ಆತ್ಮೀಯರೇ, ನಿಮ್ಮ ‘ನಿರಂತರ’ ಪತ್ರಿಕೆಗೆ ಇದೀಗ ಇಪ್ಪತ್ತರ ಹರೆಯ. 2003ರಲ್ಲಿ ಪ್ರಾರಂಭಗೊAಡ ಈ ಪತ್ರಿಕೆ ಇಂದು ರಾಜ್ಯದ ಜನಪ್ರಿಯ ಮಾಸಿಕ ಆಗಿದೆ. ನಿರಂತರದ ಎಲ್ಲ ಪುಟಗಳೂ ಇದೀಗ ವರ್ಣಮಯವಾಗಿವೆ. ಲೇಖನಗಳ ಮೂಲಕ ಪ್ರಸ್ತುತ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಿ, ಜ್ವಲಂತ ವಿಷಯಗಳನ್ನು ಬೆಳಕಿಗೆ ತರುತ್ತಿರುವ ಸದಭಿರುಚಿಯ ಪತ್ರಿಕೆಯಾಗಿದೆ. ಸಾಮಾನ್ಯರೂ ಓದುವಂತೆ ಸರಳ ಭಾಷೆಯ ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದು, ಓದಲು ಸುಲಭವಾಗಿದೆ.
‘ನಿರಂತರ’ ಪತ್ರಿಕೆಯಲ್ಲಿ ನಮ್ಮ ಬದುಕಿಗೆ ಬೇಕಾಗುವ ಎಲ್ಲ ಹೂರಣಗಳನ್ನು ಜೋಡಿಸಲಾಗಿದೆ. ಮುಖ್ಯವಾಗಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಮ್ಮ ಲೇಖನಗಳಿಂದ ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಅವರ ಲೇಖನಗಳಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಳಕಳಿಗಳು ಎದ್ದು ಕಾಣುತ್ತವೆ. ಪೂಜ್ಯರ ಲೇಖನಗಳನ್ನು ಓದುವವರಿಗೆ ಬದುಕಿನಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಸಹಾಯವಾಗುತ್ತದೆ. ಶ್ರೀಮತಿ ಹೇಮಾವತಿ ಅಮ್ಮನವರ ‘ಗೆಳತಿ’ ಅಂಕಣ ಓದುಗರನ್ನು ಸಾಹಿತ್ಯದ ಕಡೆಗೆ ಮತ್ತು ಬದುಕನ್ನು ಸರಳ ಮಾಡಿಕೊಳ್ಳುವ ವಿಧಾನಗಳೆಡೆಗೆ ಒಯ್ಯುತ್ತದೆ. ಅವರ ಲೇಖನದಲ್ಲಿ ನೀಡಲಾಗುವ ಸಲಹೆಗಳನ್ನು ಅಳವಡಿಸಿಕೊಂಡಲ್ಲಿ, ನಮ್ಮ ಜೀವನ ಹಸನಾಗುತ್ತದೆ. ಪತ್ರಿಕೆಯ ಪ್ರಮುಖ ಲೇಖನಗಳಲ್ಲಿ ಜ್ವಲಂತ ವಿಷಯಗಳ ಕುರಿತಂತೆ ಮುಖಪುಟ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ದೇಶದ ಸಮಸ್ಯೆಗಳು, ಸವಾಲುಗಳತ್ತ ಕ್ಷಕಿರಣ ಬೀರುವ ಈ ಲೇಖನಗಳನ್ನು ಓದಿದಲ್ಲಿ ನಾವು ಖಂಡಿತವಾಗಿ ಜಾಗತಿಕವಾಗಿ ಪ್ರಜ್ಞಾವಂತರಾಗಬಹುದು. ಅಲ್ಲದೇ ಕ್ಷೇತ್ರದ ವಿಶೇಷ ಸಂದರ್ಭಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು, ನಾಡಿನ ಕೃಷಿಕರು, ಮಹಿಳೆಯರು ಆಸಕ್ತಿಯಿಂದ ಓದಿ ಮನನ ಮಾಡಿಕೊಳ್ಳಬಹುದಾದ ವಿಷಯಗಳು – ಹೀಗೆ ಹಲವಾರು ಹೂರಣಗಳಿಂದ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಇಲ್ಲಿ ಪ್ರಕಟಿಸಲಾಗುವ ಯಶೋಗಾಥೆಗಳು ನಮ್ಮನ್ನು ಸಾಧನೆಗೆ ಪ್ರೇರಣೆ ನೀಡುತ್ತವೆ. ಆಗಾಗ್ಗೆ ಪತ್ರಿಕೆಯಲ್ಲಿ ಕೃಷಿಯ ಕುರಿತಾಗಿ ಲೇಖನಗಳು ಪ್ರಕಟವಾಗುತ್ತವೆ. ಇವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ, ನಾವು ಉತ್ತಮ ಕೃಷಿಕರಾಗಲು ಸಾಧ್ಯವಿದೆ. ಸರಕಾರಗಳ ವಿಶೇಷ ಯೋಜನೆಗಳ ಕುರಿತಾಗಿಯೂ ವಿವರವಾದ ಲೇಖನಗಳನ್ನು ನಾವು ಕಾಣಬಹುದಾಗಿದೆ. ಯೋಜನೆಯ ಕಾರ್ಯಕರ್ತರ ಸಮಾಚಾರಗಳು, ಸಾಧಕರ ಬರವಣಿಗೆಗಳು ಮತ್ತು ಓದುಗರ ಅಭಿಪ್ರಾಯಗಳಿಗೆ ವಿಶೇಷವಾದ ಮನ್ನಣೆಯನ್ನು ನೀಡಲಾಗುತ್ತದೆ. ಜ್ಞಾನವನ್ನು ಒರೆಗೆ ಹಚ್ಚುವ ಪದಬಂಧ ನಿರಂತರ ಪತ್ರಿಕೆಯ ವಿಶೇಷ ಆಕರ್ಷಣೆಯಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ನಿರ್ದೇಶಕರ ನಿವೇದನೆ ಮತ್ತು ಮುಖ್ಯ ನಿರ್ವಹಣಾಧಿಕಾರಿಗಳ ಲೇಖನಗಳು ಯೋಜನೆಯ ದೈನಂದಿನ ಕಾರ್ಯಕ್ರಮಗಳ ಬಗ್ಗೆ ಅರಿವನ್ನು ಮೂಡಿಸುತ್ತವೆ. ಪತ್ರಿಕೆಯು ಹೆಸರಾಂತ ಮಂಜುಶ್ರೀ ಮುದ್ರಣಾಲಯದಲ್ಲಿ ಮುದ್ರಿತಗೊಳ್ಳುತ್ತಿದ್ದು, ಉತ್ತಮ ಗುಣಮಟ್ಟದ ಕಾಗದವನ್ನು ಬಳಸಲಾಗುತ್ತದೆ ಮತ್ತು ಗುಣಮಟ್ಟದ ಭಾವಚಿತ್ರಗಳನ್ನು ಲೇಖನಗಳಿಗೆ ಪೂರಕವಾಗಿ ಬಳಸಿಕೊಳ್ಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪತ್ರಿಕೆಯ ಲೇಖನಗಳನ್ನು ಕೇಳಲು ಅನುಕೂಲವಾಗುವಂತೆ ಮತ್ತು ವಿಡಿಯೋಗಳನ್ನು ನೋಡಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್‌ನ್ನು ಅಳವಡಿಸಲಾಗಿದೆ. ಬಹುಶಃ ಕ್ಯೂಆರ್ ಕೋಡ್‌ನ್ನು ಒಳಗೊಂಡಿರುವ ಕೇವಲ ಕೆಲವೇ ಪತ್ರಿಕೆಗಳಲ್ಲಿ ನಮ್ಮ ನಿರಂತರ ಪತ್ರಿಕೆಯು ಮುಂಚೂಣಿಯಲ್ಲಿದೆ. ಹೀಗೆ ನಿರಂತರ ಪತ್ರಿಕೆಯು ಎಲ್ಲರಿಗೂ ಉತ್ತಮ ಮಾಹಿತಿಯನ್ನು ಓದುವ, ಕೇಳುವ, ನೋಡುವ ಅವಕಾಶವನ್ನು ಒದಗಿಸುವ ಪತ್ರಿಕೆಯಾಗಿದೆ. ಪತ್ರಿಕೆಯ ಪ್ರಸಾರವನ್ನು ವೈಜ್ಞಾನಿಕವಾಗಿ ಆಯೋಜಿಸಿದ್ದು, ಪ್ರಕಟಗೊಂಡ ಕೇವಲ 2-3 ದಿನಗಳೊಳಗೆ ಓದುಗರ ಕೈ ತಲುಪುವಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪತ್ರಿಕೆಯ ಸಾಗಾಟಕ್ಕೆಂದೇ ಪೂಜ್ಯರು ವಾಹನವೊಂದನ್ನು ಮಂಜೂರು ಮಾಡಿರುತ್ತಾರೆ.
ಎಲ್ಲರ ಕೈಸೇರಬೇಕೆಂಬ ತವಕದಿಂದ ಯೋಜನೆಯ ಕಾರ್ಯಕರ್ತರ ಪ್ರಯತ್ನದಿಂದಾಗಿ ಪ್ರಸ್ತುತ ತಿಂಗಳೊAದರ 9 ಲಕ್ಷ ಪ್ರತಿಗಳನ್ನು ಮುದ್ರಿಸುವ ನಿರಂತರ ಪತ್ರಿಕೆಯು ರಾಜ್ಯದ ಅತೀ ಹೆಚ್ಚು ಪ್ರಸರಣವನ್ನು ಹೊಂದಿರುವ ಪತ್ರಿಕೆಯೆಂದು ಹೆಸರು ಗಳಿಸಿದೆ.
ಬಹುಶಃ ಲೇಖನದ ಗುಣಮಟ್ಟದಲ್ಲಿ, ವಿಷಯಗಳ ಆಯ್ಕೆಯಲ್ಲಿ, ಪ್ರಸ್ತುತ ಪಡಿಸುವ ವಿಧಾನದಲ್ಲಿ ನಿರಂತರ ಪತ್ರಿಕೆಯು ಉತ್ತಮ ಪತ್ರಿಕೆಗಳಲ್ಲಿ ಒಂದಾಗಿದೆ. ಚಂದಾದಾರರು ಇದನ್ನು ಅಷ್ಟೇ ಆತ್ಮೀಯತೆಯಿಂದ ಓದಿದಲ್ಲಿ, ನಿರಂತರ ಬಳಗವು ಪಟ್ಟ ಶ್ರಮಕ್ಕೆ ನ್ಯಾಯ ದೊರೆತಂತಾಗುತ್ತದೆ. ಮಾತ್ರವಲ್ಲ ರೂ. 15/- ನ್ನು ಪಾವತಿಸಿ ಖರೀದಿಸಿದ್ದಕ್ಕೆ ಬೆಲೆ ಬಂದAತಾಗುತ್ತದೆ.
ಪತ್ರಿಕೆಯು ನಿಮ್ಮ ಕೈಸೇರದಿದ್ದರೆ ನಮ್ಮನ್ನು ಸಂಪರ್ಕಿಸಲು ಫೋನ್ ನಂಬರ್(9741139409)ಅನ್ನು ನೀಡಲಾಗಿದೆ.
ಪತ್ರಿಕೆಯು ನಿಮ್ಮಲ್ಲಿ ಬಂದೊಡನೆ ಕನಿಷ್ಠ ಒಂದೆರಡು ಗಂಟೆಗಳನ್ನು ನಿರಂತರ ಪತ್ರಿಕೆಯ ಜೊತೆಯಲ್ಲಿಯೇ ಕಳೆಯಿರಿ. ಓದಲು ಬೇಸರವಾಗಿದ್ದರೆ, ನಿಮ್ಮ ಮೊಬೈಲ್ ಮುಖಾಂತರ ಕ್ಯೂಆರ್ ಕೋಡ್‌ನ್ನು ಬಳಸಿ, ಲೇಖನವನ್ನು ಕೇಳಿ, ನೋಡಿ ಆನಂದಿಸಿರಿ. ನಿಮ್ಮ ಮಕ್ಕಳು ಶಾಲೆಯಿಂದ ಬಂದು ಪಾಠ ಪುಸ್ತಕಗಳನ್ನು ಓದುವಾಗ, ನಿರಂತರ ಪತ್ರಿಕೆಯನ್ನು ಓದಲು, ಎಂಜಾಯ್ ಮಾಡಲು ಸರಿಯಾದ ಕಾಲ ಎಂದು ನಾನು ಭಾವಿಸುತ್ತೇನೆ. ಮಕ್ಕಳು ಪಾಠ ಓದುವಾಗ ಟಿ.ವಿ.ಯನ್ನು ಬಂದ್ ಮಾಡಿ ನಿರಂತರ ಪತ್ರಿಕೆಯ ಪುಟಗಳನ್ನು ತೆರೆಯಿರಿ. ಇದರಿಂದ ಕಾಲಕ್ರಮೇಣ ನಾವು ಇನ್ನಷ್ಟು ಪ್ರಜ್ಞಾವಂತರಾಗಿ, ಬುದ್ಧಿವಂತರಾಗಿ ನಾಡಿನ ಹೆಮ್ಮೆಯ ಪ್ರಜೆಗಳಾಗುತ್ತೇವೆ ಖಂಡಿತ.
ನಿರಂತರ ಪತ್ರಿಕೆಯ ಎಲ್ಲ ಓದುಗರಿಗೂ ಯುಗಾದಿಯ ಶುಭಾಶಯಗಳು.
ಡಾ| ಎಲ್. ಎಚ್. ಮಂಜುನಾಥ್