ಪಕ್ಷಿಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹತ್ತಾರು ದೇಶಗಳ ಬಗೆ ಬಗೆಯ ಪಕ್ಷಿಗಳು ಒಂದೆಡೆ ಕಾಣಸಿಕ್ಕರಂತೂ ಅದು ಕಣ್ಣಿಗೊಂದು ಹಬ್ಬ. ವಿದೇಶಿ ಪಕ್ಷಿಗಳು ತಂಗುವ ಅಪೂರ್ವ ತಾಣವೊಂದಕ್ಕೆ ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಇಲ್ಲಿದೆ.
ಗದಗ ತಾಲೂಕಿನ ಶಿರಹಟ್ಟಿಯಿಂದ ಎಂಟು ಕಿ.ಮೀ. ದೂರದ ಮಾಗಡಿ ಗ್ರಾಮದಲ್ಲಿ 134.15 ಎಕರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರುವ ವಿಶಾಲವಾದ ಮಾಗಡಿ ಕೆರೆಯೊಂದಿದೆ. ನವೆಂಬರ್ನಿoದ ಮಾರ್ಚ್ವರೆಗೆ ಇದು ಪಕ್ಷಿಪ್ರಿಯರ ಹಾಟ್ಸ್ಪಾಟ್. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಮಂಗೋಲಿಯಾ, ಸೈಬೇರಿಯಾ, ಆಸ್ಟ್ರೇಲಿಯಾ, ಚೀನಾ, ನೈಜಿರಿಯಾ, ಟಿಬೆಟ್, ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಮಲೇಷಿಯಾ, ನ್ಯೂಜಿಲ್ಯಾಂಡ್, ಲಡಾಖ್, ರಷ್ಯಾ, ಬ್ರೆಜಿಲ್, ಬರ್ಮಾ ಮುಂತಾದ ದೇಶಗಳಲ್ಲಿ ವಿಪರೀತ ಚಳಿ ಇರುತ್ತದೆ. ಕೆಲವು ದೇಶಗಳಲ್ಲಿ ಮಂಜಿನಿAದ ಕೂಡಿದ ವಾತಾವರಣ ನಿರ್ಮಾಣವಾಗುತ್ತದೆ. ಆಗ ಅಲ್ಲಿ ಪಕ್ಷಿಗಳಿಗೆ ವಾಸಿಸಲು ಕಷ್ಟಸಾಧ್ಯವಾಗುತ್ತದೆ. ಆ ದಿನಗಳಲ್ಲಿ ಅಲ್ಲಿಂದ ಪಕ್ಷಿಗಳು ಮಾಗಡಿ ಕೆರೆಗೆ ವಲಸೆ ಬರುತ್ತವೆ.
ಶುದ್ಧ ಸಸ್ಯಹಾರಿ ಪಕ್ಷಿಗಳು
ಮಂಗೋಲಿಯಾ ದೇಶದಿಂದ ಹೆಬ್ಬಾತು ಅಥವಾ ಪರ್ವತಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತವೆ. ಬೂದು ಹೆಬ್ಬಾತು, ಕಂದು ಬಾತು, ಸೂಜಿ ಬಾಲದ ಬಾತು, ಚಲುಕ ಬಾತು, ನಾಮದ ಬಾತು, ಬಿಳಿಹುಬ್ಬಿನ ಬಾತು, ಕಂದುತಲೆ ಬಾತು, ಹಂಸಗಳ ಜಾತಿಗೆ ಸೇರಿದ ಪೇಂಟೆಡ್ ಸ್ಟಾರ್ಕ್, ಬ್ರಾಹ್ಮೀಣಿ ಡಕ್, ಸ್ಪೂನ್ ಬಿಲ್, ಲಿಟ್ಲ, ಕಾರ್ಪೋರಲ್ಸ್, ಅಟಲ್ರಿಂಗ್ ಫ್ಲೋವರ್, ಲೊಮನ್ ಡೇಲ್, ವುಡ್ ಸ್ಟಾಂಡ್, ಪೈಪರ್, ಗ್ರೀವನ್ ಟೇಲ್, ಬ್ಲಾಕ್ ಡ್ರಾಂಗೋ, ರೆಡ್ ಢ್ರೋಟ್, ಪೆಡ್ಡಿ ಪ್ರೀಪೆಟ್ ಮುಂತಾದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಇವುಗಳು ಕೆರೆಯಲ್ಲಿರುವ ಮೀನುಗಳನ್ನು ತಿನ್ನುವುದಿಲ್ಲ. ಬದಲಾಗಿ ಧಾನ್ಯಗಳನ್ನು ತಿಂದು ಬದುಕುತ್ತವೆ. ಕುತ್ತಿಗೆಯಲ್ಲಿ ಕೆಲವು ಪಕ್ಷಿಗಳಿಗೆ ಹಳದಿ, ಹಸಿರು, ನೀಲಿ, ಕೆಂಪು ಬಣ್ಣದ ಪಟ್ಟಿಗಳನ್ನು ಅಳವಡಿಸುತ್ತಾರೆ. ಅದರ ಆಧಾರದ ಮೇಲೆ ಪಕ್ಷಿಗಳ ದೇಶವನ್ನು ಗುರುತಿಸಲಾಗುತ್ತದೆ.
ಧಾನ್ಯಗಳ ಇಳುವರಿಯ ಸಮಯ
ನವೆಂಬರ್ನಿAದ ಮಾರ್ಚ್ವರೆಗೆ ಶಿರಹಟ್ಟಿ, ಗದಗ ಜಿಲ್ಲೆಯ ಇತರ ಪ್ರದೇಶ ಅಂದರೆ ಕೆರೆಯ ಆಸುಪಾಸುಗಳಲ್ಲಿ ರೈತರು ಬೆಳೆದ ಶೇಂಗಾ, ಕಡಲೆ, ಜೋಳ, ಗೋಧಿ, ಮೆಕ್ಕೆಜೋಳ, ನೆಲಗಡಲೆ ಚೆನ್ನಾಗಿ ಇಳುವರಿ ನೀಡುತ್ತದೆ. ಇವುಗಳೆ ಹಕ್ಕಿಗಳ ಆಹಾರ.
ಆಹಾರ ಹುಡುಕಾಟ – ಹತ್ತಾರು ಕಿ.ಮೀ. ಹಾರಾಟ : ನಿತ್ಯ ಇವು ಆಹಾರವನ್ನು ಅರಸುತ್ತಾ 30 ರಿಂದ 40 ಕಿ.ಮೀ. ದೂರ ಸಂಚರಿಸುತ್ತವೆ. ರೈತರು ಗದ್ದೆಯಲ್ಲಿಲ್ಲದ ಸಮಯ ಅಂದರೆ ಜನರ ಓಡಾಟ ಕಡಿಮೆ ಇರುವ ಸಂದರ್ಭದಲ್ಲಿ ಆಹಾರವನ್ನು ಹುಡುಕುತ್ತವೆ. ಬೆಳಗ್ಗಿನ ಜಾವ 6 ಗಂಟೆಯ ಸುಮಾರಿಗೆ ಆಹಾರ ಹುಡುಕಾಟಕ್ಕೆ ಹೊರಟರೆ ಬೆಳಿಗ್ಗೆ 8.30ರ ವೇಳೆಗೆ ಮತ್ತೆ ಕೆರೆಯತ್ತ ಬರುತ್ತವೆ. ಸಂಜೆ ರೈತರು ಗದ್ದೆಯಿಂದ ತೆರಳಿದ ನಂತರ 5.30ರ ವೇಳೆಗೆ ಆಹಾರಕ್ಕಾಗಿ ತೆರಳಿದರೆ ಮತ್ತೆ ಹಿಂದಿರುಗುವುದು ರಾತ್ರಿ 8.30ಕ್ಕೆ. ಆದ್ದರಿಂದ ದಿನವಿಡಿ ಪಕ್ಷಿಗಳ ದರ್ಶನಕ್ಕೆ ರಾಮ್ಸರ್ ತಾಣ ಪ್ರಸಿದ್ಧವಾಗಿದೆ.
ನೀರಿನಲ್ಲೆ ತೇಲಾಟ, ಚೀರಾಟ : ಕೆರೆಯ ಸುತ್ತ ಪಕ್ಷಿಗಳಿಗೆ ವಾಸಿಸಲು ಅನುಕೂಲವಾಗುವಂತಹ ಸಾಕಷ್ಟು ಗಿಡ, ಮರ, ಪೊದೆಗಳಿದ್ದರೂ ಇವುಗಳು ಹೆಚ್ಚಿನ ಸಮಯವನ್ನು ನೀರಿನಲ್ಲೆ ಕಳೆಯುತ್ತವೆ. ಬಾತುಕೋಳಿಗಳಂತೆ ನೀರಿನಲ್ಲೆ ಈಜಾಡುತ್ತಿರುವ ಇವುಗಳನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಬೆಳಗ್ಗಿನ ಜಾವ ಖಾಲಿಯಾಗಿರುವ ಕೆರೆ ಬಿಸಿಲು ಸೋಕುತ್ತಿದ್ದಂತೆ ಪಕ್ಷಿಗಳಿಂದ ತುಂಬಿ ಬಿಳಿ ಬಣ್ಣದಲ್ಲಿ ಕಂಗೊಳಿಸುತ್ತದೆ.
