ಬೇಂದ್ರೆಯವರ ನಾಕುತಂತಿಗೆ 60ರ ಸಂಭ್ರಮ

ಕಾವ್ಯ, ಕವನಗಳೆಂದರೇನೆ ಹಾಗೇ, ಸುಲಭವಾಗಿ ಅರ್ಥವಾಗುವುದಿಲ್ಲ. ಅವುಗಳನ್ನು ಅರ್ಥೈಸಿಕೊಳ್ಳುವ ಓದುಗನಿಗೆ ಮಾತ್ರ ಆನಂದ ದೊರೆಯುವುದು. ಅನೇಕ ವೇಳೆ ಅರ್ಥ ತಿಳಿಯದೆಯೇ ಹಾಡಿನ ಲಯಕ್ಕೆ, ನಾದಕ್ಕೆ, ಪ್ರಾಸಕ್ಕೆ ಮನಸೋತಿರುತ್ತೇವೆ. ಅವುಗಳ ಸಾಲಿನಲ್ಲಿ ಬೇಂದ್ರೆಯವರ ನಾಕುತಂತಿಯು ಒಂದು. ಬೇಂದ್ರೆಯವರ ನಾಕುತಂತಿಗೆ ಇದೀಗ ಅರುವತ್ತು ತುಂಬಿದೆ. ಆಧ್ಯಾತ್ಮಿಕ ನೆಲೆಯ ಈ ಕಾವ್ಯದ ಒಡಲು ಬ್ರಹ್ಮಾಂಡ ಸ್ವರೂಪಿಯಾದದ್ದು. ಪ್ರಾಸ ಪದಗಳಿಂದ ತುಂಬಿದ ಈ ಕವಿತೆಯನ್ನು ಒಂದೇಟಿಗೆ ಅರ್ಥೈಸಿಕೊಳ್ಳುವುದು ಕಷ್ಟ. ಕಠಿಣವಾದ ಕಾವ್ಯ ಆಗಿರುವ ಕಾರಣಕ್ಕೆ ಅದರ ಕುರಿತಾಗಿ ಬರೆಯುವ ವಿಮರ್ಶೆ ವಿವರಣೆಗಳೂ ಕಠಿಣವಾಗಿಯೇ ಇರುತ್ತದೆ.
ನಾಕುತಂತಿ ಮೊದಲು ಮುದ್ರಣಗೊಂಡಿದ್ದು 1964ರಲ್ಲಿ. ಈ ಕೃತಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಈ ಕವನ ಸಂಕಲನದಲ್ಲಿ ಅನೇಕ ಕವಿತೆಗಳಿವೆ. ಎಲ್ಲಾ ಕವಿತೆಗಳಿಗಿಂತ ಹೆಚ್ಚು ಗಮನಸೆಳೆದು ವಿಶ್ವವ್ಯಾಪಿಯಾಗಿದ್ದು ನಾಕುತಂತಿ. ಈ ಕಾವ್ಯ ಮತ್ತು ಕೃತಿಯ ಬಗ್ಗೆ ಬಂದಿರುವ ವಿಮರ್ಶೆಗಳಿಗೆ ಲೆಕ್ಕವಿಲ್ಲ. ನಾಕುತಂತಿಯ ಮೂಲ ದ್ರವ್ಯವೆಂದು ನಾವು ಗುರುತಿಸಬೇಕಾಗಿರುವುದು ನಾಕುತಂತಿಯ ವೀಣೆ. ಆಧ್ಯಾತ್ಮ, ಅನುಭಾವ, ತತ್ವಶಾಸ್ತç ಇವೆಲ್ಲವುಗಳನ್ನು ಒಂದು ಸಂಗೀತ ಸಾಧನವಾದ ವೀಣೆಯ ನಾಲ್ಕು ತಂತಿಯ ಮೂಲಕ ನುಡಿಸಿರುವವರು ಬೇಂದ್ರೆ. ನಾನು, ನೀನು, ಆನು, ತಾನು, ಅದ್ವೆöತ ಸಿದ್ಧಾಂತದ ಪ್ರಕಾರ ಇವು ಆತ್ಮ ಸಾಕ್ಷಾತ್ಕಾರ ಹಾದಿಯಲ್ಲಿ ನಾಲ್ಕು ಮುಖ್ಯ ಹಂತಗಳು ಎನ್ನುವುದನ್ನು ಗಮನಿಸಬೇಕು. ಈ ಕಾವ್ಯದ ಕುರಿತು ಅನೇಕರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ‘ಬೆಂದು ಬೇಂದ್ರೆಯಾದರು’ ಎನ್ನುತ್ತಾರೆ. ಕಾವ್ಯವನ್ನು ಅರಿಯುವ ಮೊದಲು ಕೊಂಚ ಬೇಂದ್ರೆಯವರನ್ನು ಅರಿತರೆ ಕಾವ್ಯದ ಚಿಪ್ಪೊಡೆಯಲು ಅನುಕೂಲವಾದೀತು. ಅವರ ಅಂತರಂಗ ಪಕ್ವಗೊಂಡಿದ್ದರಿಂದಲೇ ಕಾವ್ಯಕ್ಕೆ ನಾದ, ಭಾವ ಅಮೋಘವಾಗಿ ಕೂಡಿತು. ನಾಕುತಂತಿಯನ್ನು ಜನಪದದ ಒಗಟಿನಂತೆ ನೋಡಿದಾಗ ಬಲು ಕಠಿಣ. ಅದನ್ನು ಜಾಣ್ಮೆಯಿಂದ ಬಿಡಿಸಿದಾಗ ವಾವ್ ಎನಿಸುತ್ತದೆ. ಅದರ ಅರ್ಥಸ್ವಾರಸ್ಯ ತಿಳಿದಾಗ ಆಗುವ ರಸಾನುಭವವೇ ಆನಂದ.
ನಾಕುತಂತಿಯನ್ನು ಮೈಸೂರು ಅನಂತಸ್ವಾಮಿಯವರು ಸಂಗೀತ ಸಂಯೋಜಿಸಿ ತಾವೇ ಹಾಡಿದರು. ಮುಂದೆ ಹಂಸಲೇಖ ಅವರು ಧಾರವಾಹಿಯೊಂದಕ್ಕೆ ಆಧುನಿಕ ಸಂಗೀತ ಶೈಲಿಯ ಮೂಲಕ ರಾಗ ಸಂಯೋಜಿಸುತ್ತಾರೆ. ಇಲ್ಲಿ ಸಂಗೀತದ ಸ್ವಾರಸ್ಯ ಅಧಿಕವಾಗಿದೆ. ಆದ್ದರಿಂದ ಅರ್ಥದ ಬಗೆಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈ ಕಾರಣಕ್ಕಾಗಿಯೇ ಅನೇಕರು ಬೇಂದ್ರೆಯವರ ಕಾವ್ಯವನ್ನು ಆಲಿಸಿ ಆನಂದಪಟ್ಟುಕೊಳ್ಳುವುದರಲ್ಲೇ ತೃಪ್ತರಾಗುತ್ತಾರೆ.
ಬೇಂದ್ರೆ, ಕುಮಾರವ್ಯಾಸರಂತೆ ತನ್ನನ್ನು ಭಾವಿಸಿಕೊಂಡವರು. ‘ಕುಮಾರವ್ಯಾಸ ವೀರನಾರಾಯಣನೇ ಕವಿ. ನಾನು ಲಿಪಿಕಾರ’ ಎನ್ನುತ್ತಾರೆ. ಬೇಂದ್ರೆಯವರು ಕಾವ್ಯ ರಚನೆ ಮಾಡುವಾತ ಅಂಬಿಕಾತನಯದತ್ತ. ‘ಲೌಕಿಕ ಜಗತ್ತಿನಲ್ಲಿ ವ್ಯವಹರಿಸುವವನು ಬೇಂದ್ರೆ ಮಾಸ್ತರ’ ಎನ್ನುತ್ತಾರೆ. ಅವರು ಕೇವಲ ಪೂರ್ವರ ಪ್ರಭಾವಕ್ಕೆ ಒಳಗಾದವರಲ್ಲ. ದಿವಾಣಜಿಯವರ ಮಾತನ್ನು ಗಮನಿಸಿದರೆ ಓದುಗರಿಗೆ ಅದರ ಅರಿವಾದೀತು. ‘ಬೇಂದ್ರೆ ಕನ್ನಡ ಸಂಸ್ಕೃತಿಯನ್ನು ಅರಗಿಸಿಕೊಂಡರು. ಭಾರತೀಯತೆಯನ್ನು ಮೈಗೂಡಿಸಿಕೊಂಡರು. ಅವರ ಕನ್ನಡತೆ ಸಂಕುಚಿತವಲ್ಲ. ಭಾರತೀಯತೆ ಅಂಧಶ್ರದ್ಧೆಯಲ್ಲ. ಹಲವರು ತಿಳಿದುಕೊಂಡಂತೆ ವೈದಿಕ ಒಂದೇ ಅಲ್ಲ. ‘ಒಮ್ಮುಖವಿದು ಹಲಮೊಗದೊಗಲು ತೋರುವ ತರತಮತೆ’ ಇದು ಹುಸಿ ಸಮನ್ವಯವಲ್ಲ. ಅವರು ಅಲ್ಲಮ, ಮಧ್ವ, ಶಂಕರ, ಕನಕ, ಪುರಂದರ, ಬಸವ, ಅರವಿಂದ, ರವೀಂದ್ರ, ಮೆಟರ್ಲಿಂಕ್, ಎಮರ್ಸನ್ ಹೀಗೆ ಹಲವರ ಪ್ರಭಾವದಲ್ಲಿ ಮಾಗಿದ್ದಾರೆ. ಇವರೆಲ್ಲರನ್ನು ತಮ್ಮ ಕಾವ್ಯ ಕೃತಿಗಳಲ್ಲಿ ಅವರು ಹೊಸ ಅನ್ವಯದಲ್ಲಿ ನೋಡುತ್ತಾರೆ. ಅವರು ಪ್ರತಿಮೆಗಳಾಗಿ ಬರುತ್ತಾರೆ. ಇದಲ್ಲದೇ ಅವರೇ ಹೇಳುವಂತೆ ಅವರಿಗೆ ಲಕ್ಷ್ಮೀಶ ಅತಿ ಪ್ರೀಯನಾದ ಕವಿ. ಇನ್ನು ಜೈನ ಕವಿ ರತ್ನಾಕರವರ್ಣಿಯೂ ಪ್ರಿಯನೇ ಆಗಿದ್ದಾನೆ. ವಚನಕಾರರೂ ಬೇಂದ್ರೆ ಮೇಲೆ ವಿಶೇಷ ಪ್ರಭಾವ ಬೀರಿದ್ದಾರೆ. ಅಮೂರರು ಹೇಳುವಂತೆ ಬೇಂದ್ರೆಯವರ ನಾಕುತಂತಿಯ ದರ್ಶನದ ಮೂಲ ಆತ್ಮ ಚತುಷ್ಟಾತ್ ಎಂಬ ಶೃತಿಯಲ್ಲಿಯೇ ಇದೆ. ಅಲ್ಲಮನ ವಚನವೊಂದರಿಂದಲೂ ಅವರು ಪ್ರಭಾವಿತರಾದಂತಿದೆ. ‘ನಾನೆಂಬುದು ಪ್ರಮಾಣು, ನೀನೆಂಬುದು ಪ್ರಮಾಣು’ ಎಂಬುದೇ ಅಮೂರರು ಹೇಳುವ ಆ ವಚನ. ಈ ವಚನ ಮತ್ತು ನಾಕುತಂತಿ ಕಾವ್ಯದಲ್ಲಿ ಅನೇಕ ಸಾಮ್ಯತೆಯನ್ನು ನಾವು ಗುರುತಿಸಲು ಸಾಧ್ಯವಾಗುತ್ತದೆ.
ನೇರವಾಗಿ ಕಾವ್ಯವನ್ನೇ ಬಿಡಿಸಿದರೆ ಲೌಕಿಕ, ಅಲೌಕಿಕ ಉದಾಹರಣೆಯ ಮೂಲಕ ನೋಡಬೇಕಾಗುತ್ತದೆ. ಗೋವು (ಆವು) ಈಯುವುದು ನಾನು-ನೀನು ಜೊತೆಯಾಗಿ ಸೃಷ್ಟಿಸಿದ ಆನುವನ್ನು. ಆನು ಎಂದರೆ ಸೃಷ್ಟಿ, ತಾನು ಎಂದರೆ ಸಂತೋಷಕ್ಕಾಗಿ. ಇಲ್ಲಿ ಬೇರೆ ಕಲ್ಪನೆಗೂ ಅವಕಾಶವಿದೆ. ನಾನು-ನೀನು ಎಂದರೆ ಪುರುಷ-ಸ್ತ್ರೀ, ಗಂಡ-ಹೆಂಡತಿ ಎಂದೂ ಭಾವಿಸಬಹುದು. ಇಲ್ಲಿ ಸರ್ವನಾಮಗಳ ಬಳಕೆಯಾಗಿದೆ. ಬೇಂದ್ರೆ ಕಾವ್ಯದಲ್ಲಿ ಇದು ಮೊದಲಲ್ಲ. ಅವರು ‘ಶಿವದೃಷ್ಟಿ’ ಕವಿತೆಯಲ್ಲಿ ಶಿವ-ಗಿರಿಜೆಯರನ್ನು ‘ಅವನು-ಅವಳು’ ಎಂದು ಬಳಸಿದ್ದಾರೆ. ಇಲ್ಲಿ ಒಂದು ಚರಣವನ್ನು ಮಾತ್ರ ಉದಾಹರಣೆಯಾಗಿ ಚರ್ಚಿಸಲಾಗಿದೆ. ಈ ಕಾವ್ಯದಲ್ಲಿ ನಾಲ್ಕು ಭಾಗಗಳಿವೆ. ಲೌಕಿಕ-ಅಲೌಕಿಕ ಹಿನ್ನೆಲೆಯಿಂದ ಸೃಷ್ಟಿಗೊಂಡ ಈ ಕಾವ್ಯ ಕನ್ನಡದ ವಿಶೇಷವಾದ ಕಾವ್ಯವಾಗಿದೆ. ಇದರ ಅರ್ಥ ಸ್ವಾರಸ್ಯವನ್ನು ತಿಳಿದು ಆಲಿಸಿದರೆ ಸಹೃದಯನಿಗೆ ಪರಮಾನಂದವಂತೂ ಸತ್ಯ.

Facebook
Twitter
WhatsApp
LinkedIn
Telegram