ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್. ಎಚ್. ಮಂಜುನಾಥ್‌ರವರು ಎಲ್ಲರಿಗೂ ಚಿರಪರಿಚಿತರು. ಯೋಜನೆಯಲ್ಲಿ ಸುಮಾರು 23 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಅವರು ಇದೀಗ ನಿವೃತ್ತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಇತರರಿಗೆ ಪ್ರೇರಣೆಯಾಗಬಲ್ಲ ಅವರ ಕೆಲವು ವಿಶೇಷ ಗುಣಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಯೋಜನೆಗೆ ಸೇರಿದ ಆರಂಭದ ದಿನ ಅಪಘಾತವಾಗಿ ಒಂದು ಕೈಯನ್ನು ಕುತ್ತಿಗೆಗೆ ಕಟ್ಟಿಕೊಂಡು ಬಂದಿದ್ದ ನೆನಪು. ಕೈ ನೋವಿದ್ದರೂ ‘ನನಗೆ ವಿಶ್ರಾಂತಿ ಬೇಕು, ನೋವು ಗುಣಮುಖವಾದ ಮೇಲೆ ಕೆಲಸಕ್ಕೆ ಸೇರುತ್ತೇನೆ’ ಎಂದು ಹೇಳಲಿಲ್ಲ. ಯೋಜನೆಯ ಕಾರ್ಯಕ್ರಮಗಳಿಗಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ನಿದ್ದೆ ಮಾಡುತ್ತಿದ್ದರೂ ತನ್ನ ಒಂದು ಕೈಯಿಂದ ಗಾಡಿ ಚಾಲಕನಿಗೆ ಬೇಗ ಹೋಗು ಎಂದು ಸಂಜ್ಞೆ ಮಾಡುತ್ತಿದ್ದರಂತೆ. ಅಂದರೆ ಜೀವನದಲ್ಲಿ ಅವರು ಕರ್ತವ್ಯ ಮತ್ತು ವೇಗಕ್ಕೆ ಬಹಳ ಮಹತ್ವ ಕೊಟ್ಟವರು. ಇಂದು ‘ಗ್ರಾಮಾಭಿವೃದ್ಧಿ ಯೋಜನೆ’ ದೇಶದಲ್ಲೇ ಹೆಸರು ಮಾಡಿದೆ. ಇದೊಂದು ಅನುಕರಣೀಯ ಮಾದರಿ ಎಂಬುದರ ಹಿಂದೆ ಮಂಜುನಾಥ್‌ರವರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಪರಿಶ್ರಮ ಬಹಳಷ್ಟಿದೆ.
‘ಗ್ರಾಮಾಭಿವೃದ್ಧಿ ಯೋಜನೆ’ ಎಂಬ ರಥಕ್ಕೆ ಒಂದೇ ಕುದುರೆ ಅಲ್ಲ, ಸೂರ್ಯನ ರಥದಂತೆ ಏಳಕ್ಕಿಂತಲೂ ಹೆಚ್ಚಿನ ಕುದುರೆಗಳಿವೆ. ಪ್ರಾದೇಶಿಕ ನಿರ್ದೇಶಕರು ಎಂಬ ಏಳು ಕುದುರೆಗಳ ಜೊತೆಗೆ ಇತರ ಎಲ್ಲಾ ನಿರ್ದೇಶಕರುಗಳನ್ನು, ಕಚೇರಿಗಳನ್ನು ಮತ್ತು ಎಲ್ಲಾ ಕಾರ್ಯಕ್ರಮಗಳನ್ನು ಹೀಗೆ ಎಲ್ಲರನ್ನು ಮತ್ತು ಎಲ್ಲವನ್ನು ನಿಭಾಯಿಸಿ, ನಿಯಂತ್ರಿಸಿ ಸರಿ ದಾರಿಯಲ್ಲಿ ನಡೆಸಬೇಕಾದದ್ದು ಸಾರಥಿಗೆ ಒಂದು ದೊಡ್ಡ ಸವಾಲು. ಇದನ್ನು ಸಮರ್ಥವಾಗಿ ನಿರ್ವಹಿಸಿದವರು ಮಂಜುನಾಥ್‌ರವರು. ರಥದ ವೇಗ ಮತ್ತು ಅದು ಯಾವ ರೀತಿಯಲ್ಲಿ ನಡೆಯಬೇಕು ಎಂಬುದರ ಹಿಂದೆ ಸಾರಥಿಯ ಚಾಣಕ್ಷತನ ಕೆಲಸ ಮಾಡುತ್ತದೆ. ಅನೇಕ ಸಲ ನಾವು ಈ ಸಾರಥಿಯ ಮೇಲೆ ಸ್ವಲ್ಪ ನಿಯಂತ್ರಣವನ್ನು ಇಡುತ್ತಿದ್ದೆವು. ಇಲ್ಲದೆ ಇದ್ದರೆ ಬಹುಶಃ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಿಗೂ ಗ್ರಾಮಾಭಿವೃದ್ಧಿ ಯೋಜನೆ ಎಂಬ ರಥ ಚಲಿಸುತ್ತಿತ್ತು.