ನೋ ಫೈಟಿಂಗ್ : ಬೇರೆ ದೇಶಗಳಿಂದ ಬಂದ ಪಕ್ಷಿಗಳು ಇಲ್ಲಿ ಜೊತೆಯಾಗಿ ಬದುಕುತ್ತವೆ. ವಿದೇಶಗಳಿಂದ ಬರುವ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿಯನ್ನು ಮಾಡುವುದಿಲ್ಲ. 1997 ರಿಂದ ಇಲ್ಲಿ ಪಕ್ಷಿಗಳು ಆಗಮಿಸುತ್ತಿದ್ದು ಈವರೆಗೆ ಸುಮಾರು 134 ಜಾತಿಯ ಪಕ್ಷಿಗಳು ಆಗಮಿಸಿವೆ.
ಏನಿದು ರಾಮ್ಸರ್ ತಾಣ : ಜಲಪಕ್ಷಿಗಳಿಗೆ ಆವಾಸಸ್ಥಾನವನ್ನು ಒದಗಿಸುವ, ಜೈವಿಕ ವೈವಿಧ್ಯತೆ ಮತ್ತು ಜಲ ಸಂಪನ್ಮೂಲಗಳ ರಕ್ಷಣೆ, ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುವ ತಾಣವನ್ನು ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ ‘ರಾಮ್ಸರ್ ತಾಣ’ಗಳೆಂದು ಗುರುತಿಸಲಾಗುತ್ತದೆ. ಅಂದರೆ ಈ ತಾಣಗಳು ವಿಶ್ವ ಮಾನ್ಯತೆಯನ್ನು ಪಡೆದ ತಾಣಗಳಾಗಿದ್ದು ಇವುಗಳು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವುಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಯತ್ನಿಸುತ್ತವೆ. ಭಾರತದಲ್ಲಿ ಒಟ್ಟು 91 ರಾಮ್ಸರ್ ತಾಣಗಳಿವೆ. ತಮಿಳುನಾಡು 20 ತಾಣಗಳನ್ನು ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಒಡಿಶಾದಲ್ಲಿರುವ ಚಿಲಿಕಾ ಸರೋವರ ಭಾರತದ ಮೊದಲ ರಾಮ್ಸರ್ ತಾಣವಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಕರ್ನಾಟಕದ ಪ್ರಥಮ ರಾಮ್ಸರ್ ತಾಣವಾಗಿದೆ. ಮಾಗಡಿ ಕೆರೆ ಎರಡನೇ ರಾಮ್ಸರ್ ತಾಣವಾಗಿದ್ದು ವಲಸೆ ಹಕ್ಕಿಗಳಿಗೆ ಹೆಸರುವಾಸಿಯಾಗಿದೆ.
ಭಾರತ ಸರಕಾರವು ಮಾಗಡಿ ಕೆರೆ ವಲಸೆ ನೀರಿನ ಪಕ್ಷಿಗಳ ಸೂಕ್ಷ್ಮ ಆವಾಸಸ್ಥಾನವೆಂದು, ಪ್ರಮುಖ ಪಕ್ಷಿ ಪ್ರದೇಶವೆಂದೂ ಗುರುತಿಸಿದೆ. ಕೆರೆಯ ಮಹತ್ವ ಮತ್ತು ಅದರ ಪರಿಸರ ಪ್ರಾಮುಖ್ಯತೆಯನ್ನು ಪರಿಗಣಿಸಿ 2012ರಲ್ಲಿ ಮಾಗಡಿ ಕೆರೆಯನ್ನು ‘ಮಾಗಡಿಕೆರೆ ಸಂರಕ್ಷಣಾ ಮೀಸಲು’ ಎಂದು ಘೋಷಿಸಿದೆ. ರಾಜ್ಯ ಪ್ರವಾಸೋದ್ಯಮ, ಕಂದಾಯ, ಆರಣ್ಯ ಇಲಾಖೆಯ ನೇತೃತ್ವದಲ್ಲಿ ರಾಮ್ಸರ್ ತಾಣ ಇಂದು ಅಭಿವೃದ್ಧಿಗೊಂಡು ಪಕ್ಷಿಪ್ರಿಯರನ್ನು ಆಕರ್ಷಿಸುತ್ತಿದೆ.
ವಿದೇಶಿಗರ ನೆಚ್ಚಿನ ತಾಣ : ಪ್ರತಿ ವರ್ಷ ಇಲ್ಲಿಗೆ 30 ರಿಂದ 40 ಸಾವಿರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಬೇರೆ ರಾಜ್ಯ, ದೇಶಗಳಿಂದಲೂ ಇಲ್ಲಿಗೆ ಪಕ್ಷಿಪ್ರಿಯರು ಬರುತ್ತಾರೆ.
ಪಕ್ಷಿಗಳ ಕುರಿತು ಜಾಗೃತಿ : ಶಿರಹಟ್ಟಿಯಲ್ಲಿರುವ ಸರಕಾರಿ ಶಾಲೆಗಳಿಗೆ ವಾಹನಗಳನ್ನು ಕಳುಹಿಸಿ ಅಲ್ಲಿಂದ ವಿದ್ಯಾರ್ಥಿಗಳನ್ನು ಕರೆತಂದು ಪಕ್ಷಿಗಳ ಕುರಿತು ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪಕ್ಷಿ, ಜಲಸಂಪನ್ಮೂಲ, ಪರಿಸರ ರಕ್ಷಣೆಯ ಪಾಠವನ್ನು ಇಲ್ಲಿರುವ ಇಲಾಖೆಯ ಸಿಬ್ಬಂದಿಗಳು ಮಾಡುತ್ತಿದ್ದಾರೆ.
ಪ್ರವಾಸಿಗರ ಗಮನಕ್ಕೆ
ಪ್ರವೇಶ ಉಚಿತವಾಗಿದ್ದು ನವೆಂಬರ್ನಿಂದ ಮಾರ್ಚ್ ತಿಂಗಳು ಭೇಟಿಗೆ ಸೂಕ್ತ ಸಮಯ. ಬೆಳಿಗ್ಗೆ ಗಂಟೆ 8.30 ಸಂಜೆ 5:30ರೊಳಗೆ ಮಾತ್ರ ಪಕ್ಷಿಗಳು ಇಲ್ಲಿರುತ್ತವೆ. ಪಕ್ಷಿಗಳ ಸೌಂದರ್ಯ, ಕೆರೆಯ ವಿಶಾಲತೆಯನ್ನು ಕಣ್ತುಂಬಿಕೊಳ್ಳಲು ವ್ಹೀವ್ ಟವರ್ ವ್ಯವಸ್ಥೆಯಿದೆ. ಹತ್ತಿರದಿಂದ ನೋಡಬೇಕೆಂದೆನಿಸಿದರೆ ದೂರದಲ್ಲಿರುವ ಪಕ್ಷಿಗಳನ್ನು ಕಣ್ಣಿನ ಹತ್ತಿರದಲ್ಲಿ ತೋರಿಸುವ ಕ್ಯಾಮರಾ ವ್ಯವಸ್ಥೆಯಿದೆ. ಮಾಹಿತಿ ನೀಡಲು ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ವಾಹನವನ್ನು ಕೆರೆ ಸಮೀಪ ನಿಲ್ಲಿಸಿ ಸುಮಾರು ಒಂದು ಕಿ.ಮೀ.ನಷ್ಟು ಕೆರೆ ದಡದಲ್ಲಿ ನಡೆದಾಡಿದರೆ ವ್ಹೀವ್ ಟವರ್ ಸಿಗುತ್ತದೆ. ಇನ್ನು ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆಗಳನ್ನು ಕೊಡುವುದು, ಪ್ಲಾಸ್ಟಿಕ್ ಬಾಟಲ್, ಕಸವನ್ನು ಕೆರೆಗೆ ಬಿಸಾಡುವಂತಿಲ್ಲ.
ಗದಗ ಕಡೆ ಹೋದಾಗ ನೀವು ಕೂಡಾ ಒಮ್ಮೆ ಮಾಗಡಿ ಕೆರೆಗೆ ಭೇಟಿ ನೀಡಿ ಅಲ್ಲಿನ ಪಕ್ಷಿಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
