ಶ್ರೀ ಹೆಗ್ಗಡೆಯವರು
ಪಂಚಾಂಗ ಎಂದರೆ ಪಂಚ ಅಂಗಗಳಿಂದ ಕೂಡಿದ ಗಣಿತದ ಗಣಿ. ಅವೆಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ಇವು ನಿತ್ಯವೂ ಬದಲಾವಣೆ ಆಗುತ್ತವೆ. ಇದರೊಂದಿಗೆ ವಿಷ ಮತ್ತು ಅಮೃತ ಘಳಿಗೆಗಳು ಬದಲಾಗುತ್ತಾ ಹೋಗುತ್ತವೆ.
ಕೆಲವೊಮ್ಮೆ ದೈನಂದಿನ ಪಂಚಾಂಗದಲ್ಲಿ ತೋರಿಬರುವ ನಕ್ಷತ್ರ, ಘಳಿಗೆಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ನಾವು ಸಂಕಲ್ಪಿಸಿದ ಕಾರ್ಯದಲ್ಲಿ ಜಯ ಸಾಧಿಸಲು ಕರಣ ಮೊದಲಾದ (ಕರಣಾತ್ ಚಿಂತಿತಂ ಕಾರ್ಯಂ) ಅಂಶಗಳ ಜೊತೆಗೆ ಹದಿನೈದು ದಿನಗಳಿಗೆ ಬದಲಾಗುವ ಎರಡು ಪಕ್ಷಗಳು ಕೂಡಾ ಸಹಕಾರಿಯಾಗುತ್ತವೆ ಎಂದು ಪರಿಣತರು ಹೇಳುತ್ತಾರೆ. ಹಾಗಾದರೆ ವೈದ್ಯರು ರೋಗ ಪತ್ತೆಮಾಡಲು ಪರೀಕ್ಷೆ ನಡೆಸಿದಂತೆ ಜಾತಕ ಪರಿಶೀಲಿಸಿ ಕೆಲವೊಂದು ಸೂಚನೆಗಳನ್ನು ಮುಂಚಿತವಾಗಿ ಪಡೆಯಬಹುದಾಗಿದೆ. ಕೆಲವರು ನಿತ್ಯದ ಸಮಸ್ಯೆಗಳಿಗೆ, ಸೋಲು ನಷ್ಟಗಳಿಗೆ ‘ನನಗೆ ಆಗದವರು ಕೆಟ್ಟದ್ದನ್ನು ಬಯಸಿ ದುರಾಚಾರದ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಮಾಟ, ಕೃತ್ರಿಮ ಅಥವಾ ಇನ್ನಿತರ ದೋಷಗಳಿಂದ ಕಷ್ಟ ಬಂದಿದೆ’ ಎಂದು ಭಾವಿಸುತ್ತಾರೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಶಾಪದೋಷದ ಮಾತಿದೆ. ನಮ್ಮ ಹಿರಿಯರು ಯಾರಾದರೂ ಸಿಟ್ಟಿಗೆದ್ದು ಶಾಪ ಹಾಕಿದ್ದಿದ್ದರೆ, ವ್ಯವಹಾರದಲ್ಲಿ ಇನ್ನೊಬ್ಬರಿಗೆ ಮೋಸ ಮಾಡಿದಾಗ ಅವರು ‘ನೀವು ನನಗೆ ತುಂಬಾ ಮೋಸ ಮಾಡಿದ್ದೀರಿ, ನಾನು ಇಂತಹ ದೇವರಿಗೆ ದೂರು ಕೊಡುತ್ತೇನೆ’ ಎಂತಲೋ ಅಥವಾ ‘ನೀವು ಹಾಳಾಗಿ ಹೋಗಿ, ಉದ್ಧಾರ ಆಗುವುದಿಲ್ಲ’ ಎನ್ನುವ ಇತ್ಯಾದಿ ಶಾಪಗಳಿಂದಲೋ ದೋಷ ಬಂದಿರಬಹುದೇ ಎಂದು ಮನಸ್ಸು ಚಿಂತನೆಗೆ ತೊಡಗುತ್ತದೆ. ಹೀಗಾಗಿ ಅನೇಕ ಸಂದರ್ಭದಲ್ಲಿ ನಾವು ಕಸ್ತೂರಿ ಮೃಗದಂತೆ ಆಗಿಬಿಡುತ್ತೇವೆ. ಕಸ್ತೂರಿ ಮೃಗಕ್ಕೆ ಬಾಲದ ಹತ್ತಿರ ಸುವಾಸನೆ ಬರುವಂತಹ ಒಂದು ಗಡ್ಡೆ ಇರುತ್ತದೆ. ಆದರೆ ಸುಗಂಧವು ತನ್ನಲ್ಲಿಯೇ ಇದೆ ಎಂಬುದನ್ನು ಅರಿಯದೆ ಈ ಸುವಾಸನೆ ಎಲ್ಲಿಂದ ಬರುತ್ತದೆ ಎಂದು ತಿಳಿದುಕೊಳ್ಳಲು ಅದು ಒಡಾಡುತ್ತಿರುತ್ತದೆ. ನಮ್ಮೊಳಗೆ ಸುಗುಣಗಳು, ದುರ್ಗುಣಗಳು, ವ್ಯವಹಾರಿಕ ಸೋಲು-ಗೆಲುವುಗಳು ಇರುತ್ತವೆ. ನಮ್ಮಿಂದ ಇನ್ನೊಬ್ಬರಿಗೆ ಒಳ್ಳೆಯದಾದರೆ ಶ್ಲಾಘನೆ ಬರುತ್ತದೆ. ಅದೇ ರೀತಿ ಶಿಕ್ಷಕರಿಗೆ ‘ಯಥಾಯೋಗ್ಯವಾಗಿ ನಾನು ಶಿಕ್ಷಣ ಕೊಟ್ಟಿದ್ದೇನೆ. ನನ್ನ ವಿದ್ಯಾರ್ಥಿ ಒಳ್ಳೆಯ ಸ್ಥಾನಮಾನಕ್ಕೆ ಹೋಗಿದ್ದರೆ, ಅವನು ಕೃತಜ್ಞತೆ ಸಲ್ಲಿಸಿದರೆ ನನಗೆ ಅದೇ ದೊಡ್ಡ ಪುಣ್ಯ’ ಎನ್ನುವ ಭಾವನೆ ಬರುತ್ತದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಪ್ರಗತಿ ಹೊಂದಿದಾತ ಬಂದು ಕೃತಜ್ಞತೆ ಹೇಳಿದಾಗ ಸಂತೋಷ ಆಗುತ್ತದೆ. ಹೀಗೆ ಪರೋಪಕಾರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುವುದನ್ನು ನಾವೆಲ್ಲ ನಂಬಿದ್ದೇವೆ.
‘ಪುಣ್ಯ’ ಎನ್ನುವುದು ಯಮಧರ್ಮರಾಯ ಬರೆದಿಡುವಂತಹ ಲೆಕ್ಕಾಚಾರ ಎಂಬ ನಂಬಿಕೆ ಇದೆ. ನಾವು ಏನೇ ಸದ್ಗುಣ ಸತ್ಕಾರ್ಯಗಳನ್ನು ಮಾಡಿದರೂ ಅಥವಾ ತಪ್ಪು, ಅಕಾರ್ಯಗಳನ್ನು ಮಾಡಿದರೂ ಯಮಲೋಕದ ಚಿತ್ರಗುಪ್ತನ ಪುಸ್ತಕದಲ್ಲಿ ದಾಖಲಾಗುತ್ತದೆ. ಒಳ್ಳೆಯ ಕೆಲಸ ಮಾಡಿದವರಿಗೆ ಪುಣ್ಯ ಸಂಚಯ ಆಗುತ್ತದೆ. ಹಿಂಸೆ, ತಪ್ಪು ಮಾಡಿದರೆ ಪಾಪ ಸಂಚಯವಾಗುತ್ತದೆ ಎನ್ನುತ್ತಾರೆ. ಈ ನಂಬಿಕೆಯಿಂದಲೇ ಜಗತ್ತಿನಲ್ಲಿ ಪರೋಪಕಾರ, ಸತ್ಯ, ಅಹಿಂಸೆ ಗಟ್ಟಿಯಾಗಿ ನೆಲೆಯೂರಿದೆ.