ಓರ್ವ ಸಾಮಾನ್ಯ ರೈತನೊಂದಿಗೆ, ಅಧಿಕಾರಿಗಳೊಂದಿಗೆ ಮಾತ್ರ ಅಲ್ಲ, ಬೇರೆ ಬೇರೆ ಇಲಾಖೆಗಳಿಗೆ ಸಂಬAಧಿಸಿದ ಮಂತ್ರಿಗಳೊoದಿಗೆ ಆಯಾ ವಿಷಯಕ್ಕೆ ಸಂಬoಧಿಸಿದoತೆ ಚರ್ಚಿಸಬಲ್ಲ ಮತ್ತು ಅವರ ಮನವೊಲಿಸಬಲ್ಲ ಚಾಣಕ್ಷತೆ ಮಂಜುನಾಥ್‌ರವರಲ್ಲಿತ್ತು. ಮಂಜುನಾಥ್‌ರವರು ಎಂದೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದವರಲ್ಲ. ಅವರು ಊರೂರು ಸುತ್ತಾಡಿ ಅಲ್ಲಲ್ಲಿ ಸೇವಾಪ್ರತಿನಿಧಿಗಳು, ಯೋಜನಾಧಿಕಾರಿಗಳು, ನಿರ್ದೇಶಕರು, ಪ್ರಾದೇಶಿಕ ನಿರ್ದೇಶಕರು ಹೀಗೆ ಎಲ್ಲರನ್ನು ಹುರಿದುಂಬಿಸುತ್ತಿದ್ದರು. ಅವರ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದರು. ಯಾವುದೇ ಸಮಸ್ಯೆ ಇರಲಿ ಅದಕ್ಕೆ ಮಂಜುನಾಥ್‌ರವರಲ್ಲಿ ಉತ್ತರ ಇರುತ್ತಿತ್ತು. ಅವರ ಉತ್ತರ ಸಕಾರಾತ್ಮಕವಾಗಿರುತ್ತಿತ್ತು ಮತ್ತು ಪ್ರೇರಣಾತ್ಮಕವಾಗಿರುತ್ತಿತ್ತು.
ಯಾರ ಉಸಿರು, ಊಟ, ನಿದ್ದೆ, ಮಾತು, ನಡೆ ಎಲ್ಲವೂ ಸಂಸ್ಥೆಯಾಗಿರುತ್ತದೆಯೋ ಅಂತವರು ಮಾತ್ರ ಸಾಧನೆಯನ್ನು ಮಾಡಲು ಸಾಧ್ಯ. ಇಂತಹ ದೊಡ್ಡ ಸಂಸ್ಥೆಯನ್ನು ನಡೆಸಬೇಕಾದರೆ ಅವರು ಕೇವಲ ಓರ್ವ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರೆ ಸಾಲದು, ಅವರ ಇಡೀ ಬದುಕು ಅದರ ಸುತ್ತ ಸುತ್ತಾಡಬೇಕಾಗುತ್ತದೆ. ಅವರು ಸಂಸ್ಥೆಯಲ್ಲಿ ಅಲ್ಲ, ಸಂಸ್ಥೆಗಾಗಿ ಬದುಕಿದವರು. ಟ್ರಸ್ಟ್ನ ಮೀಟಿಂಗ್‌ಗಳಲ್ಲಿ ಟ್ರಸ್ಟಿಗಳ ಪ್ರಶ್ನೆಗಳು ಬಹಳ ಹರಿತವಾಗಿರುತ್ತಿದ್ದವು. ಆದರೆ ಅದಕ್ಕೆಲ್ಲ ಮಂಜುನಾಥ್‌ರವರಲ್ಲಿ ಸಮರ್ಪಕ ಉತ್ತರಗಳಿತ್ತು. ಅವರು ಯಾವುದೇ ಮೀಟಿಂಗ್‌ಗಳಿಗೆ ಬರುವಾಗಲೂ ಸಾಕಷ್ಟು ತಯಾರಿಯನ್ನು ಮಾಡಿಕೊಂಡೇ ಬರುತ್ತಿದ್ದರು. ಮಂಜುನಾಥ್‌ರವರು ಒಬ್ಬ ಒಳ್ಳೆಯ ಭಾಷಣಕಾರರು. ಅವರ ಪ್ರೇರಣಾತ್ಮಕ ಭಾಷಣಗಳು ನಮ್ಮ ಕಾರ್ಯಕರ್ತರ ಮೇಲೆ ಟಾನಿಕ್‌ನಂತೆ ಕೆಲಸ ಮಾಡುತ್ತಿತ್ತು. ಹಾಗೆಯೇ ಅವರು ಒಳ್ಳೆಯ ಬರಹಗಾರರೂ ಹೌದು. ಯಾವುದೇ ಒಂದು ಭಾಷಣವನ್ನು ತಯಾರಿ ಮಾಡಿಕೊಡಿ ಎಂದರೆ ಅವರು ನಿಮಿಷಾರ್ಧದಲ್ಲಿ ಅದನ್ನು ಬರೆದು ತಯಾರಿ ಮಾಡಿಕೊಡುತ್ತಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಪಾರದರ್ಶಕತೆ ಮತ್ತು ಇತರ ಮಾನದಂಡಗಳ ಮಧ್ಯೆ ಮಂಜುನಾಥ್‌ರವರಿಗಿರುವ ಭರವಸೆ ಮತ್ತು ಧೈರ್ಯವೇ ಐ.ಎಸ್.ಒ. ಸಂಸ್ಥೆಯವರನ್ನು ಇಲ್ಲಿಗೆ ಕರೆಸಿ ಯೋಜನೆಯ ಎಲ್ಲ ಮಾನದಂಡಗಳನ್ನು ಪರೀಕ್ಷಿಸಿ ಅವರು ನಮಗೊಂದು ಪ್ರಮಾಣಪತ್ರ ಕೊಡುವ ಹಾಗೆ ಮಾಡಿದೆ. ಇಂತಹ ಸಂಸ್ಥೆಗಳು ಬಹುಶಃ ಅವರನ್ನು ಕರೆಸುವ ಕೆಲಸವನ್ನು ಮಾಡುವುದಿಲ್ಲ. ಯಾಕೆಂದರೆ ಇದೊಂದು ಸಾರ್ವಜನಿಕ ಸೇವೆಯಲ್ಲಿರುವ ಸಂಸ್ಥೆ. ಅಂದು ಯಾವುದೇ ಒಂದು ಕಾಗದ ಪತ್ರಗಳಿಲ್ಲದೆ ಯೋಜನೆ ನಡೆದು ಬಂದ ದಾರಿಯನ್ನು ಅಂಕಿ – ಅಂಶಗಳ ಸಮೇತ ಅಧಿಕಾರಿಗಳ ಎದುರು ಮಂಜುನಾಥ್‌ರವರು ಮಂಡಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ಇಷ್ಟು ವರ್ಷ ಯೋಜನೆಯಲ್ಲಿ ಪಳಗಿದ ಪರಿಣತಿ ಅವರ ಮಾತುಗಳಲ್ಲೇ ಪ್ರತಿನಿಧಿಸುತ್ತಿತ್ತು. ಸಾಮಾನ್ಯವಾಗಿ ಕೆಲವೆಡೆ ಮೇಲಾಧಿಕಾರಿಗಳು ಕ್ಷೇತ್ರ ಸಂದರ್ಶನಕ್ಕೆ, ಕಚೇರಿ ಭೇಟಿಗೆ ಬರುತ್ತಾರೆಂದರೆ ಕಾರ್ಯಕರ್ತರು ಅಡಗಿಸಿಕೊಳ್ಳುವುದು ಇದೆ. ಆದರೆ ಯೋಜನೆಯ ಕಾರ್ಯಕರ್ತರು ಪೂಜ್ಯರು ಬರುತ್ತಾರೆಂದರೆ ತುಂಬಾ ಸಂತೋಷಪಡುತ್ತಾರೆ. ಇ.ಡಿ.ಯವರು ಕ್ಷೇತ್ರ ಸಂದರ್ಶನಕ್ಕೆ ಹೋದಾಗಲೂ ತಮ್ಮ ಕಾರ್ಯಕ್ರಮಗಳ ವರದಿಗಳನ್ನು ಒಪ್ಪಿಸುತ್ತಾರೆ, ಸಂತೋಷ ಪಡುತ್ತಾರೆ. ಕಾರ್ಯಕರ್ತರಿಂದ ಅವರು ಹೇಗೆ ಕೆಲಸ ಮಾಡಿಸುತ್ತಿದ್ದರೋ ಹಾಗೆಯೇ ಅವರ ಬಗ್ಗೆ ಹೆಚ್ಚು ಕಾಳಜಿ ಉಳ್ಳವರಾಗಿದ್ದರು. ಅವರ ಸಂಬಳ, ಸೌಲಭ್ಯಗಳ ಬಗ್ಗೆ ಆಗಾಗ ಖಾವಂದರ ಹತ್ತಿರ ಚರ್ಚಿಸುತ್ತಿದ್ದರು. ನಮ್ಮ ಹಿರಿಯರು ಒಂದು ಮಾತು ಹೇಳುತ್ತಾರೆ, ‘ಆಡಳಿತ ನಡೆಸುವವರು ಕೋಲನ್ನು ಒಮ್ಮೆ ಎತ್ತಲೂ ಬೇಕು. ಹಾಗೇ ನಿಧಾನವಾಗಿ ಕೆಳಗೆ ಇಳಿಸಲು ಬೇಕು’. ಹಾಗೆಯೇ ಮಂಜುನಾಥ್ ಒಮ್ಮೆ ಬೈದರೂ ಮತ್ತೆ ತಕ್ಷಣಕ್ಕೆ ಸಮಾಧಾನದ ಮಾತುಗಳನ್ನೂ ಹೇಳುತ್ತಿದ್ದರು. ಐವತ್ತು ಸಾವಿರಕ್ಕಿಂತಲೂ ಅಧಿಕ ಕಾರ್ಯಕರ್ತರು ಇರುವ ಯೋಜನೆಯಲ್ಲಿ ಮಂಜುನಾಥ್ ಯಾವುದೇ ಹೊತ್ತಿನಲ್ಲೂ ಪ್ರತಿಯೊಬ್ಬರಿಗೂ ಲಭ್ಯವಿರುತ್ತಿದ್ದರು. ಅವರಲ್ಲಿ ಮಾತನಾಡಲು ಅನುಕೂಲವಾಗುವಂತೆ ಅವರ ಮೊಬೈಲ್ ನಂಬರ್ ಅನ್ನು ‘ನಿರಂತರ’ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಅವರ ನಿರಂತರದ ಸಂಪಾದಕೀಯವನ್ನು ಗಮನಿಸಿದರೆ ಅದು ಆಯಾ ಸಂದರ್ಭಕ್ಕೆ ಬೇಕಾದ ಮಾಹಿತಿಯೊಂದಿಗೆ ಕಾರ್ಯಕರ್ತರಿಗೆ ಮಾತ್ರ ಅಲ್ಲ ಹೊರಗಿನಿಂದ ನಿಂತು ಯೋಜನೆಯನ್ನು ನೋಡುವವರಿಗೆ ಬೇಕಾದಷ್ಟು ಮಾಹಿತಿಗಳು ಅದರಲ್ಲಿರುತ್ತಿತ್ತು. ಯೋಜನೆಯ ಹಲವು ಮಗ್ಗಲುಗಳ ಪರಿಚಯ ಆಗುವಂತಿತ್ತು.
ನಮ್ಮಲ್ಲಿ ಎಷ್ಟೋ ಕನಸುಗಳು ಇರುತ್ತವೆ. ಆದರೆ ಆ ಕನಸುಗಳನ್ನು ನನಸು ಮಾಡುವ ನಾಯಕನೊಬ್ಬ ಬಂದಾಗ ಕನಸುಗಳಿಗೆ ಮತ್ತಷ್ಟು ರೆಕ್ಕೆಗಳು ಹುಟ್ಟಿಕೊಳ್ಳುತ್ತವೆ. ಮತ್ತಷ್ಟು ಹೊಸ ಹೊಸ ಕಾರ್ಯಕ್ರಮಗಳು, ಯೋಜನೆಗಳು ಹುಟ್ಟಿಕೊಳ್ಳುತ್ತವೆ. ಎಷ್ಟೇ ಕಾರ್ಯಕ್ರಮಗಳು ಬರಲಿ ಅದನ್ನು ಪೂರ್ಣ ರೀತಿಯಲ್ಲಿ ವಿಮರ್ಶಿಸಿ, ಚಿಂತಿಸಿ, ಹೇಗೆ ಕಾರ್ಯಗತ ಮಾಡಿಕೊಳ್ಳಬೇಕು ಎಂದು ಹೇಳಿ ಯೋಜಿಸಿ ಅದಕ್ಕೆ ಬೇಕಾದ ಕಾರ್ಯಕರ್ತರನ್ನು ಆಯ್ಕೆ ಮಾಡಿ ಕಾರ್ಯಕ್ರಮ ಕಾರ್ಯಗತಗೊಳ್ಳುವಂತೆ ಮಾಡುವವರು ಮಂಜುನಾಥ್‌ರವರು. ಯೋಜನೆಯ ಕೆಲಸಗಳೊಂದಿಗೆ ಇತರ ಹತ್ತು ಹಲವು ಸಂಘಟನೆಗಳ ಹೊಣೆಹೊತ್ತು ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಯೋಜನೆ ತನ್ನ ಕಾಲ ಮೇಲೆ ನಿಲ್ಲಬೇಕು, ಅದರಿಂದ ಉಳಿತಾಯ ಆಗಬೇಕು. ಆ ಮೂಲಕ ಮತ್ತಷ್ಟು ಹೆಚ್ಚು ಜನರಿಗೆ ಉಪಯೋಗ ಆಗಬೇಕು ಎಂದು ಹೇಳುವ ದೃಷ್ಟಿ ಅವರದ್ದಾಗಿತ್ತು. ಅವರದ್ದು ತ್ರಿವಿಕ್ರಮ ಹೆಜ್ಜೆ ಮತ್ತು ಸಂಜಯ ದೃಷ್ಟಿ.
೨೦೦೧ರಲ್ಲಿ ಆರಂಭವಾದ ಮಂಜುನಾಥ್‌ರವರ ಯೋಜನೆಯ ಪಯಣದಲ್ಲಿ ಅವರು ಕೇವಲ ಯೋಜನೆಗಷ್ಟೇ ಅಲ್ಲ ನಮಗೂ ಒಂದು ಮನೆಯವರಂತೆ ಆಗಿ ಹೋಗಿದ್ದರು. ಅವರ ಕೆಲಸದ ವ್ಯಾಪ್ತಿಯನ್ನು ಮೀರಿ ಮತ್ತು ನಮ್ಮ ಎಲ್ಲ ರೀತಿಯ ಕಷ್ಟ – ಸುಖಗಳನ್ನು ಹೇಳಿಕೊಳ್ಳಬಲ್ಲಂತಹ ಒಬ್ಬ ಸಜ್ಜನ ಮತ್ತು ನಂಬಿಕಸ್ಥ ವ್ಯಕ್ತಿಯಾಗಿದ್ದರು. ಕ್ಷೇತ್ರದ ಎಲ್ಲ ಕೆಲಸಗಳಿಗೆ ಬೇಕಾದ ಸಿಬ್ಬಂದಿಗಳು ನಮಗೆ ಸಿಗುತ್ತಾರೆ. ಎಲ್ಲರೂ ಅವರವರ ಕೆಲಸ ಮಾಡುವುದರಲ್ಲಿ ಪರಿಣಿತರಿರುತ್ತಾರೆ, ನಿಸ್ಸೀಮರಾಗಿರುತ್ತಾರೆ. ಆದರೆ ಒರ್ವ ಆಪ್ತನಾಗಿ, ಒಳ್ಳೆಯ ಸಲಹೆಗಾರನಾಗಿ ಒಟ್ಟಿಗೆ ನಿಲ್ಲಬಲ್ಲಂತಹ ವ್ಯಕ್ತಿಗಳು ಸಿಗುವುದು ಕಡಿಮೆ. ನಮಗಷ್ಟೇ ಅಲ್ಲ, ಇಡೀ ಊರಿಗೆ ಅವರು ಬೇಕಾದ ವ್ಯಕ್ತಿಯಾಗಿದ್ದರು. ಯಾವುದೇ ಸಾರ್ವಜನಿಕ ಕಾರ್ಯಕ್ರಮ ಇದ್ದರೆ ಮೊದಲು ಮಂಜುನಾಥ್‌ರವರನ್ನು ಮುಖ್ಯಸ್ಥರನ್ನಾಗಿ ಮಾಡಿ ಬಿಡುವ! ಮತ್ತೆಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ನಡೆದುಕೊಂಡು ಹೋಗುತ್ತದೆ ಎನ್ನುವುದು ಊರಿನವರ ಅಭಿಪ್ರಾಯವಾಗಿರುತ್ತಿತ್ತು.
ದೇವಸ್ಥಾನಗಳಲ್ಲಿ, ಧಾರ್ಮಿಕ ಗ್ರಂಥಗಳಲ್ಲಿ ನೋಡಿದರೆ ಸ್ವರ್ಗ – ನರಕದ ನಕ್ಷೆಯನ್ನು ಇಟ್ಟಿರುತ್ತಾರೆ. ಇದನ್ನು ಮಾಡಿದ್ರೆ ಸ್ವರ್ಗ. ಹೀಗೆ ಮಾಡಿದ್ರೆ ನರಕ. ಹಾಗಾದರೆ ಭೂಮಿಯಲ್ಲಿ ಹೇಗೆ ಬದುಕಬೇಕು ಎಂದು ಯಾರು ತಿಳಿಸಿಕೊಡುವವರಿಲ್ಲ. ಆ ರೂಪುರೇಷೆಗಳನ್ನು ತಯಾರಿಸಿ, ಜನ ಕೇಳುವ ಮೊದಲೇ ಅವರ ಅಗತ್ಯಗಳಿಗೆ ಸ್ಪಂದಿಸಿ, ಚಿಂತಿಸಿ, ಪರಿಹಾರದ ಮಾರ್ಗಗಳನ್ನು ಪ್ರಸ್ತಾವಕ್ಕೆ ತರುತ್ತಿದ್ದವರು ಮಂಜುನಾಥ್‌ರವರು. ಅವರು ತಂದ ಯಾವುದೇ ಯೋಚನೆಗಳನ್ನು ಬಹುಶಃ ನಾವು ನಿರಾಕರಿಸಿದ್ದು ಕಡಿಮೆ.
‘ನಿವೃತ್ತಿ’ ಎಂಬುವುದು ಮಂಜುನಾಥ್‌ರವರ ಬದುಕಿನ ಧನ್ಯತೆಯ ಕ್ಷಣ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಕೆಲಸ ಇಲ್ಲದೆ ಸುಮ್ಮನೇ ಕಾಲ ಕಳೆದರೆ ಅದು ಬೇಸರವೇ. ಆದರೆ ಒಳ್ಳೆಯ ಕೆಲಸ ಮಾಡಿ ಅದರ ಧನ್ಯತೆಯನ್ನು ಅನುಭವಿಸುವ ಇಂತಹ ಕ್ಷಣಗಳು ನಮಗೆ ಸಿಗುವುದು ಬಹಳ ಅಪರೂಪ. ಯಾವಾಗಲೂ ಕಾಲಿಗೆ ಚಕ್ರ ಕಟ್ಟಿಕೊಂಡವರoತೆ ತಿರುಗಾಡುತ್ತಿರುತ್ತೇವೆ. ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುತ್ತಿರುತ್ತೇವೆ. ಆದರೆ ನಡೆದ ದಾರಿಯನ್ನೊಮ್ಮೆ ಹಿಂದಿರುಗಿ ನೋಡುವ ಕ್ಷಣ ನಮ್ಮ ಬದುಕಿನಲ್ಲಿ ನಿವೃತ್ತಿಯ ಸಂದರ್ಭದಲ್ಲಿ ಮಾತ್ರ ದೊರೆಯುತ್ತದೆ. ತಾನು ಮುಟ್ಟಿದ ಜನರನ್ನು ಮತ್ತು ನಮ್ಮ ಮನಸ್ಸುಗಳನ್ನು, ಅವರ ಬದುಕುಗಳನ್ನು, ಅವರ ಬಗ್ಗೆ ಮತ್ತೆ ಚಿಂತಿಸುವ ಈ ಕ್ಷಣ ನಿಜವಾಗಿಯೂ ಒಂದು ಧನ್ಯತೆ ಕ್ಷಣ.
ಜೈನ ಧರ್ಮದಲ್ಲಿ ‘ಪ್ರತಿಕ್ರಮಣ’ ಎಂಬ ವಿಧಿ ಇದೆ. ದೈನಂದಿನ ಬದುಕಿನ ವಿಚಾರಗಳನ್ನು, ಆಗುಹೋಗುಗಳ ಬಗ್ಗೆ ಸಾಯಂಕಾಲ ಕುಳಿತು ಪ್ರತಿಕ್ರಮಣದಲ್ಲಿ ಚಿಂತಿಸಿ ಅದಕ್ಕೆ ಪರಿಹಾರವನ್ನು ಅಥವಾ ಮಾಡಿದ ತಪ್ಪಿಗೆ ಪ್ರಾಯಶ್ಚಿತವನ್ನು ಮಾಡಿಕೊಳ್ಳುವಂಥದ್ದು. ನಿವೃತ್ತಿ ಮುಂಜುನಾಥ್‌ರವರ ಇಡೀ ಜೀವನದ ‘ಪ್ರತಿಕ್ರಮಣ’ ಎಂದು ನಾನು ಭಾವಿಸುತ್ತೇನೆ. ಅವರನ್ನು ಪ್ರೀತಿಸುವ, ಅಭಿಮಾನದಿಂದ ಕಾಣುವ, ಗುರುವೆಂದು ಮಣ್ಣಿಸುವ ದೊಡ್ಡ ಬಳಗವೇ ಇದೆ. ಅವರೆಲ್ಲರ ಹಾರೈಕೆ ಮಂಜುನಾಥ್‌ರವರ ಮೇಲೆ ನಿರಂತರವಾಗಿ ಇದೆ. ಅವರ ಧರ್ಮಪತ್ನಿ ನಳಿನಿಯವರು ಕೂಡಾ ಯೋಜನೆಗೆ ಬಹಳಷ್ಟು ತ್ಯಾಗವನ್ನು ಮಾಡಿದ್ದಾರೆ. ಗಂಡ ಎಲ್ಲಿಗೆ ಹೋಗಿರುತ್ತಾರೆ ಎಂದು ಅವರಿಗೆ ತಿಳಿದಿರುವುದಿಲ್ಲ. ಆದರೂ ಅವರನ್ನು ಅನುಸರಿಸಿಕೊಂಡು ಯೋಜನೆಯ ಪ್ರಗತಿಯ ಬಗ್ಗೆ ಸದಾ ಹೆಮ್ಮೆ ಪಡುವ ಗೃಹಿಣಿ ಅವರು. ಅವರು ತನ್ನ ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಎಲ್ಲರ ಹೊಣೆ ಹೊತ್ತು ಸಾಂಸಾರಿಕವಾಗಿ ಯಾವುದೇ ಚಿಂತೆ ಮತ್ತು ಬಿಸಿ ತಮ್ಮ ಗಂಡನಿಗೆ ತಾಕದಂತೆ ಸದ್ದಿಲ್ಲದೆ ಕೆಲಸ ಮಾಡಿದವರು. ಮಗ ನಮ್ಮದೇ ಎಸ್.ಡಿ.ಎಂ. ಆಸ್ಪತ್ರೆ ಉಜಿರೆಯಲ್ಲಿ ವೈದ್ಯರಾಗಿದ್ದಾರೆ. ಮಗಳು ಮದುವೆಯಾಗಿ ವಿದೇಶದಲ್ಲಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ. ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಅವರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.