ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಹಿಂದೆ ಒಂದು ಕಾಲವಿತ್ತು, ನಾಲ್ಕಾರು ಗ್ರಾಮಗಳಿಗೊಂದು ಶಾಲೆ, ಮೈಲುಗಟ್ಟಲೆ ಬರಿಗಾಲಲ್ಲೆ ನಡೆದು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಧ್ಯಾಪಕರ ಮೇಲೆ ಎಲ್ಲಿಲ್ಲದ ಗೌರವ. ಆಸಕ್ತಿಯಿಂದ ಹೇಳಿಕೊಟ್ಟಿದ್ದನ್ನು ಕಲಿಯುತ್ತಿದ್ದರು. ಅದೇ ಮುಂದಕ್ಕೆ ಜೀವನ ಪಾಠವು ಆಗುತ್ತಿತ್ತು. ಮನೆಯಿಂದ ಮಧ್ಯಾಹ್ನಕ್ಕೆ ಒಂದಿಷ್ಟು ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಶಾಲೆ ಬಿಡುತ್ತಿದ್ದಂತೆ ಪುನಃ ಮೈಲುಗಟ್ಟಲೆ ಬರಿಗಾಲಲ್ಲಿ ನಡೆದು ಮನೆ ತಲುಪುತ್ತಿದ್ದರು. ಆಟ, ಕಲಿಕೆ ಎಲ್ಲದರಲ್ಲೂ ಎಲ್ಲಿಲ್ಲದ ಉತ್ಸಾಹವಿತ್ತು. ಅಂದು ಮಕ್ಕಳಿಗೆ ಒಂದು ಜೊತೆ ಚಪ್ಪಲಿಯನ್ನು ಕೊಡಿಸುವುದು ಪೋಷಕರಿಗೆ ಕಷ್ಟವಾಗಿತ್ತು. ಅಂದಿನ ಆರ್ಥಿಕ ಪರಿಸ್ಥಿತಿಯಿಂದಾಗಿ ಲಾಲನೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದರು. ಆದರೆ ಪಾಲನೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲ್ಲಿಲ್ಲ. ಮಕ್ಕಳಿಗೆ ಬೇಕಾದ ಬಟ್ಟೆಬರೆ ಹಾಗೂ ಇತರ ವಸ್ತುಗಳನ್ನು ಸಾಕಷ್ಟು ಕೊಂಡುಕೊಳ್ಳದೆ, ಲಾಲನೆಗೆ ಅನಿವರ‍್ಯವಾಗಿ ಕಡಿಮೆ ಪ್ರಾಧಾನ್ಯತೆ ನೀಡುತ್ತಿದ್ದರು. ಆದರೆ ತಮ್ಮ ಮಕ್ಕಳಿಗೆ ಶಿಸ್ತು, ಸಂಯಮ, ಸಂಸ್ಕಾರಗಳನ್ನು ಕೊಟ್ಟು ಪಾಲನೆ ಮಾಡುವ ವಿಚಾರದಲ್ಲಿ ಶ್ರೀಮಂತರಾಗಿದ್ದರು. ಅಂದು ಆರ್ಥಿಕ ಬಡತನ ಕೇವಲ ಲಾಲನೆಗೆ ಮಾತ್ರ ಇತ್ತು. ಆದರೆ ಪಾಲನೆ ವಿಚಾರದಲ್ಲಿ ಸಂಸ್ಕಾರದ ಶ್ರೀಮಂತಿಕೆ ಪೋಷಕರಲ್ಲಿ ಹಾಗೂ ಶಿಕ್ಷಕರಲ್ಲಿ ಧಾರಾಳವಾಗಿತ್ತು. ಅಂತಹ ಪಾಲನೆಯಿಂದಾಗಿ ಆ ಮಕ್ಕಳು ತಮ್ಮ ತಂದೆ – ತಾಯಿ, ಗುರು – ಹಿರಿಯರಿಗೆ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಮುಂದೆ ಬೆಳೆದು ದೊಡ್ಡವರಾಗುತ್ತಿದ್ದಂತೆ ಆ ಮೌಲ್ಯಗಳು ಅವರ ಜೊತೆಯಲ್ಲೇ ಬೆಳೆಯುತ್ತಾ ಬಂದವು. ತಮ್ಮ ಜೀವನದುದ್ದಕ್ಕೂ ಸದಾಚಾರಗಳನ್ನು ಪಾಲಿಸುತ್ತಾ ಸಾರ್ಥಕ ಜೀವನವನ್ನು ಅನುಭವಿಸುತ್ತಿದ್ದರು. ಅಂದಿನ ಕಾಲದಲ್ಲಿ ವೃದ್ಧಾಶ್ರಮ ಇಲ್ಲದಿರುವುದಕ್ಕೆ ಇದೆಲ್ಲವು ಪ್ರಮುಖ ಕಾರಣವಾಗಿತ್ತು.
ಇಂದು ನಮ್ಮ ಪರಿಸ್ಥಿತಿ ಏನಾಗಿದೆ? ಅಂದಿನ ಕಾಲದಲ್ಲಿದ್ದ ಪರಿಸ್ಥಿತಿಗೆ ಇದು ತದ್ವಿರುದ್ಧವಾಗಿದೆ. ಇಂದಿನ ಪೋಷಕರು ಮಕ್ಕಳ ಲಾಲನೆಗೆ ಎಲ್ಲಿಲ್ಲದ ಪ್ರಾಶಸ್ತö್ಯ ಮಾತ್ರ ನೀಡುತ್ತಿದ್ದು, ಪಾಲನೆ ವಿಚಾರದಲ್ಲಿ ಕಿಂಚಿತ್ತೂ ಯೋಚಿಸುತ್ತಿಲ್ಲ. ಚಿಕ್ಕ ವಯಸ್ಸಿನ ಮಕ್ಕಳಿಗೆ ಅಗತ್ಯ ಉಂಟೋ, ಇಲ್ಲವೋ ಎಂಬುದನ್ನು ಯೋಚಿಸದೇ ಧಾರಾಳವಾಗಿ ಖರ್ಚುಮಾಡಿ ಸೂಟು, ಬೂಟು, ಆಟಿಕೆ, ಪಾಟಿಕೆ, ಇತ್ಯಾದಿಗಳನ್ನು ನೀಡಿ ಲಾಲನೆಗೆ ಮಾತ್ರ ಗಮನ ನೀಡುತ್ತಿದ್ದಾರೆ. ಮನೆಯಿಂದ ಶಾಲೆಯವರೆಗೆ ಒಂದು ಹೆಜ್ಜೆಯ ನಡಿಗೆಯ ಕಷ್ಟವೂ ಬರಬಾರದೆಂದು ಮನೆ ಬಾಗಿಲಿಗೆ ವಾಹನದ ವ್ಯವಸ್ಥೆ, ಶಾಲೆಯ ಬಿಡುವಿನಲ್ಲಿ ತಿನ್ನಲು ವಿವಿಧ ಬಗೆಯ ಸ್ನಾö್ಯಕ್ಸ್ಗಳು. ಸಂಜೆ ಶಾಲೆಯಿಂದ ಅದೇ ವಾಹನದಲ್ಲಿ ಮನೆಯವರೆಗೂ ಸುಖಕರ ಪ್ರಯಾಣ, ಹೀಗೆ ಮಕ್ಕಳಿಗೆ ಒಂದಿಷ್ಟೂ ಕಷ್ಟವೂ ಅನುಭವಕ್ಕೆ ಬರಬಾರದೆಂದು ಎಲ್ಲಾ ರೀತಿಯ ಪ್ರಯತ್ನವನ್ನು ಇಂದಿನ ಪೋಷಕರು ಮಾಡುತ್ತಿದ್ದಾರೆ. ಈ ಲಾಲನೆಯಲ್ಲಿ ಬಹುತೇಕ ಪ್ರಯತ್ನಗಳು ದುಡ್ಡಿನಿಂದ ವಸ್ತುಗಳನ್ನು ಕೊಂಡು ಒದಗಿಸುವುದು ಆಗಿರುತ್ತವೆ. ನೈತಿಕ ಮೌಲ್ಯ, ಸಂಸ್ಕಾರಗಳನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ನೀಡಿ ಪಾಲನೆ ಮಾಡಿದರೆ ಎಲ್ಲಿ ಸ್ಪರ್ಧಾತ್ಮಕ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎನ್ನುವ ಭ್ರಮೆಯಲ್ಲಿ ಯೋಚಿಸುವ ಪೋಷಕರು ಕೆಲವರಿದ್ದಾರೆ. ಹಾಗೆಯೇ ಅವುಗಳ ಗೋಜಿಗೆ ಹೋಗದೆ ಕೇವಲ ಅತೀ ಹೆಚ್ಚು ಅಂಕಗಳನ್ನು ಮಕ್ಕಳು ಗಳಿಸಿದ್ದಲ್ಲಿ ಮುಂದೆ ಎಲ್ಲಾ ಯಶಸ್ಸು ಧಾರಾಳವಾಗಿ ಸಿಗಲಿದೆ ಎಂಬ ಜೊಳ್ಳು ಭರವಸೆ ಇಟ್ಟುಕೊಂಡ ಪೋಷಕರೂ ಇದ್ದಾರೆ. ಇಂದು ಮಕ್ಕಳ ಜೊತೆ ಕುಳಿತು ಒಂದಿಷ್ಟು ಸಮಯವನ್ನು ಪಾಲನೆ ವಿಚಾರಗಳಿಗೆ ಪೋಷಕರು ನೀಡುತ್ತಿಲ್ಲದಿರುವುದು ಬಹಳ ಗಂಭೀರ ವಿಷಯವಾಗಿದೆ. ಮಕ್ಕಳು ಕೇಳಿದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿಯೋ ಅಥವಾ ಕೊಂಡು ತಂದೋ ಎದುರಿಗೆ ಇಡುತ್ತಾರೆ. ಆ ಲಾಲನೆ ಬಹಳ ಸುಲಭದ ಕೆಲಸ. ಆದರೆ ಪ್ರೀತಿಯಿಂದ ಜೊತೆಯಲ್ಲಿ ಕೂರಿಸಿಕೊಂಡು ಸಂಸ್ಕಾರದ ಮೌಲ್ಯವನ್ನು ತುಂಬುವ ಆಮೂಲಾಗ್ರ ಕರ್ತವ್ಯವನ್ನು ಇಂದು ಮರೆಯುತ್ತಿದ್ದಾರೆ. ಅತ್ತ ಶಾಲೆಯಲ್ಲಿ ಟೀಚರ್‌ಗಳು ತರಗತಿಯ ಎಲ್ಲಾ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ತೆಗೆಯಬೇಕೆಂದು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿರುತ್ತಾರೆ. ಇಡೀ ತರಗತಿಯೇ ಪರೀಕ್ಷೆಗೆ ಹಾಗೂ ಪೂರ್ಣ ಅಂಕ ಗಳಿಕೆಗೆ ಕೇಂದ್ರಿಕೃತವಾಗಿರುವುದರಿAದ ಜೀವನ ಪಾಠಕ್ಕೆ ಅಲ್ಲಿ ಜಾಗವೂ ಇಲ್ಲ, ಸಮಯವೂ ಇಲ್ಲ. ಮನೆ, ಶಾಲೆ, ಟ್ಯೂಷನ್‌ಗಳೇ ತುಂಬಿ ಹೋಗಿರುವ ಈ ಮಕ್ಕಳ ಜೀವನದಲ್ಲಿ ಸಮಾಜದಲ್ಲಿ ಬೆರೆಯುವುದು ಕನಸಿನ ಮಾತೆ ಸರಿ. ಒಂದು ವೇಳೆ ಬೆರೆಯುವ ಮನಸ್ಸಿದ್ದರೂ ಮಾನವೀಯ ಮೌಲ್ಯಗಳನ್ನು ಹೇಳಿಕೊಡುವಂತಹ ಆದರ್ಶ ಸಮಾಜ ಎಲ್ಲಿದೆ? ಇಂತಹ ಪರಿಸ್ಥಿತಿಯಲ್ಲಿ ಬೆಳೆಯುವ ಮಕ್ಕಳ ಮನಸ್ಸು ಸಹಜವಾಗಿ ಋಣಾತ್ಮಕ ಅಂಶಗಳ ಕಡೆಗೆ ವಾಲುತ್ತದೆ. ಏಕೆಂದರೆ ಮನೆ, ಶಾಲೆ, ಟ್ಯೂಷನ್ ನಂತರ ಮಿಕ್ಕ ಸಮಯದಲ್ಲಿ ಅವರಿಗಾಗಿ ಇನ್ನೊಂದು ಪ್ರಪಂಚ ಕಾದಿದೆ. ಅದೇ ಪ್ರಪಂಚವನ್ನೇ ಅಂಗೈಯಲ್ಲಿ ತೋರಿಸುವ ಮೊಬೈಲ್ ಪ್ರಪಂಚ. ಚಿಕ್ಕ ಮಗುವಿದ್ದಾಗ ಸಂಭಾಳಿಸಲು ಸಮಯವಿಲ್ಲದೇ ಸುಲಭದಲ್ಲಿ ಮೊಬೈಲ್‌ನಲ್ಲಿ ಗೇಮ್ಸ್ ಹಾಕಿ ಕೊಟ್ಟು ತಮ್ಮ ಕೆಲಸದಲ್ಲಿ ಬ್ಯುಸಿ ಆಗುತ್ತಿದ್ದರು ಪೋಷಕರು. ಅಂದು ಕೈ ಸೇರಿದ ಆ ಮೊಬೈಲ್‌ನ್ನು ಮತ್ತೆ ಮಗುವಿನ ಕೈಯಿಂದ ಬಿಡಿಸಲು ಆಗಲೇ ಇಲ್ಲ. ಬಾಲ್ಯಾವಸ್ಥೆಗೆ ಬಂದಾಗ ಹಿಂದಿನ ಕಿಡ್ಸ್ ರೈಮ್ಸ್ಗಳು ಬೇಡವಾಗಿ ಮಿಷಿನ್ ಗನ್‌ನಿಂದ ನೂರಾರು ಜನರನ್ನು ಶೂಟ್ ಮಾಡುವಂತಹ ವೀಡಿಯೋ ಗೇಮ್ ಬಹಳ ಇಷ್ಟವಾಯಿತು. ಹೈಸ್ಕೂಲ್‌ಗೆ ಕಾಲಿಡುತ್ತಿದ್ದಂತೆಯೆ ವೀಡಿಯೋ ಗೇಮ್ ಬೇಡವಾಗಿ ಸೋಷಿಯಲ್ ಮೀಡಿಯಾದಲ್ಲಿ ಚಾಟ್ ಮಾಡುವುದೇ ಬದುಕಾಯಿತು. ನಂತರ ಒಳಿತಿಗಿಂತ ಹೆಚ್ಚು ಕೆಡುಕುಗಳ ವಿಚಾರಗಳೇ ಮೊಬೈಲ್‌ನಲ್ಲಿ ಮಕ್ಕಳನ್ನು ಹೆಚ್ಚಾಗಿ ಆಕರ್ಷಿಸುತ್ತಾ ಹೋಯಿತು. ಹಾಗೆಯೇ ತಾವು ಮೊಬೈಲ್‌ನಲ್ಲಿ ಕಂಡದ್ದನ್ನು ನಿಜ ಜೀವನದಲ್ಲಿ ಅನುಭವಿಸಲು ಮುಂದಾಗುವರು. ಮೊನ್ನೆ ಹೈಸ್ಕೂಲ್ ಮಕ್ಕಳ ಬ್ಯಾಗ್‌ಗಳಲ್ಲಿ ಸಿಗರೇಟ್, ಡ್ರಗ್ಸ್, ಗರ್ಭನಿರೋಧಕಗಳು ಸಿಕ್ಕಿರುವುದು ಎಲ್ಲರಿಗೂ ಆತಂಕದ ವಿಷಯವಾಗಿದೆ. ಆದರೆ ಅದಕ್ಕಿಂತ ಗಂಭೀರವಾಗಿ ನಾವು ಆತಂಕ ಪಡಬೇಕಾಗಿರುವುದು ಈ ದುಸ್ಥಿತಿಗೆ ಬರಲು ನಿಜವಾದ ಕಾರಣ ಯಾರು? ಪ್ರಜ್ಞಾವಂತರಲ್ಲದ ಮಕ್ಕಳೇ? ಅಥವಾ ಅವರ ಪಾಲನೆಯನ್ನು ಮಾಡಬೇಕಾದ ಪ್ರಜ್ಞಾವಂತ ಪೋಷಕರೇ, ಬೋಧಕರೇ?