ಅನಿಲ್ ಕುಮಾರ್ ಎಸ್. ಎಸ್.
ನಮ್ಮ ಯೋಜನೆಯ ಅರ್ಹ ಸಂಘದ ಸದಸ್ಯರಿಗೆ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಅಭಿಯಾನ (ಎನ್.ಆರ್.ಎಲ್.ಎಮ್.) ಕಾರ್ಯಕ್ರಮದ ಪ್ರಯೋಜನಗಳನ್ನು ತಲುಪಿಸುವ ನಿಟ್ಟಿನಲ್ಲಿ ಬಹಳ ದೊಡ್ಡ ಮಟ್ಟದ ಅಭಿಯಾನವನ್ನು ನಮ್ಮ ಕಾರ್ಯಕರ್ತರು ನಡೆಸುತ್ತಿದ್ದಾರೆ. ಈ ಒಂದು ಅಭಿಯಾನದಲ್ಲಿ ಅರ್ಹ ಸಂಘದ ಸದಸ್ಯರು ಉತ್ತಮ ಸಹಕಾರವನ್ನು ನೀಡುತ್ತಾ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ತಮ್ಮ ಸಂಘ ಹಾಗೂ ಸದಸ್ಯತ್ವದ ವಿವರಗಳನ್ನು ಎನ್.ಆರ್.ಎಲ್.ಎಮ್. ಪೋರ್ಟಲ್‌ನಲ್ಲಿ ದತ್ತಾಂಶಗೊಳಿಸುತ್ತಿದ್ದಾರೆ. ಕೆಲವು ಸದಸ್ಯರು ಈ ಬಗ್ಗೆ ಕಾರ್ಯಕರ್ತರು ನೀಡಿದ ಮಾಹಿತಿಯನ್ನು ಅರ್ಥೈಸಿಕೊಂಡಿದ್ದಾರೆ. ಆದರೆ ಹೆಚ್ಚಿನ ಸದಸ್ಯರಿಗೆ ನಮ್ಮ ಯೋಜನೆಯ ಪ್ರಯತ್ನದ ಫಲಶ್ರುತಿಯಿಂದ ಲಭ್ಯವಾಗುವ ಸರಕಾರ ನೀಡುವ ಎನ್.ಆರ್.ಎಲ್.ಎಮ್. ಪ್ರಯೋಜನಗಳ ಬಗ್ಗೆ ಅಷ್ಟೊಂದು ಮಾಹಿತಿ ಇರುವುದಿಲ್ಲ. ಅವರಿಗಾಗಿ ಈ ಕೆಳಗಿನ ಒಂದಷ್ಟು ಸಂಕ್ಷಿಪ್ತ ಮಾಹಿತಿಗಳು.
ಎನ್.ಆರ್.ಎಲ್.ಎಮ್. ಕಾರ್ಯಕ್ರಮವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಭಾಗಿತ್ವದಲ್ಲಿ ಅನುಷ್ಠಾನವಾಗುತ್ತಿದ್ದು, ಇದರಲ್ಲಿ ಅರ್ಹ ಸ್ವಸಹಾಯ ಸಂಘಗಳ ವಿವರಗಳನ್ನು ಈ ಕಾರ್ಯಕ್ರಮಕ್ಕೆ ಜೋಡಿಸಿದ್ದಲ್ಲಿ ಆ ಸಂಘಗಳು ಪಡೆಯುವ ಸಾಲದ ಮೇಲೆ ವಿಶೇಷ ಬಡ್ಡಿ ರಿಯಾಯಿತಿಯು ದೊರೆಯುವುದು. ಇದಲ್ಲದೆ ಸ್ವಉದ್ಯೋಗ ಮಾಡಲು ಕೆಲವೊಂದು ತರಬೇತಿಗಳನ್ನು ನೀಡಲಾಗುವುದು. ಈ ಸೌಲಭ್ಯವನ್ನು ಪಡೆಯಲು ಸಂಘಗಳ ವಿವರಗಳನ್ನು ಎನ್.ಆರ್.ಎಲ್.ಎಮ್.ನ ಲೋಕೋಸ್ ಸಾಫ್ಟ್ವೇರ್‌ನಲ್ಲಿ ದಾಖಲೀಕರಿಸಬೇಕಾಗಿರುತ್ತದೆ.
ಎನ್.ಆರ್.ಎಲ್.ಎಮ್. ಕಾರ್ಯಕ್ರಮಕ್ಕೆ ಸಂಘವು ಜೋಡಣೆಯಾಗಬೇಕಾದಲ್ಲಿ ಇರಬೇಕಾದ ಅರ್ಹತೆಗಳು :
* ಸಂಘಗಳು ಗ್ರಾಮ ಪಂಚಾಯತ್ ವ್ಯಾಪ್ತಿಯೊಳಗಿರಬೇಕು (Rural Groups).
* ಮಹಿಳೆಯರೇ ಸದಸ್ಯರಾಗಿರುವ ಸ್ವಸಹಾಯ ಸಂಘವಾಗಿರಬೇಕು.
* ಕನಿಷ್ಟ ಹತ್ತರಿಂದ ಮೇಲ್ಪಟ್ಟು ಇಪ್ಪತ್ತರೊಳಗಿನ ಸದಸ್ಯರಿರುವ ಸಂಘಗಳಾಗಿರಬೇಕು.
* ಈಗಾಗಲೇ ಎನ್.ಆರ್.ಎಲ್.ಎಮ್.ನಿಂದ ಗುರುತಿಸಲ್ಪಟ್ಟ ಸಂಘಗಳಲ್ಲಿ ಸೇರದೇ ಇರುವ ಸದಸ್ಯರ ಸಂಘಗಳು ಮಾತ್ರ ಅರ್ಹವಾಗುತ್ತವೆ.
* ಎನ್.ಆರ್.ಎಲ್.ಎಮ್. ಕಾರ್ಯಕ್ರಮಕ್ಕೆ ಜೋಡಣೆ ಮಾಡಲು ಅಗತ್ಯವಿರುವ ದಾಖಲಾತಿಗಳನ್ನು ಹೊಂದಿರಬೇಕು ಹಾಗೂ ಸಂಘಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬಂದಿರಬೇಕು.
ಎನ್.ಆರ್.ಎಲ್.ಎಮ್. ಕಾರ್ಯಕ್ರಮಕ್ಕೆ ಅರ್ಹ ಸಂಘಗಳನ್ನು ಪೋರ್ಟಲ್‌ನ ಮೂಲಕ ದಾಖಲೀಕರಿಸಲು ನೀಡಬೇಕಾದ ದಾಖಲಾತಿಗಳು :
* ಸಂಘದ ನಿರ್ಣಯದ ಠರಾವಿನ ಪ್ರತಿ.
*ಸ್ವಸಹಾಯ ಸಂಘದ ಬ್ಯಾಂಕ್ ಖಾತೆಯ ಪಾಸ್‌ಪುಸ್ತಕದ ಪ್ರತಿ ಅಥವಾ ಸ್ಟೇಟ್‌ಮೆಂಟ್‌ನ ಪ್ರತಿ.
* ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್.ಟಿ ಪ್ರತಿಯೊಬ್ಬ ಸದಸ್ಯರ ಪಾಸ್‌ಪೋರ್ಟ್ ಫೋಟೋ.
* ಸದಸ್ಯರ ಒಪ್ಪಿಗೆ ಪತ್ರ. ಟಿ ಸದಸ್ಯರ ಪಾಸ್ ಪುಸ್ತಕದ ಪ್ರತಿ.
ಎನ್.ಆರ್.ಎಲ್.ಎಮ್. ಲೋಕೋಸ್ ಪೋರ್ಟಲ್‌ನಲ್ಲಿ ಯೋಜನೆಯ ಅರ್ಹ ಸಂಘಗಳನ್ನು ದಾಖಲೀಕರಿಸುವ ಹಂತಗಳು :
* ಸಂಘದ ಸದಸ್ಯರು ಈ ಮೇಲಿನ ದಾಖಲಾತಿಗಳನ್ನು ಒಗ್ಗೂಡಿಸಿ ಯೋಜನೆಯ ಸೇವಾಕೇಂದ್ರ ಅಥವಾ ಮೇಲ್ವಿಚಾರಕರು ತಿಳಿಸಿದ ಸ್ಥಳಕ್ಕೆ ಬರುವುದು.
* ಅಲ್ಲಿ ಯೋಜನೆಯ ಕಾರ್ಯಕರ್ತರು ಈ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ ಚೆಕ್ ಲಿಸ್ಟ್ನಲ್ಲಿ ಅಗತ್ಯ ಅಂಶಗಳನ್ನು ತುಂಬಿಸಿಟ್ಟುಕೊಳ್ಳುತ್ತಾರೆ.
* ನಂತರ ಈ ಮಾಹಿತಿಯನ್ನು ಯೋಜನೆಯ ಕಾರ್ಯಕರ್ತರು ಸಂಘವಾರು ಲೋಕೋಸ್ ಸಾಫ್ಟ್ವೇರ್‌ನಲ್ಲಿ ದತ್ತಾಂಶಕರಿಸುತ್ತಾರೆ. ಅಗತ್ಯವಿರುವ ದಾಖಲಾತಿ, ಫೋಟೋಗಳನ್ನು ನಂತರ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ.
*ಮುಂದೆ ಈ ಎಲ್ಲಾ ಮಾಹಿತಿಗಳನ್ನು ಎನ್.ಆರ್.ಎಲ್.ಎಮ್. ಅಧಿಕಾರಿಗಳು ಪರಿಶೀಲಿಸಿ, ಸರಿಯಾಗಿದ್ದಲ್ಲಿ ಎನ್.ಆರ್.ಎಲ್.ಎಮ್. ಕಾರ್ಯಕ್ರಮಕ್ಕೆ ಜೋಡಣೆ ಮಾಡುತ್ತಾರೆ.
ಪ್ರಸ್ತುತ ಎನ್.ಆರ್.ಎಲ್.ಎಮ್. ಕಾರ್ಯಕ್ರಮಕ್ಕೆ ಜೋಡಣೆಯಾದಲ್ಲಿ ಆ ಸಂಘಗಳಿಗೆ ದೊರೆಯುವ ಸೌಲಭ್ಯಗಳು :
* ರೂ.3 ಲಕ್ಷದವರೆಗಿನ ಸಂಘದ ಸಾಲಕ್ಕೆ ವಿಶೇಷ ಬಡ್ಡಿ ರಿಯಾಯಿತಿ.
* ಸ್ವ ಉದ್ಯೋಗ ಪ್ರಾರಂಭಿಸಲು ವಿಶೇಷ ಕೆಲವು ತರಬೇತಿ ಸೌಲಭ್ಯ.
ಸದಸ್ಯರು ಉತ್ಪಾದಿಸಿದ ಕೆಲವು ಆಯ್ದ ಉತ್ಪನ್ನಗಳ ಮಾರುಕಟ್ಟೆಗೆ ಆನ್‌ಲೈನ್ ಮಾರುಕಟ್ಟೆ ಸೌಲಭ್ಯ ಸಹಾಯ.
ನಮ್ಮ ಯೋಜನೆಯ ಸಂಘಗಳ ಗುಣಮಟ್ಟ, ಕಾರ್ಯವೈಖರಿ ಹಾಗೂ ಶಿಸ್ತುಬದ್ಧ ವ್ಯವಹಾರವನ್ನು ಗಮನಿಸಿದ ‘ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಅಭಿಯಾನ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ ನಮ್ಮ ಸಂಘಗಳಿಗೂ ಈ ಮಹತ್ವದ ಪ್ರಯೋಜನಗಳನ್ನು ನೀಡಲು ಮುಂದೆ ಬಂದಿರುತ್ತಾರೆ. ಪೂಜ್ಯರ ಆಶಯದಂತೆ ಈ ಕಾರ್ಯಕ್ರಮವನ್ನು ಕಾರ್ಯಕ್ಷೇತ್ರದಲ್ಲಿ ದತ್ತಾಂಶಕರಿಸಲು ಬೇಕಾಗುವ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಸಂಘಗಳಿoದ ದಾಖಲಾತಿಗಳ ಸಂಗ್ರಹಣೆ ಹಾಗೂ ಒದಗಣೆಯ ಕೆಲಸಕಾರ್ಯಗಳನ್ನು ಸೇವಾಪ್ರತಿನಿಧಿಗಳು ಹಾಗೂ ಸುವಿಧಾ ಸಹಾಯಕರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ನಮ್ಮ ಯೋಜನೆಯ ಕಾರ್ಯಕರ್ತರು ಲೋಕೋಸ್ ಸಾಫ್ಟ್ವೇರ್‌ನಲ್ಲಿ ಸಂಘದ ಪ್ರತಿ ಸದಸ್ಯರ ಮಾಹಿತಿಯನ್ನು ಉತ್ತಮವಾಗಿ ನಮೂದಿಸುತ್ತಿದ್ದಾರೆ. ನಮ್ಮ ಯೋಜನೆಯ ಸ್ವಸಹಾಯ ಸಂಘದ ಮಾದರಿ ದೇಶದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟಿದ್ದು ಸ್ವಸಹಾಯ ಸಂಘಗಳು ತಮ್ಮ ಚಟುವಟಿಕೆಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತ್ತಿವೆ. ಈ ಅತ್ಯುತ್ತಮ ವ್ಯವಸ್ಥೆಗೆ ಎನ್.ಆರ್.ಎಲ್.ಎಮ್. ಕಾರ್ಯಕ್ರಮದ ಪ್ರಯೋಜನ ಲಭಿಸಿರುವುದು ಮತ್ತಷ್ಟು ಪುಷ್ಠಿಯನ್ನು ನೀಡುತ್ತದೆ.
ಎಲ್ಲಾ ಅರ್ಹ ಸಂಘಗಳ ಸದಸ್ಯರು ಬೇಕಾಗಿರುವ ದಾಖಲೆಗಳೊಂದಿಗೆ ನಮ್ಮ ಕಾರ್ಯಕರ್ತರನ್ನು ಸಂಪರ್ಕಿಸಿ ಆದಷ್ಟು ಬೇಗ ನಿಮ್ಮ ಸಂಘದ ಹಾಗೂ ಸದಸ್ಯತ್ವದ ವಿವರಗಳನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇವೆ. ಆ ಸಂಘಗಳು ಎನ್.ಆರ್.ಎಲ್.ಎಮ್. ಕಾರ್ಯಕ್ರಮದ ಪ್ರಯೋಜನದಿಂದಾಗಿ ಮತ್ತಷ್ಟು ಚೈತನ್ಯ ಪಡೆಯುವಂತಾಗಲಿ.