ಪ್ರಬುದ್ಧ ನಿರ್ಣಯಗಳಿಂದ ಸುಸ್ಥಿರ ಸಂಘ

ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್.

ಯೋಜನೆಯ ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳಿಗೆ ಎಲ್ಲಿಲ್ಲದ ಮಹತ್ವವಿರುತ್ತದೆ. ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳು ಪ್ರಬುದ್ಧಮಾನವಾಗಿದ್ದಲ್ಲಿ ಮಾತ್ರ ಆ ಸಂಘದ ಹಾಗೂ ಸದಸ್ಯರ ಸುಸ್ಥಿರತೆಯನ್ನು ಸದಾ ಕಾಪಾಡಿಕೊಂಡು ಬರಬಹುದು. ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿಕೊಂಡು ಸಾಮೂಹಿಕ ಅಭಿವೃದ್ಧಿ ಸಾಧಿಸುವುದು ಮೂಲ ಮಂತ್ರವಾಗಿದೆ. ಆದ್ದರಿಂದ ಸಂಘಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ವ್ಯಕ್ತಿಗತ ಅನುಕೂಲಕ್ಕಿಂತ ಸಂಘದ ಹಿತರಕ್ಷಣೆ ಹಾಗೂ ಸುಸ್ಥಿರತೆಗೆ ಅತ್ಯಂತ ಪ್ರಾಧಾನ್ಯತೆಯನ್ನು ನೀಡಬೇಕಾಗಿರುತ್ತದೆ. ಸಂಘಗಳು ಸದಾ ಪ್ರಬುದ್ಧಮಾನವಾದ ನಿರ್ಣಯಗಳನ್ನು ಕೈಗೊಳ್ಳುತ್ತಾ ಸಂಘದ ಸುಸ್ಥಿರತೆ ಕಾಯ್ದುಕೊಂಡು ಪ್ರತೀ ಸದಸ್ಯರು ಅಭಿವೃದ್ಧಿ ಹೊಂದಬೇಕೆನ್ನುವ ಉದ್ದೇಶದಿಂದ ಪೂಜ್ಯ ಶ್ರೀ ಹೆಗ್ಗಡೆಯವರು ನಮ್ಮ ಯೋಜನೆಯನ್ನು ಬೆಳೆಸಿದ್ದಾರೆ.
ಸಂಘದ ಸದಸ್ಯರಿಗೆ ಶೀಘ್ರ ಹಾಗೂ ಸುರಕ್ಷತೆಯಿಂದ ಪ್ರಗತಿನಿಧಿ ಒದಗಣೆಗಾಗಿ ಈಗಾಗಲೇ ಡಿಜಿಟಲ್ ಎಸ್. ಕೆ. ೨೧ ಪ್ರಾರಂಭಿಸಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲ್ಲಿ ಪ್ರಗತಿನಿಧಿ ಬಿಡುಗಡೆಯ ಅಂತಿಮ ನಿರ್ಣಯ ನಿಂತಿರುವುದು ಸಂಘಗಳ ನಿರ್ಣಯದಲಿ.್ಲ ಸಂಘಗಳು ಯೋಜನೆಯ ಬಿ.ಸಿ. ವ್ಯವಸ್ಥೆಯ ಮೂಲಕ ಬ್ಯಾಂಕ್‌ನಿoದ ಸಾಲ ಪಡೆದು ತನ್ನ ಸದಸ್ಯರಿಗೆ ನೀಡುವುದರಿಂದಾಗಿ ಇಡೀ ಸಾಲದ ಸಂಪೂರ್ಣ ಜವಾಬ್ದಾರಿ ಆ ಸಂಘದ ಸರ್ವ ಸದಸ್ಯರದ್ದಾಗಿರುತ್ತದೆ. ಈ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡು ಸದಸ್ಯರು ತಮ್ಮ ಸಂಘದಲ್ಲಿ ಯಾವುದೇ ಸದಸ್ಯರು ಪ್ರಗತಿನಿಧಿ ಬೇಡಿಕೆ ನೀಡಿದಾಗ ಅದನ್ನು ಮಂಜೂರು ಮಾಡಲು ಅತ್ಯಂತ ಸಮರ್ಥ ಹಾಗೂ ಪ್ರಬುದ್ಧಮಾನವಾದ ನಿರ್ಣಯಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಸಂಘಗಳಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ನಮ್ಮ ಯೋಜನೆಯ ಕಾರ್ಯಕರ್ತರು ಲಭ್ಯವಿರುತ್ತಾರೆ. ಇದಕ್ಕಾಗಿಯೇ ಪ್ರಗತಿನಿಧಿ ಬೇಡಿಕೆಯನ್ನು ನಿರ್ಣಯಿಸುವ ವಾರದ ಸಭೆಯಲ್ಲಿ ಯೋಜನೆಯ ಮೇಲ್ವಿಚಾರಕರು/ಯೋಜನಾಧಿಕಾರಿಯವರು ಹಾಜರಿರುತ್ತಾರೆ. ಯೋಜನೆಯ ಹೆಚ್ಚಿನ ಪ್ರಗತಿನಿಧಿಗಳು ಸದಸ್ಯರ ಸಾಮಾನ್ಯ ಬೇಡಿಕೆಗಳಾದ ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸಣ್ಣ ವ್ಯವಹಾರ, ಆಟೋ ರಿಕ್ಷಾ ಖರೀದಿ, ಮನೆ ನಿರ್ಮಾಣ ಹಾಗೂ ರಿಪೇರಿ, ಸಾಲ ಮರುಪಾವತಿ, ಮದುವೆ, ಶಿಕ್ಷಣ ಇನ್ನಿತರ ಉದ್ದೇಶಗಳಿಗೆ ಆಗಿರುತ್ತದೆ. ಈ ಉದ್ದೇಶಗಳಿಗೆ ಎಷ್ಟು ಮೊತ್ತ ಪ್ರಗತಿನಿಧಿ ಅಗತ್ಯವಿರುತ್ತದೆ ಹಾಗೂ ಬೇಡಿಕೆಯಿಟ್ಟಿರುವ ಸದಸ್ಯರ ಸಾಮರ್ಥ್ಯದ ಬಗ್ಗೆ ಸಂಘದ ಎಲ್ಲಾ ಸದಸ್ಯರಿಗೆ ಸಾಮಾನ್ಯ ಅರಿವಿರುತ್ತದೆ. ಹಾಗೆಯೇ ಅಂತಹ ವಿನಿಯೋಗದಿಂದ ಗಳಿಸಬಹುದಾದ ಮುಂದಿನ ಆದಾಯ ಹಾಗೂ ಸವಾಲುಗಳ ಬಗ್ಗೆಯೂ ಅರಿವಿರುತ್ತದೆ. ಆದ್ದರಿಂದ ಇಲ್ಲಿ ಹೆಚ್ಚಿನ ನಿರ್ಣಯಗಳನ್ನು ಸದಸ್ಯರು ತಾವೇ ಸುಲಭವಾಗಿ ಕೈಗೊಳ್ಳಬಹುದಾಗಿದೆ. ಅದಾಗಿಯೂ ಏನಾದರೂ ಮಾರ್ಗದರ್ಶನ ಬೇಕಾದಲ್ಲಿ ಯೋಜನೆಯ ಕಾರ್ಯಕರ್ತರು ಲಭ್ಯವಿರುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಸಂಘಗಳ ಯಾವುದೋ ಇತರೆ ಕಾರಣಕ್ಕಾಗಿ ಸಮರ್ಥವಾದ ನಿರ್ಣಯಗಳನ್ನು ಕೈಗೊಳ್ಳದೇ ಪ್ರಗತಿನಿಧಿಯನ್ನು ಅನರ್ಹ ಸದಸ್ಯರಿಗೆ ನೀಡಿ ಬಹಳಷ್ಟು ತೊಂದರೆಯನ್ನು ಅನುಭವಿಸಿರುವ ಬಹಳಷ್ಟು ಉದಾಹರಣೆಗಳಿವೆ. ಅಂತಹ ಪ್ರಗತಿನಿಧಿ ಮರುಪಾವತಿಯಲ್ಲಿ ಆ ಸದಸ್ಯರು ತಾವೂ ಸೋಲುವುದಲ್ಲದೇ, ಸುಸ್ಥಿರವಾಗಿದ್ದ ಸಂಘವನ್ನು ಸೋಲಿಸುತ್ತಾರೆ. ಹೀಗಾಗಿ ಸಂಘಗಳು ಸದಾ ಸಂಘದ ಹಿತರಕ್ಷಣೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ನಿರ್ಣಯಗಳನ್ನು ಕೈಗೊಳ್ಳಬೇಕು.
ಯಾವುದೇ ಸದಸ್ಯರು ಸಂಘದಲ್ಲಿ ಪ್ರಗತಿನಿಧಿ ಬೇಡಿಕೆ ನೀಡಿದಾಗ ಆ ಸದಸ್ಯರ ಅಥವಾ ವಿನಿಯೋಗದಾರರ ಕುರಿತಾಗಿ ಈ ಕೆಳಗಿನ ಕೆಲವು ಸಾಮಾನ್ಯ ಅಂಶಗಳ ಬಗ್ಗೆ ವಿಶೇಷವಾಗಿ ಪರಿಶೀಲಿಸಬೇಕಾಗಿದೆ.
1. ಪ್ರಗತಿನಿಧಿ ಬೇಡಿಕೆ ಇಟ್ಟ ಸದಸ್ಯರು ಸಂಘದೊAದಿಗೆ ಇಲ್ಲಿಯವರೆಗೆ ಉತ್ತಮವಾಗಿ ವ್ಯವಹರಿಸುತ್ತಿದ್ದಾರೆಯೆ?

2. ವಾರದಸಭೆಗೆ ನಿರಂತರವಾಗಿ ಹಾಜರಾಗುತ್ತಿದ್ದಾರೆಯೇ?

3. ಹಿಂದಿನ ಪಡೆದುಕೊಂಡ ಸಾಲಗಳನ್ನು ಸರಿಯಾಗಿ ಮರುಪಾವತಿ ಮಾಡಿದ್ದಾರೆಯೇ?
4. ಪ್ರಸ್ತುತ ಬೇಡಿಕೆಯಿಟ್ಟ ಪ್ರಗತಿನಿಧಿಯು ನಿಜಕ್ಕೂ ಅಗತ್ಯ ಇದೆಯೇ?,

5. ಬೇಡಿಕೆ ನೀಡಿದ ಉದ್ದೇಶಗಳು ಸಮರ್ಪಕವಾಗಿದೆಯೇ? ಆ ಉದ್ದೇಶಗಳನ್ನು ಸಾಧಿಸುವ ಸಾಮರ್ಥ್ಯ ಸದಸ್ಯನಿಗಿದೆಯೇ?
6. ಮುಂದೆ ಬರಬಹುದಾದ ಸಮಸ್ಯೆಗಳು ಮತ್ತು ಅವುಗಳನ್ನು ಎದುರಿಸುವ ಶಕ್ತಿ ಆ ಸದಸ್ಯರಿಗೆ ಇದೆಯೇ?

7. ಪ್ರಸ್ತುತ ಸದಸ್ಯರಿಗಿರುವ ನಿರಂತರ ಆದಾಯ ಎಷ್ಟು? ಆ ಆದಾಯದಿಂದ ಬೇಡಿಕೆಯಿಟ್ಟ ಪ್ರಗತಿನಿಧಿ ವಾರದ ಮರುಪಾವತಿ ಸಾಧ್ಯವೇ?

8 ಉದ್ದೇಶಿತ ಚಟುವಟಿಕೆಯಿಂದ ಬರಬಹುದಾದ ನಿವ್ವಳ ಆದಾಯ ಎಷ್ಟು?.

9. ಸದಸ್ಯರು ಬೇಡಿಕೆಯಿಟ್ಟ ಸಾಲದ ಪೂರ್ಣ ಮಾಹಿತಿ ವಿನಿಯೋಗದಾರರಿಗೆ ಹಾಗೂ ಅವರ ಕುಟುಂಬದವರಿಗೆ ತಿಳಿದಿದೆಯೇ? ಹಾಗೂ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ?

10. ಸದಸ್ಯರಿಗೆ ಹೊರಗಿನ ಕೈ-ಸಾಲಗಳಿವೆಯೆ? ಅಥವಾ ಇನ್ನಾವುದಾದರೂ ಆರ್ಥಿಕ ಜವಾಬ್ದಾರಿಗಳಿವೆಯೇ? ಈ ಬಗ್ಗೆ ಇಲ್ಲಿಯವರೆಗೆ ಯಾವುದಾದರೂ ಸಮಸ್ಯೆಗಳಾಗಿವೆ?
ಮೇಲಿನ ವಿಷಯಗಳು ಸದಸ್ಯರ ವ್ಯವಹಾರ ಮತ್ತು ಆರ್ಥಿಕ ಶಿಸ್ತಿಗೆ ಸಂಬ0ಧಪಟ್ಟದ್ದಾಗಿದ್ದು ಇವುಗಳ ಜೊತೆಗೆ ಕೆಲವೊಂದು ಸಾಮಾಜಿಕ ವಿಷಯಗಳ ಬಗ್ಗೆಯೂ ವಿಮರ್ಶಿಸಬೇಕಾಗಿರುತ್ತದೆ. ಅವುಗಳೆಂದರೆ
* ಬೇಡಿಕೆಯಿಟ್ಟ ಸದಸ್ಯರಿಗೆ ತೀವ್ರ ದುರಭ್ಯಾಸಗಳಿವೆಯೇ?
*ಸ್ವಂತ ಮನೆಯಿದೆಯೇ ? ಸಾಮಾನ್ಯ ಮೂಲ ಸೌಲಭ್ಯಗಳಿವೆಯೇ?

* ಸದಸ್ಯರ ಮನೆಯಲ್ಲಿ ಯಾರಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ? ಇದ್ದಲ್ಲಿ ಚಿಕಿತ್ಸೆಗೆ ದಾರಿಗಳು ಯಾವುದು?
* ಬೇಡಿಕೆಯಿಟ್ಟ ಪ್ರಗತಿನಿಧಿ ಆ ಕುಟುಂಬದಲ್ಲಿ ಇತರ ಉದ್ದೇಶಗಳಿಗೆ ಬಳಕೆಯಾಗುವಂತಹ ಅವಕಾಶಗಳಿವೆಯೇ?
* ಸದಸ್ಯರು ಊರು ಬಿಟ್ಟು ಆಗಾಗ್ಗೆ ವಲಸೆ ಹೋಗುವ ಹವ್ಯಾಸ ಹೊಂದಿದ್ದಾರೆಯೇ? ಇತ್ಯಾದಿ.
ಈ ಮೇಲಿನ ಎಲ್ಲಾ ಅಂಶಗಳ ಬಗ್ಗೆ ಸಂಘದ ಸರ್ವ ಸದಸ್ಯರು ವಿಶೇಷ ಗಮನ ನೀಡಿ ಮುಕ್ತವಾಗಿ ಚರ್ಚಿಸಿ ಸರ್ವಾನುಮತದ ಸಮರ್ಥ ನಿರ್ಣಯಗಳನ್ನು ಕೈಗೊಂಡು ಸದಾ ಸಂಘದ ಸುಸ್ಥಿರತೆಯನ್ನು ಕಾಯ್ದುಕೊಳ್ಳಬೇಕಾಗಿ ವಿನಂತಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates