ಮಾನವೀಯ ಕಾಳಜಿ ಮುಖ್ಯ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು

ಯಾವುದೇ ಒಂದು ಉದ್ಯೋಗಕ್ಕೆ, ಒಂದು ಪದವಿಗೆ ಅಥವಾ ಯಾವುದೇ ವೃತ್ತಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಕೇವಲ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಾತ್ರಕ್ಕೆ, ಇಲ್ಲವೇ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದವರನ್ನೇ ಸೂಕ್ತ ವ್ಯಕ್ತಿಗಳೆಂದು ಹೇಳುವಂತಿಲ್ಲ. ಭಾರತ ಸರಕಾರವು ಉತ್ತಮ ಆಡಳಿತಗಾರರನ್ನು ಆರಿಸಿಕೊಳ್ಳುವ ದೃಷ್ಟಿಯಿಂದ ಐ.ಎ.ಎಸ್., ಐ.ಪಿ.ಎಸ್. ಮೊದಲಾದ ರಾಷ್ಟçಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿದ ಬಳಿಕ ಸೂಕ್ತ ತರಬೇತಿಯ ವ್ಯವಸ್ಥೆಯನ್ನೂ ಮಾಡುತ್ತದೆ. ಪ್ರಾಚೀನ ಕಾಲದಲ್ಲಿ ಇಂತಹ ಆಯ್ಕೆ ಹೇಗೆ ನಡೆಯುತ್ತಿತ್ತು? ಎಂಬುದಕ್ಕೆ ಒಂದು ಸ್ವಾರಸ್ಯಕರ ನಿದರ್ಶನ ಇಲ್ಲಿದೆ.
ಭಾರತೀಯ ಆಯುರ್ವೇದ ಶಾಸ್ತ್ರದ ಪ್ರಕಾಂಡ ಪಂಡಿತರಾದ ನಾಗಾರ್ಜುನ ಅವರಿಗೆ ಓರ್ವ ಸಮರ್ಥ ಸಹಾಯಕನ ಆವಶ್ಯಕತೆಯಿತ್ತು. ಅನೇಕ ವೈದ್ಯಕೀಯಾಸಕ್ತ ಯುವಕರು ಉತ್ಸಾಹದಿಂದ ಮುಂದೆ ಬಂದರು. ಅವರ ಪೈಕಿ ಅಂತಿಮ ಪರೀಕ್ಷೆಗಾಗಿ ಇಬ್ಬರನ್ನು ಆಯ್ದುಕೊಂಡ ನಾಗಾರ್ಜುನರು, ಅವರಿಬ್ಬರ ಮುಂದೆ ಒಂದು ಸವಾಲನ್ನಿರಿಸಿದರು. – “ಎರಡು ದಿನಗಳೊಳಗೆ ಒಂದು ಉತ್ತಮ ಔಷಧಿಯನ್ನು ಸಿದ್ಧಪಡಿಸಿಕೊಂಡು ಬರಬೇಕು.’’
ಇಬ್ಬರು ಯುವಕರೂ ತಮ್ಮ – ತಮ್ಮ ಮನೆಗಳಿಗೆ ತೆರಳಿದರು. ಮೂರನೇ ದಿನ ನಿಶ್ಚಿತ ವೇಳೆಗೆ ಇಬ್ಬರೂ ಹಾಜರಾದರು. ಅವರ ಪೈಕಿ ಒಬ್ಬನ ಔಷಧಿ ಸಿದ್ಧವಾಗಿತ್ತು. ಮತ್ತೊಬ್ಬನ ಹಸ್ತ ಖಾಲಿಯಾಗಿತ್ತು. ಆದರೆ ಆತ ನಾಗಾರ್ಜುನರೊಡನೆ ಕ್ಷಮೆಯಾಚಿಸುತ್ತಾ ನುಡಿದ – “ಮಹಾಶಯರೇ, ನನ್ನನ್ನು ಮನ್ನಿಸಿ. ನಾನು ನಿಶ್ಚಿತ ಸಮಯದಲ್ಲಿ ಔಷಧಿ ತಯಾರಿಸಲು ಅಸಮರ್ಥನಾದೆ. ಕಾರಣವೇನೆಂದರೆ ನಾನು ನನ್ನ ಮನೆಯತ್ತ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ಓರ್ವ ಅನಾರೋಗ್ಯಪೀಡಿತನಾದ ವೃದ್ಧನನ್ನು ಕಂಡೆ. ಆ ಅಸಹಾಯಕ ವೃದ್ಧ ರೋಗಿಯ ಸೇವೆ, ಶುಶ್ರೂಷೆಯಲ್ಲಿ ತೊಡಗಿ ಅವರನ್ನು ಸ್ವಸ್ಥರನ್ನಾಗಿ ಮಾಡಿದೆ. ಇದರಿಂದಾಗಿ ತಮ್ಮ ಆಜ್ಞೆಯನ್ನು ಪಾಲಿಸಲಿಲ್ಲ. ಔಷಧಿ ತಯಾರಿಸಲಿಲ್ಲ. ಇನ್ನೆರಡು ದಿನಗಳ ಅವಕಾಶ ನೀಡಿ. ಔಷಧಿ ತಯಾರಿಸಿ ಹಾಜರುಪಡಿಸುವೆ..’’
ಆಗ ಎರಡನೇ ಯುವಕ ತಲೆಬಾಗಿ ನಿವೇದಿಸಿದ. “ನಾನು ತಮ್ಮ ಆಜ್ಞೆ ಶಿರಸಾವಹಿಸಿ ಪಾಲನೆ ಮಾಡಿದ್ದೇನೆ. ಔಷಧಿಯನ್ನು ತಯಾರಿಸಿ ತಂದಿದ್ದೇನೆ. ಮನೆಯಲ್ಲಿ ಮಾತೆಗೆ ಸೌಖ್ಯವಿರಲಿಲ್ಲ. ತಮ್ಮನಿಗೂ ಸ್ವಲ್ಪ ನೆಗಡಿಯಿತ್ತು. ಹಾಗಿದ್ದರೂ ನಿಮ್ಮ ಆದೇಶದಂತೆ ನಡೆದಿದ್ದೇನೆ.’’ ಎಂದು ನುಡಿಯುವಾಗ ಆ ಸಹಾಯಕನ ಹುದ್ದೆ ತನಗೇ ಖಂಡಿತ ಪ್ರಾಪ್ತವಾಗಲಿದೆ ಎಂಬ ಭರವಸೆಯಲ್ಲಿದ್ದ. ಆದರೆ ನಾಗಾರ್ಜುನರು ಒಮ್ಮೆಲೇ ಗಂಭೀರರಾದರು. ತಕ್ಷಣವೇ, ‘ನೀನು ಊರಿಗೆ ಹಿಂದಿರುಗಿ ತಾಯಿ ಮತ್ತು ತಮ್ಮನ ಚಿಕಿತ್ಸೆಯನ್ನಾರಂಭಿಸಿ ಬಿಡು. ಔಷಧಿಯ ಉದ್ದೇಶವೇ ಆರೋಗ್ಯ ರಕ್ಷಣೆಯ ಮೂಲಕ ಜನರ ಜೀವನ ರಕ್ಷಣೆ ಮಾಡುವುದು. ಆ ಕರ್ತವ್ಯ ಪಾಲನೆ ಮಾಡದ ನಿನ್ನ ಔಷಧ ಉತ್ಪಾದನೆಯಿಂದ ಫಲವೇನು?’ ಎಂದು ನುಡಿದು ಸಹಾಯಕ ಹುದ್ದೆಗೆ ದಾರಿಹೋಕ ವೃದ್ಧನ ರೋಗ ನಿವಾರಣೆ ಮಾಡಿದ ಯುವಕನನ್ನೇ ಆಯ್ಕೆ ಮಾಡಿದರು.
ವೈದ್ಯಕೀಯ ರಂಗದಲ್ಲಿ ಮಾತ್ರವಲ್ಲ, ಯಾವುದೇ ರಂಗದಲ್ಲಿ ಒಂದು ವಿಷಯದಲ್ಲಿ ಪ್ರಾವೀಣ್ಯತೆ ಗಳಿಸುವುದರಲ್ಲಿ ಮಾತ್ರ ಶ್ರದ್ಧೆ, ಆಸಕ್ತಿಯಿದ್ದರೆ ಸಾಲದು, ಅದರ ಬದಲಿಗೆ ಆ ವಿದ್ಯೆಯನ್ನು ಯಾರಿಗೆ ಮತ್ತು ಹೇಗೆ ಉಪಯೋಗಿಸಿ ಪ್ರಯೋಜನ ಗಳಿಸಲು ಸಾಧ್ಯ? – ಎಂಬ ಕುರಿತು ಗಂಭೀರವಾದ ಚಿಂತನೆ ಅತ್ಯಾವಶ್ಯಕ. ಅದಕ್ಕಾಗಿಯೇ ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಿದವರಿಗೆ ಔಷಧಿಗಳ ಬಗೆಗೂ, ಚಿಕಿತ್ಸಾ ವಿಜ್ಞಾನದ ಬಗೆಗೂ ಸಾಕಷ್ಟು ಮಾಹಿತಿ ಮತ್ತು ತರಬೇತಿ ನೀಡುವುದರ ಜೊತೆಗೆ ರೋಗಿಗಳ ಬಗೆಗೆ ಸಹಾನುಭೂತಿ ಮತ್ತು ಮಾನವೀಯ ದೃಷ್ಟಿ ಬೇಕೆಂದು ಮಾರ್ಗದರ್ಶನ ನೀಡಲಾಗುತ್ತದೆ. ಅದಕ್ಕೆಂದೇ ವೈದ್ಯಕೀಯ ಶಿಕ್ಷಣ ಮುಗಿಸಿ ಪದವೀಧರರಾಗುವ ತರುಣ ವೈದ್ಯರಿಗೆ ಪದವಿ – ಪ್ರದಾನ ಸಮಾರಂಭದಲ್ಲಿ ‘ನಾನು ಅತ್ಯಂತ ಶ್ರದ್ಧೆ ಮತ್ತು ಕಾಳಜಿ ವಹಿಸಿ ರೋಗಿಗೆ ಆರೋಗ್ಯದಾನ ಮಾಡುವಂಥ ಸರ್ವ ಪ್ರಯತ್ನ ಮಾಡಿ ಮಾನವೀಯತೆಯನ್ನು ಮೆರೆಯುತ್ತೇನೆ.’ ಎಂದು ಪ್ರತಿಜ್ಞೆ ಮಾಡಿಸುತ್ತಾರೆ.
ವಾಸ್ತವವಾಗಿ ಎಲ್ಲ ರಂಗಗಳಲ್ಲೂ ಈ ತೆರನಾದ ಶ್ರದ್ಧೆ, ಕಾಳಜಿ ಮತ್ತು ಮಾನವೀಯತೆ ಅತ್ಯವಶ್ಯಕ ಎಂಬುದರಲ್ಲಿ ಸಂದೇಹವಿಲ್ಲ. ಒಬ್ಬರ ಕಷ್ಟವನ್ನು ಕೇಳುವ ಕಿವಿ ಎಲ್ಲರಲ್ಲೂ ಇರಬೇಕು. ಅಧಿಕಾರವಿದೆಯೆಂದು ಎಲ್ಲವನ್ನು ಕಾನೂನಿನಡಿ, ನಿಯಮಗಳಡಿ ಮಾಡಿ ಮುಗಿಸುವ ಬದಲು ಅಗತ್ಯಬಿದ್ದಾಗ ಮಾನವೀಯ ಕಾಳಜಿಯನ್ನು ತೋರುವುದು ಅತ್ಯಗತ್ಯ. ಇಂತಹ ಮಾನವೀಯ ಕಾಳಜಿಯನ್ನು ಬೆಳೆಸಿಕೊಂಡವನು ಎಲ್ಲರ ಪ್ರೀತಿಗೂ ಪಾತ್ರನಾಗುತ್ತಾನೆ. ಹುದ್ದೆ, ವಿದ್ಯೆ, ಅಂತಸ್ತಿಗಿoತ ಮುಖ್ಯವಾದುದು ಮಾನವೀಯ ಕಾಳಜಿ. ಎಲ್ಲ ಇದ್ದು ಮಾನವೀಯ ಕಾಳಜಿಯಿಲ್ಲದಿದ್ದರೆ ಅವನು ಇತರರ ಪ್ರೀತಿಯನ್ನು ಗಳಿಸಲಾರ. ಮೆಚ್ಚುಗೆಗೂ ಪಾತ್ರವಾಗಲಾರ. ಈ ಗುಣವನ್ನು ನಾವು ಮಕ್ಕಳಲ್ಲಿ ಚಿಕ್ಕಂದಿನಿAದಲೇ ಬೆಳೆಸುವ ಪ್ರಯತ್ನಗಳನ್ನು ಮಾಡಬೇಕಿದೆ. ಇತರರ ನೋವಿಗೆ ಸ್ಪಂದಿಸುವ, ಕಷ್ಟಕ್ಕೆ ನೆರವಾಗುವ, ಇತರರ ಸಂಕಷ್ಟ ತಮ್ಮದೆಂದು ಬಯಸಿ ತಮ್ಮ ಕೈಲಾದ ನೆರವು ನೀಡುವ ಪ್ರವೃತ್ತಿ ಎಲ್ಲೆಡೆ, ಎಲ್ಲರಲ್ಲಿಯೂ ಬೆಳೆಯಬೇಕಿದೆ.
ಮಾನವೀಯ ಕಾಳಜಿ ಎಲ್ಲರ ಹೃದಯಾಂತರಾಳದಲ್ಲಿ ಮೇಳೈಸಲಿ ಎಂದು ಆಶಿಸೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *