ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ
ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳಿಗೆ ಸೇರಿ ಮದ್ಯಮುಕ್ತರಾದ ನಂತರ ಕಂಪೆನಿಯ ಮಾಲಕರಾದ, ತಾನು ದುಡಿಯುತ್ತಿದ್ದ ಬಸ್ಸನ್ನೇ ಖರೀದಿಸಿದ, ಹೊಸ ಮನೆ ಕಟ್ಟಿದ, ಅಂಗಡಿ ತೆರೆದ, ರೊಟ್ಟಿ ಘಟಕವನ್ನು ಆರಂಭಿಸಿದ, ಜಮೀನು ಖರೀದಿ, ಚುನಾವಣೆಯಲ್ಲಿ ಗೆದ್ದ, ಇತರ ನೂರಾರು ಮಂದಿಯನ್ನು ಶಿಬಿರಕ್ಕೆ ಸೇರಿಸಿ ಅವರನ್ನು ಮದ್ಯಮುಕ್ತರನ್ನಾಗಿಸಿದ, ನವಜೀವನ ಸಮಿತಿಯ ಸದಸ್ಯರು ಸೇರಿಕೊಂಡು ಬಸ್ ಸ್ಟ್ಯಾಂಡ್ ನಿರ್ಮಿಸಿದ, ಊರಿನ ಬಡ ಹೆಣ್ಮಕ್ಕಳಿಗೆ ಮದುವೆ ಮಾಡಿಸಿದ, ಊರಿನ ಕಷ್ಟ – ಸುಖಗಳಲ್ಲಿ ಸಮಭಾಗಿಗಳಾದ, ಕುಡಿತದ ಸಂದರ್ಭದಲ್ಲಿ ಮನೆ ಬಿಟ್ಟು ಹೋದ ಹೆಂಡತಿ – ಮಕ್ಕಳು, ತಂದೆ – ತಾಯಿ ಮತ್ತೆ ಮನೆ ಸೇರಿದ ಕಥೆಗಳನ್ನು ನಾವು ಕೇಳಿದ್ದೇವೆ. ಇವೆಲ್ಲಕ್ಕಿಂತ ವಿಭಿನ್ನವಾದ ಪ್ರಯತ್ನವೊಂದು ಕಳೆದ ಎಂಟು ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಬದಿಯಡ್ಕ ತಾಲೂಕಿನ ಪೆರಡಾಲ ಎಂಬಲ್ಲಿ ನಡೆಯುತ್ತಿದೆ.
ಬದುಕು ಬದಲಿಸಿದ ಮದ್ಯವರ್ಜನ ಶಿಬಿರ
2014ರ ಸಮಯವದು. ಮಾರ್ಚ್ 04ರಿಂದ 11ರವರೆಗೆ ಬದಿಯಡ್ಕದ ಪಳ್ಳತ್ತಡ್ಕದ ಮುದ್ದು ಮುಂದಿರದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ 772ನೇ ಮದ್ಯವರ್ಜನ ಶಿಬಿರಕ್ಕೆ ಸುಮಾರು 94 ಮಂದಿ ಸೇರುತ್ತಾರೆ. ಶಿಬಿರ ಮುಗಿಸಿ ಬಂದ ಬದಿಯಡ್ಕದ 7 ಮಂದಿ ಮುಂದಿನ ದಿನಗಳಲ್ಲಿ ಖಾವಂದರ ಮದ್ಯಮುಕ್ತ ಸಮಾಜದ ಕನಸನ್ನು ನನಸು ಮಾಡುವ ಪ್ರಯತ್ನಕ್ಕೆ ನಾವು ನಮ್ಮ ಕೈಲಾದ ಸಹಾಯ ಮಾಡಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ.
ರಚನೆಯಾಯಿತು ‘ಸೌಪರ್ಣಿಕಾ ನವಜೀವನ ಸಮಿತಿ’
ಮಾರ್ಚ್ 16, 2014ರಂದು ಪ್ರಥಮ ಸಭೆಯನ್ನು ನಡೆಸುತ್ತಾರೆ. ಸಮಿತಿಗೆ ‘ಸೌಪರ್ಣಿಕಾ’ ಎಂಬ ಹೆಸರನ್ನಿಡುತ್ತಾರೆ. ಇದೊಂದು ಸಾಮಾನ್ಯ ಸಭೆಯಾಗಿರಲಿಲ್ಲ. ಮುಂದಿನ ಕನಸುಗಳಿಗೆ ಭದ್ರವಾದ ಅಡಿಪಾಯವನ್ನು ಇಲ್ಲಿ ಹಾಕಲಾಗುತ್ತದೆ. ಆರಂಭದಲ್ಲಿ ಎರಡು ತಿಂಗಳುಗಳ ಕಾಲ ವಾರದ ಸಭೆಯನ್ನು ದೈವಸ್ಥಾನವೊಂದರಲ್ಲಿ ನಡೆಸುತ್ತಾರೆ.