ಶ್ರೀ ಕ್ಷೇತ್ರಕ್ಕೆ ಅನೇಕ ಮಂದಿ ಬಂದು ‘ನಾವು ಒಳ್ಳೆಯ ರೀತಿಯಲ್ಲಿ ಕೃಷಿ ಮಾಡಿದ್ದೇವೆ. ಆದರೆ ಫಸಲು ಬರುತ್ತಿಲ್ಲ. ಇದಕ್ಕೆ ಕಾರಣ ಏನು?’ ಎಂದು ವಿಚಾರಿಸಿದಾಗ ಒಬ್ಬರು ಜ್ಯೋತಿಷ್ಯರು ‘ನಿನಗೆ ಯಾರೋ ಮಾಟ ಮಾಡಿದ್ದಾರೆ. ಆದ್ದರಿಂದ ಫಸಲು ಸರಿಯಾಗಿ ಬರುತ್ತಾ ಇಲ್ಲವೆಂದು’ ಹೇಳಿದರೆಂದು ದುಃಖ ತೋಡಿಕೊಳ್ಳುತ್ತಾರೆ. ಬಿತ್ತಿದ ಬೀಜದ ಪರಿಶುದ್ಧತೆ ಏನು? ಸರಿಯಾದ ಆರೈಕೆಯಾಗಿದೆಯೇ ಎಂಬಿತ್ಯಾದಿ ವಿಷಯಗಳನ್ನು ಬಿಟ್ಟು, ಅದು ಮಾಟದ್ದೆ ಪ್ರಭಾವ ಎಂದು ಭಾವಿಸುತ್ತಾರೆ. ಆರೋಗ್ಯವಾಗಿದ್ದ ವ್ಯಕ್ತಿ ಮನೆಯಲ್ಲಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೊಳಗಾದರೆ ಮೊದಲು ಮನಸ್ಸು ಓಡುವಂಥದ್ದು ಹೀಗೆ ಆಗಲು ಯಾರದ್ದೋ ಕೈಚಳಕವಿರಬಹುದು. ಯಾರಾದರೂ ಮಾಟ ಮಾಡಿಸಿರಬಹುದು… ಹೀಗೆ. ಅಂತಹ ಸಂದರ್ಭದಲ್ಲಿ ಅವರು ಕ್ಷೇತ್ರಕ್ಕೆ ಬರುತ್ತಾರೆ. ಅವರ ಮನಸ್ಸನ್ನು ಸ್ಥಿರವಾಗಿ ಮಾಡುವಂಥದ್ದು ನಮ್ಮ ಕರ್ತವ್ಯ. ವೈಜ್ಞಾನಿಕ ದೃಷ್ಟಿಕೋನ ಇಟ್ಟುಕೊಂಡು ಸಮಸ್ಯೆಗಳನ್ನು ಪರಿಹರಿಸಿದ ಅನೇಕ ಉದಾಹರಣೆಗಳು ನಮ್ಮಲ್ಲಿವೆ.
1969ನೇ ಇಸವಿಯಲ್ಲಿ ನನಗೆ ಪಟ್ಟ ಆದ ಆರಂಭದಲ್ಲಿ ನಮ್ಮ ಹಟ್ಟಿಯಲ್ಲಿ ಅನೇಕ ಜಾನುವಾರುಗಳು ಇದ್ದವು. ಎಮ್ಮೆ ಅಥವಾ ಹಸು ಹುಲ್ಲು ತಿಂದಿಲ್ಲ, ನೀರು-ನೀರಾಗಿ ಸೆಗಣಿ ಹಾಕುತ್ತಿದೆ ಇತ್ಯಾದಿ ಸಂದರ್ಭಗಳು ಬಂದಾಗ ಕೆಲಸಗಾರರು ನೇರವಾಗಿ ಹಳ್ಳಿಯ ವೈದ್ಯರ ಕಡೆಗೆ ಹೋಗುತ್ತಿದ್ದರು. ವೈದ್ಯರು ಬಂದು ಹಸುಗಳ ಕುತ್ತಿಗೆಗೆ ನೂಲು ಕಟ್ಟುತ್ತಿದ್ದರು. ಕೆಲವು ಬಾರಿ ಅವುಗಳಿಗೆ ಏನೋ ಮಂತ್ರದ ನೀರನ್ನು ಕುಡಿಸಲು ಪ್ರಯತ್ನ ಪಡುತ್ತಿದ್ದರು. ಮೊದಮೊದಲು ಇದು ಹಳ್ಳಿಯ ಸಹಜ ಪ್ರತಿಕ್ರಿಯೆ – ಪ್ರಕ್ರಿಯೆ ಎಂದು ಭಾವಿಸುತ್ತಿದ್ದೆ. ಮುಂದೆ ಉಜಿರೆಯಲ್ಲಿ ‘ರತ್ನಮಾನಸ’ ಎಂಬ ವಿದ್ಯಾರ್ಥಿನಿಲಯ ಪ್ರಾರಂಭವಾದಾಗ ಅಲ್ಲಿ ವೈಜ್ಞಾನಿಕವಾಗಿ ಜಾನುವಾರುಗಳ ರಕ್ಷಣೆ ಮಾಡಲಾಗುತ್ತಿತ್ತು. ಜಾನುವಾರುಗಳ ಅನಾರೋಗ್ಯಕ್ಕೆ ಕಾರಣ ವಿವೇಚಿಸಿ, ಅದಕ್ಕೆ ವೈಜ್ಞಾನಿಕ ಕಾರಣ ಹುಡುಕಿ ಸರಿಯಾದ ಔಷಧ ಕೊಡಲು ಪ್ರಾರಂಭಿಸಲಾಯಿತು. ನಮ್ಮ ದೃಷ್ಟಿ ಮತ್ತು ಧೋರಣೆಯಲ್ಲಿ ಬದಲಾವಣೆಯಾಯಿತು.
ಒಮ್ಮೆ ನಾನು ಒಂದು ಹಳ್ಳಿಗೆ ಭೇಟಿ ಇತ್ತಾಗ ಅಲ್ಲಿನ ಜಮೀನೊಂದರಲ್ಲಿ ಉಳುಮೆ ಮಾಡುವಂತಹ ಸಮಯದಲ್ಲಿ ಹತ್ತಾರು ಸಾವಿರ ರೂಪಾಯಿ ಬೆಲೆ ಬಾಳುವ ಕೋಣ ಒಮ್ಮೆಲೆ ಬಿದ್ದು ಬಿಟ್ಟಿತು. ಕೋಣದ ಮಾಲಕ ತಕ್ಷಣ ಹಳ್ಳಿಯ ವೈದ್ಯರ ಕಡೆಗೆ ಓಡುತ್ತಾನೆ. ಅವರ ಮಗ ರತ್ನಮಾನಸದಲ್ಲಿದ್ದ. ರಜೆಯಲ್ಲಿ ಅವನು ಮನೆಗೆ ಬಂದಿದ್ದ. ಅವನು ಕೂಡಲೇ ದೂರದ ಪೇಟೆಗೆ ಹೋಗಿ ಪಶುವೈದ್ಯರನ್ನು ಕರೆದುಕೊಂಡು ಬರುತ್ತಾನೆ. ಪಶು ವೈದ್ಯರು ಕೋಣಕ್ಕೆ ಚುಚ್ಚುಮದ್ದು ನೀಡುತ್ತಾರೆ. ಸ್ವಲ್ಪ ಹೊತ್ತಿನಲ್ಲೆ ಅದು ಎದ್ದು ನಿಲ್ಲುತ್ತದೆ. ‘ಮಾಟ ಆಗಿದೆ ಎಂದು ತಿಳಿದು ಕೋಣಕ್ಕೆ ನೂಲು ಕಟ್ಟಲು, ಬರೆ ಎಳೆಯಲು ಹಳ್ಳಿಯ ವೈದ್ಯರ ಕಡೆ ಹೋಗಿದ್ದೆ. ಆದರೆ ನನ್ನ ಮಗ ರತ್ನಮಾನಸದ ವಿದ್ಯಾರ್ಥಿ ನಿಲಯದಲ್ಲಿ ಶಿಕ್ಷಣ ಪಡೆದಿದ್ದರಿಂದ ಪಶುವೈದ್ಯರ ಬಳಿ ಹೋಗಿ ಕೋಣವನ್ನು ಉಳಿಸಿದ’ ಎಂದು ಕೋಣದ ಮಾಲಕರು ಹೇಳಿದರು. ಈಗ ಹಳ್ಳಿಗಳಲ್ಲಿ ಮನುಷ್ಯರಿಗಾಗಲಿ, ಪ್ರಾಣಿಗಳಿಗಾಗಲಿ, ಕೃಷಿಗಾಗಲಿ ರೋಗ ಬಂದರೆ, ಕೃಷಿ ಉತ್ಪನ್ನಗಳ ಆದಾಯ ಕಡಿಮೆ ಆದರೆ ಅದಕ್ಕೆ ಕಾರಣವನ್ನು ಹುಡುಕಿ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಎಲ್ಲೆಡೆ ವೈಜ್ಞಾನಿಕ ಚಿಂತನೆ ಬೆಳೆದಿದೆ. ಜೊತೆಗೆ ಭಕ್ತಿಯಿಂದ ದೇವರ ಪ್ರಸಾದವನ್ನು ತಂದು ಹಾಕುತ್ತಾರೆ. ಉದಾಹರಣೆಗೆ ಗಿಡ ನೆಡುವ ಜಾಗ ಆಯ್ಕೆ ಮಾಡುವಾಗ ಅಲ್ಲಿ ವಾಸ್ತುಶುದ್ಧಿ ಇದೆಯೋ, ಜಲ ಸಮೃದ್ಧಿ ಇದೆಯೋ ಎಂದು ಅವಲೋಕಿಸುತ್ತಾರೆ. ಹಿಂದಿನ ಕಾಲದಲ್ಲಿ ಇಂತಹ ನಿರ್ದಿಷ್ಟ ಕಾಲದಲ್ಲೆ ಬೀಜ ನೆಡಬೇಕು, ಕೃಷಿ ಮಾಡಬೇಕು ಎನ್ನುವ ಲೆಕ್ಕಾಚಾರ ಇತ್ತು. ಈಗ ಈ ಪ್ರಕೃತಿ ಬದಲಾಗಿದೆ. ಮಳೆ ಬರುವಂತಹ ಕಾಲಗಳು ಕೂಡಾ ಬದಲಾಗಿದೆ.
ಜ್ಯೋತಿಷ್ಯ, ಜಾತಕ, ಯೋಗ, ಕಾಲದ ಬಗ್ಗೆ ನಂಬಿಕೆ ಇರಲಿ. ಅದರಲ್ಲಿ ಶಕ್ತಿ ಮತ್ತು ಸತ್ವ ಇದೆ. ಆದರೆ ಅದನ್ನು ಎಷ್ಟು ಅವಲಂಬಿಸಬೇಕು ಎಂಬ ವಿವೇಕ ಹಾಗೂ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳೋಣ.