ದಾನ ಪರಂಪರೆಗೆ ಹೊಸ ಭಾಷ್ಯ

ನನ್ನ ಎಲ್ಲಾ ಆತ್ಮೀಯ ‘ನಿರಂತರ’ ಓದುಗರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶುಭಾಶಯಗಳು.
ಶ್ರೀ ಕ್ಷೇತ್ರ ಧರ್ಮಸ್ಥಳದ ಅನೇಕ ಶತಮಾನಗಳ ‘ಚತುರ್ದಾನ’ ಪರಂಪರೆಯನ್ನು ಕೈ ದಾನದಿಂದ ಸಾಂಸ್ಥಿಕ ದಾನಕ್ಕೆ ಉನ್ನತೀಕರಿಸಿದವರು ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು. ಅನ್ನದಾನ, ವಿದ್ಯಾದಾನ, ಔಷಧದಾನ ಹಾಗೂ ಅಭಯದಾನಗಳು ಪಾರಂಪರಿಕವಾಗಿ ಕೈ ದಾನದ ಮೂಲಕ ಧರ್ಮಸ್ಥಳದಲ್ಲಿ ಅನಾದಿ ಕಾಲದಿಂದಲೂ ಯಥೇಚ್ಛವಾಗಿ ನಡೆಯುತ್ತಿತ್ತು. ಶ್ರೀ ಹೆಗ್ಗಡೆಯವರು ಈ ಚತುರ್ದಾನಗಳಿಗೆ ಸಾಂಸ್ಥಿಕ ರೂಪುರೇಷೆಗಳನ್ನು ಕೊಟ್ಟು, ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಮೂಲಕ ಕ್ಷೇತ್ರದ ದಾನ ಪರಂಪರೆಯನ್ನು ರಾಜ್ಯಾದ್ಯಂತ ಪಸರಿಸಿದರು.
ನಿರಂತರ ಅನ್ನದಾಸೋಹಗಳ ಮೂಲಕ ಲಕ್ಷಾಂತರ ಭಕ್ತರಿಗೆ ‘ಅನ್ನದಾನ’, ಐವತ್ತೆರಡು ಶಿಕ್ಷಣ ಸಂಸ್ಥೆಗಳ ಮೂಲಕ ರಾಜ್ಯಾದ್ಯಂತ ಗ್ರಾಮೀಣ ಮಕ್ಕಳಿಗೆ ‘ವಿದ್ಯಾದಾನ’, ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಮುಂತಾದ ಪ್ರಾಚೀನ ಭಾರತೀಯ ವೈದ್ಯ ವಿಜ್ಞಾನದಿಂದ ಹಿಡಿದು ಅಲೋಪತಿ ಆಸ್ಪತ್ರೆಗಳನ್ನು ನಿರ್ಮಿಸಿ ರಾಜ್ಯಾದ್ಯಂತ ಜನಸಾಮಾನ್ಯರಿಗೆ ವೈದ್ಯಕೀಯ ಚಿಕಿತ್ಯಾ ಸೌಲಭ್ಯದ ಮೂಲಕ ‘ಔಷಧದಾನ’ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಮುಂತಾದ ಸಂಸ್ಥೆಗಳ ಮೂಲಕ ಬಡವರ, ಅಸಹಾಯಕ, ನಿರುದ್ಯೋಗಿ ಯುವಕ/ಯುವತಿಯರ ಆರ್ಥಿಕ, ಸಾಮಾಜಿಕ ಸಮಗ್ರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳ ಮೂಲಕ ‘ಅಭಯದಾನ’ ಹೀಗೆ ಸುಸ್ಥಿರವಾದ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿ ನಿರಂತರವಾಗಿ ಸಮಾಜ ಸೇವೆಗಳನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ.
ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಅಮ್ಮನವರ ಧೀಮಂತ ಚಿಂತನೆ ಹಾಗೂ ಮಾರ್ಗದರ್ಶನಗಳಿಂದ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ 40 ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯಂತ ಆರ್ಥಿಕ, ಸಾಮಾಜಿಕ, ಸಮುದಾಯ ಅಭಿವೃದ್ಧಿಯ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತದೆ. ಜನಸಾಮಾನ್ಯರ ಅನೇಕ ಸಮಸ್ಯೆಗಳನ್ನು ಆಳವಾಗಿ ಅರ್ಥೈಸಿಕೊಂಡು ಅವುಗಳಿಗೆ ಶಾಶ್ವತ ಪರಿಹಾರ ನೀಡುವುದರೊಂದಿಗೆ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಪೂಜ್ಯ ಶ್ರೀ ಹೆಗ್ಗಡೆಯವರ ಸಾಮಾಜಿಕ ಸಂಕಲ್ಪವಾಗಿದೆ.
ಸಮಾಜದ ಅತ್ಯಂತ ಕಠಿಣವಾದ ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜೊತೆಗೆ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವಂತಹ ಪೂಜ್ಯರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದು ಅತ್ಯಂತ ಸವಾಲಿನ ಕೆಲಸ. ಅತ್ಯಂತ ಸವಾಲಿನ ಕಾರ್ಯಕ್ರಮಗಳನ್ನು ಅನುಷ್ಠಾನಿಸಿ ವ್ಯಕ್ತಿಗತ ಹಾಗೂ ಸಮುದಾಯದ ಅಭಿವೃದ್ಧಿಯನ್ನು ಸಾಧಿಸುತ್ತಿರುವ ಅನೇಕ ಕಾರ್ಯಕ್ರಮಗಳ ಶ್ರೇಷ್ಠ ವ್ಯವಸ್ಥೆಯೇ ‘ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ’ ಆಗಿದೆ. ಯಾವುದೇ ಕಾರ್ಯಕ್ರಮಗಳಿರಲಿ ಅವುಗಳನ್ನು ಮಾದರಿಯಾಗಿ, ಯಶಸ್ವಿ ಕಾರ್ಯಕ್ರಮವಾಗಿ ರೂಪಿಸುವಲ್ಲಿ ಯೋಜನೆಯ ನಾಯಕ ಡಾ| ಎಲ್.ಎಚ್. ಮಂಜುನಾಥ್‌ರವರ ಪಾತ್ರ ಅನನ್ಯವಾದುದು. ಅವರು ಕಳೆದ 23 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಓರ್ವ ಶ್ರೇಷ್ಠ ಆಡಳಿತಗಾರರಾಗಿದ್ದಾರೆ. ಪೂಜ್ಯರ ಚಿಂತನೆ, ಮಾರ್ಗದರ್ಶನಗಳನ್ನು ಯಶಸ್ವಿ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಅನುಷ್ಠಾನಿಸಿ ಜನಸಾಮಾನ್ಯರ ಸಬಲೀಕರಣಕ್ಕೆ ಅದ್ವಿತೀಯ ಕೊಡುಗೆಯನ್ನು ಅವರು ನೀಡಿದ್ದಾರೆ. ಅವರ ಸೇವೆ ಅನನ್ಯ ಹಾಗೂ ಮಾದರಿಯಾಗಿರುವಂತದ್ದು. ಕಳೆದ ಇಪ್ಪತ್ತು ವರ್ಷಗಳಿಂದ ‘ನಿರಂತರ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಓದುಗರಿಗೆ ಅತ್ಯಮೂಲ್ಯ ವಿಷಯ ಜ್ಞಾನವನ್ನು ನೀಡಿದ್ದಾರೆ, ಪತ್ರಿಕೆಯನ್ನು ಬೆಳೆಸಿದ್ದಾರೆ. ಅವರಿಗೆ ಅನಂತ ಧನ್ಯವಾದಗಳು.
ಪೂಜ್ಯ ಶ್ರೀ ಹೆಗ್ಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ಪ್ರಕಟಗೊಳ್ಳುತ್ತಿರುವ ರಾಜ್ಯದ ಹೆಮ್ಮೆಯ ‘ನಿರಂತರ’ ಪತ್ರಿಕೆಯ ‘ಪ್ರಧಾನ ಸಂಪಾದಕ’ ಜವಾಬ್ದಾರಿಯನ್ನು ಪೂಜ್ಯರು ನನಗೆ ವಹಿಸಿದ್ದಾರೆ. ನಮ್ಮೆಲ್ಲಾ ನಿರಂತರ ಓದುಗರಿಗೆ ಇನ್ನೂ ಹೆಚ್ಚಿನ ಸೂಕ್ತ ಹಾಗೂ ಸಮರ್ಪಕ ವಿಚಾರಧಾರೆಗಳನ್ನು ‘ನಿರಂತರ’ ಪತ್ರಿಕೆಯ ಮೂಲಕ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ನಿಮ್ಮ ಮನೆ ಮನಗಳಿಗೆ ‘ನಿರಂತರ’ ಜ್ಞಾನವಾಹಿನಿಯು ನಿರಂತರವಾಗಿ ಹರಿದು ಬರಲಿ, ಅರಿವು ಮೂಡಲಿ, ಪ್ರಗತಿ ಹೊಂದಲಿ ಎಂಬ ಪ್ರಾರ್ಥನೆಯೊಂದಿಗೆ ‘ನಿರ್ದೇಶಕರ ನಿವೇದನೆ’ಗೆ ಸಂತೋಷದಿoದ ಮುನ್ನುಡಿ ಬರೆಯುತ್ತಿದ್ದೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *