ಬರಹ : ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಕಳೆದ 24 ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಪ್ರತಿ ವರ್ಷ ಒಂದು ವಾರಗಳ ಕಾಲ ಭಜನಾ ತರಬೇತಿ ಕಮ್ಮಟವನ್ನು ಆಯೋಜಿಸಲಾಗುತ್ತಿದೆ. ರಾಜ್ಯದ ಬೇರೆ ಬೇರೆ ತಾಲೂಕುಗಳಿಂದ ಈವರೆಗೆ ಸರಿಸುಮಾರು 4,500 ಮಂದಿ ಭಜಕರು ಕಮ್ಮಟದಲ್ಲಿ ಭಾಗವಹಿಸುವ ಮೂಲಕ ಕಮ್ಮಟದ ಪ್ರಯೋಜವನ್ನು ಪಡೆದಿದ್ದಾರೆ. ತಮಗೆ ಭಜನಾ ಸಂಸ್ಕೃತಿಯ ಮೇಲಿರುವ ವಿಶ್ವಾಸ, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ರಾಜ್ಯದಿಂದ ಮಾತ್ರವಲ್ಲದೇ ಮುಂಬೈಯಿoದಲೂ ಬಂದ ಭಜಕರು ಬಂದು ಒಂದು ವಾರಗಳ ಕಾಲ ಕಮ್ಮಟದಲ್ಲಿದ್ದು ತರಬೇತಿ ಪಡೆದು ಹೋದರು. ಭಜನಾ ಕಮ್ಮಟದಲ್ಲಿ ಭಾಗವಹಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯುವಕರೂ ಕೂಡಾ ಭಜನೆಯತ್ತ ಆಸಕ್ತಿ ತೋರುತ್ತಿರುವುದು ಒಂದು ಉತ್ತಮ ಬೆಳವಣಿಗೆ.
ಸಮಾಜದಲ್ಲಿ ಪರಿವರ್ತನೆ ತರಲು ಎರಡು ದಾರಿಗಳಿವೆ. ಒಂದು ದಂಡ ಪ್ರಯೋಗ. ಎರಡನೇಯದು ನಮ್ಮ ಸಂಸ್ಕೃತಿ – ಸಂಸ್ಕಾರವನ್ನು ಗಟ್ಟಿಗೊಳಿಸುವುದು. ಇದರಲ್ಲಿ ಮೊದಲನೆಯ ದಂಡ ಪ್ರಯೋಗದಿಂದ ತರುವ ಬದಲಾವಣೆ ಅಲ್ಪಕಾಲದ್ದಾಗಿರುತ್ತದೆ. ಆದರೆ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಮೂಲಕ ತರುವ ಬದಲಾವಣೆ ಶಾಶ್ವತ ಮತ್ತು ದೀರ್ಘಕಾಲದಲ್ಲಿ ಅದು ಸಮಾಜದ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು. ಸಮಾಜ ಪರಿವರ್ತನೆ, ದುಶ್ಚಟಮುಕ್ತ ಸುಂದರ ಸಮಾಜ ನಿರ್ಮಾಣದ ಪ್ರಯತ್ನಗಳಲ್ಲಿ ‘ಭಜನೆ’ ಬಹಳ ಪ್ರಮುಖ ಮತ್ತು ಶಕ್ತಿಯುತವಾದ ಅಸ್ತçವಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳದಲ್ಲಿ ಪ್ರತಿವರ್ಷ ಭಜನಾ ಕಮ್ಮಟವನ್ನು ನಡೆಸುವ ಜೊತೆಗೆ ಈಗಾಗಾಲೇ ರಾಜ್ಯದ ನೂರಾರು ಭಜನಾ ಮಂಡಳಿಗಳ ಅಭಿವೃದ್ಧಿಗೆ ಆರ್ಥಿಕ ನೆರವನ್ನು ನೀಡಲಾಗಿದೆ. ಪರಿಣಾಮವಾಗಿ ಪ್ರತಿ ತಾಲೂಕಿನಲ್ಲೂ ಇಂದು ಧರ್ಮಸ್ಥಳದಿಂದ ಪ್ರಯೋಜನ ಪಡೆದ ನಾಲ್ಕೆದು ಭಜನಾ ಮಂಡಳಿಗಳಿವೆ.
‘ಭಜನೆ’ ಎಂಬ ಮಾಧ್ಯಮದ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂಬುದು ಈಗಾಗಲೇ ಸಾಬೀತಾಗಿದೆ. ಅದಕ್ಕೆ ನಾಯಕತ್ವದ ಗುಣ ಬೇಕು. ಭಜನಾ ಕಮ್ಮಟದ ಮೂಲಕ ಅವರಲ್ಲಿರುವ ನಾಯಕತ್ವದ ಗುಣವನ್ನು ಗುರುತಿಸುವ, ಬೆಳೆಸುವ, ಕಲಿಸುವ ಕೆಲಸವನ್ನು ಮಾಡಲಾಗುತ್ತದೆ.
ಯಾರು ಊರಲ್ಲಿ ಭಜನೆ ಮಾಡುತ್ತಾರೆ, ದೇವಸ್ಥಾನಗಳಲ್ಲಿ ಸಂಘಟನೆ ಮಾಡುತ್ತಾರೆಯೋ ಅವರು ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ. ‘ನಾಯಕತ್ವ’ ಎನ್ನುವುದು ನಮ್ಮ ರಕ್ತದಲ್ಲಿ, ಗುಣದಲ್ಲಿ, ನಮ್ಮ ಶಕ್ತಿಯಲ್ಲೂ ಇರಬಹುದು. ಭಜನೆಯ ತರಬೇತಿ ಪಡೆದುಕೊಂಡು ಹೋದ ಭಜನಾರ್ಥಿಗಳು ನಿಮ್ಮ ನಿಮ್ಮ ಗ್ರಾಮದ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂಬುದು ಭಜನಾ ಕಮ್ಮಟ ಸಂಘಟಕರ ಇಚ್ಛೆಯಾಗಿದೆ.
ಭಜನೆ ಎನ್ನುವುದು ಭಗವಂತನನ್ನು ನಾವು ಸ್ತುತಿ ಮಾಡಿ, ಭಗವಂತನ ಅನೇಕ ಗುಣಗಳನ್ನು ಹೇಳಿ ನಮ್ಮದಾಗಿಸಿಕೊಳ್ಳುವುದು. ಒಂದು ಕಟುಕನ ಮನೆಯಲ್ಲಿ ಇರುವ ಹಕ್ಕಿ ಕಡಿ, ಬಡಿ, ಕೊಲ್ಲು ಎಂದು ಹೇಳುತ್ತಿತ್ತಂತೆ. ಯಾಕೆಂದರೆ ಅದರ ಭಾಷೆಯೇ ಆ ರೀತಿ. ಆ ಹಕ್ಕಿ ಆ ಮನೆಯ ಮಾಲಕನ ಗುಣವನ್ನೇ ಅನುಸರಿಕೊಂಡಿರುತ್ತದೆ. ಒಬ್ಬ ವಿಶಿಷ್ಟರ ಮನೆಯಲ್ಲಿ ಇರುವ ಹಕ್ಕಿ ಹೇಳುತ್ತದೆ; ‘ಬನ್ನಿ, ಕುಳಿತುಕೊಳ್ಳಿ. ಊಟ ಮಾಡಿ ಎಂದು.’ ಯಾಕೆಂದರೆ ವಿಶಿಷ್ಟ ತನ್ನ ಮನೆಗೆ ಯಾರಾದರೂ ಬಂದ ಕೂಡಲೇ ಹೇಳುತ್ತಾನೆ ‘ಬನ್ನಿ, ಕುಳಿತುಕೊಳ್ಳಿ, ಊಟ ಮಾಡಿ ಎಂದು.’ ಹೀಗೆ ನಮ್ಮ ನಮ್ಮ ಪ್ರದೇಶದ ಜನರಿಗೆ ಸಂಸ್ಕಾರವನ್ನು ಕೊಡುವಂತಹ ಕೆಲಸವನ್ನು ಭಜಕರು ಮಾಡಬೇಕು. ಹಾಗಾಗಿ ಭಜನಾ ಕಮ್ಮಟ ದೇವಸ್ಥಾನದಲ್ಲಿ ನಡೆಯಲಿ, ಗ್ರಾಮದಲ್ಲಿ ನಡೆಯಲಿ, ಭಜನಾ ಮಂಡಳಿಯಲ್ಲೇ ನಡೆಯಲಿ ತರಬೇತಿ ಪಡೆದು ಹೋದ ಭಜಕರು ಅಲ್ಲಿ ಇದ್ದು ಅದಕ್ಕೆ ಸಂಸ್ಕಾರವನ್ನು ಕೊಡುವಂತಹ ಕೆಲಸವನ್ನು ಮಾಡಬೇಕು.
ಸಮಾಜದಲ್ಲಿ ಇರುವಂತಹ ಅನೇಕ ದೋಷಗಳು, ವ್ಯಸನಗಳು, ಪಂಚೇoದ್ರಿಯಗಳು ನಮ್ಮನ್ನು ದುರ್ವ್ಯಸನಗಳತ್ತ ಆಕರ್ಷಿಸುವಂತೆ ಮಾಡುತ್ತವೆ. ಕಣ್ಣು ನೋಡಿದ್ದನ್ನೇ ಬೇಕು ಎನ್ನುತ್ತದೆ. ನಾಲಗೆ ತಿನ್ನುವುದು, ವ್ಯಸನ ಮಾಡುವುದನ್ನು ಬೇಕು ಅನ್ನುತ್ತದೆ. ಯಾವತ್ತೂ ಹುಲಿ ಮನುಷ್ಯನನ್ನು ತಿನ್ನುವುದಿಲ್ಲವಂತೆ. ಆದರೆ ಒಮ್ಮೆ ಮನುಷ್ಯನ ರುಚಿ ನೋಡಿದರೆ ಮತ್ತೆ ಮನುಷ್ಯರನ್ನೇ ಹಿಂಬಾಲಿಸುತ್ತದೆಯoತೆ. ಅದೇ ರೀತಿ ಪಂಚೇoದ್ರಿಗಳು ಈ ವ್ಯಸನಗಳನ್ನು ಹತೋಟಿ ಮಾಡಬೇಕಾದರೆ ಸಂಸ್ಕಾರ ಬೇಕು. ಭಜನೆಯ ಮೂಲಕ ನಾವು ಸಂಸ್ಕಾರವನ್ನು ಕೊಟ್ಟು ಅವುಗಳನ್ನು ನಿಯಂತ್ರಣ ಮಾಡಿಕೊಳ್ಳುವ, ಹತೋಟಿ ಮಾಡಿಕೊಳ್ಳುವ ಕಾರ್ಯವನ್ನು ಭಜನಾ ಕಮ್ಮಟದ ಮೂಲಕ ಮಾಡಲಾಗುತ್ತಿದೆ.
ಸಮಾಜದಲ್ಲಿ ಶಾಂತಿ, ಸಾಮರಸ್ಯ ಕಾಪಾಡಬೇಕೆಂಬುದೇ ಭಜನೆಯ ಉದ್ದೇಶವಾಗಿರುತ್ತದೆ. ಎಲ್ಲರ ಮನೆ ಮನಗಳಲ್ಲಿ ಭಜನೆ ಪಠಣ ಆರಂಭವಾದಲ್ಲಿ ಸುಂದರ ಸಮಾಜ ನಿರ್ಮಾಣಕ್ಕೆ ನಾವು ನಮ್ಮ ಕೊಡುಗೆಯನ್ನು ನೀಡಿದಂತಾಗುತ್ತದೆ. ಭಜನೆಗೆ ಹಿಂದೂ ಧರ್ಮದಲ್ಲಿ ಪವಿತ್ರವಾದ ಸ್ಥಾನವಿದೆ. ದೊಡ್ಡ ಇತಿಹಾಸವೂ ಇದೆ. ಭಜನೆಯ ಮೂಲಕ ಏಕಾಗ್ರತೆ, ನೆಮ್ಮದಿ, ಶಾಂತಿಯನ್ನು ಸಂಪಾದಿಸಲು ಸಾಧ್ಯವಿದೆ. ಇದನ್ನರಿತು ದೇವರನ್ನು ಸ್ತುತಿಸೋಣ. ಭಜನಾ ಸಂಸ್ಕೃತಿಯನ್ನು ಉಳಿಸೋಣ. ಭಾರತೀಯ ಸಂಸ್ಕಾರವನ್ನು ಬೆಳೆಸೋಣ.