ಬ್ಯಾಂಕ್‌ಗಳಿಗೆ ದೇಶದಲ್ಲೆ ಅತಿದೊಡ್ಡ ಬಿ.ಸಿ.ಯಾಗಿ ಯೋಜನೆ

ಹಿಂದಿನ ಸಂಚಿಕೆಯಲ್ಲಿ ನಡೆದಾಡುವ ದೇವರು ಲಕ್ಷಾಂತರ ಬಡವರ ಬದುಕಿಗಾಗಿ ಬ್ಯಾಂಕ್‌ಗಳಿಗೆ ಭದ್ರತೆಯಾಗಿ ನಿಲ್ಲುವಂತಹ ಮಹಾ ತ್ಯಾಗವನ್ನು ಮಾಡಿದ್ದಾರೆಂದು ವಿವರಿಸಿದ್ದು ಅದು ಕೇವಲ ಬಾಯಿ ಮಾತಾಗಿರಲಿಲ್ಲ. ಬದಲಾಗಿ ಅತ್ಯುನ್ನತ ಸಾಂಸ್ಥಿಕ ವ್ಯವಸ್ಥೆಯಾಗಿತ್ತು. ತನ್ನ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಕಟ್ಟಿ ಬೆಳೆಸಿ, ಈ ಒಂದು ಗುರುತರವಾದ ಜವಾಬ್ದಾರಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲು ವ್ಯವಸ್ಥೆಯನ್ನು ರೂಪಿಸಿದರು. ಒಂದು ‘ಚಾರಿಟೇಬಲ್ ಟ್ರಸ್ಟ್’ ಆಗಿ ಬ್ಯಾಂಕ್‌ಗಳೊoದಿಗೆ ಸಾಂಸ್ಥಿಕ ನೆಲೆಯಲ್ಲಿ ಬ್ಯಾಂಕಿನ ಪ್ರತಿನಿಧಿಯಾಗಿ ಸೇವೆ ಸಲ್ಲಿಸುವ ಒಂದು ಮಹತ್ತರ ಒಪ್ಪಂದಕ್ಕೆ ತನ್ನನ್ನು ಸಂಪೂರ್ಣವಾಗಿ ಅಣಿಗೊಳಿಸಿದರು. ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ದ ಸುತ್ತೋಲೆಯ ಅನುಮತಿಯಂತೆ ಬ್ಯಾಂಕ್‌ಗಳಿಗೆ ಸ್ವಸಹಾಯ ಸಂಘಗಳ ಆರ್ಥಿಕ ಜೋಡಣೆ ಉದ್ದೇಶಕ್ಕೆ ಬಿ.ಸಿ. ಸೇವೆಗಳನ್ನು ಸಲ್ಲಿಸಲು ಒಂದು ಒಡಂಬಡಿಕೆ (MOU) ಮಾಡಿಕೊಂಡರು. ಆ ಒಡಂಬಡಿಕೆಯ ಪ್ರಕಾರ ಬ್ಯಾಂಕ್‌ಗಳು ನೀಡಿದ ನಿರ್ದೇಶನದಂತೆ ಬ್ಯಾಂಕಿನ ಆರ್ಥಿಕ ಸೌಲಭ್ಯವನ್ನು ಯೋಜನೆಯು ನೀಡುವುದಾಗಿತ್ತು. ಆ ಒಪ್ಪಂದದ ಪ್ರಕಾರ ಸೂಕ್ತ ವ್ಯಕ್ತಿಗಳನ್ನು ಸೇರಿಸಿ ಸ್ವಸಹಾಯ ಸಂಘಗಳನ್ನು ರಚಿಸುವುದು, ಪ್ರಾಥಮಿಕ ತರಬೇತಿಗಳನ್ನು ನೀಡುವುದು, ಆರ್ಥಿಕ ಶಿಸ್ತನ್ನು ಮೂಡಿಸುವುದು, ಸಂಘಗಳ ಮೌಲ್ಯಮಾಪನ ಮಾಡುವುದು, ಉತ್ತಮ ಮೌಲ್ಯಮಾಪನ ಪಡೆದ ಸಂಘಗಳನ್ನು ಬ್ಯಾಂಕಿನ ಆರ್ಥಿಕ ಸೌಲಭ್ಯಕ್ಕಾಗಿ ಬ್ಯಾಂಕಿನೊoದಿಗೆ ಜೋಡಣೆ ಮಾಡುವುದು, ವಾರದ ಸಭೆ ಮುಂತಾದ ಸಂಘದ ಚಟುವಟಿಕೆಗಳನ್ನು ನಿರ್ವಹಣೆ ಮಾಡುವುದು, ಅರ್ಹ ಸದಸ್ಯರಿಗೆ ಸಾಲದ ಬೇಡಿಕೆಗೆ ಅನುಗುಣವಾಗಿ ಸಂಘಕ್ಕೆ ಬ್ಯಾಂಕಿನಿoದ ಸಾಲವನ್ನು ದೊರಕಿಸಿಕೊಡುವುದು, ಆ ಸಾಲವು ಬೇಡಿಕೆ ನೀಡಿದ ಸದಸ್ಯರೇ ಬಳಸಿಕೊಳ್ಳುವಂತೆ ನೋಡಿಕೊಳ್ಳುವುದು, ಸಮರ್ಪಕವಾಗಿ ಮರುಪಾವತಿಯನ್ನು ಸಂಗ್ರಹಿಸಿ ಬ್ಯಾಂಕಿಗೆ ಜಮೆ ಮಾಡುವುದು, ಉಳಿತಾಯವನ್ನು ಜಮೆ ಮಾಡುವುದು, ಸೂಕ್ತ ತಂತ್ರಜ್ಞಾನಗಳನ್ನು ಆಗಿಂದಾಗ್ಗೆ ಒದಗಿಸುವುದು, ಸಂಘದ ಸದಸ್ಯರ ಎಲ್ಲ ಲೆಕ್ಕಾಚಾರಗಳನ್ನು ದಾಖಲು ಮಾಡುವುದು, ಸಂಘಗಳ ಸಾಮರ್ಥ್ಯಾಭಿವೃದ್ಧಿ ಮಾಡುವುದು, ಸಂಘದಿoದ ಕಾಲಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ಸಂಗ್ರಹಿಸಿ ಬ್ಯಾಂಕಿಗೆ ನೀಡುವುದು, ಬ್ಯಾಂಕಿನ ವಿಚಕ್ಷಣಾಧಿಕಾರಿಗಳಿಂದ ಸಂಘಗಳ ಹಾಗೂ ಸಂಸ್ಥೆಯ ವಿಚಕ್ಷಣೆಗೆ ಎಲ್ಲ ಅವಕಾಶಗಳನ್ನು ಮಾಡಿಕೊಡುವುದು ಹೀಗೆ ಸಂಪೂರ್ಣವಾಗಿ ಸ್ವಸಹಾಯ ಸಂಘಗಳ ನಿರ್ವಹಣೆಯ ಜವಾಬ್ದಾರಿಯನ್ನು ಬ್ಯಾಂಕ್‌ಗಳು ನಿರ್ದೇಶಿಸಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಡೆಸುತ್ತಿದೆ.
ಹೀಗೆ ಯೋಜನೆಯಿಂದ ರಚನೆಗೊಂಡ ಸ್ವಸಹಾಯ ಸಂಘಗಳು ಯೋಜನೆಯ ಮೂಲಕ ಸುಲಭವಾಗಿ ಬ್ಯಾಂಕಿನ ನಿಯಮಾನುಸಾರದಂತೆಯೇ ಸಂಬoಧಪಟ್ಟ ಬ್ಯಾಂಕ್‌ಗಳಿಗೆ ಜೋಡಣೆಯಾಗಿ ತಾವಿರುವ ಸ್ಥಳದಿಂದಲೇ ಬ್ಯಾಂಕಿನಿoದ ನೇರ ಸಾಲ ಸೌಲಭ್ಯ ಹಾಗೂ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಸುಮಾರು 12,500ಕ್ಕೂ ಮಿಕ್ಕಿದ ‘ಗ್ರಾಹಕ ಸೇವಾ ಕೇಂದ್ರ’ಗಳನ್ನು ಯೋಜನೆಯು ರಾಜ್ಯದಾದ್ಯಂತ ಹಳ್ಳಿಹಳ್ಳಿಗಳಲ್ಲಿ ಸ್ಥಾಪಿಸಿ, ಉತ್ತಮ ವ್ಯವಸ್ಥೆಯೊಂದಿಗೆ ಸ್ವಸಹಾಯ ಸಂಘಗಳಿಗೆ ಬ್ಯಾಂಕಿನ ಸೇವೆಗಳನ್ನು ಸಲ್ಲಿಸುತ್ತಿದೆ. ಇದು ಒಂದು ರೀತಿಯಲ್ಲಿ ಬ್ಯಾಂಕಿನ ಬಿ.ಸಿ. ಸೇವಾ ಕೇಂದ್ರವೂ ಆಗಿದೆ. ಬ್ಯಾಂಕಿಗೆ ಓಡಾಟ ನಡೆಸಿ, ಒಂದು ದಿನದ ತಮ್ಮ ಕೆಲಸವನ್ನು ಹಾಳುಮಾಡಿಕೊಂಡು, ತಮ್ಮ ದೈನಂದಿನ ಆದಾಯವನ್ನು ನಷ್ಟ ಮಾಡಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಅವರಿರುವ ಗ್ರಾಮಗಳಲ್ಲಿ ಅಥವಾ ಹಳ್ಳಿಗಳಲ್ಲಿ ಬ್ಯಾಂಕಿನ ಅಧಿಕೃತ ಬಿ.ಸಿ. ಸೇವಾ ಕೇಂದ್ರಗಳು ಸೇವೆ ಸಲ್ಲಿಸುತ್ತಿರುವುದು ಬಡವರಿಗೆ ಮತ್ತೊಂದು ವರದಾನವಾಗಿದೆ. ಈ ಕೇಂದ್ರಗಳು ಬೆಳಗ್ಗೆ 7 ಗಂಟೆಯಿoದಲೇ ಕೆಲಸ ನಿರ್ವಹಿಸುವುದರಿಂದ ಸಂಘದ ಉಳಿತಾಯ, ಮರುಪಾವತಿ ಮತ್ತಿತರ ಯಾವುದೇ ಕೆಲಸಗಳನ್ನು ಬೆಳಗ್ಗೆ ಬೇಗ ಕೇಂದ್ರದಲ್ಲಿ ಮುಗಿಸಿ ತಮ್ಮ ದೈನಂದಿನ ಕೆಲಸಗಳಿಗೆ ತೆರಳಬಹುದಾಗಿದೆ. ಇಲ್ಲಿ ಸಿ.ಎಸ್.ಸಿ. ಸೇವೆಗಳೂ ಲಭ್ಯವಿವೆ. ಉತ್ತಮ ತಂತ್ರಜ್ಞಾನದ ವ್ಯವಸ್ಥೆಯಿಂದಾಗಿ ಸ್ವಸಹಾಯ ಸಂಘಗಳು ನಡೆಸುವ ವ್ಯವಹಾರಗಳಿಗೆ ಕಂಪ್ಯೂಟರೀಕೃತ ರಶೀದಿ ಸಿಗುವುದಲ್ಲದೆ, ಮಾಸಿಕ ವರದಿ, ಮರುಪಾವತಿ ಚೀಟಿ ಮುಂತಾದ ಅನೇಕ ವರದಿಗಳ ಸಹಾಯದಿಂದ ಸದಸ್ಯರು ತಮ್ಮ ವ್ಯವಹಾರದ ಸಂಪೂರ್ಣ ವಿವರಗಳನ್ನು ಸರಳವಾಗಿ ತಿಳಿದುಕೊಳ್ಳಬಹುದು. ನಿರ್ಣಯ ಪುಸ್ತಕದೊಂದಿಗೆ ಪರಿಶೀಲನೆ ಮಾಡಿ ಸಂಘದ ವ್ಯವಹಾರಗಳನ್ನು ಅತ್ಯಂತ ಪಾರದರ್ಶಕವಾಗಿ ಕಾಪಾಡಿಕೊಳ್ಳಬಹುದು. ವಾರದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳು, ವ್ಯವಹಾರಗಳು, ರಶೀದಿಗಳು ಮತ್ತು ಯೋಜನೆಯ ಇತರ ಎಲ್ಲಾ ವಿಚಾರಗಳು ಚರ್ಚೆಗೊಳಪಟ್ಟು ಸಂಘದ ಉತ್ತಮ ವ್ಯವಹಾರದೊಂದಿಗೆ, ಸದಸ್ಯರ ಅರಿವಿನ ಮಟ್ಟವನ್ನೂ ಕೂಡಾ ಉನ್ನತೀಕರಿಸಿಕೊಳ್ಳಬಹುದು. ಸಂಘಗಳನ್ನು ನಿರಂತರವಾಗಿ ಮಧ್ಯಂತರ ಲೆಕ್ಕಪರಿಶೋಧನೆಗೆ ಹಾಗೂ ವಾರ್ಷಿಕ ಲೆಕ್ಕಪರಿಶೋಧನೆಗೂ ಒಳಪಡಿಸಲಾಗುವುದು. ಕಂಪ್ಯೂಟರೀಕೃತ ವರದಿಗಳೊಂದಿಗೆ ಯೋಜನೆಯ ಲೆಕ್ಕಪರಿಶೋಧನೆಯ ಅಧಿಕಾರಿಗಳು ಸಂಘದ ನಿರ್ಣಯ ಪುಸ್ತಕ ಮತ್ತು ದಾಖಲೆಗಳನ್ನು ಖುದ್ದಾಗಿ ಪರಿಶೀಲಿಸುತ್ತಾರೆ. ವಿಸ್ತೃತವಾದ ವರದಿಯನ್ನು ತಯಾರಿಸುತ್ತಾರೆ. ಈ ವರದಿಯನ್ವಯ ಅಗತ್ಯವಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಂಘಗಳ ಗುಣಮಟ್ಟವನ್ನು ಕಾಪಾಡುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಕೋನದಿಂದ ಗ್ರೇಡಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಅತ್ಯುತ್ತಮ ಗ್ರೇಡಿಂಗ್ ವ್ಯವಸ್ಥೆ ಹೊಂದಿದ ‘ಎಸ್’ ಹಾಗೂ ‘ಎ’ ಶ್ರೇಣಿಗಳಿಗೆ ಒಂದಷ್ಟು ಒಂದಷ್ಟು ಬ್ಯಾಂಕಿನ ಸಾಲ ಸೌಲಭ್ಯಗಳ ವಿಶೇಷ ವ್ಯವಸ್ಥೆಗಳನ್ನು ಒದಗಿಸಲಾಗುವುದು. ಹಾಗೂ ‘ಬಿ’ ಶ್ರೇಣಿಯ ಸಂಘಗಳಿಗೆ ಒಂದಷ್ಟು ಸೌಲಭ್ಯಗಳನ್ನು ದೊರಕಿಸಿಕೊಡಲಾಗುವುದು. ‘ಸಿ’, ‘ಡಿ’ ಶ್ರೇಣಿಯ ಸಂಘಗಳು ಅತೀ ಕಡಿಮೆ ಸಂಖ್ಯೆಯಲ್ಲಿ ಇದ್ದರೂ ಕೂಡ ಅವುಗಳನ್ನು ಸಂಬoಧಪಟ್ಟ ಅಧಿಕಾರಿಗಳು ಹೆಚ್ಚು ನಿಗಾವಹಿಸಿ ಪುನಶ್ಚೇತನಗೊಳಿಸುವುದು ಪ್ರಮುಖ ಜವಾಬ್ದಾರಿ ಆಗಿರುತ್ತದೆ. ಹೀಗೆ ಸಂಘಗಳ ಗುಣಮಟ್ಟವನ್ನು ಕಾಪಾಡಿಕೊಂಡು ಹೋಗುವುದು ಯೋಜನೆಯು ಬಿ.ಸಿ. ಆಗಿ ನಿರ್ವಹಿಸುವ ಪ್ರಮುಖ ಕಾರ್ಯವಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ವಿಚಾರಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *