ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಕಳೆದ 50 ವರ್ಷಗಳಿಂದೀಚೆಗೆ ಪರಿಸರದ ಬಗ್ಗೆ ಚಿಂತನೆ ಹೆಚ್ಚಾಗುತ್ತಿದೆ. ಹಿಂದೆ ‘ಅರಣ್ಯ’ ಅನ್ನುವುದು ಭಯಾನಕವಾದಂತಹ ಮತ್ತು ಕೆಲವರಿಗೆ ಲಾಭದಾಯಕವಾದಂತಹ ಸ್ಥಾನವಾಗಿತ್ತು. ಭಯಾನಕ ಎಂದರೆ ಸಾಕಷ್ಟು ಕಾಡು ಪ್ರಾಣಿಗಳು ಮತ್ತು ಬೃಹತ್ ವೃಕ್ಷಗಳು, ಹಾವು ಕೀಟಾದಿಗಳು ಇದ್ದಿದ್ದರಿಂದ ಕಾಡಿನೊಳಗೆ ಪ್ರವೇಶ ಮಾಡುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಕಾಡುಪ್ರಾಣಿಗಳು ಇವೆ ಅನ್ನುವ ಭಯವಿತ್ತು. ಇನ್ನು ಕಾಡಿನ ಉತ್ಪತ್ತಿಗಳನ್ನೆ ನಂಬಿ ಬದುಕುವವರೂ ಇದ್ದರು. ಅವರ ಪಾಲಿಗೆ ಕಾಡು ಲಾಭದಾಯಕವಾಗಿತ್ತು.
ವನ್ಯಜೀವಿಗಳು ಕಡಿಮೆಯಾಗುತ್ತಾ ಹೋದಂತೆ ನಾಡು ಬೆಳೆಯುತ್ತಾ ಕಾಡು ನಾಶವಾಗುತ್ತಾ ಹೋಯಿತು. ನಾನು ಒಂದು ಲೇಖನದಲ್ಲಿ ಓದಿದ ನೆನಪು. ‘‘ಒಬ್ಬ ಜಮೀನ್ದಾರರಿಗೆ ಸಾಕಷ್ಟು ಆಸ್ತಿ ಇತ್ತು. ಅವರು ತಮ್ಮ ಸ್ವಾಧೀನದಲ್ಲಿರುವ ಕಾಡನ್ನು ರಕ್ಷಣೆ ಮಾಡುತ್ತಾ ಬರುತ್ತಾರೆ. ಆಗ ಅವರಿಗೆ ಅನೇಕ ಮಂದಿ, ‘ನೀವು ಕಾಡನ್ನು ಹೀಗೆ ಬಿಟ್ಟಿದ್ದೀರಿ. ಸುಮಾರು 10 – 12 ಎಕರೆ ಜಾಗ ಇದೆ. ಕಾಡನ್ನು ಕಡಿದು ತೆಂಗು ಅಡಿಕೆ ತೋಟ ಮಾಡಿದರೆ ಸಾಕಷ್ಟು ಲಾಭಮಾಡಿಕೊಳ್ಳಬಹುದು. ಈ ಫಲವತ್ತಾದ ಭೂಮಿಯಲ್ಲಿ ಕಾಡನ್ನು ಬೆಳೆಸಿಕೊಂಡಿದ್ದೀರಲ್ಲ.’ ಎನ್ನುತ್ತಾರೆ. ಆಗ ಅವರು ‘ನನ್ನ ಆಯುಷ್ಯ ಕಾಲದಲ್ಲಿ ನಾನು ಯಾವುದೇ ಕಾರಣಕ್ಕೂ ಕಾಡು ನಾಶ ಮಾಡುವುದಿಲ್ಲ. ಈ ಅರಣ್ಯವನ್ನು ರಕ್ಷಣೆ ಮಾಡಿ ಪರಿಸರಕ್ಕೆ ಹಾಗೂ ನಮ್ಮ ಗದ್ದೆ, ಕೃಷಿ ಭೂಮಿಗೆ ಬೇಕಾಗುವ ಸೊಪ್ಪು ಸಾಗಿಸಿ ಉಪಯೋಗಕ್ಕೆ ಬೇಕಾದ ಕಟ್ಟಿಗೆಗಳನ್ನು ಬಿದ್ದ ಮರಗಳಿಂದ ಮಾಡಿಕೊಳ್ಳುತ್ತೇನೆ. ಖಂಡಿತವಾಗಿ ನಾನು ಕಾಡು ನಾಶಮಾಡೋದಿಲ್ಲ’ ಎನ್ನುತ್ತಿದ್ದರಂತೆ. ಅವರ ಕಾಲವಾಯಿತು. ಅವರ ಮಗ ಮಾಡಿದ ಮೊದಲನೇ ಕೆಲಸವೆಂದರೆ ಕಾಡನ್ನು ಕಡಿದು ಮಾರಾಟ ಮಾಡಿ ಚೆನ್ನಾಗಿ ಸಂಪಾದನೆ ಮಾಡಿ ಅಡಕೆ ತೋಟ, ತೆಂಗು ತೋಟಗಳನ್ನು ಇಡುತ್ತಾನೆ. ಮುಂದೆ ೩೦ ವರ್ಷ ಆದ ಮೇಲೆ ಅವನು ವೃದ್ಧಾಪ್ಯದಲ್ಲಿದ್ದಾಗ ಗ್ರಾಮಸ್ಥರು ‘ಅಲ್ಲಯ್ಯ ಈಗ ಕಾಲ ಬದಲಾಗಿದೆ. ಭೂಮಿಗೆ ಸಾಕಷ್ಟು ಬೆಲೆ ಬಂದಿದೆ. ಈ ಭೂಮಿಯನ್ನು ಸೈಟ್‌ಗಳನ್ನಾಗಿ ಪರಿವರ್ತಿಸಿ ಮಾರಿದರೆ ಎಷ್ಟು ಲಾಭದಾಯಕ. ನೀನು ಇನ್ನೂ ಅಡಿಕೆ, ತೆಂಗು ತೋಟ ಅಂತ ಇಟ್ಟುಕೊಂಡು ಕಷ್ಟಪಡುತ್ತಾ ಇದ್ದಿಯಲ್ಲಾ. ರೋಗ ಜಾಸ್ತಿ ಆಗಿದೆ ಕೂಲಿಗೆ ಜನ ಸಿಗುವುದಿಲ್ಲ’ ಎಂದರAತೆ. ಇಲ್ಲಾ ನನ್ನ ಆಯಸ್ಸಿನ ಕಾಲದಲ್ಲಿ ನಾನು ಸಾಧ್ಯವಾದಷ್ಟರ ಮಟ್ಟಿಗೆ ಈ ತೋಟವನ್ನೇ ರಕ್ಷಣೆ ಮಾಡುತ್ತೇನೆ. ನಾನು ತೋಟಗಳನ್ನು ಕಡಿಯುವುದಿಲ್ಲ ಎನ್ನುತ್ತಿದ್ದನಂತೆ. ನಂತರ ಅವನ ಆಯಸ್ಸು ಮುಗಿಯಿತು. ಆತನ ಮಕ್ಕಳು ಈ ತೋಟದ ಫಲವತ್ತಾದ ಭೂಮಿಯನ್ನು ಸೈಟ್‌ಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿ ಅತೀ ಹೆಚ್ಚು ಸಂಪಾದಿಸಿ ಅವರು ಊರು ಬಿಟ್ಟು ನಗರಕ್ಕೆ ವಲಸೆ ಹೋಗುತ್ತಾರೆ.’’ ಈ ಪರಿವರ್ತನೆಯನ್ನು ನಾವು ಗಮನಿಸಿದ್ದೇವೆ.
ಹಿಂದೆ ಕಾಡುತ್ಪತ್ತಿಯನ್ನು ಸಂಗ್ರಹಿಸಿ ಜೀವಿಸುತ್ತಿದ್ದರು. ಆದರೆ ದಿನಕಳೆದಂತೆ ಖರ್ಚುವೆಚ್ಚಗಳೂ ಹೆಚ್ಚಾಗಿ, ಸಂಸಾರ ದೊಡ್ಡದಾಗಿ ಜೀವನಾವಶ್ಯಕತೆಗಳೂ ಹೆಚ್ಚಾಗಿ, ವಿವಿಧ ವಸ್ತುಗಳ ಲಭ್ಯತೆ ಹೆಚ್ಚಾಗಿ ಐಷಾರಾಮಿ ಜೀವನ ಬೇಕು, ಇನ್ನೂ ಹಳ್ಳಿಯಲ್ಲೇ ಇದ್ದೀರ, ಇನ್ನೂ ಹಳೇ ಜೀವನವನ್ನು ಮಾಡುತ್ತಿದ್ದೀರಾ? ಎಂದು ಇತರರ ಹಾಸ್ಯಕ್ಕೊಳಗಾದವರು ಪರಿವರ್ತನೆಗೊಂಡು ತೋಟ ಹಾಗೂ ತೋಟದಿಂದ ನಗರೀಕರಣ ಮಾಡಿಕೊಂಡು ಹೋದರು. ಇದರಿಂದಾಗಿ ಪರಿಸರ ಅಸಮತೋಲಗೊಂಡಿತು.
ಪರಿಸರ ಅಸಮತೋಲನದಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಿವೆ. ಕೆರೆಗಳಲ್ಲಿ ಇಂದು ಹೂಳು ತುಂಬಿಕೊoಡಿದೆ. ಯಾಕೆಂದರೆ ಈಗ ಕೆರೆಯ ನೀರಿನ ಅವಶ್ಯಕತೆ ಇಲ್ಲ. ಈಗ ಸರಕಾರದ ನೀರು ಸರಬರಾಜು ಯೋಜನೆಯಿಂದ ಕುಡಿಯಲು ನೀರು ಬರುತ್ತದೆ. ಹಾಗಾಗಿ ಕೆರೆಗಳೆಲ್ಲಾ ಬತ್ತಿ ಹೋದವು. ಇನ್ನೂ ತೋಟಗಳಲ್ಲಿ ಇದ್ದಂತಹ ಅನೇಕ ಮಂದಿ ಕೃಷಿಕರು ತಮ್ಮ ಭೂಮಿಯಲ್ಲಿ ಕೊಳವೆ ಬಾವಿ (ಬೋರ್‌ವೆಲ್) ತೆಗೆಸಿದ್ದಾರೆ. ಇದೀಗ ನಾಡು ಮತ್ತು ಕಾಡು ಎರಡನ್ನು ಉಳಿಸುವ ಪ್ರಯತ್ನಗಳು ನಡೆಯಬೇಕಿದೆ.
ಸೆಟಲೈಟ್ ಮೂಲಕ ತೆಗೆದಂತಹ ಚಿತ್ರಗಳನ್ನು ನೋಡಿದರೆ ಮೊದಲು ಹಸಿರು ಇದ್ದ ಜಾಗ ಈಗ ಕೆಂಪು ಕಾಣಿಸುತ್ತದೆ ಅಂದರೆ ಹಸಿರು ಹೋಗಿ ಬರಡಾಗಿರುವ ಭೂಮಿ ಕಾಣಿಸುತ್ತದೆ. ಈಗಿರುವ ಅನಿಶ್ಚಿತತೆಯ ಬಗ್ಗೆ ಕಳೆದ 50 ವರ್ಷಗಳಿಂದಲೂ ಪರಿಸರ ತಜ್ಞರು ಎಚ್ಚರಿಕೆಯನ್ನು ಕೊಡುತ್ತಾ ಬಂದಿದ್ದಾರೆ. ಕಾಡನ್ನು ನಾಶಮಾಡಬೇಡಿ, ಪರಿಸರವನ್ನು ಉಳಿಸಿ, ಪರಿಸರದ ಸಮತೋಲನವನ್ನು ಕಾಪಾಡುತ್ತಾ ಹೋಗದಿದ್ದರೆ ಮುಂದೆ ಒಂದು ದಿವಸ ಮಾನವಕುಲ ಮತ್ತು ಪ್ರಾಣಿಗಳ ಜೀವನ ಅಸಹನೀಯವಾಗುತ್ತದೆ ಎಂದು. ಈಗ ಈ ಬಗ್ಗೆ ನಮ್ಮ ಅರಿವಿಗೆ ಬರುತ್ತಿದೆ. ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಆಗಿದೆ. ಮಳೆಗಾಲದಲ್ಲಿ ಮಳೆಯು ಜಾಸ್ತಿ ಆಗಿದೆ. ಇತ್ತೀಚೆಗೆ ಪತ್ರಿಕೆಯಲ್ಲಿ ಕೆನಡಾ ದೇಶದಲ್ಲಿ ಜುಲೈ ತಿಂಗಳಲ್ಲಿ ಚಳಿ ಇರುವ ಬದಲು 42 ಡಿಗ್ರಿ ಬಿಸಿಲು ಆವರಿಸಿರುವ ಬಗ್ಗೆ ವರದಿಯೊಂದು ಪ್ರಕಟಗೊಂಡಿತ್ತು. ವಿಜ್ಞಾನಿಗಳ ಮುನ್ಸೂಚನೆ ಸಂವತ್ಸರದ ಫಲದಂತೆ ವಾಸ್ತವಿಕವಾಗತೊಡಗಿದೆ. ಅನಿಶ್ಚಿತತೆಯೂ ಇದೆ. ಮೊದಲಿನ ಹಾಗೆ ಸಂವತ್ಸರದ ಫಲದ ಮೇಲೆ ಯಾ ಪಂಚಾoಗದ ತಿಂಗಳ ಮೇಲೆ ನಮ್ಮ ಹಳ್ಳಿಗರು ಮಳೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ!. ವನ್ಯಜೀವಿಗಳ ನಾಶ, ಅರಣ್ಯನಾಶ, ಪರಿಸರನಾಶದಿಂದಾಗಿ ಮನುಷ್ಯರಿಗೂ ಕಷ್ಟವಾಗಿದೆ. ಸದ್ಯ ಮನುಷ್ಯರು ಹೇಗೋ ಹೊಂದಿಸಿಕೊoಡು ಹೋಗುತ್ತಾರೆ. ಅಂದರೆ ಬಾಟ್ಲಿಯಲ್ಲಿ ನೀರು ಸಿಗುತ್ತ್ತದೆ. ಸ್ನಾನ ಮಾಡದಿದ್ದರು ಏನೂ ಸಮಸ್ಯೆ ಇಲ್ಲ. ಬೇಕಾದಷ್ಟು ಸುಗಂಧ ದ್ರವ್ಯಗಳು ಮತ್ತಿತ್ತರ ವಸ್ತುಗಳು ಪರ್ಯಾಯವಾಗಿ ಇರುವುದರಿಂದ ಯಾವುದರ ಕೊರತೆ ಎದುರಾದರೂ ಅದನ್ನು ತುಂಬಿಸಿಕೊoಡು ಹೋಗಲು ಮನುಷ್ಯರಿಗೆ ಸಾಧ್ಯ ಇದೆ. ಆದರೆ ಪ್ರಾಣಿಗಳಿಗೆ ಈ ರೀತಿಯ ಬದುಕು ಸಾಧ್ಯವಿಲ್ಲ. ಅವು ಅನಾಥವಾಗಿವೆ. ಅವುಗಳ ಅಳಲನ್ನು ಕೇಳುವವರಿಲ್ಲ. ಆದ್ದರಿಂದ ನಾವು ಬದುಕಬೇಕು, ಇತರರನ್ನು ಬದುಕಲೂ ಬಿಡಬೇಕು. (Live and let live) ಅನ್ನುವ ತತ್ವ ನಾವು ಪಾಲಿಸಬೇಕಿದೆ. ಜೈನ ಧರ್ಮದಲ್ಲೂ ಈ ತತ್ವವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.
ಪರಿಸರ ಸಮತೋಲನಕ್ಕೆ ಇರುವ ಏಕೈಕ ಮಾರ್ಗವೆಂದರೆ ಅದು ಪರಿಸರ ಬೆಳೆಸುವುದು. ಅಂದಹಾಗೆ, ಪರಿಸರ ಬೆಳೆಸಲು ಇದು ಸಕಾಲ. ಈ ಬಾರಿಯ ಮಳೆಗಾಲದಲ್ಲಿ ಪ್ರತಿಯೊಬ್ಬರೂ ಕನಿಷ್ಟ ಪಕ್ಷ ಐದು ಸಸಿಗಳನ್ನು ನೆಟ್ಟು ಗಿಡವಾಗಿ, ಮರವಾಗುವ ತನಕ ಅದರ ಬಗ್ಗೆ ಕಾಳಜಿ ವಹಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಂಡಲ್ಲಿ ಮುಂದೊoದು ದಿನ ಮನುಷ್ಯರು, ಪ್ರಾಣಿ – ಪಕ್ಷಿಗಳ ಬದುಕು ಹಸಿರಾಗುವುದರಲ್ಲಿ ಸಂದೇಹವಿಲ್ಲ.
ಈಗಾಗಲೇ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಾದ್ಯಂತ 600 ಕೆರೆಗಳ ಹೂಳೆತ್ತಲಾಗಿದೆ. ಅವುಗಳ ಸುತ್ತ, ಬದುಗಳಲ್ಲಿ ಸಸಿಗಳನ್ನು ನೆಡುವತ್ತ ಯೋಚಿಸಬಹುದಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ‘ಮುಷ್ಠಿಗೆರೆ ಕೆರೆ’ಯ ಸುತ್ತ ಕಳೆದ ಮೂರು ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ಸಮಿತಿಯವರು ನೆಟ್ಟು ಬೆಳೆಸಿದ ಸುಮಾರು 1500 ಸಸಿಗಳು ಇಂದು ಮರವಾಗಿ ಬೆಳೆದು ನಿಂತಿವೆ. ಇವರ ಸಾಧನೆ ಇತರರಿಗೆ ಮಾದರಿಯಾಗಬೇಕು. ಈ ಪ್ರಯತ್ನವನ್ನು ಕಂಡಾಗ ‘ನಮ್ಮೂರು – ನಮ್ಮ ಕೆರೆ’ಯ ಹಿಂದಿನ ಉದ್ದೇಶ ಸಾರ್ಥಕವಾಗಿದೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ.
ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು, ಊರವರೆಲ್ಲ ಸೇರಿ ನಿಮ್ಮೂರಿನಲ್ಲೂ ಸುಂದರವಾದ ಕೆರೆಯನ್ನು ನಿರ್ಮಿಸಿದ್ದೀರಿ. ಅದರ ಸುತ್ತ ಮರಗಳು ಬೆಳೆದು ನಿಂತರೆ ಅದರ ಸೌಂದರ್ಯವೇ ಬೇರೆ. ಈ ನಿಟ್ಟಿನಲ್ಲಿ ಈ ಬಾರಿಯ ಮಳೆಗಾಲದಲ್ಲಿ ಕೆರೆಗಳ ಸುತ್ತ ಗಿಡ ನೆಡುವ ಕೆಲಸಗಳು ಯಶಸ್ವಿಯಾಗಲಿ. ಆ ಮೂಲಕ ಪರಿಸರ ಸಂರಕ್ಷಣೆಗೆ ನಿಮ್ಮ ಅಳಿಲ ಸೇವೆಯೂ ಸಲ್ಲಲಿ ಎಂಬ ಆಶಯದೊಂದಿಗೆ ಎಲ್ಲರಿಗೂ ವನಮಹೋತ್ಸವ ದಿನದ ಶುಭಾಶಯಗಳು.