ಮಾಸಾಶನ ಪಡೆಯುವವರ ಮನೆ ಸ್ವಚ್ಛತೆ

ಬೆಳಗಾವಿ ಜಿಲ್ಲೆಯ ಯೋಜನೆಯ ಕರ‍್ಯರ‍್ತರ ಮಾದರಿ ಕೆಲಸ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಶ್ರೀ ಹೆಗ್ಗಡೆ ದಂಪತಿಗಳ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಜೊತೆಗೆ ಅವರಿಂದ ಪ್ರೇರಣೆ ಪಡೆದು ತಾವು ಕೂಡಾ ಒಂದಲ್ಲೊoದು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಯಾವುದೇ ಪ್ರಚಾರವನ್ನು ಬಯಸದೆ ಅವರು ಮಾಡುವ ಸೇವೆಗಳು ಇತರರಿಗೆ ಮಾದರಿಯಾಗಬೇಕೆಂಬ ನಿಟ್ಟಿನಲ್ಲಿ ‘ನಿರಂತರ ಪತ್ರಿಕೆ’ ಅವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಈ ಬಾರಿ ಯೋಜನೆ ವ್ಯಾಪ್ತಿಯ ಬೆಳೆಗಾವಿ 2 ಜಿಲ್ಲೆಯ ಯೋಜನೆಯ ಕಾರ್ಯಕರ್ತರು ಮಾಡಿದ ಅಪೂರ್ವ ಕೆಲಸವೊಂದನ್ನು ಪರಿಚಯಿಸಲಾಗುತ್ತಿದೆ.
ಜಿಲ್ಲಾ ನಿರ್ದೇಶಕರಾದ ಲವ ಕುಮಾರ್‌ರವರು ಗೋಕಾಕ್‌ನ ಕೊಣ್ಣೂರು ಎಂಬಲ್ಲಿಗೆ ಕ್ಷೇತ್ರ ಸಂದರ್ಶನಕ್ಕೆ ಹೋದ ಸಂದರ್ಭದಲ್ಲಿ ಯೋಜನೆಯಿಂದ ಮಾಸಾಶನ ಮಂಜೂರಾಗಿರುವ ರಾಮಪ್ಪ ಎಂಬ ವೃದ್ಧರನ್ನು ಭೇಟಿಯಾಗುತ್ತಾರೆ. ರಾಮಪ್ಪರವರದ್ದು ಮಣ್ಣಿನ ನೆಲದಲ್ಲಿ ವಾಸ. ಅಂಗೈಯಗಲದ ಹಾಸಿಗೆಯನ್ನು ಧೂಳಿನಲ್ಲಿ ಗುರುತಿಸುವುದೇ ಕಷ್ಟ. ಪಕ್ಕದಲ್ಲಿ ನೋಡಿದರೆ ಜೋಳ ರಾಶಿಯನ್ನೇ ಹೋಲುವ ಸೊಂಟದೆತ್ತರಕ್ಕೆ ರಾಶಿಬಿದ್ದ ಹೆಗ್ಗಣ ಸುರಂಗ ತೋಡಿದ ಮಣ್ಣಿನ ರಾಶಿ, ಮನೆಯಲ್ಲಿದ್ದ ಬೆರಳೆಣಿಕೆಯಷ್ಟು ಪಾತ್ರೆಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆಯ ಒಳಗೆ ಇರುವ ಕಟ್ಟಿಗೆಯ ರಾಶಿಯಂತೂ ಗತಕಾಲದ ಇತಿಹಾಸವನ್ನು ನೆನಪಿಸುವಂತಿತ್ತು. ಇನ್ನು ಬಟ್ಟೆಗಳ ಕೊಳಕು, ಅವುಗಳನ್ನು ಇಟ್ಟಿರುವ ರೀತಿಯನ್ನು ನೋಡಿದಾಗ ಕಠೋರ ಮನಸ್ಸುಗಳು ಕರಗುವಂತಿತ್ತು. ಸ್ಥಳೀಯ ಒಕ್ಕೂಟ, ಶೌರ್ಯ ಸ್ವಯಂ ಸೇವಕರ ಸಹಾಯದೊಂದಿಗೆ ಮನೆಯನ್ನು ಸ್ವಚ್ಛಗೊಳಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು. ಮರುದಿನ ಇಲ್ಲಿನ ಯೋಜನಾಧಿಕಾರಿ ಧರ್ಮೇಂದ್ರ ಮತ್ತು ಮೇಲ್ವಿಚಾರಕರಾದ ಶ್ರೀಮತಿ ರೇಣುಕಾ ಹಿರೇಮಠ ಮತ್ತು ಅವರ ತಂಡ ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿದರು. ಉಪಯೋಗಕ್ಕೆ ಬಾರದ ವಸ್ತುಗಳು ಕಸದ ಬುಟ್ಟಿ ಸೇರಿದವು. ಸ್ಥಳೀಯರು ಈ ಕೆಲಸವನ್ನು ಮೆಚ್ಚಿ ಸ್ವಲ್ಪ ಸಿಮೆಂಟ್, ಮರಳನ್ನು ನೀಡಿದರು. ನೆಲಕ್ಕೆ ಗಾರೆಯ ವ್ಯವಸ್ಥೆಯು ಆಯಿತು. ಕೆಲಸ ಮುಗಿದೊಡನೆ ವೃದ್ಧ ಎರಡು ಕೈಗಳನ್ನೆತ್ತಿ ‘ನನ್ನಲ್ಲಿ ನಿಮಗೆ ಕೊಡಲು ಏನು ಇಲ್ಲ’ ಎಂಬ ಭಾವನೆಯೊಂದಿಗೆ ನಮಸ್ಕರಿಸಿದಾಗ ಕಾರ್ಯಕರ್ತರಿಗೆ ತಾವು ಮಾಡಿದ ಕೆಲಸ ಸಾರ್ಥಕವೆಂದೆನಿಸಿತು.
ಕಾರ್ಯಕರ್ತರಿಗೆ ಪ್ರೇರಣೆ : ಮನೆಯ ಸ್ವಚ್ಛತೆಯ ವಿಷಯ ಜಿಲ್ಲೆಯ ಇತರ ಕಾರ್ಯಕರ್ತರಿಗೂ ಪ್ರೇರಣೆಯಾಯಿತು. ‘ಜಿಲ್ಲೆಯಾದ್ಯಂತ ಮಾಸಾಶನ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳ ಮನೆಯ ಸ್ವಚ್ಛತೆ ಕೆಲಸವನ್ನು ಮಾಡೋಣ!’ ಎಂದು ಯೋಜನಾಧಿಕಾರಿಗಳಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಎಲ್ಲರೂ ತಮ್ಮ ಪಾಲಿಗೆ ದೊರೆತ ಅಪೂರ್ವ ಅವಕಾಶವೆಂದು ಆ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಂಡರು.
ಸ್ವಚ್ಛಗೊoಡವು 222 ಮನೆಗಳು : ಜಿಲ್ಲೆಯಲ್ಲಿ 310 ಮಂದಿ ಮಾಸಾಶನವನ್ನು ಪಡೆಯುತ್ತಿದ್ದಾರೆ. ಅವರುಗಳಲ್ಲಿ ಕೆಲವೊಂದು ಮನೆಗಳು ಸ್ವಚ್ಛಗೊಂಡಿದ್ದವು. ಅವುಗಳನ್ನು ಹೊರತುಪಡಿಸಿ ಉಳಿದಂತೆ 222 ಮನೆಗಳ ಸ್ವಚ್ಛತಾ ಕೆಲಸವನ್ನು ಯೋಜನೆಯ ಕಾರ್ಯಕರ್ತರು ಈಗಾಗಲೇ ಮಾಡಿ ಮುಗಿಸಿದ್ದಾರೆ. ಈ ಕೆಲಸಗಳಿಗೆ ಜ್ಞಾನವಿಕಾಸ ಕೇಂದ್ರದ ಸದಸ್ಯರು, ಶೌರ್ಯ ಸ್ವಯಂ ಸೇವಕರು, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಯೋಜನೆಯ ಎಲ್ಲ ಕಾರ್ಯಕರ್ತರು ಕೈ ಜೋಡಿಸಿದ್ದಾರೆ.
ಮನೆಯ ಒಳಾಂಗಣ – ಹೊರಾಂಗಣ, ಬಟ್ಟೆ, ಪಾತ್ರೆಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಮನೆಯ ಮೇಲ್ಛಾವಣಿ, ಕಿಟಕಿ, ಬಾಗಿಲುಗಳ ದುರಸ್ಥಿ, ಸುಣ್ಣ – ಬಣ್ಣ ಬಳಿಯುವ ಮುಂತಾದ ಕೆಲಸಗಳನ್ನು ಮಾಡಲಾಗಿದ್ದು ಯೋಜನೆಯ ಈ ಕೆಲಸ ಜಿಲ್ಲೆಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *