ನಮ್ಮ ಗಣೇಶ

ಮಕ್ಕಳು ಚಿಕ್ಕಂದಿನಲ್ಲಿ ದೇವರ ಬಳಿಗೆ ಬರಬೇಕಾದರೆ ಅವರಿಗೆ ದೇವರ ಬಗೆಗಿನ ಅನೇಕ ಕಥೆಗಳನ್ನು ಹೇಳಬೇಕಾಗುತ್ತದೆ. ಅದರಲ್ಲೂ ಮಕ್ಕಳಿಗೆ ಇಷ್ಟವಾಗುವ ಬಾಲ್ಯದ ಬಹಳಷ್ಟು ರೋಚಕ ಕತೆಗಳನ್ನು ಹೊಂದಿರುವ ದೇವರೆಂದರೆ ಕೃಷ್ಣ ಮತ್ತು ಗಣೇಶ. ಇತ್ತೀಚೆಗೆ ಗಣೇಶೋತ್ಸವ ಬಂದು ಹೋಗಿದೆ. ಮಕ್ಕಳನ್ನು ದೇವಸ್ಥಾನಕ್ಕೆ, ಗಣೇಶನ ಮೆರವಣಿಗೆ ನೋಡುವುದಕ್ಕೆ ಕರೆದುಕೊಂಡು ಹೋಗಿರುತ್ತೀರಾ, ಆದರೆ ಎಷ್ಟು ಜನ ಗಣೇಶನ ಕತೆ ಹೇಳಿದ್ದೀರಾ? ವಿಘ್ನವಿನಾಶಕ, ಬುದ್ಧಿಪ್ರದಾಯಕ, ಸಕಲ ವಿದ್ಯೆ ಕಲೆ ಸಾಹಿತ್ಯಕ್ಕೆ ದೇವರು ಈ ವಿನಾಯಕ. ಗಣೇಶ ಅಂದರೆ ಗಣಗಳಿಗೆ ಈಶ. ಗಣ ಅಂದರೆ ಗುಂಪು. ಈಶ ಅಂದರೆ ದೇವರು. ಅವನು ಪ್ರಥಮ ಪೂಜಿತನಾಗಬೇಕೆಂದು ತಂದೆ ಈಶ್ವರನೇ ಕೊಟ್ಟ ವರ. ಆದರೆ ಆತನೆ ಒಮ್ಮೆ ರಾಕ್ಷಸರೊಡನೆ ಯುದ್ಧಕ್ಕೆ ಹೋದಾಗ ಎಲ್ಲಾ ರೀತಿಯ ವಿಘ್ನಗಳು ಬಂತoತೆ. ಆಗ ಈಶ್ವರನಿಗೆ ತಾನು ಗಣೇಶನನ್ನು ಪೂಜಿಸಿಲ್ಲ ಎಂದು ನೆನಪಾಯಿತಂತೆ. ಹೀಗೆ ತಂದೆಯನ್ನೂ ಬಿಟ್ಟವನಲ್ಲ ಈ ಗಣೇಶ.
ಗಣೇಶ ಲಂಬೋದರ, ದೊಡ್ಡ ಹೊಟ್ಟೆಯವ, ತಿಂಡಿ ಪೋತ. ಆತ ಒಂದು ದಿನ ಚೆನ್ನಾಗಿ ತಿಂದು ಹೊಟ್ಟೆಗೆ ಹಾವನ್ನು ಸುತ್ತಿಕೊಂಡು ಬರಬೇಕಾದ್ರೆ ಆಕಾಶದಿಂದ ಚಂದ್ರ ನೋಡಿ ನಗಾಡುತ್ತಾನಂತೆ. ತಕ್ಷಣ ತನ್ನ ಒಂದು ದಾಡೆಯನ್ನು ಮುರಿದು ಚಂದ್ರನಿಗೆ ಎಸೆದದ್ದು ಮಾತ್ರವಲ್ಲ ಚೌತಿಯಂದು ಚಂದ್ರನನ್ನು ಯಾರೂ ನೋಡಬಾರದು, ನೋಡಿದವರಿಗೆ ಒಳಿತಾಗುವುದಿಲ್ಲವೆಂದು ಶಾಪವಿತ್ತನಂತೆ.
ಒoದು ದಿನ ಕೈಲಾಸ ಪರ್ವತದಲ್ಲಿ ಈಶ್ವರ ಪಾರ್ವತಿ ಕುಳಿತಿದ್ದಾಗ ತಮ್ಮ ಮಕ್ಕಳಲ್ಲಿ ಯಾರು ಇಡೀ ಪ್ರಪಂಚವನ್ನು ಬೇಗ ಸುತ್ತಿ ಬರುತ್ತಾರೆ ಅವರು ಜಾಣರು ಎಂಬ ಸ್ಪರ್ಧೆ ಏರ್ಪಡಿಸಿದರಂತೆ. ತಕ್ಷಣ ಷಣ್ಮುಖ ತನ್ನ ವಾಹನವಾದ ನವಿಲನ್ನೇರಿ ವಿಶ್ವ ಸುತ್ತಲೂ ಹೊರಟರೆ ಗಣೇಶ ಸುಮ್ಮನೆ ಕುಳಿತಿದ್ದನಂತೆ. ಇನ್ನೇನು ಷಣ್ಮುಖ ಬರುವ ಹೊತ್ತಾಯಿತು ಎನ್ನುವಷ್ಟರಲ್ಲಿ ಅಲ್ಲೇ ಕುಳಿತಿದ್ದ ಶಿವ ಪಾರ್ವತಿಯರಿಗೆ ಮೂರು ಸುತ್ತು ಬಂದು ಕುಳಿತನಂತೆ. ಜಗತ್ತಿಗೆ ಮಾತಾಪಿತರಾದ ನಿಮ್ಮನ್ನು ಸುತ್ತಿದರೆ ಜಗತ್ತನ್ನೆ ಸುತ್ತಿದಂತೆ ಎಂದನoತೆ. ಶಿವಪಾರ್ವತಿಯರು ಇದರಿಂದ ಖುಷಿಯಾಗಿ ಆತನೇ ಜಾಣ ಎಂದು ಶಿಫಾರಸ್ಸು ಮಾಡಿದರಂತೆ. ನಮ್ಮ ಅಪ್ಪ ಅಮ್ಮನಲ್ಲೇ ಎಲ್ಲಾ ದೇವರನ್ನು ಕಾಣಬೇಕೆಂಬ ಸಂದೇಶವನ್ನು ಗಣೇಶ ನಮಗೆ ಇಲ್ಲಿ ಕೊಡುತ್ತಾನೆ.
ದೇವಲೋಕದ ಕುಬೇರ ಸಂಪತ್ತಿನ ಅಧಿಪತಿ. ಆ ಬಗ್ಗೆ ಆತನಿಗೆ ಹೆಮ್ಮೆಯೂ ಇತ್ತು. ಒಂದು ದಿನ ಆತ ಶಿವ ಪಾರ್ವತಿಯರನ್ನು ಔತಣಕ್ಕೆ ಆಹ್ವಾನಿಸುತ್ತಾನೆ. ಅವರು ಮಗನಾದ ಗಣಪತಿಯನ್ನು ಕಳುಹಿಸುತ್ತಾರೆ. ಗಣೇಶ ಊಟಕ್ಕೆ ಕೂತರೆ ದೊಡ್ಡ ಬಟ್ಟಲಲ್ಲಿ ನಾನಾ ರೀತಿಯ ಭಕ್ಷö್ಯ ಭೋಜ್ಯಗಳನ್ನು ಬಡಿಸಲು ಹೇಳಿ ಕುಬೇರ ಅಹಂಕಾರದಿoದ ಕೂತಿದ್ದಾನೆ. ಗಣಪತಿ ಬಂದದ್ದೆಲ್ಲವನ್ನೂ ತಿಂದು ಇನ್ನಷ್ಟು ಬೇಕು ಎಂದನoತೆ. ಮತ್ತೆ ಒಳಗಿದ್ದ ಭಕ್ಷಗಳನ್ನು ಸಾಲು ಸಾಲಾಗಿ ಪಾತ್ರೆಗಳಲ್ಲಿ ತುಂಬಿ ಬಡಿಸಿದರೂ ಮತ್ತೂ ಹಸಿವು ಎಂದ ಗಣಪ. ಒಳಗಿದ್ದ ಎಲ್ಲಾ ಆಹಾರ ಖಾಲಿ ಆದರೂ ಈತನ ಹಸಿವು ಇಂಗಲಿಲ್ಲ. ಆಗ ಕುಬೇರನ ಗರ್ವ ಭಂಗ ಆಯಿತು. ಗಣಪನ ಉಪಾಯ ಫಲಿಸಿತು. ಆತ ಗಣಪತಿಗೆ ಶರಣಾಗುತ್ತಾನೆ.
ನೋಡಲು ಗಿಡ್ಡಗೆ, ದಪ್ಪಕ್ಕಿದ್ದ ಅಗಸ್ತö್ಯ÷ಋಷಿಗಳು ಒಮ್ಮೆ ಕಾವೇರಿ ತೀರದಲ್ಲಿ ಸಂಚಾರ ಮಾಡುತ್ತಿರಲು ಕಾವೇರಿ ನದಿಗೆ ಋಷಿಯನ್ನು ನೋಡಿ ನಗು ಬರುತ್ತದೆ. ಇದರಿಂದ ಕುಪಿತರಾದ ಋಷಿಗಳು ಇಡೀ ಕಾವೇರಿ ನದಿಯನ್ನೇ ತನ್ನ ಕಮಂಡಲದಲ್ಲಿ ಹಾಕಿಕೊಂಡು ಹೊರಡುತ್ತಾರೆ. ಇತ್ತ ನೀರಿಲ್ಲದೆ ಜನರ ಹಾಹಾಕಾರ ಕೈಲಾಸಪರ್ವತಕ್ಕೆ ಮುಟ್ಟಲು ಗಣಪತಿ ಕಾಗೆಯ ರೂಪದಲ್ಲಿ ಬಂದು ಧ್ಯಾನಸ್ಥ ಋಷಿಯ ಪಕ್ಕದಲ್ಲಿದ್ದ ನೀರಿನ ಕಮಂಡಲವನ್ನು ಕುಕ್ಕುತ್ತಾನೆ. ಆಗ ಅದರಲ್ಲಿದ್ದ ನೀರೆಲ್ಲಾ ಹರಿದು ಮತ್ತೆ ನದಿ ಸೇರುತ್ತದೆ. ಹೀಗೆ ಗಣೇಶ ಬೇಕಾದಾಗ ಆಪತ್ಭಾಂಧವನoತೆ ಬಂದು ರಕ್ಷಣೆ ಮಾಡಿದ.
ಒಂದು ದಿನ ಒಂದು ಬೆಕ್ಕಿನ ಬಾಲ ಹಿಡಿದು ಗಣೇಶ ಆಟ ಆಡಿಸುತ್ತಾ ಗೋಳು ಹೊಯ್ದು ಕೊಂಡಿರ್ತಾನೆ. ತಾಯಿಯ ಬಳಿ ಬಂದು ಕುಳಿತಾಗ ತಾಯಿಯ ಮೈಯಲ್ಲೆಲ್ಲಾ ರಕ್ತ ನೋಡಿ ಗಾಬರಿ ಆಗುತ್ತಾನೆ. ಆಗ ಎಲ್ಲಾ ಜೀವಿಗಳಲ್ಲೂ ನನ್ನ ಅಂಶವೇ ಇದೆ ಎಂಬುದನ್ನು ತಾಯಿ ಮಗನಿಗೆ ಮನದಟ್ಟು ಆಗುವಂತೆ ತಿಳಿಸುತ್ತಾಳೆ.
