ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಜೀವನದುದ್ದಕ್ಕೂ ‘ಭಾಗ್ಯ’ ಮತ್ತು ‘ಪುರುಷಾರ್ಥ’ ಇವೆರಡರ ಪಾತ್ರವು ಬಹಳ ಪ್ರಮುಖವಾಗಿದೆ. ನಮ್ಮ ಬದುಕಿನಲ್ಲಿ ಕೆಲವೊಂದು ಭಾಗ್ಯದಿಂದ ದೊರೆತರೆ ಇನ್ನು ಕೆಲವು ಪುರುಷಾರ್ಥ ಸಾಧನೆ ಮಾಡಿದಲ್ಲಿ ಮಾತ್ರ ದೊರೆಯುವಂಥದ್ದು. ನಮ್ಮ ಅಪ್ಪ – ಅಮ್ಮ, ಅಣ್ಣ – ತಮ್ಮ ಇವರೆಲ್ಲಾ ನಮಗೆ ಭಾಗ್ಯದಿಂದ ದೊರೆತವರು. ಇವರನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಅಪ್ಪ – ಅಮ್ಮ ಇಷ್ಟವಾಗುವುದಿಲ್ಲ, ಅಣ್ಣ – ತಮ್ಮಂದಿರ ಬುದ್ಧಿ ಸರಿ ಇಲ್ಲ ಅಂದರೂ ಅವರನ್ನು ಬದಲಾಯಿಸಿಕೊಳ್ಳಲು ಮಾತ್ರ ಸಾಧ್ಯವೇ ಇಲ್ಲ. ಅವರ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕು. ಹಾಗೆಯೇ ಆಯುಷ್ಯ, ಆರೋಗ್ಯ, ಒಳ್ಳೆಯ ಮಡದಿ, ಮಕ್ಕಳು ಇವೆಲ್ಲವನ್ನು ಪಡೆಯಬೇಕಾದರೆ ಅದಕ್ಕೆ ಭಾಗ್ಯಬೇಕು.
ಭಾಗ್ಯವನ್ನೇ ನಂಬಿ ಕೈಕಟ್ಟಿ ಕುಳಿತುಕೊಳ್ಳಬಾರದು. ಆರೋಗ್ಯ ರಕ್ಷಣೆಯಲ್ಲಿ, ಹೆಣ್ಣಿನ ಗುಣ ನೋಡಿ ಆರಿಸುವಲ್ಲಿ, ಮಕ್ಕಳನ್ನು ತಿದ್ದಿ, ಬುದ್ಧಿ ಹೇಳಿ ಸನ್ಮಾರ್ಗದಲ್ಲಿ ನಡೆಸುವಲ್ಲಿ ನಮ್ಮ ಪ್ರಯತ್ನವೂ ಬೇಕು. ರಾಮ, ಕೃಷ್ಣರಂತಹ ಅವತಾರ ಪುರುಷರ ಬದುಕನ್ನು ಗಮನಿಸಿದರೆ ಅವರು ಕಷ್ಟಪಟ್ಟಷ್ಟು ಯಾರೂ ಪಟ್ಟಿರಲಿಕ್ಕಿಲ್ಲ. ಆದರೆ ಅವರು ತಮಗೆ ಸಿಕ್ಕಿದ ದೌರ್ಭಾಗ್ಯವನ್ನು ತಮ್ಮ ಪುರುಷಾರ್ಥದಿಂದ ಸೌಭಾಗ್ಯವನ್ನಾಗಿ ಮಾರ್ಪಡಿಸಿಕೊಂಡರು.
ಹುಟ್ಟು – ಸಾವುಗಳ ಮಧ್ಯದ ಪಯಣದಲ್ಲಿ ಭಾಗ್ಯವಿದ್ದರೆ ಮಾತ್ರ ಸಾಲದು. ನಮ್ಮ ಪಾಲಿಗೆ ಒದಗಿ ಬಂದ ಭಾಗ್ಯಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದೂ ಗೊತ್ತಿರಬೇಕು. ಅದಕ್ಕೆ ಜೀವನದಲ್ಲಿ ಶಿಸ್ತು, ಶಿಷ್ಟಾಚಾರ ಇರಬೇಕಾದುದು ಮುಖ್ಯ. ನಾನು ಭಾಗ್ಯವಂತನೆಂದುಕೊಂಡು ಬರಿಯ ಸ್ವೇಚ್ಛೆಯಿಂದ ವರ್ತಿಸಿದಲ್ಲಿ ಬಂದ ಭಾಗ್ಯಗಳೂ ಇಲ್ಲವಾಗಬಹುದು. ನಮಗೆ ಉತ್ತಮ ಆರೋಗ್ಯ ಬೇಕಾದಲ್ಲಿ ಚಿಕ್ಕಂದಿನಿಂದಲೇ ಎಲ್ಲಾ ರೀತಿಯ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಮುಂದಿನ ದೊಡ್ಡ ನೋವುಗಳನ್ನು ನಿವಾರಿಸಲು ಲಸಿಕೆಯ ಸಣ್ಣ ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಜೀವನದಲ್ಲಿ ‘ಶಿಸ್ತು’ ಎನ್ನುವುದು ಕೂಡಾ ಅತಿ ಅಗತ್ಯ. ಭಾಗ್ಯಗಳನ್ನು ಉಳಿಸಿಕೊಳ್ಳಲು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು.
ಭಾಗ್ಯಗಳು ಬಂದಾಗ ನಾವು ಅದನ್ನು ಸಂತೋಷದಿಂದ ಸ್ವೀಕರಿಸುತ್ತೇವೆ. ಆದರೆ ಕಷ್ಟಗಳು ಬಂದಾಗ ವಿಧಿಯನ್ನು ಬೈಯುತ್ತೇವೆ, ದುಃಖಿಸುತ್ತೇವೆ. ಕೆಲವರಿಗೆ ತಮ್ಮ ಅಜ್ಜ, ತಂದೆ ಗಳಿಸಿದ ಹೇರಳವಾದ ಆಸ್ತಿ, ಮನೆ ಎಲ್ಲವೂ ದೊರಕುತ್ತದೆ. ಆದರೆ ಆತ ಯಾವ ಪುರುಷಾರ್ಥವನ್ನು ಮಾಡಲು ಹೋಗದೆ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಂಡು ಎಲ್ಲವನ್ನು ಕಳೆದುಕೊಳ್ಳಬಹುದು. ಆದ್ದರಿಂದ ಭಾಗ್ಯದ ಜೊತೆ ಅದನ್ನು ಅನುಭವಿಸುವ ಯೋಗವೂ ಬೇಕಾಗುತ್ತದೆ. ಪುರುಷಾರ್ಥ ಇದ್ದಾಗ ಮಾತ್ರ ಎಲ್ಲಾ ಯೋಗಗಳು ಕೂಡಿ ಬರುತ್ತದೆ.
ಕೆಲವೊಮ್ಮೆ ಭಾಗ್ಯವಿಲ್ಲದೆ ಇದ್ದಾಗಲೂ ಪುರುಷಾರ್ಥವಿದ್ದಲ್ಲಿ ಅವರು ಉನ್ನತ ಮಟ್ಟಕ್ಕೆ ಏರುವ ಸಾಧ್ಯತೆ ಇದೆ. ಅತ್ಯಂತ ಬಡತನದಿಂದ ಮೇಲೆ ಬಂದವರ, ವಿಶೇಷಚೇತನರ ಸಾಧನೆಗಳು ಪುರುಷಾರ್ಥಕ್ಕೆ ಉತ್ತಮ ಉದಾಹರಣೆಗಳು. ನಮ್ಮ ಹಿರಿಯರು ಧರ್ಮ, ಅರ್ಥ, ಕಾಮ, ಮೋಕ್ಷಗಳಿಗೆಲ್ಲಾ ಚತುರ್ವಿಧ ಪುರುಷಾರ್ಥಗಳೇ ಕಾರಣ ಎಂದಿದ್ದಾರೆ.
ಕಷ್ಟಗಳು ಎಲ್ಲರಿಗೂ ಬರುತ್ತವೆ. ಅದಕ್ಕೆ ಹೆÉದರಿದರೆ, ಅಳುತ್ತಾ ಕುಳಿತರೆ ಅವು ನಮ್ಮನ್ನು ಮತ್ತಷ್ಟೂ ಹೆದರಿಸುತ್ತವೆ. ಕಷ್ಟಗಳು ಬಂದಾಗ ಮರಗಳಂತೆ ಸ್ಥಿರವಾಗಿರಬೇಕು. ಮರಗಳು ಬಿಸಿಲು, ಮಳೆ, ಗಾಳಿ ಎಲ್ಲವನ್ನೂ ಸ್ವೀಕರಿಸುತ್ತಾ ಸ್ಥಿರವಾಗಿ ನಿಂತಿರುತ್ತವೆ. ಕೆಲವೊಂದು ಮರಗಳು ಚಳಿಗಾಲದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಲ್ಲುತ್ತವೆ. ಮತ್ತೇ ಮಳೆಗಾಲ ಬಂದಾಗ ಮೈ ತುಂಬಿಕೊಳ್ಳುತ್ತವೆ. ಅವು ಎಂದಿಗೂ ದುಃಖಿಸುವುದಿಲ್ಲ. ಜೀವರಾಶಿಗಳಲ್ಲಿ ಮನುಷ್ಯ ಮಾತ್ರ್ರ ನಗಬಲ್ಲ. ಉಳಿದ ಯಾವ ಪ್ರಾಣಿ – ಪಕ್ಷಿಗಳೂ ನಗಲಾರವು. ‘ನಗು’ ಎನ್ನುವುದು ಮಾನವರಿಗೆ ದೇವರು ಕೊಟ್ಟ ಅಪರೂಪದ ಉಡುಗೊರೆ. ಅದನ್ನು ಎಲ್ಲರಿಗೂ ಹಂಚೋಣ. ಅದರಲ್ಲಿ ಲೋಭಿಗಳಾಗದಿರೋಣ.
ಮನುಷ್ಯನಷ್ಟೆ ಅಲ್ಲ, ಪ್ರಾಣಿ – ಪಕ್ಷಿಗಳನ್ನು ಗಮನಿಸಿದರೂ ಅವು ಕೂಡಾ ಭಾಗ್ಯವನ್ನು ನಂಬಿ ಕುಳಿತಿಲ್ಲ. ಪುರುಷಾರ್ಥದಿಂದಲೇ ಜೀವಿಸುತ್ತವೆ. ಹಕ್ಕಿಗಳು ಮೊಟ್ಟೆಯನ್ನು ಇಡುವ ಮೊದಲು ಪ್ರಶಸ್ತವಾದ ಜಾಗವನ್ನು ಹುಡುಕಿ ಸುಂದರವಾದ ಗೂಡೊಂದನ್ನು ನಿರ್ಮಿಸಿ ಮೊಟ್ಟೆ ಇಡುತ್ತವೆ. ಕಾವು ಕೊಟ್ಟು ಮರಿಗಳಾದ ಬಳಿಕ ಮರಿಗಳ ಹೊಟ್ಟೆ ತುಂಬಿಸುವುದಕ್ಕಾಗಿ ನಿರಂತರ ಅಲೆದಾಡುತ್ತವೆ. ಕೆಲವೊಮ್ಮೆ ಹಾವುಗಳು ಬಂದು ಮರಿಗಳನ್ನು ತಿಂದು ಹೋದರೆ ತಾಯಿ ಹಕ್ಕಿ ಒಂದು ಘಳಿಗೆ ಗೋಳಾಡುತ್ತದೆ. ಮರುದಿನ ಎಲ್ಲವನ್ನು ಮರೆತು ಮತ್ತೆ ಆಹಾರವನ್ನು ಅರಸುತ್ತಾ, ಹಾರಾಡುತ್ತಾ ಊರಿಂದ ಊರಿಗೆ ಸಾಗುತ್ತದೆ. ಆದ್ದರಿಂದ ಚಿಂತೆ ಮತ್ತು ದುಃಖದಿಂದ ಹೊಟ್ಟೆ ತುಂಬುವುದಿಲ್ಲ. ಜೀವನವನ್ನು ಬಂದಂತೆ ಸ್ವೀಕರಿಸಿ ಮುನ್ನಡೆಯಬೇಕೆಂಬ ಸಂದೇಶ ಹಕ್ಕಿಗಳಿಂದ ನಮಗೆ ದೊರೆಯುತ್ತದೆ.
ಒಳ್ಳೆಯ ಹಿತವಚನವನ್ನು ಯಾರಾದರೂ ಹೇಳಿದರೆ ಕಿವಿಗೊಡೋಣ. ಹಿತವೆಂದರೇನು ಎಂಬುವುದನ್ನು ಗುರುಗಳ ಮಾತಿನಲ್ಲಿ ಹೇಳುವುದಾದರೆ ಪುರುಷಾರ್ಥ ಸಾಧನೆಗೆ ವಿರೋಧವಲ್ಲದ ರೀತಿಯಲ್ಲಿ ಯಾವುದು ಕೆಲಸಕ್ಕೆ ಬರುತ್ತದೆಯೋ ಅದುವೇ ಹಿತ. ಪುರುಷಾರ್ಥಗಳ ಮೂಲಕ ಬದುಕನ್ನು ಸುಂದರಗೊಳಿಸೋಣ.