ಲಕ್ಷಾಂತರ ಬಡವರ ಬೆನ್ನಿಗೆ ನಿಂತ ನಡೆದಾಡುವ ದೇವರು

ಕಳೆದ ಸಂಚಿಕೆಗಳಲ್ಲಿ ಸಾಮಾನ್ಯವಾಗಿ ಬ್ಯಾಂಕ್‌ನಿoದ ಸಾಲ ಪಡೆಯಬೇಕಾದಲ್ಲಿ ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕು, ಅಡಮಾನಗಳು, ಗ್ಯಾರಂಟಿಗಳು ಜೊತೆಗೆ ಎಂತಹ ಉದ್ದೇಶಗಳಿಗೆ ಮಾತ್ರ ಸಾಲ ಸಿಗುತ್ತದೆ ಎಂದು ತಿಳಿದುಕೊಂಡಿದ್ದೆವು. ಈ ಎಲ್ಲಾ ಅರ್ಹತೆಗಳು ಮತ್ತು ಉದ್ದೇಶಗಳು ಸಾಮಾನ್ಯ ಜನರಿಗೆ, ಬಡವರಿಗೆ ಸುಲಭವಾಗಿ ಕೈಗೆಟಕದೆ, ಕಡಿಮೆ ಬಡ್ಡಿ ದರದ ಬ್ಯಾಂಕ್ ಸಾಲಗಳಿಂದ ಅವರು ವಂಚಿತರಾಗುತ್ತಿದ್ದರು. ಅನಿವಾರ್ಯವಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿoದ ಸಾಲ ಪಡೆದು ದುಬಾರಿ ಬಡ್ಡಿ ತೆತ್ತು, ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೀಡಾಗುವ ಸಂದರ್ಭಗಳಿತ್ತು. ಈ ರೀತಿ ವಂಚಿತರಾಗುವ ಬಡವರ ಸಂಖ್ಯೆ ಅಗಾಧ ಪ್ರಮಾಣದಲ್ಲಿದೆ. ಇವರಿಗೆ ಒಂದು ಪರ್ಯಾಯ ಆರ್ಥಿಕ ವ್ಯವಸ್ಥೆಯನ್ನು ಒದಗಿಸಿದಲ್ಲಿ ಅದು ಅವರ ವೈಯಕ್ತಿಕ ಆರ್ಥಿಕ ಸಬಲೀಕರಣ ಮಾಡುವುದಷ್ಟೇ ಅಲ್ಲದೇ ಒಂದು ರಾಜ್ಯದ ಅಥವಾ ದೇಶದ ಸಮಗ್ರ ಅಭಿವೃದ್ಧಿಯು ಸಾಧ್ಯವಾಗುತ್ತದೆ. ಇವರನ್ನು ತಲುಪುವಂತಹ ಪರ್ಯಾಯ ವ್ಯವಸ್ಥೆ ಯಾವ ರೀತಿಯಲ್ಲಿ ಇರಬೇಕು? ಅದು ಯಾವುದೇ ಆಸ್ತಿ ಅಡಮಾನಗಳನ್ನು, ದಾಖಲೆ ಪತ್ರಗಳನ್ನು, ಗ್ಯಾರಂಟಿಗಳನ್ನು ಪಡೆಯದೆ ಅತೀ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕಿನಿoದ ಸಾಲ ಕೊಡಿಸುವಂತಹ ವ್ಯವಸ್ಥೆ ಆಗಿರಬೇಕು. ಇದು ಸಾಧ್ಯವೇ? ಕೆಲವು ಸರ್ಕಾರಿ ವಿಶೇಷ ಯೋಜನೆಗಳಿಂದ ಇದು ಒಂದಿಷ್ಟು ಮಟ್ಟಿಗೆ ಸಾಧ್ಯವಾಗಿದೆ. ನಿರುದ್ಯೋಗದ ನಿರ್ವಹಣೆಗಾಗಿ ಕೆಲವು ನಿಯಮಾವಳಿಗಳ ಸಡಿಲಿಕೆಯೊಂದಿಗೆ ಸಾಲ ಸೌಲಭ್ಯಗಳು, ಕೆಲವು ಪರಿಶಿಷ್ಟ ವರ್ಗದ ಜನತೆಯ ಸಬಲೀಕರಣಕ್ಕಾಗಿ ಕೆಲವೊಂದು ಸೀಮಿತ ಸಾಲ ಸೌಲಭ್ಯಗಳು, ಕೆಲವು ಹಿಂದುಳಿದ ಪ್ರದೇಶಗಳಿಗನುಗುಣವಾಗಿ ಸಾಲ ಸೌಲಭ್ಯಗಳು, ಕೆಲವೊಂದು ಕಸುಬುಗಳನ್ನು ನಡೆಸಲು ಪ್ರೋತ್ಸಾಹ ಸಾಲ ಸೌಲಭ್ಯಗಳು ಹೀಗೆ ಒಂದಿಷ್ಟು ಸರಕಾರಿ ಯೋಜನೆಗಳು ಆಗಿಂದಾಗೆ ಜಾರಿ ಆಗುತ್ತವೆ. ಇಲ್ಲಿ ದೊಡ್ಡ ಸವಾಲೆಂದರೆ ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ನಮ್ಮದ್ದಾಗಿರುವುದರಿಂದ ಎಲ್ಲಾ ಜನರಿಗೆ ಈ ಸ್ಕೀಮ್‌ಗಳನ್ನು ಸಾರ್ವತ್ರಿಕವಾಗಿ ನೀಡಲು ಸಾಧ್ಯವಿಲ್ಲ. ಜೊತೆಗೆ ನಿರ್ದಿಷ್ಟ ಬಜೆಟ್ ಅನ್ನು ಸಾಮಾನ್ಯವಾಗಿ ಅಂತಹ ಸ್ಕೀಮ್‌ಗಳಿಗೆ ಇಟ್ಟಿರುವುದರಿಂದ ಒಂದಿಷ್ಟು ಜನರಿಗೆ ಮಾತ್ರ ಸ್ಕೀಮ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಜನರಿಗೆ ಅಂತಹ ಸ್ಕೀಮ್‌ಗಳ ಮಾಹಿತಿಯ ಕೊರತೆಯೂ ಇರುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಇಂತಹ ಸ್ಕೀಮ್‌ಗಳು ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗುವುದು ಸುಲಭವಲ್ಲ. ಹಾಗಾದರೆ ಜನಸಾಮಾನ್ಯರಿಗೆ, ಬಡವರಿಗೆ ಸುಲಭವಾಗಿ ಆರ್ಥಿಕ ಸೌಲಭ್ಯಗಳು ಸಿಗುವಂತಹ ಮತ್ಯಾವುದಾದರೂ ಸಮರ್ಪಕ ವ್ಯವಸ್ಥೆ ಇದೆಯೇ? ಖಂಡಿತಾ ಇದೆ. ದೇಶದಲ್ಲಿಯೇ ಅತ್ಯುತ್ತಮವಾದ ಒಂದು ವಿಶಿಷ್ಟವಾದ ಅಂತಹ ಪರ್ಯಾಯ ವ್ಯವಸ್ಥೆ ಕರ್ನಾಟಕ ರಾಜ್ಯದಲ್ಲಿ ಇದೆ. ಅದುವೇ ಪರಮಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿ, ಬೆಳೆಸಿದ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.’
ಹೌದು ಮಿತ್ರರೇ, ಗ್ರಾಮಾಭಿವೃದ್ಧಿ ಯೋಜನೆ ದೇಶದ ಒಂದು ಅತ್ಯುತ್ತಮ ಎನ್.ಜಿ.ಒ. ಮಾದರಿಯ ಸೇವಾ ಸಂಸ್ಥೆಯಾಗಿದ್ದು ಮುಖ್ಯವಾಗಿ ಪೂಜ್ಯ ಶ್ರೀ ಹೆಗ್ಗಡೆಯವರು ಈ ಸಂಸ್ಥೆಯನ್ನು ‘ಚಾರಿಟೇಬಲ್ ಟ್ರಸ್ಟ್’ ಅಡಿಯಲ್ಲಿ ಸ್ಥಾಪಿಸಿದ್ದಾರೆ. ಗ್ರಾಮೀಣ ಕರ್ನಾಟಕದ ರೈತರ, ಬಡವರ, ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಈ ಸಂಸ್ಥೆಯನ್ನು1982ರಲ್ಲಿ ಸ್ಥಾಪಿಸಿದರು. ಎಂತಹ ಅದ್ಭುತವಾದ ಚಿಂತನೆ. ಗ್ರಾಮೀಣ ಜನತೆಯನ್ನು ಒಗ್ಗೂಡಿಸಿ, ಸಂಘಗಳನ್ನು ಮಾಡಿ, ಸ್ವಸಹಾಯದ ಮಹತ್ವವನ್ನು ತಿಳಿಸಿದರು. ಉಳಿತಾಯದ ಶಿಸ್ತನ್ನು ಬೆಳೆಸಿದರು. ಆರ್ಥಿಕ ಶಿಸ್ತನ್ನು ಮೂಡಿಸಿದರು. ಲಕ್ಷಾಂತರ ಪ್ರಬುದ್ಧ ಸ್ವಸಹಾಯ ಸಂಘಗಳನ್ನಾಗಿ ಸಂಘಗಳನ್ನು ಸೃಷ್ಟಿಸಿದರು. ಪೂಜ್ಯ ಶ್ರೀ ಹೆಗ್ಗಡೆಯವರು ಬ್ಯಾಂಕ್ ಪಾಲಿಸುತ್ತಿದ್ದ ಕಾಯ್ದೆಗಳನ್ನು, ನಿಯಮಗಳನ್ನು ಗೌರವಿಸುತ್ತಿದ್ದರು. ಏಕೆಂದರೆ ಒಂದು ದೇಶದ ಸುಭದ್ರ ಅರ್ಥ ವ್ಯವಸ್ಥೆಗೆ ಅಂತಹ ನಿಯಮಗಳು ಅಗತ್ಯ ಎಂದು ಪೂಜ್ಯರು ಮನಗಂಡಿದ್ದರು. ಆದರೆ ರಾಜ್ಯದ ಅಗಾಧ ಪ್ರಮಾಣದ ಬಡವರಿಗೆ, ಗ್ರಾಮೀಣ ಜನರಿಗೆ ಅಂತಹ ನಿಯಮಗಳಿಂದಾಗಿ ಕಡಿಮೆ ಬಡ್ಡಿ ದರದ ಸಾಲ ಬ್ಯಾಂಕಿನಿoದ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ವಾಸ್ತವ ಸತ್ಯವು ಪೂಜ್ಯರನ್ನು ಕಾಡುತ್ತಿತ್ತು. ಬ್ಯಾಂಕ್ ಆ ನಿಯಮಗಳನ್ನು, ಆಸ್ತಿ ಅಡಮಾನಗಳನ್ನು, ಆದಾಯ ಪತ್ರಗಳನ್ನು, ಜಾಮೀನುದಾರರನ್ನು ಕೇಳುವುದೆಲ್ಲವೂ ಬ್ಯಾಂಕ್ ನೀಡಿದ ಸಾಲದ ಸಂಪೂರ್ಣ ಮರುಪಾವತಿಯ ನಂಬಿಕೆಯನ್ನು ಉಳಿಸಿಕೊಳ್ಳಲು ಎಂದು ಸ್ಪಷ್ಟವಾಗಿ ತಿಳಿದುಕೊಂಡಿದ್ದ ಪೂಜ್ಯ ಶ್ರೀ ಹೆಗ್ಗಡೆಯವರು ಆರ್ಥಿಕ ವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಬಡವರ ಕಲ್ಯಾಣಕ್ಕಾಗಿ ಒಂದು ದೊಡ್ಡ ತ್ಯಾಗದ ಸಂಕಲ್ಪ ಮಾಡಿದರು. ಬಹುಶಃ ಪ್ರಪಂಚದಲ್ಲಿ ಇಂತಹ ತ್ಯಾಗಕ್ಕೆ ಸಿದ್ಧರಾದ ಮತ್ತೋರ್ವ ಯುಗಪುರುಷ ಇನ್ನೊಬ್ಬರಿಲ್ಲ ಎಂದು ಆತ್ಮ ಸಾಕ್ಷಿಯಾಗಿ ನಾನು ಹೇಳುತ್ತೇನೆ. ಹೌದು ಮಿತ್ರರೇ, ಆ ತ್ಯಾಗ ಯಾರು ಊಹಿಸಲು ಸಾಧ್ಯವಿಲ್ಲ. ಬ್ಯಾಂಕುಗಳಿಗೆ ನಮ್ಮ ನಡೆದಾಡುವ ದೇವರು ಆಹ್ವಾನವಿತ್ತರು. ಯಾವುದೇ ದಾಖಲೆ ಇಲ್ಲದೆ, ಆಸ್ತಿ ಅಡಮಾನ ಪಡೆಯದೇ, ಆದಾಯ ಪತ್ರಗಳನ್ನು ಕೇಳದೆ ಇನ್ಯಾವ ಕಠಿಣ ನಿಯಮಗಳನ್ನು ವಿಧಿಸದೆ ಕಡಿಮೆ ಬಡ್ಡಿ ದರದಲ್ಲಿ ನೀವು ನೇರ ಸಾಲ ನೀಡಿ, ಆ ಸಾಲದ ಸಂಪೂರ್ಣ ಮರುಪಾವತಿಗೆ ಸುಸ್ಥಿರ ಸಂಸ್ಥೆಯ ಮೂಲಕ ನಾನು ಗ್ಯಾರಂಟಿಯಾಗಿ ನಿಲ್ಲುತ್ತೇನೆ. ಇದೆಂತಹ ತ್ಯಾಗ! ಒಬ್ಬ-ಇಬ್ಬರಿಗೆ ಭದ್ರತೆಗೆ ನಿಲ್ಲುವುದಲ್ಲ, ಲಕ್ಷಾಂತರ ಬಡವರ ಬೆನ್ನಿಗೆ ಭದ್ರವಾಗಿ ನಿಲ್ಲುವುದು, ಅವರ ಬಾಳಿಗೆ ಬೆಳಕಾಗಿ ನಿಲ್ಲುವುದು. ಯಾವ ಯುಗದಲ್ಲೂ ನಡೆಯದ ಮಹಾತ್ಯಾಗ ಇದಾಗಿದೆ. ನಾನು ಬ್ಯಾಂಕಿನಲ್ಲಿದ್ದಾಗ ‘ನನ್ನ ಅಣ್ಣ ಗ್ಯಾರಂಟಿ ನಿಲ್ಲುತ್ತಾನೆ. ನನಗೆ ಗೃಹ ಸಾಲ ಕೊಡಿ’ ಎಂದು ಕೇಳುತ್ತಿದ್ದರು. ಆದರೆ ನಂತರ ಅಣ್ಣ ಏನಾದರೂ ಕಾರಣ ಹೇಳಿಕೊಂಡು ತಪ್ಪಿಸಿಕೊಂಡು ಕೊನೆಗೆ ತಮ್ಮನಿಗೆ ಸಾಲ ಸಿಗಲಿಲ್ಲ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ-ತಮ್ಮಂದಿರೇ ಒಬ್ಬರಿಗೊಬ್ಬರು ಗ್ಯಾರಂಟಿ ನಿಲ್ಲಲು ತಪ್ಪಿಸಿಕೊಳ್ಳುವರು. ಬಂಧು ಬಳಗದವರಲ್ಲಿ ಸಾಲಕ್ಕೆ ಗ್ಯಾರಂಟಿ ಎಂದು ಕೇಳಿದಾಗ ಮಾರು ದೂರ ಓಡುವ ಈ ಕಾಲಘಟ್ಟದಲ್ಲಿ ಬಡ ಜನತೆಯಲ್ಲಿ ಅತ್ಯಂತ ಪ್ರಾಮಾಣಿಕತೆ ಇದೆ ಎಂಬ ಅಚಲ ನಂಬಿಕೆಯೊoದಿಗೆ ನಮ್ಮ ನಡೆದಾಡುವ ದೇವರು ತಾನೇ ತನ್ನ ಸಂಸ್ಥೆಯ ಮೂಲಕ ಭದ್ರತೆಯಾಗಿ ನಿಂತಿರುವುದು ಹಿಂದೆ ಹಾಗೂ ಇಂದಿಗೂ ಯಾವ ದೇಶದಲ್ಲೂ ನಡೆಯದೆ ಇರುವಂತಾದ್ದಾಗಿದೆ. ಇವುಗಳ ಮುಂದಿನ ವಿಷಯವನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *