ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನನ್ನ ಅನುಭವದಲ್ಲಿ ನಮ್ಮ ಜೊತೆಗೆ ಸೇವೆ ಮಾಡಲು ಬಂದವರು ಶ್ರೀ ಮಂಜುನಾಥ ಸ್ವಾಮಿಯಿಂದ ಆಯ್ಕೆಯಾಗಿ ಬಂದವರೆ0ದು ನಾನು ಹೇಳುತ್ತೇನೆ. ಯಾಕೆಂದರೆ ಅವರು ಸಂಸ್ಥೆಗಾಗಿ ವಿಶೇಷ ಕೆಲಸಗಳನ್ನು, ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಅನೇಕರು ನನ್ನಲ್ಲಿ ಹೇಳುವುದುಂಟು ‘ನಿಮಗೆ ಇಷ್ಟು ಒಳ್ಳೆಯ ಕಾರ್ಯಕರ್ತರು ಹೇಗೆ ಸಿಗುತ್ತಾರೆ? ನಮಗೆ ಸಿಗುವುದಿಲ್ಲ’ ಎಂದು. ಡಾ| ಎಲ್. ಎಚ್. ಮಂಜುನಾಥ್‌ರವರ ಬಗ್ಗೆ ‘ಅಂತಹ ಮನುಷ್ಯ ಹೇಗೆ ಸಿಕ್ಕಿದರು? ನಮಗೂ ಅಂತವರು ಸಿಗುತ್ತಿದ್ದರೆ ನಾವು ಕೂಡಾ ಸಾಕಷ್ಟು ಸಾಧನೆ ಮಾಡುತ್ತಿದ್ದೆವಲ್ಲ’ ಎಂದು ಅನೇಕರು ಹೇಳಿದ್ದಾರೆ. ನಾನು ಅವರಲ್ಲಿ ಅದು ದೇವರ ಆಯ್ಕೆ ಎನ್ನುತ್ತೇನೆ.
ಗ್ರಾಮಾಭಿವೃದ್ಧಿ ಯೋಜನೆ ಬೆಳೆದದ್ದು, ರಾಜ್ಯದಾದ್ಯಂತ ಪಸರಿಸಿದ್ದು ಎಷ್ಟೋ ಬಾರಿ ನನಗೆ ವಿಚಿತ್ರದಂತೆ ಕಂಡಿದೆ. ಮಂಜುನಾಥ್‌ರವರು ಬಂದ ನಂತರ ಯೋಜನೆಯ ಕಾರ್ಯಕ್ರಮಗಳು ವೇಗವನ್ನು ಪಡೆದವು. ಇದಕ್ಕೆ ಕಾರಣ ಅವರಲ್ಲಿದ್ದ ಕತೃತ್ವ ಶಕ್ತಿ ಎಂದು ನಾನು ಭಾವಿಸುತ್ತೇನೆ. ಒಂದು ಯೋಜನಾ ಕಚೇರಿಯನ್ನು ಗ್ರಾಮ, ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿ ತೆರೆಯಬೇಕಾದರೆ ನಾನಾಗಿರುತ್ತಿದ್ದರೆ ಆ ಕಟ್ಟಡಕ್ಕೆ ಬಾಡಿಗೆ ಎಷ್ಟು? ಅದಕ್ಕಿಂತ ಕಡಿಮೆ ಬಾಡಿಗೆಯ ಕಟ್ಟಡವನ್ನು ಹುಡುಕಿ ಎಂದು ಹೇಳುತ್ತಿದ್ದೆ. ಆದರೆ ನಾನು ಮಂಜುನಾಥ್‌ರವರಿಗೆ ಬೇರೆ ಬೇರೆ ಜಿಲ್ಲೆಗಳಿಗೆ ಯೋಜನೆಯನ್ನು ವಿಸ್ತರಿಸಲು ಅನುಮತಿ ನೀಡಿದ ಒಂದೇ ವಾರದಲ್ಲಿ ಅಲ್ಲಿ ತಾಲೂಕು, ಜಿಲ್ಲಾ ಹೀಗೆ ಎಲ್ಲಾ ಕಚೇರಿಗಳು ಸಿದ್ಧಗೊಳ್ಳುತ್ತಿದ್ದವು. ಮಂಜುನಾಥ್‌ರವರ ಈ ಕಾರ್ಯವೈಖರಿಯನ್ನು ನಾನು ಮೆಚ್ಚಿಕೊಂಡಿದ್ದೇನೆ. ಒಂದು ಕಟ್ಟಡದ ಬಾಡಿಗೆಯ ಬಗ್ಗೆ ಚರ್ಚೆ ಮಾಡಿ ನೂರು ರೂಪಾಯಿ ಉಳಿಸುವುದಕ್ಕೆ ಹೋದರೆ ಸಂಪೂರ್ಣ ಕೆಲಸ ವಿಳಂಬವಾಗುತ್ತದೆ, ಕಾರ್ಯಕ್ರಮ ಅನುಷ್ಠಾನದಲ್ಲಿ ತಡವಾಗುತ್ತದೆ ಅಂದುಕೊoಡು ನನ್ನ ಆದೇಶ ದೊರೆತ ಕೂಡಲೇ ಸಮಾಜಕ್ಕೆ ಸೇವೆ ಕೊಡಲು ಸಿದ್ಧರಾಗುತ್ತಿದ್ದರು. ನಾನು ಒಪ್ಪಿಗೆ ನೀಡಿದ್ದರೆ ಇಷ್ಟು ಹೊತ್ತಿಗೆ ಯೋಜನೆ ಬೇರೆ ರಾಜ್ಯಗಳಿಗೂ ವಿಸ್ತರಣೆಗೊಳ್ಳುತ್ತಿತ್ತು. ಭಾಷಣದಲ್ಲಿ ಅಂಕಿಅoಶಗಳನ್ನು ತಡವರಿಸದೆ ಒಪ್ಪಿಸುವ ಕಲೆ ಅವರಿಗೆ ಕರಗತವಾಗಿದೆ. ಯೋಜನೆಯ ಬಗ್ಗೆ ಯಾವುದೇ ಅಂಕಿ ಅಂಶಗಳನ್ನು ಕೇಳಿದರು ಅದು ಅವರ ನಾಲಗೆಯ ತುದಿಯಲ್ಲಿ ಇರುತ್ತಿತ್ತು.
ಮಹಿಳಾ ಸಬಲೀಕರಣಕ್ಕೆ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಯೋಜನೆಯಲ್ಲಿ ಸಾವಿರಾರು ಮಹಿಳಾ ಕಾರ್ಯಕರ್ತರು ಬಹಳ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೆಣ್ಮಕ್ಕಳಿಗೆ ಕಚೇರಿ ಸಿಬ್ಬಂದಿಯಿoದ ಪ್ರಾದೇಶಿಕ ನಿರ್ದೇಶಕರಾಗುವವರೆಗಿನ ಅವಕಾಶವನ್ನು ಯೋಜನೆಯಲ್ಲಿ ಕಲ್ಪಿಸಿದ್ದಾರೆ. ಎಷ್ಟೋ ಬಾರಿ ವರ್ಗಾವಣೆಯ ವಿಷಯ ಬಂದಾಗ ಹೆಣ್ಮಕ್ಕಳನ್ನು ಹೇಗೆ ವರ್ಗಾವಣೆ ಮಾಡುವುದು ಎಂದು ಹೇಳುವುದಿದೆ. ಆದರೆ ಮಂಜುನಾಥ್ ಬ್ಯಾಂಕ್‌ನಲ್ಲಿ ಇದ್ದುದರಿಂದ ಇವೆಲ್ಲ ಅವರಿಗೆ ಕರಗತ.
ಮಂಜುನಾಥ್‌ರವರು ಇ.ಡಿ. ಎಂದೇ ಪರಿಚಿತರು. ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಅವರನ್ನು ಪ್ರೀತಿಸುವವರಿದ್ದಾರೆ. ಇದಕ್ಕೆ ಕಾರಣ ಅವರು ಎಲ್ಲರಿಗೂ ಸುಲಭವಾಗಿ ಲಭ್ಯವಿರುತ್ತಿದ್ದರು. ಅದಕ್ಕಾಗಿ ಪ್ರತಿ ತಿಂಗಳ ‘ನಿರಂತರ’ ಪತ್ರಿಕೆಯಲ್ಲಿ ಅವರ ಮೊಬೈಲ್ ನಂಬರ್ ಅನ್ನು ಪ್ರಕಟಿಸುತ್ತಿದ್ದರು. ಈವರೆಗೆ ಮಂಜುನಾಥ್‌ರವರು ಕರೆಯನ್ನು ಸ್ವೀಕರಿಸಲಿಲ್ಲ ಎಂದು ಯಾರು ನನ್ನಲ್ಲಿ ಹೇಳಿಕೊಂಡಿಲ್ಲ. ಅವರಲ್ಲಿರುವ ಈ ಧೈರ್ಯ ಮತ್ತು ಪ್ರಾಮಾಣಿಕತೆ ಅವರ ಗೆಲುವಿನ ಗುಟ್ಟು ಎಂದು ನಾನು ಭಾವಿಸುತ್ತೇನೆ.
ಕಾರ್ಯಕರ್ತರನ್ನು ಪ್ರೀತಿಯಿಂದ ತಿದ್ದಿ, ತೀಡಿ ದುಡಿಸುವ ಜಾಣ್ಮೆ ಅವರಲ್ಲಿತ್ತು. ಕಾರ್ಯಕ್ಷಮತೆ, ಶಿಕ್ಷಣದ ಮಟ್ಟವನ್ನು ನೋಡಿಕೊಂಡು ಅವರಿಗೆ ಮುಂಬಡ್ತಿ ನೀಡುವಂತೆ ನನ್ನ ಬಳಿ ಬರುತ್ತಿದ್ದರು. ನಾನು ಮಂಜುನಾಥ್‌ರವರ ನಿರ್ಧಾರಗಳನ್ನು ತಿರಸ್ಕರಿಸಿದ್ದು ತೀರಾ ಕಡಿಮೆ. ‘ಗ್ರಾಮಾಭಿವೃದ್ಧಿ ಯೋಜನೆ’ ಎಂಬುವುದು ಒಂದು ವಿಶಾಲವಾದ ಸಾಗರ. ಇಲ್ಲಿ ವಿದ್ಯಾವಂತ, ವಿದ್ಯೆಯಿಲ್ಲದ ಎರಡು ರೀತಿಯ ಫಲಾನುಭವಿಗಳಿದ್ದಾರೆ. ಅವರ ಜೊತೆ ಕೆಲಸ ಮಾಡಬೇಕಾದರೆ ತುಂಬಾ ತಾಳ್ಮೆ ಬೇಕು. ಇನ್ನು ಯೋಜನೆಯಲ್ಲಿಯೂ ಪಿಯುಸಿಯಿಂದ ಪಿ.ಎಚ್‌ಡಿ.ವರೆಗೆ ಶಿಕ್ಷಣ ಪಡೆದಿರುವ ಕಾರ್ಯಕರ್ತರು ಇದ್ದಾರೆ. ಅವರ ವಿದ್ಯಾಕ್ಷಮತೆಗನುಗುಣವಾಗಿ ಕೆಲಸಗಳನ್ನು ನೀಡುವ ಮೂಲಕ ಮಂಜುನಾಥ್ ಯಶಸ್ಸನ್ನು ಪಡೆಯುತ್ತಿದ್ದರು ಎಂದು ನಾನು ಭಾವಿಸುತ್ತೇನೆ.
ಇ.ಡಿ.ಯವರು ಯೋಜನೆಗೆ ಸೇರಿ ಮಾಡಿದ ಮೊದಲ ಕೆಲಸವೆಂದರೆ ಭಡ್ತಿ ನೀಡುವುದು. ಒಬ್ಬ ಸಾಮಾನ್ಯ ಸೇವಾಪ್ರತಿನಿಧಿಯಾಗಿದ್ದವರು ಇಂದು ಪ್ರಾದೇಶಿಕ ನಿರ್ದೇಶಕರಾಗುವವರೆಗೆ ಭಡ್ತಿಯನ್ನು ಹೊಂದಿದ್ದಾರೆ. ಹಿಂದೆ ಈ ಪದ್ಧತಿ ಇರಲಿಲ್ಲ. ಮಂಜುನಾಥ್‌ರವರು ಅರ್ಹತೆಯ ಮೇರೆಗೆ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ನೀಡಿ ಅವರನ್ನು ಕೆಲಸಕ್ಕೆ ವಿದ್ಯುಕ್ತರನ್ನಾಗಿ ಮಾಡಿದರು. ಹಾಗಾಗಿ ಗ್ರಾಮಾಭಿವೃದ್ಧಿ ಯೋಜನೆ ಬೃಹತ್ ಕಾರ್ಯಕ್ರಮವಾಯಿತು.
ಕಳೆದ ಕೆಲವೇ ವರ್ಷಗಳಲ್ಲಿ 90 ಸಾವಿರ ವಿದ್ಯಾರ್ಥಿಗಳಿಗೆ ರೂ. 104 ಕೋಟಿ ಸುಜ್ಞಾನನಿಧಿ ಶಿಷ್ಯವೇತನವನ್ನು ನೀಡಿದ್ದೇವೆ. ಶುದ್ಧಗಂಗಾ ಘಟಕ, ನಮ್ಮೂರು ನಮ್ಮ ಕೆರೆ, ಹಿಂದೂ ರುದ್ರಭೂಮಿ, ವಾತ್ಸಲ್ಯ ಮನೆ ನಿರ್ಮಾಣ, ಶ್ರದ್ಧಾಕೇಂದ್ರಗಳ ಸ್ವಚ್ಛತೆ ಹೀಗೆ ಯೋಜನೆಯಲ್ಲಿ ಇಲ್ಲದ ಕಾರ್ಯಕ್ರಮಗಳೇ ಇಲ್ಲ ಎನ್ನಬಹುದು. ತಿಂಗಳಿಗೆ 150ಕ್ಕೂ ಹೆಚ್ಚು ದೇವಾಲಯಗಳಿಗೆ ಕ್ಷೇತ್ರದಿಂದ ಸಹಾಯ ಮಾಡುತ್ತೇವೆ. ಈ ಎಲ್ಲಾ ಕಾರ್ಯಕ್ರಮಗಳ ಹಿಂದೆ ಮಂಜುನಾಥ್‌ರವರ ನಾಯಕತ್ವ ಕೆಲಸ ಮಾಡಿದೆ.
ಒಂದು ಸಂಸ್ಥೆಯ ನಾಯಕನಾಗಬೇಕಾದರೆ ಅವರಲ್ಲಿ ನವರಸಗಳು ಇರಬೇಕು. ಇ.ಡಿ.ಯವರಲ್ಲಿ ಓರ್ವ ಆದರ್ಶ ನಾಯಕನಿಗಿರಬೇಕಾದ ಎಲ್ಲ ಗುಣಗಳು ಇದೆ. ಅವರು ನೋಡಲು ಗಂಭೀರ ಸ್ವಭಾವದವರಂತೆ ಕಂಡರೂ ಅವರ ಮನಸ್ಸು ಹೂವಿನಂತೆ ಮೃದು. ಇ.ಡಿ.ಯವರನ್ನು ಅರ್ಥೈಸಿಕೊಂಡ ಕಾರ್ಯಕರ್ತರು ಇಂದು ಅವರ ಗೆಳೆಯರಂತೆ ಇದ್ದಾರೆ. ಅಗತ್ಯ ಸಂದರ್ಭದಲ್ಲಿ ದೃಢವಾದ ಸಂಕಲ್ಪವನ್ನು, ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಗ್ರಾಮಾಭಿವೃದ್ಧಿ ಯೋಜನೆಯನ್ನು ಅವರು ಬೆಳೆಸಿದ್ದಾರೆ. ಮಂಜುನಾಥ್‌ರವರು ಯೋಜನೆಗೆ ಹಾಕಿದ ತಳಹದಿ ದೃಢವಾಗಿದೆ. ಆ ತಳಹದಿಯ ಮೇಲೆ ಹೆಜ್ಜೆ ಇಡುವ ಎಲ್ಲಾ ಕಾರ್ಯಕರ್ತರು ಅವರ ಅನುಭವವನ್ನು ಇನ್ನು ಮುಂದೆಯೂ ಬಳಸಿಕೊಳ್ಳಲಿದ್ದಾರೆ.
‘ಉದಾಸೀನ’ ಎಂಬ ಪದ ಇ.ಡಿ.ಯವರ ಬದುಕಿನಲ್ಲಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಯಾವುದೇ ಒಂದು ಕಾರ್ಯಕ್ರಮವನ್ನು ಆರಂಭಿಸಬೇಕಾದರೆ ನಮ್ಮ ಯೋಚನೆಗಳನ್ನು ಅವರ ಬಳಿ ಹೇಳಿಕೊಂಡರೆ ಸಾಕು, ಮುಂದೆ ಕಾರ್ಯರೂಪಕ್ಕೆ ತಂದು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಿದ್ದರು. ಮುಂಬೈಯಿoದ ಒಬ್ಬರು ಪೊಲೀಸ್ ಅಧಿಕಾರಿ ಬಂದಿದ್ದರು. ಅವರು ಹೇಳುತ್ತಿದ್ದರು ‘ಒಂದೇ ಸಲ ಐದು ವಿಷಯಗಳ ಬಗ್ಗೆ ಚಿಂತನೆ ಮಾಡುತ್ತೇನೆ. ಇಲ್ಲದಿದ್ದರೆ ಮುಂಬಯಿಯoತಹ ನಗರದಲ್ಲಿ ಪೊಲೀಸ್ ಆಗಿರಲು ಸಾಧ್ಯವಿಲ್ಲ ಎಂದು.’ ಹಾಗೆಯೇ ಏಕಕಾಲದಲ್ಲಿ ಹತ್ತಾರು ವಿಷಯಗಳನ್ನು ಯೋಚಿಸುವ, ಅರ್ಥ ಮಾಡಿಕೊಳ್ಳುವ, ಕಾರ್ಯಗತಗೊಳಿಸುವ ಶಕ್ತಿ ಮಂಜುನಾಥ್‌ರವರಲ್ಲಿದೆ.
ಮoಜುನಾಥ್‌ರವರು ಸಮಯಕ್ಕೆ ಬಹಳ ಮಹತ್ವವನ್ನು ಕೊಟ್ಟವರು. ಅವರನ್ನು ಭೇಟಿಯಾಗಲು ಹೋದವರನ್ನು ತಕ್ಷಣ ಮಾತನಾಡಿಸಿ ಕಳುಹಿಸುತ್ತಿದ್ದರು. ಅನಗತ್ಯ ಮಾತುಕತೆಯಿಂದ ಸಂಸ್ಥೆಗೂ ನಷ್ಟ. ತನ್ನ ಸಮಯವು ನಷ್ಟವಾಗುತ್ತದೆ ಎಂಬುವುದನ್ನು ಅವರು ನಂಬಿದ್ದರು. ಅವರು ಮಧ್ಯಾಹ್ನ ಊಟಕ್ಕೆ ಹೋದರೆ ತಕ್ಷಣ ಕಚೇರಿಗೆ ಬಂದು ಬಿಡುತ್ತಿದ್ದರು. ಅವರು ನಿಂತುಕೊoಡೆ ಊಟ ಮಾಡಿ ಬರುತ್ತಾರೆ ಎಂಬ ಮಾತನ್ನು ಕೇಳಿದ್ದೆ. ಇನ್ನು ಯೋಜನೆಯ ಕ್ಷೇತ್ರ ಸಂದರ್ಶನಗಳಿಗೆ ಹೋಗುವಾಗ ಅವರ ಕಾರು ಎಷ್ಟೇ ವೇಗವಾಗಿ ಹೋದರೂ ಸಾಕಾಗುತ್ತಿರಲಿಲ್ಲವಂತೆ. ಅವರ ಕಾರ್ಯವೈಖರಿಯಲ್ಲಿ ಅಂತಹ ವೇಗವಿತ್ತು.
ಅವರು ಉತ್ತಮ ಭಾಷಣಕಾರರು ಮತ್ತು ಬರಹಗಾರರು ಹೌದು. ‘ನಿರಂತರ’ ಪತ್ರಿಕೆಯ ಮೂಲಕ ಅಗತ್ಯ ಸಂದೇಶಗಳನ್ನು ಯೋಜನೆಯ ಫಲಾನುಭವಿ ಮತ್ತು ಕಾರ್ಯಕರ್ತರಿಗೆ ನೀಡುತ್ತಿದ್ದರು. ಓರ್ವ ಇ.ಡಿ.ಯಾಗಿ ನಿರಂತರ ಪತ್ರಿಕೆಯ ಪ್ರಧಾನ ಸಂಪಾದಕತ್ವ ವಹಿಸಿ ಇಂದು ೧೦ ಲಕ್ಷ ನಿರಂತರ ಚಂದಾದಾರರನ್ನು ಗುರುತಿಸುವಲ್ಲಿ ಅವರ ಪರಿಶ್ರಮವಿದೆ. ಇಂಗ್ಲಿಷ್ ಪತ್ರಿಕೆಗಳಿಗೆ ಪೈಪೋಟಿ ನೀಡಬಲ್ಲ ಮಟ್ಟಕ್ಕೆ ನಿರಂತರ ಬೆಳೆದಿದೆ. ಕ್ಯÆ ಆರ್ ಕೋಡ್ ಮೂಲಕ ಲೇಖನಗಳನ್ನು ಕೇಳುವ, ವೀಡಿಯೋ ನೋಡುವ ಮುಂತಾದ ತಂತ್ರಜ್ಞಾನ ನಿರಂತರದಲ್ಲಿ ಬಳಕೆಯಾಗುತ್ತಿದೆ. ಕನ್ನಡ ಪ್ರತಿಕೋದ್ಯಮದಲ್ಲಿ ಇಂತಹ ಪ್ರಥಮ ಪ್ರಯೋಗಗಳನ್ನು ಮಾಡಿದ ಹೆಗ್ಗಳಿಕೆ ಇ.ಡಿ. ಮತ್ತು ನಿರಂತರ ಸಂಪಾದಕೀಯ ಮಂಡಳಿಯದ್ದು. ಸಮಯಕ್ಕೆ ಸರಿಯಾಗಿ ನಿರಂತರ ಪ್ರಕಟವಾಗುವಂತೆ, ಓದುಗರಿಗೆ ತಲುಪುವಂತೆ ಇ.ಡಿ.ಯವರು ನೋಡಿಕೊಂಡಿದ್ದಾರೆ. ಯೋಜನೆಯ ಇತರ ಬಿಡುವಿಲ್ಲದ ಕೆಲಸಗಳೊಂದಿಗೂ ಬರವಣಿಗೆಗಾಗಿ ಸಾಕಷ್ಟು ಸಮಯವನ್ನು ಅವರು ಮೀಸಲಿರಿಸಿದ್ದಾರೆ.
ಮಂಜುನಾಥ್‌ರವರ ಪತ್ನಿ, ಮಕ್ಕಳು ಕೂಡಾ ಯೋಜನೆಯ ಕೆಲಸಗಳಲ್ಲಿ ಸಹಕಾರವನ್ನು ನೀಡಿದ್ದಾರೆ. ಅದನ್ನು ಗುರುತಿಸುತ್ತಾ ಮಂಜುನಾಥ್‌ರವರ ಕೆಲಸದ ಶೈಲಿ, ಅವರ ಮಾದರಿ ನಾಯಕತ್ವ ಮುಂದೆ ನಮಗೆ ಆದರ್ಶವಾಗಿರುತ್ತದೆ. ಅವರ ನಿವೃತ್ತಿಯ ಬದುಕು ತೃಪ್ತಿಯಿಂದ ಕೂಡಿರಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.