ನವಜೀವನ ಸಮಿತಿ ಸದಸ್ಯರು ಕಚೇರಿ ತೆರೆದರು
ನವಜೀವನ ಸಮಿತಿ ಸದಸ್ಯರೇ ಸೇರಿಕೊಂಡು ತಮ್ಮ ವಾರದ ಸಭೆ, ಇತರ ಚಟುವಟಿಕೆಗಳಿಗೆಂದು ಪ್ರತ್ಯೇಕ ಕಚೇರಿಯನ್ನು ತೆರೆದ ಪ್ರಥಮ ಪ್ರಯತ್ನವೊಂದಕ್ಕೆ ಇವರು ಚಾಲನೆಯನ್ನು ನೀಡಿದ್ದಾರೆ. ಜೂನ್ 1, 2014ರಲ್ಲಿ ಬದಿಯಡ್ಕದಲ್ಲಿ ‘ಸೌಪರ್ಣಿಕಾ ನವಜೀವನ ಸಮಿತಿ’ಯ ಹೊಸ ಕಚೇರಿ ಕಾರ್ಯಾರಂಭಿಸುತ್ತದೆ. ಬಾಡಿಗೆ ಮೊತ್ತವನ್ನು ಸಮಿತಿಯ ಸದಸ್ಯರೇ ಭರಿಸುತ್ತಿದ್ದಾರೆ. ನಂತರದ ದಿನಗಳಲ್ಲಿ ಇವರ ಕಾರ್ಯಚಟುವಟಿಕೆಗಳನ್ನು ಗಮನಿಸಿದ ಇತರ ಮದ್ಯಮುಕ್ತರು ಈ ಸಮಿತಿಯನ್ನು ಸೇರಿಕೊಂಡಿದ್ದು ಇದೀಗ 21 ಮಂದಿ ಸಕ್ರಿಯ ಸದಸ್ಯರು ಸಮಿತಿಯಲ್ಲಿದ್ದಾರೆ.
ಅಧ್ಯಕ್ಷ – ಕಾರ್ಯದರ್ಶಿಗಳಿಲ್ಲ
ವಿಶೇಷವೆಂದರೆ ‘ಸೌಪರ್ಣಿಕಾ ನವಜೀವನ ಸಮಿತಿ’ಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಎಂಬ ಹುದ್ದೆಗಳಿಲ್ಲ. ಇಲ್ಲಿನ 21 ಮಂದಿಯೂ ಅಧ್ಯಕ್ಷರಾಗಿಯೂ, ಕಾರ್ಯದರ್ಶಿ, ಕಾರ್ಯಕರ್ತರಾಗಿ ದುಡಿಯುತ್ತಿರುವುದು ಇವರ ಯಶಸ್ಸಿನ ಹಿಂದಿರುವ ಗುಟ್ಟು.
ಎಂಟು ವರ್ಷಗಳಿಂದ ತಪ್ಪದೆ ನಡೆಯುತ್ತಿದೆ ವಾರದ ಸಭೆ
ಕಳೆದ ಎಂಟು ವರ್ಷಗಳಿಂದ ಪ್ರತಿ ಭಾನುವಾರ ಸಂಜೆ 4 ಗಂಟೆಗೆ ಸಮಿತಿಯ ಎಲ್ಲ ಸದಸ್ಯರು ತಮ್ಮ ಕಚೇರಿಯಲ್ಲಿ ಹಾಜರಿರುತ್ತಾರೆ. ಮೊದಲಿಗೆ ತಮ್ಮ ಬದುಕಿಗೆ ದಾರಿದೀಪವಾದ ಶ್ರೀ ಮಂಜುನಾಥ ಸ್ವಾಮಿಗೆ ಹೂವು ಹಾಕಿ ದೀಪ ಹಚ್ಚುತ್ತಾರೆ. ನಂತರ ‘ಕುಡಿತದ ಸಂದರ್ಭದಲ್ಲಿ ನಾವು ಹೇಗೆ ಇದ್ದೆವು!’ ಎಂಬ ಬಗ್ಗೆ ಚರ್ಚಿಸುತ್ತಾರೆ. ಸುಮಾರು ಎರಡರಿಂದ ಮೂರು ತಾಸುಗಳ ಕಾಲ ಸಭೆ ನಡೆಯುತ್ತದೆ. ಸಮಿತಿ ಸದಸ್ಯರ ಮನೆಯವರ, ಊರಿನ ಇತರರ ಕಷ್ಟ – ಸುಖಗಳ ಬಗ್ಗೆ ಇಲ್ಲಿ ಚರ್ಚೆ ನಡೆಯುತ್ತದೆ. ತಮ್ಮ ಕೈಲಾದ ಸಹಾಯವನ್ನು ನೀಡುವ ಬಗ್ಗೆಯೂ ನಿರ್ಧಾರಗಳಾಗುತ್ತವೆ. ಸಾಕಷ್ಟು ಬಾರಿ ತಕ್ಷಣ ಇಲ್ಲೇ ಹಣ ಸಂಗ್ರಹಿಸಿ ಸಹಾಯ ನೀಡಿದ್ದೂ ಇದೆ.
ಆರೋಗ್ಯದ ಬಗ್ಗೆ ಕಾಳಜಿ
ಸಮಿತಿಯ ಸದಸ್ಯರಿಗೆ, ಅವರ ಮನೆಯವರಿಗೆ ಏನೇ ಕಷ್ಟ ಬಂದರೂ ಸಮಿತಿಯ ಸದಸ್ಯರು ಎಲ್ಲ ರೀತಿಯ ಸಹಾಯವನ್ನು ಮಾಡುತ್ತಾರೆ. ಅನಾರೋಗ್ಯ ಬಂದಾಗ ಆಸ್ಪತ್ರೆಗೆ ಸೇರಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರುವ ಜವಾಬ್ದಾರಿಯನ್ನು ಸದಸ್ಯರು ನಿರ್ವಹಿಸುತ್ತಾರೆ.
10 ಲಕ್ಷಕ್ಕೂ ಅಧಿಕ ಮೊತ್ತದ ನೆರವು
ಈವರೆಗೆ ಸಮಿತಿ ಸದಸ್ಯರು ಮತ್ತು ಸಮಾಜದ ಇತರರಿಗೆ ಸೇರಿದಂತೆ ಒಟ್ಟು 25 ಮಂದಿಗೆ 10 ಲಕ್ಷಕ್ಕೂ ಅಧಿಕ ಮೊತ್ತದ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ತಮ್ಮ ಸಮಿತಿಯ ಸದಸ್ಯರ ತಂಗಿ ಅಥವಾ ಅಕ್ಕನಿಗೆ ಅನಾರೋಗ್ಯ ಕಾಡಿದರೆ ರೂ. 10 ಸಾವಿರದಿಂದ 15 ಸಾವಿರದವರೆಗೆ, ಅಣ್ಣ – ತಮ್ಮಂದಿರಿಗಾದರೆ ರೂ.5 ಸಾವಿರ, ತಂದೆ – ತಾಯಿ ಇಹಲೋಕ ತ್ಯಜಿಸಿದರೆ ರೂ. 10 ಸಾವಿರ, ಸಮಿತಿ ಸದಸ್ಯರಿಗೆ ಆರೋಗ್ಯ ಸಮಸ್ಯೆಗಳಾದಾಗ ಕೈಲಾದ ಸಹಾಯ, ಸದಸ್ಯರ ಮದುವೆ, ತಂಗಿಯ ಮದುವೆ, ಗೃಹಪ್ರವೇಶ ಹೀಗೆ ಪ್ರತಿಯೊಂದಕ್ಕೂ ತಮ್ಮ ಕೈಲಾದ ಮೊತ್ತವನ್ನು ನೀಡುತ್ತಾರೆ. ಸದಸ್ಯರೋರ್ವರ ಗೃಹ ನಿರ್ಮಾಣ ಸಂದರ್ಭದಲ್ಲಿ ಸುಮಾರು ರೂ. 1.75 ಲಕ್ಷದವರೆಗೆ ಸದಸ್ಯರೇ ಹಣ ಸಂಗ್ರಹಿಸಿ ಸಾಲ ನೀಡಿದ, ಸುಮಾರು 7 ಮಂದಿಗೆ ಮನೆ ನಿರ್ಮಿಸುವ ಹಂತದಲ್ಲಿ ಅಂಗಡಿಗಳಲ್ಲಿ ಮಾತನಾಡಿ ಸಾಲದ ರೂಪದಲ್ಲಿ ಸಿಮೆಂಟ್, ಕಬ್ಬಿಣ ಸಾಮಗ್ರಿಯನ್ನು ತೆಗೆಸಿಕೊಟ್ಟ ಉದಾಹರಣೆಗಳು ಇಲ್ಲಿವೆ. ಇದರೊಂದಿಗೆ ಸುಮಾರು ಮೂರು ವರ್ಷಗಳಿಂದ ಬೀದಿನಾಯಿಯನ್ನು ಸಾಕುತ್ತಿರುವ ಸಂತೋಷ್ ಎಂಬವರಿಗೆ ತಿಂಗಳಿಗೆ ರೂ. 4,000ದಂತೆ ನೆರವನ್ನು ಇವರು ನೀಡುತ್ತಿದ್ದಾರೆ. ಸಮಿತಿಯ ಸದಸ್ಯರ ಮನೆಯಲ್ಲಿ ಗೃಹಪ್ರವೇಶ, ಮದುವೆ ಹೀಗೆ ಯಾವುದೇ ಸಮಾರಂಭಗಳಿದ್ದರೂ ಇವರು ಅಲ್ಲಿದ್ದು ಅತಿಥಿ ಸತ್ಕಾರದಿಂದ ಬಡಿಸುವವರೆಗಿನ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.
ಅಸಹಾಯಕರ ನೋವಿಗೆ ನೆರವಾಗಲು ವಾರ್ಷಿಕೋತ್ಸವ
ವರ್ಷದಲ್ಲಿ ಒಂದು ಬಾರಿ ಸಮಿತಿಯ ವಾರ್ಷಿಕೋತ್ಸವವನ್ನು ಯೋಜನೆಯ, ಜನಜಾಗೃತಿಯ ಕಾರ್ಯಕರ್ತರ, ಮನೆಯವರ ಜೊತೆ ಸೇರಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಸಂವೇದನಾ ಹೆಚ್.ಐ.ವಿ. ಪೀಡಿತ ಕೇಂದ್ರಕ್ಕೆ ರೂ. 95 ಸಾವಿರವನ್ನು ನೀಡುವ ಜೊತೆಗೆ ಒಂದು ದಿನದ ಊಟದ ಖರ್ಚು, ಅಲ್ಲಿನ ಮಕ್ಕಳಿಗೆ ಪುಸ್ತಕ, ಬ್ಯಾಗ್, ಔಷಧ, ಕೋಟೆಕಾರಿನಲ್ಲಿರುವ ವೃದ್ಧಾಶ್ರಮಕ್ಕೆ ರೂ.65 ಸಾವಿರ, ಕ್ಯಾನ್ಸರ್‌ಪೀಡಿತ ಮಹಿಳೆಗೆ ರೂ. 25 ಸಾವಿರ ಸಹಾಯಧನ ಹೀಗೆ ಪ್ರತಿ ವರ್ಷದ ವಾರ್ಷಿಕೋತ್ಸವವನ್ನು ಸಮಾಜಸೇವೆಗಾಗಿ ಮೀಸಲಿರಿಸಿದ್ದಾರೆ.
ಶ್ರದ್ಧಾಕೇಂದ್ರಗಳ ಸ್ವಚ್ಛತೆಗೆ ಆದ್ಯತೆ
ಪೂಜ್ಯರ ಸ್ವಚ್ಛ ಶ್ರದ್ಧಾಕೇಂದ್ರದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ವರ್ಷದಲ್ಲಿ ನಾಲ್ಕೈದು ಬಾರಿ ಊರಿನ ಶ್ರದ್ಧಾಕೇಂದ್ರ, ಶಾಲಾ ವಠಾರ, ಆಸ್ಪತ್ರೆಗಳ ಸ್ವಚ್ಛತೆಯಲ್ಲಿ ಇವರು ತೊಡಗುತ್ತಿದ್ದಾರೆ.
ದೂರವಾದ ಸಂಸಾರವನ್ನು ಒಂದಾಗಿಸಿದರು
ಕಾಸರಗೋಡು ಜಿಲ್ಲೆಯಲ್ಲಿ ಗಂಡ – ಹೆಂಡತಿ ಮಧ್ಯೆ ವೈಮನಸ್ಸು ಬಂದು ದಾಂಪತ್ಯ ಜೀವನ ಮುರಿದು ಬೀಳುವ ಸುದ್ದಿ ಇವರ ಗಮನಕ್ಕೆ ಬಂದರೆ ಇವರು ತಕ್ಷಣ ಅಲ್ಲಿಗೆ ತೆರಳುತ್ತಾರೆ. ಅವರಿಗೆ ಬುದ್ಧಿಮಾತುಗಳೊಂದಿಗೆ, ಅವರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಾರೆ. ಈವರೆಗೆ ಸುಮಾರು ಹತ್ತು ದಂಪತಿಗಳನ್ನು ಒಂದಾಗಿಸಿದ ಹೆಗ್ಗಳಿಕೆ ಇವರದ್ದು.
ನವಜೀವನ ಸಮಿತಿಗಳ ಮೇಲುಸ್ತುವಾರಿ
ನವಜೀವನ ಸಮಿತಿಗಳು ಸರಿಯಾಗಿ ಸಭೆ ಸೇರುತ್ತಿಲ್ಲ ಅಥವಾ ಸದಸ್ಯರ ನಡುವೆ ಯವುದಾದರೂ ಭಿನ್ನಾಭಿಪ್ರಾಯಗಳಿವೆ ಎಂಬುದು ಇವರ ಗಮನಕ್ಕೆ ಬಂದರೆ ಅಲ್ಲಿಗೆ ತೆರಳಿ ಸಮಿತಿಯ ಬಲವರ್ಧನೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಸರಿಯಾಗದಿದ್ದರೆ ಯೋಜನೆಯ ಅಧಿಕಾರಿ ವರ್ಗವನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಈವರೆಗೆ ಸುಮಾರು 4 ನವಜೀವನ ಸಮಿತಿಗಳನ್ನು ಇವರು ಸರಿಪಡಿಸಿದ್ದಾರೆ.
200 ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ
ಕರಾವಳಿ ಭಾಗದಲ್ಲಿ ಎಲ್ಲೇ ಮದ್ಯವರ್ಜನ ಶಿಬಿರಗಳು ನಡೆದರೂ ಸಿಹಿತಿಂಡಿ, ಅಕ್ಕಿ, ತರಕಾರಿಯೊಂದಿಗೆ ಅಲ್ಲಿಗೆ ಹೋಗುತ್ತಾರೆ. ಪ್ರತ್ಯೇಕ ಯೂನಿಫಾರ್ಮ್ ವ್ಯವಸ್ಥೆಯೂ ಇವರಲ್ಲಿದೆ. ಇವರ ನಡವಳಿಕೆ, ಒಗ್ಗಟ್ಟು ಶಿಬಿರಾರ್ಥಿಗಳಲ್ಲಿ ಹೊಸ ಉತ್ಸಾಹ, ಭರವಸೆಯನ್ನು ಮೂಡಿಸುವುದಂತೂ ಸತ್ಯ. ತಮ್ಮ ಜಿಲ್ಲೆಯಲ್ಲಿ ಅಂದರೆ 100 ಕಿ. ಮೀ. ವ್ಯಾಪ್ತಿಯಲ್ಲಿ ಎಲ್ಲೇ ಶಿಬಿರ ನಡೆದರೂ ಶಿಬಿರ ಆರಂಭದಿoದ ಮುಗಿಯುವವರೆಗೆ ಕಾರ್ಯಕರ್ತರಾಗಿ ದುಡಿಯುತ್ತಾರೆ. ಇದುವರೆಗೆ ಸುಮಾರು 200 ಶಿಬಿರಗಳಿಗೆ ಇವರು ಹೋಗಿದ್ದಾರೆ.
‘ಮದ್ಯವರ್ಜನ ಶಿಬಿರಗಳಿಗೆ ವಾರ್ಷಿಕ ಪ್ರವಾಸ’
ಕಳೆದ ನಾಲ್ಕು ವರ್ಷಗಳಿಂದ ವರ್ಷದಲ್ಲಿ ಒಂದು ಬಾರಿ ಸಮಿತಿಯ ಸದಸ್ಯರೆಲ್ಲ ಸೇರಿಕೊಂಡು ಉತ್ತರ ಕರ್ನಾಟಕದಲ್ಲಿ ನಡೆಯುವ ಶಿಬಿರಗಳಿಗೆ ಭೇಟಿ ನೀಡುತ್ತಾರೆ. ಹಿಂದಿರುಗುವಾಗ ಅಲ್ಲಿನ ಪ್ರೇಕ್ಷಣೀಯ ಸ್ಥಳ, ದೇವಾಲಯಗಳನ್ನು ನೋಡಿಕೊಂಡು ಬರುತ್ತಾರೆ.
ಕಲಾವಿದರ ಸಂಗಮ
ಸಮಿತಿಯಲ್ಲಿ ಯಕ್ಷಗಾನ, ಜನಪದ ಕಲಾವಿದರೂ ಇದ್ದಾರೆ. ಜಯರಾಮ ಪಾಟಾಳಿ ಎಂಬ ಹೆಸರಾಂತ ಯಕ್ಷಗಾನ ಕಲಾವಿದರು ಈಗಾಗಲೇ 2 ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿಕೊಡುವ ಮೂಲಕ ಸದ್ದಿಲ್ಲದೆ ಕಾಸರಗೋಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಒಬ್ಬೊಬ್ಬರಲ್ಲಿ ಒಂದೊoದು ವಿಶೇಷ ಪ್ರತಿಭೆ ಇದ್ದು ಇದೊಂದು ಕಲಾಪ್ರಿಯರ ಸಂಗಮವೂ ಹೌದು. ಜಯರಾಮರವರ ನೇತೃತ್ವದಲ್ಲಿ ಮದ್ಯವರ್ಜನ ಶಿಬಿರದಲ್ಲಿ ಯಕ್ಷಗಾನ ಪ್ರದರ್ಶನದ ಪ್ರಯೋಗವೂ ನಡೆಯುತ್ತಿದೆ.
ವಾಹನಗಳಿಗೆ ಸಮಿತಿಯ ಹೆಸರು
ಇದೀಗ 21ಮಂದಿ ಸದಸ್ಯರ ಬಳಿಯೂ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಿವೆ. ಎಲ್ಲರೂ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ. ದುಡಿಯುವ ಹಣ ದುರ್ವ್ಯಸನಗಳ ಪಾಲಾಗದ ಕಾರಣ ಆರ್ಥಿಕವಾಗಿಯೂ ಸದೃಢರಾಗಿದ್ದಾರೆ. ಮಕ್ಕಳಿಗೂ ಉನ್ನತ ಶಿಕ್ಷಣವನ್ನು ನೀಡಿದ್ದಾರೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆನಿಂತಿದೆ. ವಿಶೇಷವೆಂದರೆ ಇವರ ಮನೆಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಯೋಜನೆಯ ಕಾರ್ಯಕರ್ತರ ಉಪಸ್ಥಿತಿ ಇದ್ದೇ ಇರುತ್ತದೆ. ಇನ್ನು ತಮ್ಮ ಬಳಿ ಇರುವ ವಾಹನಗಳಿಗೆ ‘ಸೌಪರ್ಣಿಕಾ ನವಜೀವನ ಸಮಿತಿ’ ಎಂಬ ನಾಮಫಲಕವನ್ನು ಅಳವಡಿಸಿಕೊಂಡಿದ್ದಾರೆ. ಇದು ಇವರಿಗೆ ಗೌರವದ ವಿಷಯವಾಗಿದೆ.
ಸಮಿತಿಯ ಕೆಲಸವನ್ನು ನೋಡಿ ಕುಡಿತ ಬಿಟ್ಟರು
ಸದಸ್ಯರಲ್ಲಿ ಓರ್ವರಾದ ಗಣೇಶ್ ಎಂಬವರ ಅಣ್ಣ ತನ್ನ ತಮ್ಮ ಮದ್ಯಮುಕ್ತನಾಗಿ ನವಜೀವನ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿರುವುದನ್ನು ಗಮನಿಸಿ ತಾನು ಸ್ವಯಂಪ್ರೇರಿತರಾಗಿ ವ್ಯಸನಮುಕ್ತನಾದದ್ದು, ಸಮಿತಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮದ್ಯವ್ಯಸನಿಯೊರ್ವರು ನಂತರ ಮದ್ಯ ತೊರೆದದ್ದು ಹೀಗೆ ಇವರ ಪ್ರೇರಣೆಯಿಂದ ಯಾವುದೇ ಶಿಬಿರಗಳಿಗೆ ಹೋಗದೆ ಈವರೆಗೆ 6 ಮಂದಿ ವ್ಯಸನಮುಕ್ತರಾಗಿರುವುದು ಇವರಿಗೆ ಹೆಮ್ಮೆಯ ವಿಷಯವೇ ಸರಿ.
ವಿಭಿನ್ನ ಕಥೆಗಳು
ಸೌಪರ್ಣಿಕಾ ಸಮಿತಿಯಲ್ಲಿ ಎಸ್ಸೆಸೆಲ್ಸಿಯಿಂದ ಪದವಿಯವರೆಗೆ ಓದಿರುವ ೨೫ರಿಂದ 45 ವಯಸ್ಸಿನೊಳಗಿನವರೇ ಇದ್ದಾರೆ. ಇವರುಗಳಲ್ಲಿ ಪ್ರತಿಯೊಬ್ಬರು ಅಮಲುಮುಕ್ತರಾದ ಹಿಂದೆ ಒಂದೊoದು ಕಥೆಗಳಿವೆ. ಸಮಿತಿಯವರು ಈಗಾಗಲೆ ನೂರಾರು ಮಂದಿಯನ್ನು ಮದ್ಯಮುಕ್ತರನ್ನಾಗಿಸಿದ್ದಾರೆ. ಆರು ವರ್ಷಗಳ ಹಿಂದೆ ಗಾಂಜಾ, ಡ್ರಿಂಕ್ಸ್ ಹೀಗೆ ಎಲ್ಲಾ ದುರ್ವ್ಯಸನಗಳನ್ನು ಹೊಂದಿದ್ದ 22 ವರ್ಷ ಪ್ರಾಯದ ಓರ್ವ ಯುವಕನನ್ನು ಶಿಬಿರಕ್ಕೆ ಸೇರಿಸುತ್ತಾರೆ. ಶಿಬಿರ ಮುಗಿಸಿ ಬಂದ ಸ್ವಲ್ಪ ದಿನಗಳ ನಂತರ ಅವನಿಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿ ತೆರಳಿದಾಗ ಕುಡಿತದ ಚಟದಿಂದ ಅವನ ಲಿವರ್ ಕೈಕೊಟ್ಟಿರುವುದು ಗೊತ್ತಾಗುತ್ತದೆ. ‘ಶಿಬಿರ ಸೇರದೆ ಒಂದು ತಿಂಗಳು ಕುಡಿಯುತ್ತಿದ್ದರೆ ಅವನ ಬದುಕು ಮುಗಿಯುತ್ತಿತ್ತು. ಕುಡಿತ ಬಿಟ್ಟ ಕಾರಣ ಔಷಧ ನೀಡುತ್ತೇನೆ. ಅವನು ಮತ್ತೆ ಕುಡಿಯದಂತೆ ನೋಡಿಕೊಳ್ಳಿ’ ಎಂದು ವೈದ್ಯರು ಹೇಳುತ್ತಾರೆ. ಇವರ ಪ್ರಯತ್ನದ ಫಲವಾಗಿ ಇಂದು ಆ ಹುಡುಗ ನಮ್ಮೆಲ್ಲರಂತೆ ಇದ್ದಾನೆ.
ಕಚೇರಿಯಲ್ಲಿ ಏನೆಲ್ಲ ಇದೆ?
ಎಲ್ಲೆಡೆ ಇರುವಂತೆ ಕಚೇರಿ ಕೇವಲ ಕುರ್ಚಿ, ಮೇಜುಗಳಿಗೆ ಸೀಮಿತವಾಗಿಲ್ಲ. ಪೂಜ್ಯರ ದೊಡ್ಡ ಎಲ್.ಇ.ಡಿ. ಫೋಟೋ, ಕುಡಿತದಿಂದ ಆಗುವ ದುಷ್ಪರಿಣಾಮಗಳನ್ನು ಬಿಂಬಿಸುವ ವಾಕ್ಯಗಳು, ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ನೋಟೀಸು ಬೋರ್ಡ್, ನೂರಾರು ಸಾಹಿತ್ಯ ಕೃತಿಗಳನ್ನೊಳಗೊಂಡ ಗ್ರಂಥಾಲಯವೊoದು ಇಲ್ಲಿದೆ. ಯೋಜನೆಯ ಮೇಲಿನ ಅಭಿಮಾನದಿಂದ 2014ರಿಂದ ಈ ಕಚೇರಿಯನ್ನು ವಾರದಲ್ಲಿ ಒಂದು ದಿನ ಯೋಜನೆಯ ಹಣ ಸಂಗ್ರಹಣೆಯ ಕೆಲಸಕ್ಕೂ ನೀಡುತ್ತಿದ್ದಾರೆ.
ಸಮಿತಿ ಸದಸ್ಯರೇ ಸೇರಿ ಶಿಬಿರ ನಡೆಸಿದ್ರು
ನೂರಾರು ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ, ಸ್ವಯಂಸೇವಕರಾಗಿ ದುಡಿದ ಅನುಭವವಿರುವ ನವಜೀವನ ಸಮಿತಿಯ ಸದಸ್ಯರೇ ಸೇರಿ ಸೆಪ್ಟೆಂಬರ್ 12, 2022ರಿಂದ 19ರವರೆಗೆ ಬದಿಯಡ್ಕದ ಪೆರಡಾಲದ ಶ್ರೀ ಉದನೇಶ್ವರ ಸಭಾಭವನದಲ್ಲಿ 1584ನೇ ಮದ್ಯವರ್ಜನ ಶಿಬಿರವನ್ನು ನಡೆಸಿದ್ದಾರೆ. ಶಿಬಿರದಲ್ಲಿ ೯೫ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಶಿಬಿರಕ್ಕೆ ಸುಮಾರು ರೂ. 2 ಲಕ್ಷದವರೆಗೆ ಖರ್ಚಾಗಿದ್ದು ಆ ಎಲ್ಲ ಮೊತ್ತವನ್ನು ಇವರೇ ಭರಿಸಿರುವುದು ವಿಶೇಷ. ಶಿಬಿರ ಆರಂಭದಿoದ ಮುಗಿಯುವವರೆಗೆ 21 ಮಂದಿ ಸದಸ್ಯರು ತಮ್ಮ ಮನೆ ಕಾರ್ಯಕ್ರಮದಂತೆ ದುಡಿದಿದ್ದಾರೆ. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲ್ಯಾನ್, ದಕ್ಷಿಣ ಕನ್ನಡ -2 ರ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಕಾಸರಗೋಡು ಯೋಜನಾಧಿಕಾರಿ ಮುಖೇಶ್, ಶಿಬಿರಾಧಿಕಾರಿ ದೇವಿಪ್ರಸಾದ್, ಮೇಲ್ವಿಚಾರಕರಾದ ದಿನೇಶ್ ಕೊಕ್ಕಡ, ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷರಾದ ತಾರಾನಾಥ ರೈ, ಪತ್ರಕರ್ತ ಅಖಿಲೇಶ್ ನಗುಮುಗಂ ಇವರುಗಳ ಮಾರ್ಗದರ್ಶನದೊಂದಿಗೆ ಜಯರಾಮ ಪಾಟಾಳಿಯವರ ಅಧ್ಯಕ್ಷತೆಯಲ್ಲಿ ಸೌಪರ್ಣಿಕಾ ಸಮಿತಿಯ ನೇತೃತ್ವದಲ್ಲಿ ನಡೆದ ಮದ್ಯವರ್ಜನ ಶಿಬಿರ ರಾಜ್ಯಕ್ಕೆ ಮಾದರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಶಿಬಿರ ಕಾಸರಗೋಡು ಜಿಲ್ಲೆಯ ನವಜೀವನ ಸಮಿತಿಯವರನ್ನು ಒಗ್ಗೂಡಿಸಿದೆ ಎನ್ನುವುದಂತೂ ಸತ್ಯ.
ಸೌಪರ್ಣಿಕಾ ಸಮಿತಿಯ ಸಾಧನೆಯನ್ನು ಕಂಡು ಇಡೀ ಕಾಸರಗೋಡು ಜಿಲ್ಲೆ ಸಂತೋಷಪಟ್ಟಿದೆ. ಇವರ ಪ್ರಯತ್ನಗಳು ಇತರ ನವಜೀವನ ಸಮಿತಿಯ ಸದಸ್ಯರಿಗೆ ಪ್ರೇರಣೆಯಾಗಲಿ.