ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
‘ಭಕ್ತ ಜನ ಮುಂದೆ ನೀನವರ ಹಿಂದೆ… ನೀನವರ ಹಿಂದೆ..’ ಎಂಬ ಹಾಡಿನಂತೆ ಪಾದಯಾತ್ರೆಯಲ್ಲಿ ಭಕ್ತ ಜನ ಮುಂದೆ ಬರುತ್ತಾ ಇದ್ದರೆ ದೇವರು ಬಹುಶಃ ಪಾದಯಾತ್ರಿಗಳ ಭಕ್ತಿಗೆ ಮೆಚ್ಚಿ ಅವರ ಹಿಂದಿನಿAದಲೇ ಬಂದಿದ್ದಾರೆ. ಪಾದಯಾತ್ರೆಯಲ್ಲಿ ಓಡಿಕೊಂಡು ಬಂದ ಹಾಗೆ ಕೆಲವೇ ತಾಸುಗಳಲ್ಲಿ ಕ್ಷೇತ್ರವನ್ನು ತಲುಪಿದ್ದೇವೆ ಅಂದರೆ ಅದು ಓಡಿಕೊಂಡು ಬಂದದ್ದಲ್ಲ. ಭಕ್ತ ಜನರನ್ನು ದೇವರು ಹಿಂದಿನಿoದ ತಳ್ಳಿಕೊಂಡೇ ಬಂದದ್ದು. ಭಕ್ತ ಜನರು ಮುಂದೆ ಇದ್ದಾಗ ದೇವರು ಹಿಂದಿನಿoದ ತಳ್ಳಿಕೊಂಡು ಬರುತ್ತಾರಂತೆ. ಶ್ರದ್ಧೆಯ ಆವೇಶ ಇದ್ದಾಗ ಹಾಗಾಗುತ್ತದೆ. ಶಬರಿಮಲೆಗೆ ಯಾತ್ರೆ ಹೋಗುವವರು ನಿತ್ಯ ಪ್ರವೇಶ ಮಾಡುವವರು ಅಲ್ಲ. ಅವರೆಲ್ಲರೂ ಭಕ್ತಿಯ ಆವೇಶದಿಂದ ಒಮ್ಮೆ ಹೊರಟರೆ, ಭಕ್ತಿ ಅವರನ್ನು ಅಲ್ಲಿಯವರೆಗೆ ತಳ್ಳಿಕೊಂಡು ಹೋಗುತ್ತದೆ. ಅಲ್ಲಿ ಸಾಕಷ್ಟು ದೂರ ನಡೆಯಬೇಕು, ಕಷ್ಟಗಳನ್ನು ಪರಿಹರಿಸಿಕೊಳ್ಳಬೇಕು, ದೈಹಿಕವಾದ ಶ್ರಮವನ್ನು ಕೊಡಬೇಕು ಆದರೂ ಅವರು ಯಾರೂ ಮುಂದಿನ ವರ್ಷ ಹೋಗುವುದಿಲ್ಲ ಎಂದು ಹೇಳುವುದಿಲ್ಲ. ಬದಲಾಗಿ ಮುಂದಿನ ವರ್ಷ ಹೋಗಿಯೇ ಹೋಗುತ್ತೇವೆ ಅನ್ನುತ್ತಾರೆ. ಯಾಕೆಂದರೆ ಅವರಿಗೆ ಭಕ್ತಿಯ ಎದುರು ಅದು ಶ್ರಮ ಎಂದು ಅನ್ನಿಸುವುದಿಲ್ಲ. ಭಕ್ತಿಯ ಆವೇಶದಲ್ಲಿ ಅದೆಲ್ಲ ಮುಳುಗಿ ಹೋಗುತ್ತದೆ. ಹಾಗೆಯೇ ಪಾದಯಾತ್ರಿಗಳ ಪ್ರೀತಿ, ಭಕ್ತಿ, ಶ್ರದ್ಧೆ ಹೇಗಿದೆ ಅಂದರೆ ಧರ್ಮಸ್ಥಳಕ್ಕೆ ಹೋಗಬೇಕು, ಮಂಜುನಾಥ ಸ್ವಾಮಿಯ ದರ್ಶನ ಮಾಡಬೇಕು, ಹೆಗ್ಗಡೆಯವರನ್ನು ಕಾಣಬೇಕು, ಗೌರವಿಸಬೇಕು ಎಂದು ಹೊರಟು ಬಿಡುತ್ತಾರೆ. ಅವರಲ್ಲಿರುವ ಪ್ರೀತಿಯಿಂದ ಅವರೆಲ್ಲ ಗಾಳಿಯ ಜೊತೆಗೆ ಬಂದಹಾಗೆ ಉಜಿರೆಯಿಂದ ಕ್ಷೇತ್ರಕ್ಕೆ ಕೆಲವೇ ತಾಸುಗಳಲ್ಲಿ ಬಂದು ಬಿಡುತ್ತಾರೆ.
ಕ್ಷೇತ್ರದಲ್ಲಿ ನಾವು ಅನೇಕ ವರ್ಷಗಳಿಂದ ಸಹಬಾಳ್ವೆ, ಸಾಮರಸ್ಯ, ಸಹಜೀವನಕ್ಕೆ ಪ್ರಾಶಸ್ತö್ಯವನ್ನು ಕೊಟ್ಟಿದ್ದೇವೆ. ಕ್ಷೇತ್ರದಲ್ಲಿ ದೇವಸ್ಥಾನದ ಒಳಗೆ ಬರುವಾಗ ಸಾಲಿನಲ್ಲಿ ಯಾರಿದ್ದಾರೆ? ಯಾವ ಜಾತಿಯವರಿದ್ದಾರೆ? ಯಾವ ಧರ್ಮದವರಿದ್ದಾರೆ? ಎಂದು ನಮಗೆ ಗೊತ್ತಿರುವುದಿಲ್ಲ. ಎಲ್ಲರೂ ಅವರಷ್ಟಕ್ಕೆ ಬಂದು ಹೋಗುತ್ತಾರೆ. ಅನ್ನಪೂರ್ಣದಲ್ಲಿ ಊಟ ಮಾಡುವಾಗಲೂ ಹಾಗೇ. ಮತೀಯ ಭೇದಗಳು, ಜಾತಿಯ ಭೇದಗಳು, ಅಂತಸ್ತಿನ ಭೇದಗಳು ಇಲ್ಲದೆ ಅವರು ಆಹಾರವನ್ನು ಸ್ವೀಕರಿಸುತ್ತಾರೆ. ಅಂದರೆ ಕ್ಷೇತ್ರದ ಪರಂಪರೆ ಹಾಗಿದೆ. ನಾವು ಭಕ್ತರನ್ನು ಭಕ್ತರೆಂದು ಕಾಣುತ್ತೇವೆಯೇ ಹೊರತು ಅವರೊಳಗೆ ಭೇದ ಮಾಡಲು ಬಯಸುವುದಿಲ್ಲ.
ಪ್ರತೀ ತಿಂಗಳು ಅಣ್ಣಪ್ಪ ಸ್ವಾಮಿಯ ಬೆಟ್ಟದಲ್ಲಿ ಧರ್ಮ ದೇವತೆಗಳ ಮುಂದೆ ನಿಂತು ನಾನು ವರದಿಯನ್ನು ಒಪ್ಪಿಸುತ್ತೇನೆ. ಆ ವರದಿ ಒಪ್ಪಿಸುವಾಗ ನನ್ನ ಆತ್ಮ ಸ್ವಚ್ಛ ಇಲ್ಲದಿದ್ದರೆ, ನನ್ನ ನಡವಳಿಕೆ ಸರಿಯಾಗಿ ಇಲ್ಲದಿದ್ದರೆ ನಾನು ಅವರ ಮುಂದೆ ನಿಂತುಕೊಳ್ಳಲು ಸಾಧ್ಯವಾಗುವುದಿಲ್ಲ.
‘ಪ್ರತಿಯೊಂದು ಸಮಸ್ಯೆಯು ನಮ್ಮ ಬಾಗಿಲಿಗೆ ಬಂದು ಬಡಿಯುವಾಗ ಅದರ ಹಿಂದೆ ಏನೋ ಒಂದು ಉದ್ದೇಶ ಇರುತ್ತದೆ. ಜೀವನಕ್ಕೆ ಏನಾದರೂ ಒಂದು ಕೊಡುಗೆಯನ್ನು ಕೊಡುವುದಕ್ಕಾಗಿಯೇ ಸಮಸ್ಯೆಗಳು ಬಂದು ಬಾಗಿಲು ತಟ್ಟುತ್ತವೆ. ಸಮಸ್ಯೆಗಳು ಬಂದಾಗ ಹೆದರಿ ಪಲಾಯನ ಮಾಡಿದರೆ ಸುಂದರ ಅವಕಾಶವೊಂದನ್ನು ಕಳೆದುಕೊಳ್ಳುತ್ತೇವೆ. ಸಮಸ್ಯೆಯಿಂದ ಬಹಳ ಸುಲಭವಾಗಿ ತಪ್ಪಿಸಿಕೊಳ್ಳಲು ಏನೋ ಒಂದು ಕ್ಷಣಿಕವಾದ ಪರಿಹಾರವನ್ನು ಕಂಡುಕೊಳ್ಳುವ ಬದಲು ಆ ಸಂದರ್ಭಗಳನ್ನು ಸಾಮರ್ಥ್ಯದಿಂದ ಎದುರಿಸಿದರೆ ಅದು ನಮಗೆ ಒಳ್ಳೆಯ ಪಾಠವನ್ನು ಹೇಳಿಕೊಡುತ್ತದೆ. ಭಗವದ್ಗೀತೆಯಲ್ಲಿ ಮಾತೊಂದಿದೆ. ‘ಎಲ್ಲರೂ ನಿನ್ನ ಬಗ್ಗೆ ಒಂದೇ ರೀತಿಯ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕಾದ್ದಿಲ್ಲ. ಭಿನ್ನಭಿನ್ನವಾದ ಅಭಿಪ್ರಾಯಗಳು ನಿನ್ನ ಮೇಲೆ ಇರಬಹುದು. ಸಂಸಾರದಲ್ಲಿ, ಅಣ್ಣ-ತಮ್ಮಂದಿರಲ್ಲಿ, ಬಂಧುಗಳಲ್ಲಿ ಅಲ್ಲದೆ ಸಂಪರ್ಕಕ್ಕೆ ಬರುವ ಎಲ್ಲರಲ್ಲಿಯೂ ಕೂಡಾ ಒಂದೊAದು ಭಾವನೆ ಇರಬಹುದು. ನೀನು ಅದರ ಜೊತೆಗೆ ಹೇಗೆ ಪಾರಾಗಬೇಕು ಎಂದು ನಿನಗೆ ಗೊತ್ತಿರಬೇಕು. ಬಹಳ ಲಘುವಾಗಿ ಅದನ್ನು ತೆಗೆದುಕೊಳ್ಳಬೇಡ. ಜೀವನವನ್ನು ಎದುರಿಸು’ ಅನೇಕ ಸಂದರ್ಭಗಳಲ್ಲಿ ಕ್ಷೇತ್ರದ ಹೆಗ್ಗಡೆ ಪೀಠದಲ್ಲಿ ಕುಳಿತು ಅನೇಕ ಕಾರ್ಯಕ್ರಮಗಳನ್ನು ನಾನು ಮಾಡುವಾಗ ಕೆಲವರಿಗೆ ಅದು ಇಷ್ಟವಾಗಬಹುದು. ಕೆಲವರಿಗೆ ಇಷ್ಟವಾಗದೆ ಇರಬಹುದು. ಆದರೆ ಮಾಡುವ ಉದ್ದೇಶ ಸ್ಪಷ್ಟವಾಗಿದ್ದರೆ ಖಂಡಿತವಾಗಿಯೂ ಅದರಲ್ಲಿ ಯಾವ ಸಂಕೋಚವೂ ಇರುವುದಿಲ್ಲ. ನಾವು ಇಷ್ಟರವರೆಗೆ ಮಾಡಿದ ಎಲ್ಲಾ ಕಾರ್ಯಗಳನ್ನು ಕೂಡಾ ಸ್ವಾಮಿ ಒಪ್ಪಿದ್ದಾರೆ, ಅನುಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಕರೆ ಮಾಡಿ ರಾಜ್ಯಸಭೆಯ ಸದಸ್ಯರಾಗುವಂತೆ ಕೇಳಿಕೊಂಡಾಗ ನಾನು ಅದನ್ನು ನಿರೀಕ್ಷೆ ಮಾಡಿರಲಿಲ್ಲ. ಯಾಕೆಂದರೆ ನಾನು ಯಾವಾಗಲೂ ಸ್ಥಾನಮಾನಗಳನ್ನು ಅಪೇಕ್ಷಿಸಿದವನೇ ಅಲ್ಲ. ಯಾರು ಅಪೇಕ್ಷಿಸುವುದಿಲ್ಲವೋ ಅವರಿಗೆ ದೇವರು ಹೆಚ್ಚು ಕೊಡುತ್ತಾರೆ ಎಂಬ ಮಾತಿದೆ. ಇದು ಸೇವೆ ಮಾಡಲು ಒಂದು ಅವಕಾಶ ಎಂದು ನಾನು ಅವರ ಮಾತನ್ನು ಸ್ವೀಕರಿಸಿದ್ದೇನೆ.
ಪ್ರತಿ ಸೋಮವಾರ ಅಂದಾಜು ೫೦ರಿಂದ 90 ದೇವಸ್ಥಾನದವರು ದಾನ ಕೇಳಲು ಕ್ಷೇತ್ರಕ್ಕೆ ಬರುತ್ತಾರೆ. ಅವರು ಬಂದಾಗ ಅವರಲ್ಲಿ ನಾವು ಭೇದ ಕಾಣುವುದಿಲ್ಲ. ಸಾಮಾನ್ಯವಾಗಿ ಜನರು ಭೇದಗಳನ್ನು ಗುರುತಿಸಿ, ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ದೇವಸ್ಥಾನಗಳಲ್ಲಿ ಎಲ್ಲಾ ದೇವರುಗಳು ಒಗ್ಗಟ್ಟಾಗಿ ಇರುತ್ತಾರೆ. ನಮ್ಮ ಹಾಗೆ ಜಗಳ ಮಾಡಿಕೊಳ್ಳುವುದಿಲ್ಲ. ಶ್ರೀಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ಗೋಪುರವನ್ನು ನಿರ್ಮಾಣ ಮಾಡುವಾಗ ಎಡಗಡೆಯಿಂದ ಯಾರಿರಬೇಕು? ಬಲಗಡೆಯಿಂದ ಯಾರಿರಬೇಕು? ಉತ್ತರಕ್ಕೆ ಯಾರು? ದಕ್ಷಿಣಕ್ಕೆ ಯಾರು? ಎಂದು ಎಲ್ಲ ದೇವತೆಗಳನ್ನು ತಂದು ಅಲ್ಲಿ ಇಟ್ಟರು. ಅಲ್ಲಿ ವಿಷ್ಣು ಇದ್ದಾರೆ. ಗಣಪತಿ ಇದ್ದಾರೆ. ಬ್ರಹ್ಮ ಇದ್ದಾರೆ. ಎಲ್ಲರೂ ಇದ್ದಾರೆ. ಈ ಬಗ್ಗೆ ನಾನು ನಮ್ಮ ಜ್ಯೋತಿಷ್ಯರಲ್ಲಿ ಕೇಳಿದಾಗ ಅವರು ಹೇಳಿದ್ರು, ‘ಸ್ವಾಮಿ ಭೂಮಿ ಮೇಲೆ ಇರುವವರು ಮಾತ್ರ ಜಗಳ ಮಾಡುವುದು. ಮೇಲಿನವರೆಲ್ಲಾ ಒಗ್ಗಟ್ಟಾಗಿಯೇ ಇರುತ್ತಾರೆ. ಅವರು ಜಗಳ ಮಾಡಿಕೊಳ್ಳುವುದಿಲ್ಲ’ ಎಂದು. ಈ ತತ್ವಗಳನ್ನು ನಾವು ನಮ್ಮ ಬದುಕಿನಲ್ಲಿ ಪಾಲಿಸಬೇಕು. ನಮ್ಮ ಸಾಮರಸ್ಯದ ಬಾಳಿಗೆ ನಾವು ಎತ್ತರಕ್ಕೆ ಹೋದಷ್ಟು ಈ ಭೇದಗಳನ್ನು ಮರೆಯಬೇಕು. ಕ್ಷೇತ್ರದ ಸಂದೇಶ ಕೂಡಾ ಅದೇ ಆಗಿದೆ. ಭೇದಗಳನ್ನು ಸೃಷ್ಟಿ ಮಾಡಬೇಡಿ. ಭೇದಗಳನ್ನು ಮರೆಯಲು ಪ್ರಯತ್ನ ಮಾಡಿ.
ಸಮಾಜದಲ್ಲಿನ ಬಡತನ ನಿರ್ಮೂಲನೆಗಾಗಿ ನಾವು ಅನೇಕ ಸೇವೆಗಳನ್ನು ಮಾಡಿದ್ದೇವೆ, ಮಾಡುತ್ತಿದ್ದೇವೆ. ಶ್ರೀಮತಿ ಹೇಮಾವತಿ ಅವರು ‘ವಾತ್ಸಲ್ಯ’ ಎನ್ನುವ ಕಾರ್ಯಕ್ರಮದ ಮೂಲಕ ವಯಸ್ಸಾದವರಿಗೆ, ವೃದ್ಧರಿಗೆ, ಅಂಗವಿಕಲರಿಗೆ ಅನೇಕ ರೀತಿಯ ಸಹಾಯಗಳನ್ನು ಮಾಡುತ್ತಾರೆ. ‘ಶೌರ್ಯ’ ಕಾರ್ಯಕ್ರಮದ ಮೂಲಕ ಅನೇಕ ಕಾರ್ಯಗಳನ್ನು ಮಾಡುತ್ತೇವೆ. ಇದೆಲ್ಲ ಮಾಡುವುದರ ಉದ್ದೇಶ ಎಲ್ಲೆಡೆ ಸಾಮರಸ್ಯ ಇರಬೇಕು ಎಂಬುದೇ ಆಗಿದೆ. ಶೌರ್ಯ ಕಾರ್ಯಕ್ರಮದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ನಾವು ಸೇವೆ ಮಾಡಬೇಕು ಎಂಬ ಭಾವನೆ ಇರಬೇಕು. ಅಲ್ಲಿ ಆಯ್ಕೆ ಮಾಡುವ ಅವಕಾಶ ಇಲ್ಲ. ಹೆಣ ಬಿದ್ದಿದೆ ಅಂದರೆ, ಅದು ಯಾರ ಹೆಣ? ಯಾವ ಜಾತಿಯ ಹೆಣ? ಯಾವ ಕುಟುಂಬದ ಹಿನ್ನೆಲೆ ಇದೆ ಎಂದು ಯೋಚಿಸುವಂತಿಲ್ಲ. ಬಡವ, ಶ್ರೀಮಂತರು ಎಂಬುದು ಇಲ್ಲಿಲ್ಲ. ಕೆರೆಗೆ ಒಬ್ಬ ವ್ಯಕ್ತಿ ಬಿದ್ದಿದ್ದಾನೆ ಎಂದರೆ ಅವನನ್ನು ಮೇಲೆ ಎತ್ತಬೇಕು ಅಂತ ಹೋಗುವಾಗ ಅಲ್ಲಿ ಅಸಹಾಯಕರಾದವರಿಗೆ ಸಹಾಯ ಮಾಡಬೇಕು ಎನ್ನುವ ಭಾವನೆಯಲ್ಲದೆ, ಜಾತಿ ಹುಡುಕುವ ಪ್ರಶ್ನೆಯೇ ಇಲ್ಲ. ಹಾಗಾಗಿ ಈ ಎಲ್ಲಾ ರೀತಿಯ ಅಸಹಜತೆಗಳನ್ನು ಹೋಗಲಾಡಿಸಿ, ಸಹಜತೆಗಳನ್ನು ತರುವುದು, ಭೇದಗಳನ್ನು ಮರೆಸಿ ಏಕತೆಯನ್ನು ತರುವುದು ನಮ್ಮ ಉದ್ದೇಶವಾಗಿದೆ. ಈ ಉದ್ದೇಶದಲ್ಲಿ ಇದುವರೆಗೆ ನಾನು ಸ್ವಾಭಾವಿಕವಾಗಿ ಸೇವೆ ಮಾಡುತ್ತಾ ಬಂದಿದ್ದೇನೆ. ನಮ್ಮ ಕುಟುಂಬದವರೆಲ್ಲಾ ಇದಕ್ಕೆ ಸೇವೆ ಮಾಡುತ್ತಾ ಬಂದಿದ್ದಾರೆ.
ಭಕ್ತರ ಪ್ರೀತಿ, ಕಾರ್ಯಕ್ರಮಗಳು, ಪ್ರೇರಣೆಗಳು, ನಮ್ಮನ್ನು ಇನ್ನಷ್ಟು ಸೇವೆ ಮಾಡುವಂತೆ ಮಾಡುತ್ತವೆ. ಕೆಲಸದಲ್ಲಿ ಇನ್ನಷ್ಟು ಉತ್ಸಾಹವನ್ನು ಕೊಡುತ್ತದೆ ಎಂದು ನಾನು ನಂಬುತ್ತೇನೆ.