ಮಹಾಭಾರತ ಬರೆದ ವ್ಯಾಸ ಮಹರ್ಷಿ ತನ್ನ ಬರವಣಿಗೆಯಲ್ಲಿ ಲಿಪಿಕಾರನಾಗುವಂತೆ ಗಣಪತಿಯನ್ನು ಬ್ರಹ್ಮನಲ್ಲಿ ಪ್ರಾರ್ಥಿಸಿ ಒಪ್ಪಿಸುತ್ತಾನೆ. ಆದರೆ ಗಣಪತಿ ತನ್ನ ಒಂದು ಷರತ್ತನ್ನು ಹೇಳುತ್ತಾನೆ, `ನಾನು ಬರೆಯುತ್ತಿರಬೇಕಾದರೆ ಎಲ್ಲೂ ನಿಲ್ಲಿಸಬಾರದು. ವ್ಯಾಸಮಹರ್ಷಿ ಯೋಚಿಸಿ ಒಂದು ಉಪಾಯ ಮಾಡುತ್ತಾರೆ. ನಾನು ಕ್ಲಿಷ್ಟಕರ ಶ್ಲೋಕಗಳನ್ನು ಹೇಳುತ್ತಾ ಹೋಗುತ್ತೇನೆ. ನೀನು ಅದನ್ನು ಅರ್ಥೈಸಿಕೊಳ್ಳದೇ ಬರೆಯಬಾರದು’. ಹೀಗೆ ಆತನೇ ಮಹರ್ಷಿ ಲಿಪಿಕಾರನಾಗಿ ಸಹಕರಿಸುತ್ತಾನೆ. ಇಲ್ಲಿ ಗಣಪನ ಬುದ್ಧಿವಂತಿಕೆ, ಚುರುಕುತನವನ್ನು ಗ್ರಹಿಸಿಕೊಳ್ಳಲೇಬೇಕು.
ಗಣಪತಿಯ ಹುಟ್ಟಿನ ಕತೆಯೂ ರೋಚಕವಾದದ್ದು. ತಾಯಿ ಪಾರ್ವತಿ ಸ್ನಾನಕ್ಕೆ ಹೋಗುವಾಗ ಬಾಗಿಲು ಕಾಯಲಿಕ್ಕೆಂದು ತನ್ನ ಶರೀರದ ಮಣ್ಣಿನಿಂದಲೇ ಮೂರ್ತಿಯೊಂದನ್ನು ರಚಿಸಿ ಅದಕ್ಕೆ ಪ್ರಾಣ ಕೊಟ್ಟು ಬಾಗಿಲಲ್ಲಿ ಕುಳ್ಳಿರಿಸುತ್ತಾಳೆ ಮಾತ್ರವಲ್ಲ ಯಾರನ್ನು ಒಳಗೆ ಬಿಡಬಾರದೆಂದು ಆಜ್ಞಾಪಿಸುತ್ತಾಳೆ. ತಾಯಿಯ ಆಜ್ಞಾಧಾರಕನಾದ ಗಣಪ ಬಾಗಿಲು ಕಾಯುತ್ತಿರುವಾಗ ಈಶ್ವರನ ಆಗಮನವಾಗುತ್ತದೆ. ಆದರೆ ಈಶ್ವರನಿಗೂ ಗಣಪನ ಆಜ್ಞೆಯನ್ನು ಮೀರಿ ಒಳಗೆ ಹೋಗಲಿಕ್ಕಾಗುವುದಿಲ್ಲ. ಸಿಟ್ಟುಗೊಂಡು ಈಶ್ವರ ಗಣಪನ ತಲೆ ಕಡಿಯುತ್ತಾನೆ. ತಾಯಿ ಬಂದು ನೋಡಿ ಕೋಪಿಸಿಕೊಳ್ಳುವುದು ಮಾತ್ರವಲ್ಲ ತಕ್ಷಣ ಮಗನನ್ನು ಬದುಕಿಸಿಕೊಡಬೇಕೆಂದು ಬೇಡಿಕೊಳ್ಳುತ್ತಾಳೆ. ಆಗ ಶಿವ ಕಾಡಿನಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದ್ದ ಆನೆಯೊಂದರ ತಲೆ ಕಡಿದು ಗಣಪತಿಗೆ ಇಟ್ಟು ಮಗನನ್ನು ಬದುಕಿಸಿದನೆಂಬುವ ಕತೆಯಿದೆ. ಹೀಗೆ ಮಣ್ಣಿನಿಂದಲೇ ಬಂದ ಗಣಪನನ್ನು ಮಣ್ಣಿನಲ್ಲೇ ಮಾಡಿ ಪೂಜಿಸಿ ನೀರಿಗೆ ಬಿಡುವುದರ ಮೂಲಕ ಆತ ಮತ್ತೆ ಮಣ್ಣನ್ನೇ ಸೇರುತ್ತಾನೆ.
ನಮ್ಮ ಸಂಸಾರ ತಾಪತ್ರಯಗಳನ್ನೆಲ್ಲಾ ದೇವರೆದುರಿಗೆ ನಿವೇದಿಸಿಕೊಳ್ಳುತ್ತೇವೆ. ಆದರೆ ಶಿವನ ಸಂಸಾರ ತಾಪತ್ರಯ ಅದಕ್ಕಿಂತಲೂ ದೊಡ್ಡದು ಎಂಬುದನ್ನು ಕವಿಯೊಬ್ಬರು ಸುಂದರವಾಗಿ ವಿವರಿಸಿದ್ದಾರೆ. ಈಶ್ವರನ ತೊಡೆ ಮೇಲೆ ಕುಳಿತ ಪಾರ್ವತಿಗೆ ಆತನ ತಲೆ ಮೇಲಿರುವ ಗಂಗೆ ಮೇಲೆ ಕಣ್ಣು. ಶಿವನ ನಂದಿಯ ಮೇಲೆ ಪಾರ್ವತಿಯ ಸಿಂಹದ ಹೊಂಚು, ಷಣ್ಮುಖನ ನವಿಲನ್ನು ಸದಾ ಕಾಡುವ ಗಣಪನ ಹಾವು, ಗಣಪನ ಇಲಿಯ ಮೇಲೆ ಕಣ್ಣಿಟ್ಟಿರುವ ಶಿವನ ಕೊರಳಿನ ಸರ್ಪ ಹೀಗೆ ಒಂದಕ್ಕೊoದು ದ್ವೇಷಿಸುವ ಈ ಶಿವನ ಸಂಸಾರದ ಮಧ್ಯೆ ಆತ ನಮ್ಮೆಲ್ಲರನ್ನು ಕಾಪಾಡಲಿ ಅನ್ನುತ್ತಾನೆ ಕವಿ. ಕತೆಗಳೆಲ್ಲಾ ಸ್ವಾರಸ್ಯವಾಗಿದ್ದರೂ ಅವು ಸಾಂಕೇತಿಕ. ಅದರ ಒಳಗೆ ಬಹಳಷ್ಟು ಅರ್ಥ ವಿಸ್ತಾರವಿದೆ. ಆದರೆ ಮಕ್ಕಳಿಗೆ ಮೊದಲು ಕತೆಗಳ ಮೂಲಕ ಗಣಪನನ್ನು ಪರಿಚಯಿಸುವ ಪ್ರಯತ್ನವನ್ನು ಮಾಡೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *