ಚಳಿಗಾಲ ಮುಗಿದು ಬೇಸಿಗೆಗಾಲ ಆರಂಭವಾಗುತ್ತಿದೆ. ರಾಜ್ಯದ ಕೆಲವೊಂದು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ದಿನಗಳಿವು. ಆದರೆ ಹಿಂದಿನ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು. ಇದಕ್ಕೆ ಕಾರಣ ಪರಿಸರ ಸಂರಕ್ಷಣೆ ಮತ್ತು ರಾಜ್ಯದ ಕೆರೆಗಳ ಪುನಶ್ಚೇತನ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈಗಾಗಲೇ ರಾಜ್ಯದ ಐನೂರರಷ್ಟು ಕೆರೆಗಳ ಹೂಳೆತ್ತಲಾಗಿದೆ. ವಿಶೇಷವೆಂದರೆ ಹೆಚ್ಚಿನ ಎಲ್ಲ ಕೆರೆಗಳಲ್ಲಿ ಹೂಳೆತ್ತುತ್ತಿದ್ದಂತೆ ನೀರು ದೊರೆತಿದೆ. ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದಾಗಿ ಹೂಳೆತ್ತಲಾದ ಹೆಚ್ಚಿನ ಕೆರೆಗಳು ತುಂಬಿಕೊoಡಿರುವುದು ಸಂತಸದ ಸಂಗತಿ. ಕೆರೆ ಪುನಶ್ಚೇತನದಿಂದಾಗಿ ಊರಿನ ಬತ್ತಿದ ನೂರಾರು ಬೋರ್‌ಗಳಲ್ಲಿ ನೀರು ದೊರೆತಿದೆ. ಪಾಳುಬಿಟ್ಟಿದ್ದ ಸಾವಿರಾರು ಎಕರೆ ಭೂಮಿ ಕೃಷಿ ಭಾಗ್ಯವನ್ನು ಕಂಡಿದೆ. ಊರಿನ ನೀರಿನ ಸಮಸ್ಯೆಗೆ ಪರಿಹಾರವೂ ದೊರೆತಿದೆ.
ಎಂತಹ ಸಮಸ್ಯೆ ಬಂದರೂ ಎದುರಿಸಬಲ್ಲ ಧೈರ್ಯ ಮತ್ತು ಶಕ್ತಿ ಮಾತುಬಲ್ಲ ಮಾನವನಲ್ಲಿದೆ. ಆದರೆ ಮೂಕ ಪ್ರಾಣಿಗಳೆಂದು ಕರೆಸಿಕೊಳ್ಳುವ ಪ್ರಾಣಿ, ಪಕ್ಷಿಗಳಿಗೆ ಮಾನವನ ನೆರವು ಅತ್ಯಗತ್ಯ. ಬೇಸಿಗೆಗಾಲ ಬಂತೆoದರೆ ಕಾಡಿನ ಜಲಧಾರೆಗಳು ಬತ್ತುತ್ತಿದ್ದಂತೆ ಪ್ರಾಣಿ ಪಕ್ಷಿಗಳು ನೀರಿಗಾಗಿ ನಾಡಿಗಿಳಿಯುವುದು ಸಾಮಾನ್ಯ. ಪ್ರತಿವರ್ಷ ಬೇಸಿಗೆಗಾಲದಲ್ಲಿ ಕುಡಿಯುವ ನೀರು ಸಿಗದೆ ಎಷ್ಟೋ ಪ್ರಾಣಿ – ಪಕ್ಷಿಗಳು ಸಾಯುತ್ತವೆ. ಹಾಗಾದರೆ ಬೇಸಿಗೆಗಾಲದಲ್ಲಿ ನೀರಿಗಾಗಿ ಕಾಡಿನಿಂದ ನಾಡಿಗೆ ಇಳಿಯುವ ಮೂಕಪ್ರಾಣಿಗಳ ಬಾಯಾರಿಕೆಯ ದಾಹವನ್ನು ನೀಗಿಸುವುದು ಯಾರ ಕರ್ತವ್ಯ? ಅವುಗಳಿಗೆ ಅಹಾರ, ನೀರು ನೀಡುವರ‍್ಯಾರು? ಎಂಬುದನ್ನು ಪ್ರಜ್ಞಾವಂತರಾದ ನಾವು ಗಂಭೀರವಾಗಿ ಯೋಚಿಸಬೇಕಿದೆ.
ಬೇಸಿಗೆಗಾಲದಲ್ಲಿ ನಿರಂತರವಾಗಿ ಮಣ್ಣಿನ ಪಾತ್ರೆಯೊಂದರಲ್ಲಿ ನೀರನ್ನು ತುಂಬಿಸಿ ಅದನ್ನು ಮರಗಳಿಗೆ ಹಗ್ಗದ ಮೂಲಕ ನೇತು ಹಾಕುವುದು, ಬಾಟಲಿಗಳನ್ನು ಕತ್ತರಿಸಿ ಅವುಗಳಲ್ಲಿ ನೀರು ತುಂಬಿ ಮರಕ್ಕೆ ಕಟ್ಟುವುದು, ಗೆರಟೆಗಳಲ್ಲಿ ಆಹಾರಗಳನ್ನು ಇಡುವುದು, ಮನೆಯಂಗಳದಲ್ಲಿ ಪಾತ್ರೆಗಳಲ್ಲಿ ನೀರನ್ನು ತುಂಬಿಸಿ ಇಡುವುದು, ತಾರಸಿಯಲ್ಲಿ ಪಕ್ಷಿಗಳಿಗೆ ಸುಲಭವಾಗಿ ನೀರು ಲಭ್ಯವಾಗುವಂತೆ ಟ್ರೇಗಳಲ್ಲಿ ನೀರನ್ನು ತುಂಬಿಸಿಡುವುದು, ತೋಟಗಳಲ್ಲಿ ಪಾತ್ರೆ, ತೆಂಗಿನ ಗೆರಟೆಗಳಲ್ಲಿ, ಅಂಗಡಿ ಮುಂಭಾಗಗಳಲ್ಲಿ, ನಗರಗಳ ರಸ್ತೆ ಬದಿಯಲ್ಲಿ, ಗಿಡಗಳಲ್ಲಿ ನೀರು ತುಂಬಿದ ಬಾಟಲಿಗಳನ್ನು ಇಡುವುದು ಮುಂತಾದ ಕೆಲಸಗಳನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾದಾಗ ಪ್ರತಿನಿತ್ಯ ಆಗಮಿಸುವ ಪಕ್ಷಿಗಳು ನೀರ ದಾಹದಿಂದ ಸಾಯುವ ಪ್ರಮಾಣವು ತಪ್ಪುತ್ತದೆ. ಪ್ರಾಣಿ – ಪಕ್ಷಿಗಳ ರಕ್ಷಣೆಯತ್ತ ನಾವು ತಮ್ಮ ಕೈಲಾದ ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ.
‘ಜಿಯೋ ಔರ್ ಜೀನೋ ದೋ’ (ಬದುಕು ಮತ್ತು ಬದುಕಗೊಡು) ಎಂಬ ಮಾತಿದೆ. ಅಂದರೆ, ‘ನಾವು ಬದುಕಬೇಕು ನಮ್ಮೊಂದಿಗೆ ಇತರ ಪ್ರಾಣಿ – ಪಕ್ಷಿ, ಕೀಟಗಳೂ ಬದುಕಬೇಕು.’ ನಮ್ಮ ಸುಖವನ್ನು ನಾವು ಕಂಡು ಇನ್ನೊಬ್ಬರ ಸುಖವನ್ನು ಮರೆಮಾಚಲು ನಮಗೆ ಅಧಿಕಾರವಿಲ್ಲವೆಂಬುದು ಇದರ ಸಂದೇಶ. ಮನುಷ್ಯನಿಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ ಎಂದರೆ ಮನುಷ್ಯ ತನ್ನ ಸುಖವನ್ನು ತ್ಯಾಗ ಮಾಡಿ ಇನ್ನೊಬ್ಬರ ಸುಖ, ಸಂತೋಷ, ನೆಮ್ಮದಿಯನ್ನು ಬಯಸುತ್ತಾನೆ. ಇದಕ್ಕೊಂದು ಸುಂದರವಾದ ಕತೆಯಿದೆ. ಅಕ್ಬರ್‌ನು ಬೀರಬಲ್‌ನ ಹತ್ತಿರ ಕೇಳಿದನಂತೆ, ‘ಮನುಷ್ಯನಿಗೂ – ಪ್ರಾಣಿಗಳಿಗೂ ಏನು ವ್ಯತ್ಯಾಸ?’ ಎಂದು. ಅದಕ್ಕೆ ಬೀರಬಲ್ ನನಗೆ ಒಂದು ದಿನದ ಅವಕಾಶ ಕೊಡಿ ಎಂದು ಹೇಳಿ ಮರುದಿವಸ ಒಂದು ಪಾತ್ರೆಯಲ್ಲಿ ಒಂದು ಕೋತಿ ಮತ್ತು ಕೋತಿಯ ಮರಿಯನ್ನಿಟ್ಟು ಅದಕ್ಕೆ ನೀರು ತುಂಬಿಸುತ್ತಾ ಬಂದನoತೆ. ನೀರು ತುಂಬುತ್ತಾ ಬಂದು ಕೋತಿಯ ಕಂಠದವರೆಗೆ ಬಂತು. ಮುಂದೊoದು ಕ್ಷಣದಲ್ಲಿ ತಾನು ಸತ್ತುಹೋಗುತ್ತೇನೆಂದು ಗೊತ್ತಾದಾಗ ಆ ಕೋತಿ ತನ್ನ ಮರಿಯನ್ನು ಕಾಲಕೆಳಗೆ ಹಾಕಿ ಅದರ ಮೇಲೆ ತಾನು ನಿಂತಿತoತೆ. ಆಗ ಬೀರಬಲ್ ಹೇಳುತ್ತಾನೆ. ‘ಸ್ವಾಮೀ, ಮನುಷ್ಯ ಆದರೆ ತನ್ನ ದೇಹವನ್ನು, ತನ್ನ ಜೀವವನ್ನು ತ್ಯಾಗ ಮಾಡಿ ಮಕ್ಕಳನ್ನು ಬದುಕಿಸಲು ಪ್ರಯತ್ನಿಸುತ್ತಾನೆ. ಆದರೆ ಪ್ರಾಣಿ ಎಲ್ಲಿಯವರೆಗೆ ಸಾಧ್ಯವಿದೆಯೋ ಅಲ್ಲಿಯವರೆಗೆ ಅದು ಇತರರನ್ನು ರಕ್ಷಣೆ ಮಾಡುತ್ತದೆ. ಕೊನೆಗೆ ಬದುಕಲು ಕೊನೆಯ ಅವಕಾಶವಿದ್ದಾಗ ಇತರರನ್ನು ತ್ಯಾಗ ಮಾಡಿ ತಾನೇ ಬದುಕುತ್ತದೆ. ಇಂತಹ ಉದಾಹರಣೆಯನ್ನು ಯಾಕೆ ಕೊಡುತ್ತಿದ್ದೇವೆ ಎಂದರೆ ಮನುಷ್ಯರಾದವರು ತಮ್ಮ ಸುಖವನ್ನು ತ್ಯಾಗ ಮಾಡಿಯಾದರೂ ಇತರರಿಗೆ ಬದುಕಲು ಅವಕಾಶ ಮಾಡಿಕೊಡಬೇಕೆಂಬುದಾಗಿದೆ.
ಮುoದಿನ ದಿನಗಳಲ್ಲಿ ಪ್ರಾಣಿ – ಪಕ್ಷಿಗಳಿಗೆ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರದಿಂದ ಈಗಾಗಲೇ ಲಕ್ಷಾಂತರ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಶ್ರೀಕ್ಷೇತ್ರದಲ್ಲಿ ‘ನಂದನವನ’ವೆoಬ ಹಣ್ಣಿನ ತೋಟವನ್ನು ಪ್ರಾಣಿ, ಪಕ್ಷಿಗಳಿಗೆ ಮೀಸಲಿರಿಸಲಾಗಿದೆ. ಪರಿಸರ, ಜೀವವೈವಿಧ್ಯಗಳನ್ನು ಬಿಟ್ಟು ಮಾನವ ಒಬ್ಬಂಟಿಯಾಗಿ ಬದುಕಲು ಸಾಧ್ಯವೇ ಇಲ್ಲ. ಪ್ರತಿಯೊಂದಕ್ಕೂ ಪರಿಸರವನ್ನು ಅವಲಂಬಿಸುವ ನಾವು, ಅಲ್ಲಿನ ಪ್ರಾಣಿ – ಪಕ್ಷಿಗಳ ಕಷ್ಟಕ್ಕೆ ನೆರವಾಗುವ ಮಾನವೀಯ ಗುಣವನ್ನು ಬೆಳೆಸಿಕೊಳ್ಳೋಣ.
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು