ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಇತ್ತೀಚೆಗೆ ನಾನು ಶೃಂಗೇರಿಗೆ ಹೋದಾಗ ಅಲ್ಲಿ ಅತ್ಯಂತ ಎಳೆಯ ವಯಸ್ಸಿನ ಹುಡುಗನೊಬ್ಬ ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ. ಅಲ್ಲಿಯ ಪರಿಚಯಸ್ಥರಲ್ಲಿ ನಾನು ಆತಂಕದಿAದ ಕೇಳಿದೆ ‘ಜ್ಞಾನ ಮತ್ತು ಸಂಸ್ಕಾರಕ್ಕೆ ಹೆಸರಾದ ನಮ್ಮ ಶೃಂಗೇರಿಗೂ ಇಂತಹ ಪರಿಸ್ಥಿತಿ ಬಂತೇ?’ ನನ್ನ ಪ್ರಶ್ನೆಗೆ ಬಹಳ ಬೇಸರದಿಂದ ‘ಹೌದು’ ಎಂದು ತಲೆಯಾಡಿಸಿದರು. ಹಾಗೆಯೇ ಅಲ್ಲಿದ್ದ ಸಜ್ಜನರ ನಡುವೆ ಒಂದು ಸಣ್ಣ ಚರ್ಚೆಯೂ ಮುಂದುವರೆಯಿತು. ಕೆಲವು ಬ್ಯಾಕ್ಟೀರಿಯಾ, ವೈರಸ್‌ಗಳು ಭೀಕರ ಸಾಂಕ್ರಾಮಿಕ ರೋಗಗಳನ್ನು ತಂದು ಮನುಕುಲದ ಆರೋಗ್ಯವನ್ನು ಸಾಂಕ್ರಾಮಿಕವಾಗಿ ನಾಶ ಮಾಡಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಆ ವೈರಸ್, ಬ್ಯಾಕ್ಟೀರಿಯಾಕ್ಕಿಂತಲೂ ಭೀಕರತೆಯನ್ನು ಸೃಷ್ಟಿಸುವ ಅನೇಕ ವಿಷಯಗಳು ಈ ಸಮಾಜದಲ್ಲಿ ಆವರಿಸುತ್ತಿವೆ. ಅವುಗಳು ಮೇಲ್ನೋಟಕ್ಕೆ ಆರೋಗ್ಯವನ್ನು ನಾಶ ಮಾಡುವುದಿಲ್ಲ. ಬದಲಾಗಿ ಯುವಜನತೆಯನ್ನೇ ಗುರಿಯಾಗಿಸಿ ಅವರ ಅಸ್ತಿತ್ವ ಹಾಗೂ ಭವಿಷ್ಯದ ಮೂಲಾಧಾರ ಆಗಿರಬೇಕಾಗಿದ್ದ ಸಂಸ್ಕಾರಗಳನ್ನೇ ನಾಶ ಮಾಡುತ್ತವೆ. ಒಬ್ಬ ಯುವಕನಿಗೆ ದುರಾಭ್ಯಾಸಕ್ಕೆ ಪ್ರಚೋದನೆ ನೀಡಿ, ಒಮ್ಮೆ ದಾರಿ ತಪ್ಪಿಸಿದರೆ ಆಯಿತು, ಅವನ ಸಂಸ್ಕಾರ ನಾಶವಾಗಲು ಪ್ರಾರಂಭವಾಗುತ್ತದೆ. ಬಹಳ ವೇಗದಲ್ಲಿ ದುರಾಭ್ಯಾಸದ ತೀವ್ರತೆ ಹೆಚ್ಚಾಗುವುದು, ಅಷ್ಟೇ ವೇಗದಲ್ಲಿ ಸಂಸ್ಕಾರವೂ ನಾಶವಾಗುವುದು. ಸಂಸ್ಕಾರವಿಲ್ಲದ ವ್ಯಕ್ತಿ ಅನಾಗರಿಕನಾಗುತ್ತಾನೆ. ಅವನಿಗೆ ಅರಿವಿಲ್ಲದೆ ಸಮಾಜಕ್ಕೆ ಮಾರಕವಾಗುವಂತಹ ಅನೇಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಶಾಂತಿ, ನೆಮ್ಮದಿ, ವಿವೇಚನೆ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಒಳ್ಳೆಯದು, ಕೆಟ್ಟದ್ದನ್ನು ತಿಳಿದುಕೊಳ್ಳುವ ಅರಿವು, ಸಮಾಧಾನವೂ ಅವನಲ್ಲಿ ಇರುವುದಿಲ್ಲ. ಸಮಾಜದ್ರೋಹಿಗಳ ಕೈಗೊಂಬೆಯಾಗಿ ಅವರ ದುಷ್ಕೃತ್ಯಗಳಿಗೆ ಬಹಳ ಸುಲಭವಾಗಿ ಬಲಿಪಶುವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ನಮ್ಮ ದೇಶದ ದುರಂತವೇ ಸರಿ.
ನಮ್ಮ ಚರ್ಚೆಯಲ್ಲಿ ಒಬ್ಬರು ತಿಳಿಸಿದರು, 5 ವರ್ಷಕ್ಕೊಮ್ಮೆ ನಡೆಯುವ ಮತದಾನದ ಮೊದಲು ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಒಂದು ಅಭಿಯಾನ ಪ್ರಾರಂಭವಾಗುತ್ತದೆ. ಅದಕ್ಕಿಂತ ವೇಗವಾಗಿ ಹಾಗೂ ಹೆಚ್ಚು ಸಂಖ್ಯೆಯಲ್ಲಿ ವರ್ಷಕ್ಕೆ 2 ಬಾರಿ ಹೊಸ ಸೇರ್ಪಡೆ ಮತ್ತೊಂದು ಪಟ್ಟಿಗೆ ಆಗುತ್ತದೆ ಎಂದರು. ‘ಅದು ಯಾವುದು ಮತ್ತೊಂದು ಪಟ್ಟಿ?’ ಎಂದು ಕೇಳಿದೆ. ಬಹಳ ನಿರಾಸೆಯಿಂದ “ಅದು ಮದ್ಯಪಾನಿಗಳ ಪಟ್ಟಿ” ಎಂದು ತಿಳಿಸಿದರು. ಪ್ರತೀ ವರ್ಷ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹಾಗೂ ಊರಿನಲ್ಲಿರುವ ಯಾವುದಾದರೂ ದೊಡ್ಡ ಕಾರ್ಯಕ್ರಮವನ್ನು ಒಂದಿಷ್ಟು ಗುಂಪಿನ ಯುವಕರು ಆಯೋಜಿಸಿ, ಕಾರ್ಯಕ್ರಮದ ನಂತರ ಆ ಯಶಸ್ಸನ್ನು ಆನಂದಿಸುವ ಪಾರ್ಟಿಗಳಲ್ಲಿ, ಹೀಗೆ ವರ್ಷದಲ್ಲಿ 2-3 ಬಾರಿ ಹೊಸ ಸದಸ್ಯರ ಸೇರ್ಪಡೆ ತೀವ್ರಗತಿಯಲ್ಲಿ ಮದ್ಯಪಾನಿಗಳ ಪಟ್ಟಿಗೆ ಆಗುತ್ತಿದೆ. ಮತದಾರರ ಪಟ್ಟಿಯ ಹೊಸ ಸೇರ್ಪಡೆಗಿಂತಲೂ ಬಹಳ ವೇಗ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಈ ಪಟ್ಟಿಗೆ ನೋಂದಾವಣೆಯಾಗುತ್ತಿದೆ ಎಂದರೆ, ಯುವಕರು ಹಾಗೂ 18 ವರ್ಷದೊಳಗಿನ ಹದಿಹರೆಯರು ಎಷ್ಟರ ಪ್ರಮಾಣದಲ್ಲಿ ಸೇರುತ್ತಿರಬಹುದೆಂಬುದನ್ನು ಊಹಿಸಿ. ನಾವೆಲ್ಲರೂ ಗಂಭೀರವಾಗಿ ಈ ಬಗ್ಗೆ ಚಿಂತಿಸಬೇಕಾಗಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಬೇಕಾಗಿದೆ. ತಮ್ಮ ಮಕ್ಕಳು ಎಂತಹ ಜನರ ಸಹವಾಸ ಮಾಡುತ್ತಿದ್ದಾರೆ? ಅವರ ಹಿನ್ನೆಲೆ ಏನು? ಅವರ ಚಲನವಲನಗಳೇನು? ಇತ್ಯಾದಿ ವಿವರಗಳನ್ನು ಪೋಷಕರು ಜವಾಬ್ದಾರಿಯಿಂದ ಪರಿಶೀಲಿಸಬೇಕಾಗಿದೆ. ಎಷ್ಟೋ ಮುಗ್ಧ ಮಕ್ಕಳು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಯಾವುದೋ ಸಂದರ್ಭದಲ್ಲಿ, ಯಾರಿಂದಲೋ ತಪ್ಪು ಹೆಜ್ಜೆ ಇಡುತ್ತಾರೆ. ಆ ಕ್ಷಣದಲ್ಲಿ ಅವರನ್ನು ಸರಿದಾರಿಗೆ ಕರೆದೊಯ್ಯುವ ಆಪತ್ಬಾಂಧವರು ಇಲ್ಲದಿದ್ದಲ್ಲಿ ಅವರ ಭವಿಷ್ಯ ಒಂದು ದುರಂತವೇ ಆಗುತ್ತದೆ. ತಮ್ಮ ಮಕ್ಕಳಿಗೆ ಸವಲತ್ತು ಒದಗಿಸುವುದು ಪೋಷಕರ ಎರಡನೇ ಜವಾಬ್ದಾರಿಯಾಗಿದೆ. ಅದು ಅಷ್ಟು ಮುಖ್ಯವಲ್ಲ. ಬಹಳ ಮುಖ್ಯವಾಗಿರುವುದು ಹಾಗೂ ಪ್ರಥಮ ಜವಾಬ್ದಾರಿ ಎಂದರೆ ತಮ್ಮ ಮಕ್ಕಳಿಗೆ ಸಂಸ್ಕಾರ ನೀಡಿ, ಪೋಷಿಸಿ ಅವರ ವ್ಯಕ್ತಿತ್ವದಲ್ಲಿ ಆ ಸಂಸ್ಕಾರ ಶಾಶ್ವತವಾಗಿ ನೆಲೆಯೂರುವಂತೆ ಮಾಡಬೇಕು.
ಪೂಜ್ಯ ಖಾವಂದರು ಯುವಜನತೆಯ ನಾಳಿನ ಬದುಕಿಗಾಗಿ, ಅವರ ಭದ್ರ ಭವಿಷ್ಯಕ್ಕಾಗಿ ಸಾಕಷ್ಟು ಶ್ರೇಷ್ಠ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ರುಡ್‌ಸೆಟ್, ಆರ್‌ಸೆಟ್ ಎನ್ನುವ ಒಂದು ವಿಶ್ವಮಾನ್ಯ ಕಾರ್ಯಕ್ರಮದ ಮೂಲಕ ಸುಮಾರು 42 ಲಕ್ಷ ಮಂದಿ ನಿರುದ್ಯೋಗಿ ಯುವಕರಿಗೆ ಸ್ವಉದ್ಯೋಗ ತರಬೇತಿಗಳನ್ನು ನೀಡಿ ಅವರು ತಮ್ಮ ಸ್ವಂತ ಕಾಲುಗಳ ಮೇಲೆ ನಿಲ್ಲುವಂತೆ ಮಾಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ‘ಮದ್ಯವರ್ಜನ ಶಿಬಿರ’ಗಳ ಮೂಲಕ ಬದುಕು ಕಟ್ಟಿಕೊಂಡ ಲಕ್ಷಾಂತರ ಜನರಲ್ಲಿ ಯುವಕರದ್ದೇ ಸಿಂಹಪಾಲು.
ಕಳೆದ 26 ವರ್ಷಗಳಿಂದ ಯುವಜನತೆಗಾಗಿ ಭಜನಾ ಕಮ್ಮಟಗಳನ್ನು ಪ್ರತೀ ವರ್ಷ ಆಯೋಜಿಸಿ, ಸುಮಾರು 5,600 ಮಂದಿಗೆ ಭಜನಾ ತರಬೇತಿಯನ್ನು ನೀಡಲಾಗಿದೆ. ಶ್ರೀ ಮಂಜುನಾಥ ಭಜನಾ ಪರಿಷತ್‌ನ ಮೂಲಕ 44,000 ಮಂದಿಯನ್ನು ಭಜಕರನ್ನಾಗಿ ಮಾಡಲಾಗಿದೆ. ಯುವ ಜನತೆಯಲ್ಲಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಮಹಾ ಪೋಷಕರು ಪೂಜ್ಯ ಖಾವಂದರಾಗಿದ್ದಾರೆ.