ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
‘ಅಮ್ಮ ಇವತ್ತು ಕಡುಬು ಮಾಡ್ತೀಯಾ? ಮಾವಂದಿರು ಬರುತ್ತಾರೆ, ದೀಪಾವಳಿಗೆ ಹೊಸ ಬಟ್ಟೆ, ತಿಂಡಿ, ಸುರುಸುರು ಕಡ್ಡಿ, ಪಟಾಕಿ ತರುತ್ತಾರೆ. ಕಡುಬು ಜೊತೆಗೆ ಪಾಯಸ, ಮತ್ತೆ ರಾತ್ರಿಗೆ ದೋಸೆ ಮಾಡ್ತೀಯಲ್ವಾ! ನನಗೆ ತುಂಬಾ ಇಷ್ಟ’ ಹೀಗೆ ಮಗು ತಾಯಿಯಲ್ಲಿ ತನ್ನ ಬೇಡಿಕೆಗಳನ್ನು ಹೇಳುತ್ತಿದ್ದುದ್ದನ್ನು ಕಂಡು ಹಬ್ಬಗಳಲ್ಲಿ ಅಡಗಿರುವ ಬಾಂಧವ್ಯಗಳ ಮಧುರತೆಯ ನೆನಪು ನನ್ನ ಮನದಲ್ಲಿ ಮೂಡಿತು. ಹಬ್ಬಗಳು ಅಂದರೆ ಅದೆಷ್ಟು ಉತ್ಸಾಹ, ಅದೆಷ್ಟು ವೈವಿಧ್ಯ. ಹಬ್ಬ – ಹರಿದಿನಗಳನ್ನು ಎಲ್ಲರೂ ಅತ್ಯಂತ ಖುಷಿಯಿಂದ ಆಸ್ವಾದಿಸುತ್ತಾರೆ. ಮಕ್ಕಳ ಖುಷಿಗಂತೂ ಪಾರವೇ ಇಲ್ಲವಾಗುತ್ತದೆ. ದೀಪಾವಳಿ ಅಥವಾ ಇನ್ನಿತರ ಯಾವುದೇ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಎಂದಾಕ್ಷಣದಿoದಲೇ ಮಕ್ಕಳ ಮುಖದಲ್ಲಿ ಸಂತಸ ಮನೆ ಮಾಡಿರುತ್ತದೆ. ಸರಸರನೇ ಅತ್ತಿಂದಿತ್ತ ಓಡುತ್ತಾ ಹಬ್ಬದ ದಿನಕ್ಕಾಗಿಯೇ ಜಾತಕಪಕ್ಷಿಯಂತೆ ಕಾಯುತ್ತಾರೆ. ಹಬ್ಬ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಂಸ್ಕೃತಿ, ಪರಂಪರೆ ಆಚರಣೆಗಳ ಜೊತೆ ನಮ್ಮ ಬಂಧು – ಬಳಗದವರೊಡಗೂಡಿ ಸಂಬoಧವನ್ನು ಗಟ್ಟಿಯಾಗಿಸಲು ಮತ್ತು ಎಲ್ಲರೂ ಒಂದಾಗಿ, ಸವಿ ಸುವಿಚಾರಗಳನ್ನು ಆಸ್ವಾದಿಸಿ ಸಂಬoಧಕ್ಕೊoದು ಹೊಸ ರೂಪ ನೀಡುವ ದಿಸೆಯಲ್ಲಿ ಹಬ್ಬಗಳು ಮಹತ್ತರ ಪಾತ್ರವಹಿಸುತ್ತವೆ. ಒತ್ತಡ, ಧಾವಂತದ ಬದುಕಿಗೆ ಬ್ರೇಕ್ ಹಾಕಿ ಹೊಸ ಚೈತನ್ಯ – ಉಲ್ಲಾಸ ತುಂಬಿಕೊoಡು ಮತ್ತಷ್ಟು ಹುರುಪಿನಿಂದ ಮುಂದೆ ಸಾಗಲು ಹಬ್ಬದ ಆಚರಣೆಗಳು ಈಗಿನ ಕಾಲದ ಅನಿವಾರ್ಯತೆಯೂ ಆಗಿದೆ ಎನ್ನಬಹುದು.
ಭಾರತದಲ್ಲಿರುವಷ್ಟು ಹಬ್ಬ – ಹರಿದಿನಗಳು ಬೇರೆಲ್ಲೂ ಕಾಣಸಿಗದು. ಹಬ್ಬಗಳಲ್ಲಿಯೇ ಇಲ್ಲಿನ ಜನಜೀವನ ಹಾಸುಹೊಕ್ಕಾಗಿದ್ದು ಪ್ರಾಚೀನ ಧಾರ್ಮಿಕ ಸಂಸ್ಕöÈತಿಯೂ ಇದಕ್ಕೆ ಕಾರಣ ಎನ್ನಬಹುದು. ಬದುಕನ್ನು ಸಂಭ್ರಮದಿoದ ಜೀವಿಸಬೇಕು ಎನ್ನುವುದು ಇದರ ಉದ್ದೇಶವೂ ಹೌದು. ಇಲ್ಲಿನ ಪ್ರತಿ ಹಬ್ಬಗಳ ಆಚರಣೆಯಲ್ಲೂ ವೈಜ್ಞಾನಿಕತೆ ಒಳಗೊಂಡಿದೆ. ಆಧುನಿಕತೆಯ ಯುಗದಲ್ಲಿ ಬದಲಾಗುತ್ತಿರುವ ಜೀವನಕ್ರಮದಿಂದ, ಒತ್ತಡದ ಕಾರ್ಯಗಳಿಂದ ಹಬ್ಬಗಳ ಆಚರಣೆಯ ಹಿಂದಿನ ಮೌಲ್ಯ ಮರೀಚಿಕೆಯಾಗಿ ಆಚರಿಸುವ ಕ್ರಮದಲ್ಲಿ ಅನೇಕ ಬದಲಾವಣೆಗಳು ಆಗಿವೆಯಾದರೂ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಹಬ್ಬಗಳು ಪ್ರೇರಣಾದಾಯಕವಾಗಿವೆ. ಮನೆಯವರು, ಬಂಧು ಬಳಗದವರೆಲ್ಲರೂ ಒಟ್ಟಾಗಿ ಉಲ್ಲಾಸ, ಉತ್ಸಾಹದೊಂದಿಗೆ, ಸುಖ ಸಂತೋಷದಿoದ ಜೀವನ ನಡೆಸಬೇಕೆಂಬುದು ಹಬ್ಬಗಳ ಆಚರಣೆಯ ಹಿನ್ನೆಲೆಯಾಗಿದೆ.
ಇಂದಿನ ದಿನಗಳಲ್ಲಿ ಜೀವನ ಶೈಲಿ ಎಷ್ಟು ಬದಲಾವಣೆಯಾಗಿದೆಯೆಂದರೆ ಹಬ್ಬಗಳನ್ನೂ ಮನೆಯವರೊಂದಿಗೆ, ಬಂಧುಗಳೊoದಿಗೆ ಸರಿಯಾದ ರೀತಿಯಲ್ಲಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡ, ರಜೆ ದೊರಕದಿರುವುದು, ಉದ್ಯೋಗ ನಿಮಿತ್ತ ದೂರದ ಊರಿನಲ್ಲಿರುವುದು ಹೀಗೆ ಕಾರಣಗಳು ಹಲವಾರು. ಇನ್ನು ಕೆಲವರಿಗಂತೂ ರಜೆ ಸಿಕ್ಕರೆ ಸಾಕು ‘ನಿದ್ರೆ ಮಾಡೋಣ’ ಎಂಬ ಜಡತ್ವ, ಉದಾಸೀನತೆಯಿಂದ ಹಬ್ಬವನ್ನು ಆಚರಿಸುವ ಒಲವು ಕಡಿಮೆಯಾಗಿದೆ. ಈಗೀಗ ಹಬ್ಬಗಳನ್ನು ಯಾವ ರೀತಿ ಆಚರಿಸಬೇಕೆಂಬ ಅರಿವು ಕಡಿಮೆಯಾಗುತ್ತಿದೆ. ಇವೆಲ್ಲದರಿಂದ ಕೆಲವು ಹಬ್ಬಗಳ ಆಚರಣೆಯೇ ಇಲ್ಲವಾಗುತ್ತಿದೆ.
ನಗರ – ಪಟ್ಟಣಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿ, ದೇವರಿಗೆ ಪೂಜೆ ಮಾಡಿ, ಪಟಾಕಿ ಹೊಡೆದು, ಅಂಗಡಿಯಿoದ ಕೊಂಡು ತಂದ ಸಿಹಿ ತಿಂದು, ಊಟ ಮಾಡಿದರೆ ದೀಪಾವಳಿ ಮುಗಿಯಿತು. ಯುಗಾದಿಗೆ ಬೇವು-ಬೆಲ್ಲ ಹಂಚಿ ಸಿಹಿಯೂಟ ಮಾಡಿದರೆ, ಮಕರ ಸಂಕ್ರಾoತಿಗೆ ಎಳ್ಳು ಬೆಲ್ಲ ಹಂಚಿದರೆ ಹಬ್ಬಗಳು ಆಚರಿಸಲ್ಪಟ್ಟಂತೆ ಎಂಬ ಭಾವನೆ ಹೆಚ್ಚಾಗುತ್ತಿದೆ. ಸಾಂಕೇತಿಕ ಎಂಬoತೆ ಹಬ್ಬಗಳು ಆಚರಿಸಲ್ಪಡುವುದರ ಜೊತೆಗೆ ಹಬ್ಬಕ್ಕಾಗಿ ರಜೆ ದೊರೆಯುವುದರಿಂದ ತಡವಾಗಿ ಎದ್ದು, ಮಧ್ಯಾಹ್ನ ಹೊತ್ತಿಗೆ ತಿಂಡಿ ಮಾಡಿ, ಸಂಜೆಯಾಗುತ್ತಲೇ ಪಾರ್ಟಿ, ಔತಣ ಕೂಟದಲ್ಲಿ ಭಾಗಿಯಾಗಿ, ಎಲ್ಲಾದರೂ ಸುತ್ತಾಡಿ, ಸಿನೆಮಾ ನೋಡಿ ಬರುವ ಮೂಲಕ ಹಬ್ಬದ ದಿನಗಳನ್ನು ಸಂತೋಷವಾಗಿ ಕಳೆಯುವವರಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳು ಇನ್ನೂ ತನ್ನ ಸೊಗಡನ್ನು ಉಳಿಸಿಕೊಂಡಿವೆ. ಊರಿಗೆ ಊರೇ ಒಂದುಗೂಡಿ ಹಬ್ಬವನ್ನಾಚರಿಸಲಾಗುತ್ತದೆ. ಹಬ್ಬಕ್ಕೆ ಕೆಲ ದಿನ ಇರುವಾಗಲೇ ಸಾಕಷ್ಟು ಪೂರ್ವ ತಯಾರಿಗಳು ನಡೆಯುತ್ತವೆ. ಅಡುಗೆ ಸಾಮಗ್ರಿ, ಪೂಜಾ ಸಾಮಗ್ರಿ, ಮನೆ ಸ್ವಚ್ಛಗೊಳಿಸುವುದು, ಸುಣ್ಣ ಬಣ್ಣ ಬಳಿಯುವುದು ಹೀಗೆ ಒಂದಲ್ಲ ಒಂದು ಕೆಲಸಗಳು ನಡೆಯುತ್ತಿರುತ್ತವೆ. ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ, ತಳಿರು ತೋರಣಗಳಿಂದ ಶೃಂಗಾರ ಮಾಡಿ, ರಂಗೋಲಿ ಬಿಡಿಸಿ, ಪೂಜೆಗಳನ್ನು ಮಾಡುವ ಮೂಲಕ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯ ಹಿರಿಯರು ಮುಂದೆ ನಿಂತು ಮಕ್ಕಳಿಗೆ, ಮೊಮ್ಮಕ್ಕಳಿಗೆ ಧಾರ್ಮಿಕ ವಿಧಿ – ವಿಧಾನಗಳನ್ನು ತಿಳಿ ಹೇಳುತ್ತಾರೆ. ಅವರ ಕೈಯಿಂದಲೇ ಕೆಲಸ ಕಾರ್ಯಗಳನ್ನು ಮಾಡಿಸುವ ಮೂಲಕ ಹಬ್ಬದ ಆಚರಣೆಯ ಬಗ್ಗೆ ಅರಿವು ಮೂಡಿಸುತ್ತಾರೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟು ಸೇರಿ ಕೆಲಸಗಳನ್ನೆಲ್ಲಾ ಹಂಚಿಕೊoಡು ಧಾರ್ಮಿಕ ಆಚರಣೆಯ ಬಳಿಕ ಸಿಹಿಯೂಟ ಉಂಡು ಖುಷಿ ಪಡುತ್ತಾರೆ. ದೂರದ ಊರಿನಲ್ಲಿರುವ ಮಗ-ಸೊಸೆ, ಮೊಮ್ಮಕ್ಕಳು, ಮಗಳು, ಅಳಿಯ, ಬಂಧು ಮಿತ್ರರು ಕೂಡ ಹಬ್ಬದ ನೆಪದಲ್ಲಿ ಒಟ್ಟಾಗುತ್ತಾರೆ.
ಹಬ್ಬಗಳು ಕೇವಲ ಸಂಭ್ರಮ, ಸಡಗರದಿಂದ ಮಾತ್ರ ಕೂಡಿರದೆ ಧಾರ್ಮಿಕ ಹಿನ್ನೆಲೆಯನ್ನು ಒಳಗೊಂಡಿವೆ. ಈ ದಿನಗಳಲ್ಲಿ ಹಿರಿಯರನ್ನು ಗೌರವಿಸುವ ಜೊತೆಗೆ ದೇವಾಲಯಕ್ಕೆ ತೆರಳುವುದು, ಪ್ರಾರ್ಥನೆ, ಉಪವಾಸ ವೃತಗಳನ್ನು ಕೈಗೊಳ್ಳಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಸಂಗೀತ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಬ್ಬಗಳು ಅಂತರoಗ ಶುದ್ಧಿ ಜೊತೆಗೆ ದೈಹಿಕ ಚಟುವಟಿಕೆಗಳ ಮೂಲಕ ಬಹಿರಂಗ ಶುದ್ಧಿಯನ್ನು ಪ್ರತಿಪಾದಿಸುತ್ತದೆ. ಸಾಮಾಜಿಕ ಮತ್ತು ಸಾಂಸ್ಕöÈತಿಕ ಮಹತ್ವವನ್ನು ಒಳಗೊಂಡಿವೆ. ಇಂದು ಹಬ್ಬಗಳ ಜೊತೆ ಅಲ್ಲಿಯ ಜಾನಪದೀಯ ಕಲೆಗಳೂ ಉಳಿದುಕೊಂಡು ಬಂದಿವೆ. ಅವುಗಳನ್ನು ಅರ್ಥೈಸಿಕೊಂಡು, ಮಹತ್ವವನ್ನು ಅರಿತುಕೊಂಡು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ.
ನಮ್ಮ ದೇಶದಲ್ಲಿ ಹಲವು ಬಗೆಯ ಧರ್ಮ, ಜಾತಿ, ಮತ, ನಡೆ – ನುಡಿಗಳಿವೆ. ಹಾಗಾಗಿ ಹಬ್ಬಗಳ ಆಚರಣೆಯಲ್ಲೂ ಸಾಕಷ್ಟು ವೈವಿಧ್ಯವನ್ನು ಕಾಣಬಹುದಾಗಿದೆ. ನಮ್ಮ ನಾಡಿನಲ್ಲಿ ಆಚರಿಸಲ್ಪಡುವ ಮಕರ ಸಂಕ್ರಾoತಿ, ಸುಗ್ಗಿ, ಹೋಳಿ ಇತ್ಯಾದಿ ಹಬ್ಬಗಳು ಜಾನಪದ ಮತ್ತು ಕೃಷಿ ಹಿನ್ನೆಲೆಯನ್ನು ಹೊಂದಿವೆ. ಸಂಕ್ರಾoತಿ, ಯುಗಾದಿ, ದೀಪಾವಳಿ ಇತ್ಯಾದಿ ಹಬ್ಬಗಳು ಕೃಷಿ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಹಬ್ಬಗಳಾಗಿವೆ.
‘ದಸರಾ’ವನ್ನು ನಾಡಹಬ್ಬವೆಂದು ಆಚರಿಸಲಾಗುತ್ತದೆ. ನವರಾತ್ರಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ರಾಮ ನವಮಿ ಹಬ್ಬಗಳು ಪೌರಾಣಿಕ ಹಿನ್ನೆಲೆ ಹೊಂದಿದ್ದು ಧಾರ್ಮಿಕತೆಯನ್ನು ಬಿಂಬಿಸುತ್ತವೆ. ಮಹಾವೀರ ಜಯಂತಿ, ಬುದ್ಧ ಜಯಂತಿ, ಕ್ರಿಸ್ಮಸ್‌ಗಳನ್ನು ಮಹಾ ಪುರುಷರ ಜನ್ಮದಿನಾಚರಣೆಯ ಪ್ರಯುಕ್ತವಾಗಿ ಆಚರಿಸಲ್ಪಟ್ಟರೆ, ಸ್ವಾತಂತ್ರö್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಇವೆಲ್ಲವನ್ನು ಸಾರ್ವತ್ರಿಕವಾಗಿ ನಮ್ಮ ನಾಡಿನ ಅಭಿಮಾನ, ಗೌರವoದ ಪ್ರತೀಕವಾಗಿ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ.
ನಾವಿಂದು ಎಲ್ಲಾ ರೀತಿಯಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಜೀವನಾಡಿಯಾಗಿರುವ ಹಬ್ಬ ಹರಿದಿನ, ಪರಂಪರೆಗಳು ತೆರೆಮರೆಗೆ ಸರಿಯಬಾರದು. ಅವುಗಳ ಆಚರಣೆಯ ಮಹತ್ವವನ್ನು ತಿಳಿಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಅವುಗಳ ದಾಖಲೀಕರಣ, ಅಧ್ಯಯನ, ಸಂಶೋಧನೆಗಳು ನಡೆದರೆ ಉತ್ತಮ. ಇಲ್ಲವಾದಲ್ಲಿ ಹಬ್ಬಗಳು ಆಚರಣೆಗೆ ಮಾತ್ರ ಸೀಮಿತವಾಗಿ ಅವುಗಳ ಮೂಲ ಆಶಯವೇ ಮರೆತು ಹೋಗಬಹುದು.