ಫ್ಯಾಶನ್ ಸಿಟಿ ಫ್ರಾನ್ಸ್

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು

ವಿದೇಶಿಗರ ಜನಜೀವನ, ಅಲ್ಲಿನ ವೈರುಧ್ಯ, ಸಾಂಸ್ಕೃತಿಕ ಸೊಬಗು, ನಿತ್ಯದ ಆಗುಹೋಗುಗಳು ನಮ್ಮಲ್ಲೂ ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತವೆ. ಅಲ್ಲಿಯ ಅಭಿವೃದ್ಧಿ ಕೆಲಸಗಳನ್ನು ನಮ್ಮ ದೇಶ, ನಮ್ಮ ರಾಜ್ಯದಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಂಡು ನಾವು ಇನ್ನಷ್ಟು ಪ್ರಗತಿಯನ್ನು ಕಾಣಬಹುದು ಹಾಗೂ ಅಲ್ಲಿನ ಧನಾತ್ಮಕ ವಿಚಾರಗಳನ್ನು ನಾವು ಯಾವ ರೀತಿ ಅಳವಡಿಸಿಕೊಳ್ಳಬಹುದು ಎನ್ನುವ ಚಿಂತನೆಗೆ ವಿದೇಶ ಪ್ರವಾಸಗಳು ಒಂದು ಉತ್ತಮ ವೇದಿಕೆ. ಯಾವುದೇ ದೇಶಗಳಿಗೆ ಹೋದರೂ ಅಲ್ಲಿನ ಕೃಷಿಕರ, ಕಾರ್ಮಿಕರ ಜೊತೆ ಮಾತನಾಡುತ್ತೇನೆ. ಅವರ ಚಿಂತನೆ, ವಿಚಾರಗಳನ್ನು ಆಲಿಸುತ್ತೇನೆ. ಇದರಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತ್ತದೆ. ನಾನು ಇತ್ತೀಚೆಗೆ ಫ್ರಾನ್ಸ್ ದೇಶಕ್ಕೆ ಹೋಗಿದ್ದೆ. ಅಲ್ಲಿನ ಕೆಲವೊಂದು ಅನುಭವಗಳನ್ನು ‘ನಿರಂತರ’ದ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಫ್ರಾನ್ಸ್ಗೆ ಹೋದ ಮೇಲೆ ‘ಐಫೆಲ್ ಟವರ್’ ಅನ್ನು ನೋಡಲೇಬೇಕು. ಅಲ್ಲಿಗೆ ತೆರಳಿದ ಒಂದು ಘಟನೆಯನ್ನು ಮೊದಲಾಗಿ ತಮಗೆ ತಿಳಿಸಲೇಬೇಕು. ಅವತಾರ್ ಸಿಂಗ್ ಎಂಬ ಒಬ್ಬ ಪಂಜಾಬಿ ನಮಗೆ ಗೈಡ್ ಆಗಿದ್ದ. ನಾವು ಫ್ರಾನ್ಸ್ಗೆ ಹೋದ ಮರುದಿವಸವೇ ಮುಂಜಾನೆ ಬೇಗ ಐಫೆಲ್ ಟವರ್ ವೀಕ್ಷಿಸೋಣ ಇಲ್ಲದಿದ್ದರೆ ಮತ್ತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನೋಡಲು ವಿಳಂಬವಾದೀತು. ಬೆಳಗ್ಗೆ 10 ಗಂಟೆ ನಂತರ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹಾಗಾಗಿ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಅಲ್ಲಿಗೆ ತಲುಪಬೇಕು ಎಂದು ತಿಳಿಸಿದ. ಆದರೆ ನಾವು ತಲುಪಿದ ಮರುದಿನವೇ ಅಷ್ಟು ಬೇಗ ಅಲ್ಲಿಗೆ ತೆರಳಬೇಕು ಎಂದರೆ ನಮಗೂ ತುಸು ಕಷ್ಟ ಎನಿಸಿತು. ಅಲ್ಲದೆ ಊಟವನ್ನು ನಾವೇ ತಯಾರಿ ಮಾಡಿಕೊಳ್ಳಬೇಕಿತ್ತು. ಹಾಗಾಗಿ ಬೇಗನೇ ಎದ್ದು ಎಲ್ಲವನ್ನೂ ತಯಾರಿ ಮಾಡಿಕೊಂಡು ಹೊರಟರೂ ಅಲ್ಲಿಗೆ ತಲುಪುವಾಗ ಗಂಟೆ 9.30 ಆಗಿತ್ತು. ಅದಾಗಲೇ ಐಫೆಲ್ ಟವರ್ ಬಳಿ ತೆರಳಲು ಅರ್ಧ ಕಿ.ಮೀ.ನಷ್ಟು ಸರತಿ ಸಾಲಿನಲ್ಲಿ ಜನರು ನಿಂತಿದ್ದರು. ನಾವೂ ಕೂಡ ಸರತಿ ಸಾಲಿನ ‘ಬಾಲ’ ಹಿಡಿದು ಮುನ್ನಡೆದೆವು. ಸ್ವಲ್ಪ ಹೊತ್ತಿನಲ್ಲೇ ನಮ್ಮ ಗೈಡ್ ಅವತಾರ್ ಸಿಂಗ್ ಬಂದು ಈ ಕ್ಯೂನಲ್ಲಿ ಬೇಡ ಬನ್ನಿ ಎಂದು ನಮ್ಮನ್ನು ಐಫೆಲ್ ಟವರ್ ಹತ್ತಿರಕ್ಕೆ ಕರೆದುಕೊಂಡು ಹೋದ. ಆಡು ಭಾಷೆಯಲ್ಲಿ ಹೇಳುವುದಾದರೆ ಐಫೆಲ್ ಟವರ್‌ಗೆ ನಾಲ್ಕು ಕಾಲುಗಳಿವೆ. ಪ್ರವೇಶ ದ್ವಾರದಂತೆ. ಒಂದು ದ್ವಾರದ (ಕಾಲು) ಬಳಿ ಈ ಸರತಿ ಸಾಲಿತ್ತು. ಮತ್ತೊಂದು ದ್ವಾರ (ಕಾಲು) ಬಳಿ ಯಾರೂ ಇರಲಿಲ್ಲ. ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗಿ ಇಲ್ಲೇ ನಿಂತುಕೊಳ್ಳಿ, ಸ್ವಲ್ಪ ಹೊತ್ತಿನಲ್ಲೇ ಪ್ರವೇಶ ದೊರೆಯುತ್ತದೆ, ಇಲ್ಲಿಂದಲೇ ಮೇಲೆ ಹೋಗೋಣ ಎಂದ. ನಾವು ಆತನ ಮಾತಿಗೆ ಒಪ್ಪಿ ಬದಿಯಲ್ಲಿ ಕುಳಿತುಕೊಂಡೆವು. ಅಂತೂ ಹದಿನೈದು ನಿಮಿಷದ ಬಳಿಕ ಅಲ್ಲಿ ನಮಗೆ ತೆರಳಲು ಅವಕಾಶ ದೊರೆಯಿತು. ನನಗೆ ಆಶ್ಚರ್ಯವಾಯಿತು, ಎಲ್ಲರೂ ಸರತಿ ಸಾಲಿನಲ್ಲಿದ್ದರೆ ನಾವು ಹೇಗೆ ಒಮ್ಮೆಲೆ ಹೋಗುವುದಕ್ಕೆ ಸಾಧ್ಯ ಎಂದು! ‘ಇದು ಹೇಗೆ ಸಾಧ್ಯವಾಯಿತು’ ಎಂದು ಅವನಲ್ಲಿ ಕೇಳಿದಾಗ ‘ಈ ದ್ವಾರ ದುರಸ್ತಿಯಲ್ಲಿತ್ತು, ಅಧಿಕಾರಿಗಳು ಕೆಲವೇ ಕ್ಷಣಗಳಲ್ಲಿ ದುರಸ್ತಿಯಾಗುತ್ತದೆ ಎಂದು ತಿಳಿಸಿದ್ದರು. ಹಾಗಾಗಿ ಕೇವಲ 15 ನಿಮಿಷದಲ್ಲಿ ದುರಸ್ತಿಯಾದ ಬಳಿಕ ನಿಮ್ಮನ್ನು ಈ ದ್ವಾರದಲ್ಲಿ ಕರೆದೊಯ್ಯಲು ಅನುಮತಿ ದೊರೆಯಿತು ಎಂದ.’ ಇದನ್ನು ನಿಜವಾಗಿಯೂ ‘ಭಾರತೀಯರ ಜಾಣ್ಮೆ’ ಎಂದು ಹೇಳಲೇಬೇಕು.
ಜಿವೆರ್ನಿ ಪ್ಯಾರಿಸ್ ಪಕ್ಕದಲ್ಲಿರುವ ಊರು. ಅಲ್ಲಿ ಸಾರ್ವಜನಿಕ ಉದ್ಯಾನವನಕ್ಕೆ ಹೋದೆವು. ಕ್ಲೌಡ್ ಮೊನೆಟ್ ಎಂಬ ಚಿತ್ರಕಲಾಕಾರ ತಾನು ಚಿತ್ರ ರಚಿಸಬೇಕಾದರೆ ತನಗೆ ಸ್ಫೂರ್ತಿಬೇಕು ಎಂದು ಮನೆಯಲ್ಲೇ ಉದ್ಯಾನವನವನ್ನು ಬೆಳೆಸಿದ್ದ. ಯಾಕೆಂದರೆ ಆಗಿನ ಕಾಲದ ವರ್ಣಚಿತ್ರಗಳು ಬಹುತೇಕ ರಾಜ ಮನೆತನ ಅಥವಾ ಪೌರಾಣಿಕ ಕಥೆಗಳನ್ನು ಆಧಾರಿತವಾಗಿದ್ದವು. ಆದರೆ ಮೋನೆಟ್ ಪ್ರಾಕೃತಿಕ ಹಳ್ಳಿ, ಹೂವು ಬೆಳೆದ ಚಿತ್ರಗಳಿಗೆ ಪ್ರಾಶಸ್ತö್ಯ ನೀಡಿ, ‘Impressionism’ (ಚಿತ್ತವನ್ನು ಪ್ರಭಾವಿಸುವ ಚಿತ್ರ) ಎನ್ನುವ ಹೊಸ ರೀತಿಯ ಚಿತ್ರ ಕಲಾ ಮಾಧ್ಯಮ ಪ್ರಾರಂಭಿಸಿದ. ಅವನ ಚಿತ್ರಗಳಿಗಾಗಿಯೇ ನಿರ್ಮಿಸಿದ ಸುಂದರ ಉದ್ಯಾನವನವದು. ಈಗ ಆ ಉದ್ಯಾನವನಕ್ಕೆ ಸಹಸ್ರಾರು ಜನರು ಭೇಟಿ ನೀಡುತ್ತಾರೆ. ಸ್ಫೂರ್ತಿಗಾಗಿ ಬೆಳೆಸಿದ ಉದ್ಯಾನವನವು ಇಂದು ಪ್ರೇಕ್ಷಣೀಯ ಉದ್ಯಾನವನವಾಗಿ ಬೆಳೆದಿದೆ. ನಾವು ಅಲ್ಲಿಗೆ ಭೇಟಿ ನೀಡಿದಾಗ ನಮ್ಮ ವಾಹನ ನಿಲುಗಡೆಗೆ ಸ್ಥಳಾವಕಾಶವೇ ಇರಲಿಲ್ಲ. ಸುಮಾರು ಹದಿನೈದು ನಿಮಿಷ ವಾಹನ ನಿಲ್ಲಿಸಲು ಸ್ಥಳವನ್ನು ಹುಡುಕುತ್ತಾ ತುಸು ಅತ್ತಿತ್ತ ತಿರುಗಾಡಿದೆವು. ಅಲ್ಲಿ ಸುಮಾರು ಐದರಿಂದ ಆರು ಸಾವಿರ ಜನ ಇದ್ದಿರಬಹುದು. ಸುಮಾರು 600 ರಿಂದ 700 ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಕೆಲವು ಸಮಯಗಳ ಬಳಿಕ ನಮ್ಮ ವಾಹನ ಪಾರ್ಕ್ ಮಾಡಲು ಸ್ಥಳ ದೊರೆಯಿತು. ಸುಮಾರು ಒಂದೂವರೆ ಗಂಟೆ ಕಾಲ ಉದ್ಯಾನವನದಲ್ಲಿ ತಿರುಗಾಡಿದೆವು. ಎಲ್ಲೂ ಕೂಡ ಮಲಿನತೆ ಇರದೆ ಸ್ವಚ್ಛವಾಗಿತ್ತು.
ಇಲ್ಲಿರುವ ಗೋಥಿಕ್ ನೊಟ್ರೆ – ಡೇಮ್ ಕ್ಯಾಥೆಡ್ರಲ್‌ನಂತಹ ಪ್ರದೇಶಗಳು ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿಯಾಗಿವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಜನರು ಭೇಟಿ ನೀಡುವ ಪ್ರದೇಶಗಳಲ್ಲಿ ಪ್ಯಾರಿಸ್ ಕೂಡ ಒಂದಾಗಿದೆ. ಫ್ರಾನ್ಸ್ನಲ್ಲಿ ಸುಂದರವಾದ ವರ್ಸೆÊಲ್ಸ್ ಅರಮನೆಯಿದೆ. ಅಲ್ಲಿನ ರಾಜ ಹದಿನಾಲ್ಕನೇ ಲೂಯಿಸ್‌ನ ಕಾಲದಲ್ಲಿ ನಿರ್ಮಿಸಲಾಗಿದ್ದು, ಪ್ಯಾರಿಸ್‌ನಿಂದ ಸುಮಾರು 19 ಕಿ.ಮೀ. ದೂರದಲ್ಲಿದೆ. ಫ್ರೆಂಚ್ ವಾಸ್ತುಶಿಲ್ಪ ಹಾಗೂ ಕಲೆಯ ವೈಭವವನ್ನು ಇಲ್ಲಿ ಕಾಣಬಹುದಾಗಿದೆ. ಈ ಅರಮನೆಯಲ್ಲಿ ವಸ್ತುಸಂಗ್ರಹಾಲಯವಿದ್ದು ವಿಶೇಷ ಆಕರ್ಷಣೆಯನ್ನು ಹೊಂದಿದೆ. ಅರಮನೆಗೆ ಹೊಂದಿಕೊoಡoತೆ ಮನಸೆಳೆಯುವ ಉದ್ಯಾನವನವೂ ಇದೆ. ಇದಲ್ಲದೆ ಪ್ಯಾರಿಸ್‌ನಲ್ಲಿರುವ ‘ಟ್ಯೂಲರೀಸ್ ಗಾರ್ಡನ್’ ಕೂಡ ಅತ್ಯಂತ ಸುಂದರವಾದ ತಾಣ.
ರಾಜ 14ನೇ ಲೂಯಿಸ್‌ನ ಆಡಳಿತ ಕಾಲದಲ್ಲಿ ಮಹಾರಾಜ ಎಂದರೆ ದೇವರ ಅಂಶ ಎಂಬ ಭಾವನೆ ಇತ್ತು. ಆತ ಸರ್ವಾಧಿಕಾರಿಯಾಗಿದ್ದ. ಪ್ಯಾರಿಸ್ ಬಿಟ್ಟು ಪಕ್ಕದ ವರ್ಸೈಲ್ ಅರಮನೆಯಿಂದ ತನ್ನ ಆಡಳಿತ ಪ್ರಾರಂಭಿಸಿದ. ಆಗಿನ ರಾಜನ ಅರಮನೆ ಅನೇಕ ಕಾರ್ಯಕ್ರಮ ಹಾಗೂ ನಿಯಮಗಳಿಂದ ಕೂಡಿತ್ತಂತೆ. ಎಷ್ಟೆಂದರೆ ರಾಜ – ರಾಣಿಯರಿಗೆ ಏಕಾಂತವಿರಲಿಲ್ಲ. ಅವರು ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಕೊಠಡಿಯಲ್ಲಿ ಮಂತ್ರಿಗಳು, ಆಸ್ಥಾನದ ಪ್ರಮುಖರು ಫ್ರಾನ್ಸ್ನ ಹಿರಿಯ ಮನೆತನದವರು ಹೀಗೆ ಜನರಿಂದ ತುಂಬಿರುತ್ತಿತ್ತು. ಆಗ ಅರಮನೆಗೂ ಜನರಿಗೂ ಬಹಳ ನಿಕಟ ಸಂಬoಧವಿತ್ತು. ರಾಜ ಎದ್ದ ತಕ್ಷಣ ಪ್ರಜೆಗಳನ್ನೇ ನೋಡುತ್ತಿದ್ದನಂತೆ. ಈ ರೀತಿ ಇದ್ದಾಗ ಜನರ ಸಂಪರ್ಕದ ಜೊತೆಗೆ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕೆ ಆಗುತ್ತದೆ ಎಂದು ನಂಬಿದನoತೆ. ಹೀಗಾಗಿ ವಿಶಾಲವಾದ ಕೊಠಡಿಗಳಲ್ಲಿ ಜನರು ರಾಜನನ್ನು ನೋಡಿ ಮಾತನಾಡಿಸುವ ವ್ಯವಸ್ಥೆ ಇತ್ತು. ಎಲ್ಲಿಯವರೆಗೆ ಜನರಿಗೆ ರಾಜ ಮನೆತನದ ಸಂಪರ್ಕವಿತ್ತು ಎಂದರೆ ರಾಣಿಯ ಪ್ರಸವದ ವೇಳೆಯೂ ಹೆಣ್ಣುಮಕ್ಕಳು ಕೊಠಡಿಯ ಒಳಗೂ, ಹೊರಗೂ ನಿಂತುಕೊಳ್ಳುತ್ತಿದ್ದರು ಎಂದು ಗೈಡ್ ವಿವರಿಸುತ್ತ ಆ ಅರಮನೆಯಲ್ಲಿ ಒಂದು ಕೊಠಡಿಯನ್ನು ತೋರಿಸಿದರು. ಅಲ್ಲಿ 19 ಹೆರಿಗೆಗಳಾಗಿವೆ. ಪ್ರತಿ ಹೆರಿಗೆಯಾದಾಗಲೂ ಜನರು ಬರುತ್ತಿದ್ದರು. ಈ ರೀತಿ ಜನಸಂಪರ್ಕಕ್ಕೆ ಹೆಚ್ಚು ಪ್ರಾಶಸ್ತö್ಯವನ್ನು ಕೊಡುತ್ತಿದ್ದರು. ಆದರೆ ಕೊನೆ ಕೊನೆಗೆ ರಾಜರು ತಮ್ಮ ಪ್ರಜೆಗಳಿಂದ ದೂರವಾಗಲು ಪ್ರಾರಂಭಿಸಿದರು. ಎಲ್ಲಿಯವರೆಗೆ ದೂರವಾದರು ಎಂದರೆ ರಾಜರ ಬಳಿ ಪ್ರಜೆಗಳಿಗೆ ಅಹವಾಲು ಹೇಳಿಕೊಳ್ಳುವುದಕ್ಕೆ ಅವಕಾಶ ಇರಲಿಲ್ಲ. ಕೊನೆಗೆ ಜನ ದಂಗೆ ಎದ್ದು ರಾಜರ ಬಳಿ ಅಹವಾಲು ಹೇಳಲು ಹೋದಾಗ ಅಲ್ಲಿದ್ದ ರಾಣಿ ಅಂತಃಪುರದಲ್ಲಿ ಕೂತು ಸಖಿಯಲ್ಲಿ ಕೇಳಿದಳಂತೆ, “ಏನಾಗಿದೆ ಅವರಿಗೆ?, ಏನು ಸಮಸ್ಯೆ?, ಯಾಕೆ ದಂಗೆ ಎದ್ದಿದ್ದಾರೆ” ಎಂದು. “ಸರಿಯಾಗಿ ಧಾನ್ಯ ಸಿಗುತ್ತಿಲ್ಲ.” ಎಂದರoತೆ ಸಖಿಯರು. ಆಗ ತಕ್ಷಣ ರಾಣಿ “ಅವರಿಗೆ ಬ್ರೆಡ್ ಸಿಗುವುದಿಲ್ಲವೇ?” ಎಂದು ಕೇಳಿದಳಂತೆ. ಅಂದರೆ ರಾಣಿಗೆ ಬ್ರೆಡ್ ತಯಾರಿಯ ಬಗ್ಗೆ ಕಲ್ಪನೆಯೇ ಇರಲಿಲ್ಲವಂತೆ. ಅಷ್ಟರಮಟ್ಟಿಗೆ ಜನರೊಂದಿಗಿನ ನಂಟು ಕಳಚಿ ಹೋಗಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ. ಜನರ ಸಮಸ್ಯೆ ಬಗ್ಗೆ ರಾಜ-ರಾಣಿಯರಿಗೆ ಅರಿವೇ ಇರಲಿಲ್ಲ. ಅಷ್ಟರ ಮಟ್ಟಿಗೆ ಆಡಳಿತ ವ್ಯವಸ್ಥೆ ಹದಗೆಟ್ಟು ಜನಸಾಮಾನ್ಯರು ರೋಸಿ ಹೋಗಿದ್ದರು. ಮುಂದೆ ಜನರು ದಂಗೆ ಎದ್ದು ರಾಜಾಡಳಿತವನ್ನು ಕೊನೆಗೊಳಿಸಿದರು. ಹೀಗೆ ಫ್ರಾನ್ಸ್ನ ಪ್ರತಿಯೊಂದು ಸ್ಥಳಗಳ ಭೇಟಿಯಲ್ಲಿಯೂ ಒಂದೊoದು ವಿಭಿನ್ನತೆ, ವಿಶೇಷತೆಯಿದೆ.
ಭಾರತವೂ ವಿಶೇಷವಾಗಿ ವೈಭವದ ಇತಿಹಾಸ, ಪರಂಪರೆಯನ್ನು ಹೊಂದಿರುವ ರಾಷ್ಟç. ಇಲ್ಲಿಯೂ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಕೆಲವು ಪಾಳು ಬಿದ್ದಿವೆ. ಅವುಗಳ ಪುರುತ್ಥಾನ ಆಗಬೇಕಿದೆ. ಭಾರತೀಯತೆ, ಭಾರತೀಯ ಮೌಲ್ಯ, ಪರಂಪರೆಯನ್ನು ಜಗತ್ತಿಗೆ ಪ್ರದರ್ಶಿಸುವ ಕಾರ್ಯ ಆಗಬೇಕಿದೆ. ಹೆಚ್ಚು ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿ ಇಲ್ಲಿಯ ವೈವಿಧ್ಯವನ್ನು ನೋಡಿ ಆನಂದಿಸಬೇಕು, ಯೋಗದಂತೆ ಭಾರತೀಯ ಪರಂಪರೆ ಮತ್ತು ಮೌಲ್ಯಗಳು ಕೂಡ ವಿಶ್ವದಾದ್ಯಂತ ಪಸರಿಸಲಿ ಎನ್ನುವುದು ನಮ್ಮ ಆಶಯ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *