ನಾಳಿನ ಭವಿಷ್ಯ ನಿಂತಿದೆ ಇಂದಿನ ವರ್ತಮಾನದಲ್ಲಿ

ಶ್ರೀ ಅನಿಲ್ ಕುಮಾರ್ ಎಸ್.ಎಸ್.

ಪೂಜ್ಯ ಶ್ರೀ ಹೆಗ್ಗಡೆಯವರು ಮೊನ್ನೆ ರಾಜ್ಯಸಭೆಯಲ್ಲಿ ಅಭಿವಂದನಾ ಭಾಷಣದಲ್ಲಿ ಅನೇಕ ಅತ್ಯುತ್ತಮ ವಿಚಾರಗಳನ್ನು ಮಂಡಿಸಿದರು. ವರ್ತಮಾನ ಕಾಲ ಹಾಗೂ ಭೂತಕಾಲದ ನಡುವಿನ ಸಂಬoಧವನ್ನು ವಿಶೇಷ ರೀತಿಯಲ್ಲಿ ವ್ಯಾಖ್ಯಾನಿಸಿದರು. ವರ್ತಮಾನದಲ್ಲಿ ಅಂದರೆ ಈ ದಿನ ನಾವು ಯಾವ ಕಾರ್ಯಗಳನ್ನು ಮಾಡುತ್ತೇವೂ ಅದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆಯೇ ಹೊರತು ಗತಕಾಲದ ಕಾರ್ಯಗಳು ಅಲ್ಲ ಎನ್ನುವ ನೈಜತೆಯನ್ನು ದೇಶಕ್ಕೆ ತಿಳಿಸಿದರು. ಗತಕಾಲ ಅಥವಾ ಭೂತಕಾಲದ ಎಲ್ಲಾ ಘಟನಾವಳಿಗಳಿಂದ ನಾವು ಪಾಠವನ್ನು ಕಲಿತು ವರ್ತಮಾನದಲ್ಲಿ ಅತ್ಯುತ್ತ್ತಮ ಕಾರ್ಯಗಳನ್ನು ಮಾಡಿದ್ದಲ್ಲಿ ಮಾತ್ರ ಸುಂದರ ಭವಿಷ್ಯವನ್ನು ಕಾಣಲು ಸಾಧ್ಯ. ಅದಲ್ಲದೆ ಗತಕಾಲದಲ್ಲಿ ಎಷ್ಟೇ ವೈಭವವಾಗಿದ್ದರೂ ಕೂಡ ವರ್ತಮಾನದಲ್ಲಿ ಉತ್ತಮ ಕಾರ್ಯಗಳನ್ನು ಮಾಡದಿದ್ದಲ್ಲಿ ಭವಿಷ್ಯದಲ್ಲಿ ಸುದಿನಗಳನ್ನು ನಿರೀಕ್ಷಿಸಲು ಖಂಡಿತ ಸಾಧ್ಯವಿಲ್ಲ. ಅದ್ದರಿಂದ ಪೂಜ್ಯರು ನುಡಿದಂತೆ ಈ ದಿನವೇ ನಮ್ಮ ಮುಂದಿನ ಸುದಿನಕ್ಕೆ ಅಡಿಪಾಯ. ಈ ಸತ್ಯ ಎಲ್ಲರಿಗೂ ಹಾಗೂ ಎಲ್ಲಾ ವಿಚಾರಗಳಿಗೂ ಅನ್ವಯವಾಗುತ್ತದೆ. ಸ್ವ-ಸಹಾಯ ಸಂಘಗಳ ವಿಚಾರವನ್ನು ತೆಗೆದುಕೊಂಡರೂ ಕೂಡ ಈ ತತ್ವ ಪರಿಪೂರ್ಣವಾಗಿ ಅನ್ವಯಿಸುತ್ತದೆ. ವರ್ತಮಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಘಗಳು ಸುದೀರ್ಘವಾದ ಉತ್ತಮ ಭವಿಷ್ಯವನ್ನು ಹೊಂದಿರುತ್ತವೆ. ಅದ್ದರಿಂದ ಪ್ರಸ್ತುತದಲ್ಲಿ ಸಂಘಗಳನ್ನು ಕ್ರಿಯಾಶೀಲತೆಯಿಂದ ಉತ್ತಮವಾಗಿ ನಿರ್ವಹಿಸಿಕೊಂಡು ಹೋಗುವುದು ಆ ಸಂಘದ ಹಾಗೂ ಸದಸ್ಯರ ಭವಿಷ್ಯದ ಅಡಿಪಾಯವಾಗಿರುತ್ತದೆ. ಅದ್ದರಿಂದ ವರ್ತಮಾನದಲ್ಲಿ ನಮ್ಮ ಎಲ್ಲಾ ಸದಸ್ಯರು ತಮ್ಮ ಸಂಘಗಳನ್ನು ಉತ್ತಮವಾಗಿ ನಿರ್ವಹಿಸಲು ಈ ಕೆಳಕಂಡ ಅಂಶಗಳನ್ನು ವಿಶೇಷವಾಗಿ ಇನ್ನು ಹೆಚ್ಚಿನ ಪ್ರಾಮುಖ್ಯತೆಯೊಂದಿಗೆ ಅನುಪಾಲನೆ ಮಾಡಬೇಕಾಗಿರುತ್ತದೆ. ಆಗ ಮಾತ್ರ ಆ ಸಂಘಗಳು ಹಾಗೂ ಸದಸ್ಯರು ಭವಿಷ್ಯದಲ್ಲಿ ಸುದಿನಗಳನ್ನು ಖಂಡಿತವಾಗಿ ನಿರೀಕ್ಷಿಸಬಹುದಾಗಿದೆ.
 ಸಂಘದ ವಾರದ ಸಭೆಗಳನ್ನು ಕಡ್ಡಾಯವಾಗಿ ಪ್ರತಿವಾರವು ತಪ್ಪದೇ ನಿಯಮದಂತೆಯೇ ಮಾಡುವುದು.
 ವಾರದ ಸಭೆಯಲ್ಲಿಯೇ ವಾರದ ಸಂಗ್ರಹಣಾ ಮೊತ್ತ ಉಳಿತಾಯ ಮತ್ತು ಸಾಲಮರುಪಾವತಿಯನ್ನು ಸಂಗ್ರಹಿಸಿ, ನಿರ್ಣಯ ಪುಸ್ತಕದಲ್ಲಿ ನಮೂದಿಸಿ ಎಲ್ಲಾ ಸದಸ್ಯರ ಸಹಿ ಪಡೆದುಕೊಳ್ಳುವುದು.
 ವಾರದ ಸಭೆಯಲ್ಲಿ ಎಲ್ಲಾ ಸದಸ್ಯರು ತಪ್ಪದೇ ಭಾಗವಹಿಸಿ, ಶೇ.100 ಹಾಜರಾತಿಯನ್ನು ಕಾಯ್ದುಕೊಳ್ಳುವುದು ಹಾಗೂ ಸಂಘದ ವ್ಯವಹಾರವನ್ನು ಪ್ರತಿಯೊಬ್ಬ ಸದಸ್ಯರು ತಿಳಿದುಕೊಳ್ಳುವುದು.
 ವಾರದ ಸಭೆಯಲ್ಲಿ ಸಂಗ್ರಹವಾದ ಮೊತ್ತವನ್ನು ವಾರದ ಸರದಿಯಂತೆ ಒಬ್ಬರು ಹಣ ಸಂಗ್ರಹಣಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ತೆಗೆದುಕೊಂಡು ಹೋಗಿ ಜಮೆಗೊಳಿಸುವುದು ಹಾಗೂ ಜಮೆಗೊಳಿಸಿದ ಮೊತ್ತಕ್ಕೆ ರಶೀದಿಯನ್ನು ಪಡೆದು ಸಂಘಕ್ಕೆ ಒಪ್ಪಿಸುವುದು.
 ವಾರದ ಸಭೆಯಲ್ಲಿ ಸದಸ್ಯರು ಬೇಡಿಕೆ ನೀಡುವ ಪ್ರಗತಿ ನಿಧಿ ಸಾಲದ ಬಗ್ಗೆ ಸರಿಯಾಗಿ ಕೂಲಂಕುಶವಾಗಿ ಚರ್ಚಿಸಿ, ಸಾಲದ ಉದ್ದೇಶ, ಅಗತ್ಯತೆ, ಸದಸ್ಯರಿಗೆ ಇರುವ ಸಾಲದ ಮರುಪಾವತಿ ಸಾಮರ್ಥ್ಯ, ಸದಸ್ಯರ ಕುಟುಂಬದ ವಿವರ ಹಾಗೂ ಭದ್ರತೆಗಳು ಸೇರಿದಂತೆ ಎಲ್ಲಾ ಅರ್ಹತೆಗಳು ಸರಿಯಾಗಿದೆಯೇ ಎಂದು ತಿಳಿದುಕೊಂಡು, ಸಾಲ ವಿತರಿಸುವ ಬಗ್ಗೆ ನಿರ್ಣಯವನ್ನು ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಸಂಘದಲ್ಲಿಯೇ ಪಡೆದುಕೊಳ್ಳುವುದು. ವಿನಿಯೋಗದಾರರು ಕಡ್ಡಾಯವಾಗಿ ಆ ವಾರದ ಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು.
 ಸಂಘದಲ್ಲಿ ಪಡೆದುಕೊಳ್ಳುವ ಪ್ರಗತಿನಿಧಿ ಸಾಲವನ್ನು ಸದಸ್ಯರು ಸಮರ್ಪಕವಾಗಿ ವಿನಿಯೋಗಿಸುವುದು ಹಾಗೂ ಯಾವುದೇ ಕಾರಣಕ್ಕೂ ದುರ್ಬಳಕೆ ಅಥವಾ ಅವ್ಯವಹಾರಗಳಿಗೆ ಅವಕಾಶಕೊಡಬಾರದು.
 ಸಂಘದಲ್ಲಿ ಸದಸ್ಯರು ಅರ್ಹತೆಯಿರುವಷ್ಟೇ ಸಾಲದ ಮೊತ್ತವನ್ನು ಪಡೆದುಕೊಳ್ಳುವುದು, ಯಾವುದೇ ಕಾರಣಕ್ಕೂ ಹೆಚ್ಚುವರಿ ಸಾಲ ಅಥವಾ ಬೇರೆ ಸದಸ್ಯರ ಹೆಸರಿನಲ್ಲಿ ಸಾಲವನ್ನು ಪಡೆದುಕೊಳ್ಳಬಾರದು ಹಾಗೂ ಉದ್ದೇಶವಲ್ಲದ ಉದ್ದೇಶಗಳಿಗೆ ನಿಯಮಮೀರಿ ಸಾಲ ಪಡೆದುಕೊಳ್ಳಬಾರದು.
 ಸಂಘದಲ್ಲಿ ಯಾವುದೇ ಸದಸ್ಯರು ಕಂತುಬಾಕಿ ಮಾಡಿದ ತಕ್ಷಣ ಎಲ್ಲಾ ಸದಸ್ಯರು ಜವಬ್ದಾರಿಯನ್ನು ತೆಗೆದುಕೊಂಡು, ಕಂತುಬಾಕಿ ಮಾಡಿರುವ ಸದಸ್ಯರ ಮನವೊಲಿಸಿ ನಿರಂತರವಾಗಿ ಮರುಪಾವತಿ ಮೊತ್ತವನ್ನು ಕಟ್ಟಿಸುವುದು.
 ಎಲ್ಲಾ ಸದಸ್ಯರು ತಮ್ಮ ಸಂಘವನ್ನು ಸದಾ ಜಿರೋ ಓವರ್‌ಡ್ಯೂನಲ್ಲಿಯೇ ಬಾಕಿಯಲ್ಲಿ ಇಟ್ಟುಕೊಳ್ಳುವುದು.
 ತಮ್ಮ ಸಂಘದ ಎಲ್ಲಾ ದಾಖಲಾತಿಗಳನ್ನು ತಾವೇ ಸಮರ್ಪಕವಾಗಿ ನಿರ್ವಹಿಸುವುದು.
 ಸಂಸ್ಥೆಯಿoದ ನೀಡುವ ಸಂಘದ ಮಾಸಿಕ ವರದಿಯನ್ನು ಪ್ರತಿ ತಿಂಗಳು ನೋಡಿ, ಚರ್ಚಿಸಿ, ಎಲ್ಲಾ ಸದಸ್ಯರಿಗೆ ಅವರವರ ಸಂಘದ ವ್ಯವಹಾರದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತಿಳಿಸಿ, ಮಾಸಿಕ ವರದಿಗೆ ಒಪ್ಪಿಗೆ ಸಹಿಯನ್ನು ಪಡೆಯುವುದು.
 ಎಲ್ಲಾ ಸದಸ್ಯರು ಉತ್ತಮ ಬಾಂಧವ್ಯವನ್ನು ಹೊಂದಿ, ಸಮನ್ವಯತೆಯಿಂದ ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದು.
 ವಾರ್ಷಿಕವಾಗಿ ನಡೆಯುವ ಸಂಘದ ಲೆಕ್ಕ ಪರಿಶೋಧನೆಗೆ ಸಂಘದ ಎಲ್ಲಾ ದಾಖಲಾತಿಗಳನ್ನು ಒದಗಿಸುವುದು ಹಾಗೂ ಅವರ ಮಾರ್ಗದರ್ಶನವನ್ನು ಪಡೆಯುವುದು.
 ಯೋಜನೆಯ ಇತರ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಉದಾ; ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ, ಪ್ರಗತಿ ರಕ್ಷಾ ವಿಮಾ ಕಾರ್ಯಕ್ರಮ, ಕೃಷಿ, ಸಿ.ಎಚ್.ಎಸ್.ಸಿ, ತರಬೇತಿ, ಅಧ್ಯಯನ ಪ್ರವಾಸ, ಮದ್ಯವರ್ಜನ ಶಿಬಿರ, ಸಮುದಾಯ ಕಾರ್ಯಕ್ರಮಗಳು ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ತಿಳಿದುಕೊಳ್ಳುವುದು ಹಾಗೂ ಸದ್ಬಳಕೆ ಮಾಡಿಕೊಳ್ಳುವುದು.
 ಸರ್ಕಾರದ ಅನೇಕ ಯೋಜನೆಗಳನ್ನು ಯೋಜನೆಯ ಸಿ.ಎಸ್.ಸಿ. ಕಾರ್ಯಕ್ರಮಗಳ ಮೂಲಕ ಪಡೆದುಕೊಳ್ಳುವುದು.
 ಯೋಜನೆಯ ಸಿಬ್ಬಂದಿಗಳು ನೀಡುವ ಎಲ್ಲಾ ಮಾರ್ಗದರ್ಶನಗಳನ್ನು ತಪ್ಪದೇ ಪಾಲಿಸುವುದು.
ಮೇಲಿನ ವಿಷಯಗಳಲ್ಲದೇ ಇನ್ನು ಅನೇಕ ವಿಷಯಗಳಲ್ಲಿ ಉತ್ತಮ ಅನುಪಾಲನೆಯೊಂದಿಗೆ ಸಂಘಗಳ ಶ್ರೇಣಿಯನ್ನು ಸದಾ ‘ಎಸ್’, ‘ಎ+’ ಅಥವಾ ‘ಎ’ ಶ್ರೇಣಿಯಲ್ಲಿಯೇ ವರ್ತಮಾನಕಾಲದಲ್ಲಿ ಕಾಯ್ದುಕೊಳ್ಳಬೇಕು. ಆಗ ಮಾತ್ರ ಪೂಜ್ಯರ ಅಮೂಲ್ಯ ನುಡಿಯಂತೆ ಸಂಘ ಹಾಗೂ ಸದಸ್ಯರ ನಾಳಿನ ಭವಿಷ್ಯ ಸುಂದರವಾಗಿರುತ್ತದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *