀದಿಸಲು ಅವಕಾಶಗಳಿಲ್ಲ.
ಉಪಯೋಗಿಸುವುದು ಹೇಗೆ?
ತಮಗೆ ದೊರೆತ ಸೌಲಭ್ಯಗಳ ಖರೀದಿಗೆ ಸಂಬAಧಪಟ್ಟ ಅಂಗಡಿಗಳಿಗೆ ತೆರಳಿ ತಮ್ಮ ಮೊಬೈಲ್‌ಗೆ ಬಂದಿರುವ ‘ಇ – ವೋಚರ್’ ಸಂದೇಶವನ್ನು ತೋರಿಸಿದರೆ ಸಾಕು. ಅದನ್ನು ಅಂಗಡಿಯವರು ಸ್ಕ್ಯಾನ್ ಮಾಡುತ್ತಾರೆ. ಆಗ ಅವರ ಖಾತೆಗೆ ಮೊತ್ತ ಜಮೆಯಾಗುತ್ತದೆ. ಇದರಿಂದಾಗಿ ಯಾವುದೇ ಸೋರಿಕೆಯಿಲ್ಲದೆ ಅರ್ಹರಿಗೆ ಸೌಲಭ್ಯ ತಲುಪಲಿದೆ.
ಮುಂದಿನ ದಿನಗಳಲ್ಲಿ ಸರಕಾರ ನೀಡುವ ಎಲ್ಲ ರೀತಿಯ ಸಬ್ಸಿಡಿ ಮೊತ್ತ, ವಿವಿಧ ಕಲ್ಯಾಣ ಯೋಜನೆಗಳು, ಆಯುಷ್ಮಾನ್ ಭಾರತ್‌ನಡಿ ಔಷಧಗಳ ಪೂರೈಕೆ, ರಸಗೊಬ್ಬರ ಸಬ್ಸಿಡಿ, ಮುಂತಾದ ಸೌಲಭ್ಯಗಳಿಗಾಗಿ ಫಲಾನುಭವಿಗಳ ಖಾತೆಗೆ ನಗದನ್ನು ಜಮೆ ಮಾಡುವ ಬದಲು ‘ಇ – ವೋಚರ್’ ಅನ್ನು ಕಳುಹಿಸಿಕೊಡುವ ಯೋಚನೆ ಸರಕಾರದ ಮುಂದಿದೆ. ಇದರಿಂದಾಗಿ ಫಲಾನುಭವಿಗಳು ಸೂಚಿತ ಉದ್ದೇಶಕ್ಕೆ ಮಾತ್ರ ಸಹಾಯ ಧನವನ್ನು ಉಪಯೋಗಿಸಬಹುದಾಗಿದೆ.
ಆಗಸ್ಟ್ 02, 2021ರಂದು ಪ್ರಧಾನಮಂತ್ರಿಗಳು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಮುಂದೊ0ದು ದಿನ ಡಿಜಿಟಲ್ ದುನಿಯಾದಲ್ಲಿ ‘ಇ – ರುಪಿ’ ಸದ್ದು ಮಾಡುವುದಂತೂ ಸತ್ಯ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *