ಧರ್ಮದ ಸತ್ವ ಪರೀಕ್ಷೆ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಯಕ್ಷಗಾನದ ಕಥಾ ಹಂದರ ಹೇಗಿತ್ತೆಂದರೆ; ಒಬ್ಬ ರಾಜನು ಉತ್ತಮ ರೀತಿಯಲ್ಲಿ ಪ್ರಜೆಗಳನ್ನು ಪರಿಪಾಲಿಸುತ್ತಾ ರಾಜ್ಯವನ್ನು ಮುನ್ನಡೆಸುತ್ತಿದ್ದ. ಒಂದೊಮ್ಮೆ ನಾರದ ಮಹರ್ಷಿಗಳು ಆ ರಾಜನ ಬಳಿ ಬಂದು ಆತನನ್ನು ಉದ್ದೇಶಿಸಿ ‘ಮಹಾರಾಜ, ನೀನೇನೋ ನಿನ್ನಷ್ಟಕ್ಕೆ ರಾಜ್ಯಭಾರ ಮಾಡುತ್ತಾ ಇದ್ದೀಯಾ! ಆದರೆ ನಿನ್ನ ತಂದೆಯನ್ನು ಕೊಂದು, ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋದ ನೆರೆಯ ರಾಜ್ಯದ ರಾಜನು ತನ್ನ ಸೈನ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದ್ದಾನೆ. ಅವನು ನಿನ್ನ ತಂದೆಯನ್ನು ಕೊಂದಾತ. ಅಲ್ಲದೆ ಇಲ್ಲಿಯ ಸಂಪತ್ತನ್ನು ದೋಚಿದವನಾಗಿದ್ದಾನೆ’ ಎಂದಾಗ ‘ನಾರದರೇ, ನನಗೆ ಯಾವ ಕೋಪವೂ ಇಲ್ಲ. ಆತನ ಮೇಲೆ ಯಾಕೆ ಯುದ್ಧ ಮಾಡಲಿ?’ ಎನ್ನುತ್ತಾನೆ. ನಾರದರು ‘ನಿನ್ನ ತಂದೆಯನ್ನು ಹತ್ಯೆ ಮಾಡಿದವರ ಬಗ್ಗೆ ಸೇಡು ತೀರಿಸಿಕೊಳ್ಳಬೇಕೆಂದು ಅನ್ನಿಸಿಲ್ಲವೇ? ಕೈ ಬಿಟ್ಟು ಹೋದ ಸಂಪತ್ತನ್ನು ಮರಳಿ ಪಡೆಯಬೇಕೆಂಬ ಇಚ್ಛೆ ಒಂದಿಷ್ಟೂ ಇಲ್ಲವೇ?’ ಎಂದಾಗ ರಾಜನಿಗೂ ನಾರದರ ಮಾತು ನಿಜವೆನಿಸುತ್ತದೆ. ಅದಕ್ಕೀಗ ನಾನೇನು ಮಾಡಬೇಕು ಎಂದು ತಿಳಿಸಿ ಎಂದಾಗ ನಾರದರು ಸಲಹೆ ಕೊಡುತ್ತಾರೆ. ನೀನು ಆ ರಾಜ್ಯದ ಮೇಲೆ ದಾಳಿ ಮಾಡು. ರಾಜನನ್ನು ನಾಶ ಮಾಡಿ, ರಾಜ್ಯವನ್ನು ವಶಪಡಿಸಿಕೋ. ಅತ್ಯಂತ ಸುಂದರಿಯಾದ ರಾಣಿಯನ್ನು ಕೂಡ ನಿನ್ನವಳನ್ನಾಗಿ ಮಾಡಿಕೋ ಎಂದಾಗ, ರಾಜ್ಯವನ್ನು ಬೇಕಾದರೆ ವಶಮಾಡಿಕೊಳ್ಳಬಹುದು. ಆದರೆ ವಿಧವೆ ರಾಣಿಯನ್ನು ಹೇಗೆ ವಶ ಮಾಡಲಿ, ಮೈಲಿಗೆಯಾಗುವುದಿಲ್ಲವೇ ಎಂದೆನ್ನುತ್ತಾನೆ.
‘ವಿಧವೆಯನ್ನು ಮದುವೆಯಾಗುವ ವಿಚಾರ ಬರುವುದಿಲ್ಲ. ಹೇಗೂ ನೀನು ಆ ರಾಜನನ್ನು ನಾಶ ಮಾಡಿ ಸಿಂಹಾಸನ ಏರುತ್ತಿ. ನೀನೇರುವ ಆ ಸಿಂಹಾಸನ ಹೇಗೆ ನಿನಗೆ ಮೈಲಿಗೆಯಾಗುವುದಿಲ್ಲವೋ, ಹಾಗೆಯೇ ಈ ಹಿಂದೆ ಆ ಸಿಂಹಾಸನ ಏರುತ್ತಿದ್ದ ಆತನ ರಾಣಿಯೂ ನಿನಗೆ ಮೈಲಿಗೆಯಾಗಲಾರಳು’ ಎಂಬ ಮಾತನ್ನು ಹೇಳುತ್ತಾರೆ.
ನಾರದರ ಮಾತುಗಳಿಂದ ಉತ್ಸುಕನಾದ ರಾಜ ಯುದ್ಧದ ಸಿದ್ಧತೆ ಮಾಡಿಕೊಂಡು ವೈರಿ ರಾಜನ ವಿರುದ್ಧ ದಂಡೆತ್ತಿ ಹೋಗುತ್ತಾನೆ. ವೈರಿ ರಾಜನು ತನ್ನ ಬಳಿ ಯುದ್ಧಕ್ಕೆ ಬಂದ ರಾಜನನ್ನು ಕುರಿತು ‘ನೀನು ಯಾಕೆ ನನ್ನ ಮೇಲೆ ಯುದ್ಧಕ್ಕೆ ಬಂದೆ? ನನಗೂ – ನಿನಗೂ ಯಾವುದೇ ದ್ವೇಷಗಳಿಲ್ಲ’ ಎಂದಾಗ. ‘ನಿನ್ನ ತಂದೆ ನನ್ನ ತಂದೆಯನ್ನು ಕೊಂದಿದ್ದಾನೆ. ಮಾತ್ರವಲ್ಲದೆ ನಮ್ಮ ರಾಜ್ಯದ ಸಂಪತ್ತನ್ನು ದೋಚಿದ್ದಾನೆ ಎಂದುತ್ತರಿಸುತ್ತಾನೆ.’ ಆಗ ವೈರಿ ರಾಜನು ಅದ್ಯಾವುದೂ ನನಗೀಗ ಸಂಬAಧಿಸಿದ್ದಲ್ಲ. ಈಗ ನೀನು ಅನಾವಶ್ಯಕವಾಗಿ ಯುದ್ಧಕ್ಕೆ ಬಂದರೆ ಸುಮ್ಮನಿರಲಾರೆ ನಿನ್ನನ್ನು ಎದುರಿಸಿಯೇ ಎದುರಿಸುತ್ತೇನೆ ಎಂದು ಹೇಳಿ ಯುದ್ಧಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾನೆ. ಎರಡು ರಾಜರ ನಡುವೆ ಘನಘೋರ ಯುದ್ಧವು ನಡೆಯುತ್ತದೆ. ಯುದ್ಧದಲ್ಲಿ ವೈರಿ ರಾಜನು ಸಾವನ್ನಪ್ಪುತ್ತಾನೆ. ಮರಣ ಹೊಂದಿದ ರಾಜನ ಪತ್ನಿ ದುಃಖಿಸುತ್ತಿರುತ್ತಾಳೆ. ‘ಯಾಕಾಗಿ ಬದುಕಲಿ? ಯಾರಿಗಾಗಿ ಬದುಕಲಿ? ನಾನು ಅನಾಥೆಯಾದೆ’ ಎಂದು ಕಣ್ಣೀರುಡುತ್ತಾಳೆ. ಆಗ ನಾರದರು ಪ್ರತ್ಯಕ್ಷವಾಗಿ ‘ನೀನು ಅಳಬೇಡ. ನೀನು ವಿಜಯಿಯಾದ ರಾಜನನ್ನು ಮದುವೆಯಾಗು. ನಿನಗೆ ಒಳಿತೇ ಆಗುತ್ತದೆ’ ಎಂದು ಹೇಳಿ ಮಾಯವಾಗುತ್ತಾರೆ.
ಈ ಎಲ್ಲ ಸಂಭಾಷಣೆಗಳು ಪಾತ್ರಧಾರಿಗಳ ಮೂಲಕ ಅಭಿವ್ಯಕ್ತಿಪಡಿಸಿದ್ದು ಯಕ್ಷಗಾನ ಪ್ರಸಂಗ ಬರೆದ ಸಾಹಿತಿ. ಸಂಭಾಷಣೆ ಅಥವಾ ಪ್ರಸಂಗದ ವಿಚಾರಗಳ ಬಗ್ಗೆ ಯಾವ ಆಧಾರವಿದೆ? ಅಥವಾ ಯಾವ ಪುರಾಣದಲ್ಲಿ ಉಲ್ಲೇಖಿತವಾಗಿದೆ ಎಂದು ಯಾರಾದರೂ ಹೇಳಬಹುದು. ಮುಖ್ಯವಾಗಿ ಗಮನಿಸಬೇಕೆಂದರೆ ಕೆಲವು ಯಕ್ಷಗಾನದ ಕತೆಗಳು ಪುರಾಣದ ಆಧಾರದ ಮೇಲೆ ರಚಿತವಾಗಿರುವುದಿಲ್ಲ. ವೀರ ರಸಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಪಾತ್ರಗಳು ಕಳೆಗಟ್ಟುವಂತೆ ಮಾಡಲು ಸಾಹಿತಿಗಳು ಕತೆಗಳನ್ನು ರೂಪಿಸುತ್ತಾರೆ. ಇವು ಧರ್ಮ – ಅಧರ್ಮಗಳ ನಡುವಿನ ಕತೆಯಾಗಿದ್ದು ಅಂತಿಮವಾಗಿ ದುಷ್ಟರು ನಾಶ ಹೊಂದಿ ಶಿಷ್ಟರಿಗೆ ಜಯವಾಗುತ್ತದೆ. ಧರ್ಮವು ಉಳಿಯುತ್ತದೆ ಎಂಬ ಸಂದೇಶ ನೀಡುವ ಕತೆಗಳಾಗಿರುತ್ತವೆ.
ಮೇಲಿನ ಕತೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿನ ಕೆಲವೊಂದು ಘಟನೆಗಳನ್ನು ಗಮನಿಸುವಾಗ ನನಗನ್ನಿಸಿದ್ದು ಎಷ್ಟೋ ಸಲ ಯಾರು ಸತ್ಯ, ಧರ್ಮ, ನ್ಯಾಯ, ನೀತಿ ಮಾರ್ಗದ ಮೂಲಕ ಬದುಕನ್ನು ನಡೆಸುತ್ತಾರೋ ಅವರಿಗೆ ಹೆಚ್ಚು ಕಷ್ಟ – ನಷ್ಟ, ದುಃಖ, ತಾಪತ್ರಯಗಳು ಉಂಟಾಗುತ್ತವೆ. ಹಾಗಾದರೆ ಧರ್ಮಿಷ್ಠರಿಗೆಯೇ ಯಾಕೆ ಅಷ್ಟೊಂದು ಸಂಕಷ್ಟಗಳು ಎದುರಾಗುತ್ತವೆ! ಇದಕ್ಕೆ ಹಲವಾರು ಬಗೆಯ ಉತ್ತರಗಳನ್ನು ನೀಡಬಹುದು. ಇಂತಹ ಪರೀಕ್ಷೆಗಳ ಮೂಲಕ ಯಾರು ಧರ್ಮಿಷ್ಠರು? ಅಧರ್ಮದಲ್ಲಿ ನಡೆಯುವವರು ಎಂದು ತಿಳಿಯಬಹುದಾಗಿದೆ. ಚಿನ್ನಕ್ಕೆ ಪಾಲಿಶ್ ನೀಡಿದಾಗ ಹೇಗೆ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೋ ಹಾಗೆ ಧರ್ಮಿಷ್ಠರಿಗೆ ಹೆಚ್ಚು ಕಷ್ಟಗಳನ್ನು ಒಡ್ಡಿ ಪರೀಕ್ಷೆಗೆ ಒಳಪಡಿಸುವ ಮೂಲಕ ಅವರಲ್ಲಿನ ಧರ್ಮಿಷ್ಠತೆಯು ರಾರಾಜಿಸುವಂತೆ ಮಾಡುವುದಾಗಿದೆ ಎಂದೆನ್ನಬಹುದು.
ಪುರಾಣದ ನಳ – ದಮಯಂತಿಯರ ಕತೆ, ಸತ್ಯ ಹರಿಶ್ಚಂದ್ರನ ಕತೆ, ಏಸು ಕ್ರಿಸ್ತ ಮಾತ್ರವಲ್ಲದೆ ಪ್ರಸಿದ್ಧ ರಾಮಾಯಣ, ಮಹಾಭಾರತದಲ್ಲೂ ಧರ್ಮಿಷ್ಠರಿಗೆ ಸಾಕಷ್ಟು ತೊಂದರೆಗಳಾಗಿವೆ.ರಾಮಾಯಣದಲ್ಲಿ ಶ್ರೀರಾಮಚಂದ್ರನು ಯಾವುದೇ ತಪ್ಪು ಮಾಡದಿದ್ದರೂ ತನ್ನ ತಂದೆಯ ಆಜ್ಞೆಯಂತೆ ವನವಾಸಕ್ಕೆ ತೆರಳಬೇಕಾಯಿತು. ಮಹಾಭಾರತದಲ್ಲಿ ತನ್ನಷ್ಟಕ್ಕೇ ತಾನಿದ್ದು, ಧರ್ಮಯುತವಾದ ಬದುಕನ್ನು ನಡೆಸುತ್ತಿದ್ದ ಧರ್ಮರಾಯನೂ ಕೂಡ ದ್ಯೂತದಲ್ಲಿ ಸೋತು ತನ್ನ ಸಹೋದರರೊಂದಿಗೆ ಕಾಡು – ಮೇಡುಗಳಲ್ಲಿ ಅಲೆಯುವಂತಾಯಿತು. ಈ ಎರಡೂ ಘಟನೆಗಳಲ್ಲಿ ಕೂಡ ಧರ್ಮಿಷ್ಠರು ಅಧರ್ಮವನ್ನು ಮಾಡದೆಯೂ ಭ್ರಷ್ಟರಾಗುತ್ತಾರೆ ಎಂಬುದನ್ನು ಗಮನಿಸಬಹುದಾಗಿದೆ.
ಆದರೆ ಧರ್ಮಿಷ್ಠರಿಗೆ ಎಂದೆoದಿಗೂ ಭಗವಂತನ ಅನುಗ್ರಹವಿದೆಯೆಂಬುವುದನ್ನು ಮರೆಯಬಾರದು. ಧರ್ಮದ ನಡವಳಿಕೆಯಿಂದಲೇ ಶ್ರೀ ರಾಮನು ಭಗವಂತನ ಸ್ಥಾನವನ್ನು ಅಲಂಕರಿಸುತ್ತಾನೆ ಎಂಬುದು ರಾಮಾಯಣದಲ್ಲಿ ಉಲ್ಲೇಖಿತವಾಗಿದೆ. ಮಹಾಭಾರತದಲ್ಲಿ ಸಾಕ್ಷಾತ್ ಭಗವಾನ್ ಶ್ರೀ ಕೃಷ್ಣನೆ ಧರ್ಮಿಷ್ಠರ ಬೆನ್ನೆಲುಬಾಗಿ ನಿಂತು ರಕ್ಷಣೆ ನೀಡುತ್ತಾನೆ. ಈ ಎರಡೂ ಕತೆಗಳಲ್ಲಿ ಅವರ ಸ್ವಯಂ ಶಕ್ತಿಯ ಜೊತೆಗೆ ಧರ್ಮದ ಬೆಂಬಲ ಹಾಗೂ ಭಗವಂತನ ಅನುಗ್ರಹವೂ ಇರುವುದನ್ನು ಗಮನಿಸಬಹುದು.
ಏಸು ಕ್ರಿಸ್ತನಿಗೆ ಯಾಕೆ ಅಷ್ಟು ಹಿಂಸೆಯಾಯಿತು? ಆತನನ್ನು ಯಾಕೆ ವಿರೋಧಿಸಿದರು? ಆಡಳಿತಶಾಹಿ, ಪುರೋಹಿತಶಾಹಿಗಳು ಆತನ ವಿಚಾರಗಳನ್ನು ದಮನ ಮಾಡಲು ಯಾಕೆ ಪ್ರಯತ್ನಿಸಿದರು ಎಂದರೆ ಆತ ಧರ್ಮಿಷ್ಠನೆಂಬ ಒಂದೇ ಒಂದು ಕಾರಣಕ್ಕಾಗಿ. ಆತ ಧರ್ಮಮಾರ್ಗದಿಂದ ನಮ್ಮನ್ನೆಲ್ಲ ಸರ್ವನಾಶ ಮಾಡುತ್ತಾನೆ, ನಮ್ಮ ವ್ಯವಸ್ಥೆಗಳಿಗೆ ಅಡ್ಡಗಾಲು ಹಾಕುತ್ತಾನೆ, ಜನರನ್ನು ತನ್ನತ್ತ ಸೆಳೆದು ನಮ್ಮಿಂದ ದೂರ ಮಾಡುತ್ತಾನೆ. ಹಾಗಾಗಿ ಆತನನ್ನು ಧರ್ಮಭ್ರಷ್ಟನನ್ನಾಗಿ ಮಾಡಿದರೆ ನಮಗೆ ಯಾವ ತೊಂದರೆಯೂ ಇಲ್ಲ ಎಂದು ಆತನನ್ನು ನಾಶ ಮಾಡಲು ಮುಂದಾಗುತ್ತಾರೆ. ಆತನನ್ನು ಶಿಲುಬೆಗೆ ಏರಿಸಿ, ಮೊಳೆ ಹೊಡೆದು ನಾನಾ ತರಹದ ಹಿಂಸೆಗಳನ್ನು ನೀಡುತ್ತಾರೆ. ಆತನ ಅನುಯಾಯಿಗಳು ಎಷ್ಟು ಬೇಡಿಕೊಂಡರೂ ಕಷ್ಟದಿಂದ ಪಾರಾಗಲು ಏಸು ಕ್ರಿಸ್ತನಿಗೆ ಸಾಧ್ಯವಾಗಲೇ ಇಲ್ಲ.
ಮಹಮ್ಮದ್ ಪೈಗಂಬರ್‌ರವರನ್ನು ಕೂಡ ನಾಶ ಮಾಡಬೇಕೆಂದು ಬೆನ್ನುಹತ್ತಲಾಗಿತ್ತು. ಒಂದೊಮ್ಮೆ ವಿರೋಧಿಗಳು ಅವರನ್ನು ಬೆನ್ನುಹತ್ತಿದ್ದಾಗ ಅವರಿಂದ ತಪ್ಪಿಸಿಕೊಳ್ಳಲು ಅವರು ಕತ್ತಲಿನಿಂದ ಆವೃತವಾದ ಗುಹೆಯ ಒಳಹೋಗುತ್ತಾರೆ. ವಿರೋಧಿಗಳು ಅವರನ್ನು ಹುಡುಕುತ್ತಾ ಗುಹೆಯ ಎದುರು ಬರುತ್ತಾರೆ. ಗುಹೆಯ ಒಳಗೆಲ್ಲ ಕತ್ತಲು ತುಂಬಿತ್ತು. ಒಳ ಹೋಗಲು ಭಯವನ್ನು ಹುಟ್ಟಿಸುತ್ತಿತ್ತು. ಇನ್ನೇನು ಒಳ ಹೋಗಬೇಕೆನ್ನುವಾಗ ಗುಂಪಿನಲ್ಲಿ ಒಬ್ಬಾತ ಹೇಳಿದ ‘ನಿಲ್ಲಿ, ಈ ಗುಹೆಯ ಒಳಗಡೆ ಯಾರೂ ಹೋಗಿಲ್ಲ. ಯಾಕೆಂದರೆ ಗುಹೆಯ ಬಾಗಿಲಲ್ಲಿ ಜೇಡರ ಬಲೆ ಕಟ್ಟಿದೆ. ಒಂದು ವೇಳೆ ಯಾರಾದರೂ ಒಳ ಹೋಗಿದ್ದಿದ್ದರೆ ಜೇಡರ ಬಲೆ ಇರುತ್ತಿರಲಿಲ’್ಲ ಎಂದಾಗ ಎಲ್ಲರೂ ಅಲ್ಲಿಂದ ಹಿಂದಿರುಗುತ್ತಾರೆ. ಇಲ್ಲೊಂದು ಅದ್ಭುತ ಘಟನೆ ಜರುಗುತ್ತದೆ. ಪೈಗಂಬರರು ಒಳ ಹೋದೊಡನೆ ವೇಗವಾಗಿ ಬಲೆ ಹೆಣೆಯುವ ಜೇಡವೊಂದು ಸೈನಿಕರು ಬರುವುದರೊಳಗಾಗಿ ಗುಹೆಯ ಬಾಗಿಲಿಗೆ ಬಲೆ ಹೆಣೆದು ಬಿಟ್ಟಿತ್ತು. ಹಾಗಾಗಿ ಅವರು ವಿರೋಧಿಗಳ ಕೈಗೆ ಸಿಗದೆ ಪಾರಾಗಿದ್ದರು. ಇಂತಹ ಅನೇಕ ಘಟನೆಗಳು ಎಲ್ಲ ಮಹಾತ್ಮರ, ಧರ್ಮಿಷ್ಠ ಮತ್ತು ಪುಣ್ಯಾತ್ಮರ ಜೀವನಗಳಲ್ಲಿ ಘಟಿಸಿವೆ. ಅವರೆಲ್ಲರ ಬದುಕಿನಲ್ಲಿ ಯಾಕಾಗಿ ಇಂತಹ ನಂಬಲು ಅಸಾಧ್ಯವಾದಂತಹ ಸನ್ನಿವೇಶಗಳು ನಡೆದವು ಎಂದೆನಿಸುತ್ತದೆ. ಯಾರು ಧರ್ಮಿಷ್ಠರಾಗಿರುತ್ತಾರೋ, ಎಷ್ಟೇ ಕಷ್ಟ – ನಷ್ಟಗಳಾದರೂ ಧರ್ಮಮಾರ್ಗ ಬಿಟ್ಟು ನಡೆಯುವುದಿಲ್ಲವೋ ಅವರೆಲ್ಲರ ರಕ್ಷಣೆಗೆ ಭಗವಂತ ಒಂದಲ್ಲ ಒಂದು ರೀತಿಯಲ್ಲಿ ಬಂದೇ ಬರುತ್ತಾನೆ. ಅದಕ್ಕಾಗಿ ಬದುಕಿನಲ್ಲಿ ಕಷ್ಟ – ನಷ್ಟಗಳು ಬಂದಾಗ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *