ವಿದ್ಯಾರ್ಥಿಗಳ ಭವಿಷ್ಯದ ‘ಯಶೋ’ಗಾಥೆಗೆ ಭದ್ರ ಬುನಾದಿ ಹಾಕಿದವರು

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.)

ಒಂದು ದೇಶದ ಸಮಗ್ರ ಅಭಿವೃದ್ಧಿಗೂ ಅಲ್ಲಿಯ ಶಿಕ್ಷಣ ವ್ಯವಸ್ಥೆಗೂ ಒಂದು ರೀತಿಯ ನೇರ ಸಂಬAಧವಿದೆ. ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ಗುಣಮಟ್ಟದಲ್ಲಿ ವಿಶ್ವದರ್ಜೆಗೇರಿಸುವ ಪ್ರಯತ್ನಗಳಾಗುತ್ತಿವೆ. ಡಿಜಿಟಲ್ ಇಂಡಿಯಾದ ಈ ಕಾಲಘಟ್ಟದಲ್ಲಿ ಡಿಜಿಟಲ್ ಶಿಕ್ಷಣ ಅನಿವಾರ್ಯ ಮತ್ತು ಅವಕಾಶವು ಆಗಿದೆ. ಕೋವಿಡ್ ಸಂದರ್ಭದಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆಯಾದ ಡಿಜಿಟಲ್ ಶಿಕ್ಷಣ ಇಂದು ಪರಿಹಾರ ಮತ್ತು ಫಲಪ್ರದ ವ್ಯವಸ್ಥೆಯಾಗಿದೆ. ಇದು ಗ್ರಾಮೀಣ ವಿದ್ಯಾರ್ಥಿಗಳಿಗಂತೂ ಬಹುದೊಡ್ಡ ವರವೇ ಆಯಿತು. ಕೋವಿಡ್‌ಗಿಂತ ಎಷ್ಟೋ ಮೊದಲೇ ಈ ಡಿಜಿಟಲ್ ಶಿಕ್ಷಣದ ಪ್ರಯೋಜನವನ್ನು ಅರಿತ ಕೆಲವು ಸಂಸ್ಥೆಗಳು ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅವುಗಳನ್ನು ಅಳವಡಿಸಿಕೊಂಡಿದ್ದರು. ಹೀಗೆ ಅನಾದಿಯಲ್ಲೇ ಶಿಕ್ಷಣಕ್ಕೆ ಡಿಜಿಟಲ್ ಸ್ಪರ್ಶ ನೀಡಿದ ಕಾಲೇಜುಗಳಲ್ಲಿ ನಮ್ಮ ಎಸ್.ಡಿ.ಎಮ್ ಕಾಲೇಜ್ ಮುಂಚೂಣಿಯಲ್ಲಿತ್ತು. ಎಸ್.ಡಿ.ಎಮ್ ಕಾಲೇಜ್ ಅನ್ನು ಪೂಜ್ಯ ಶ್ರೀ ಹೆಗ್ಗಡೆಯವರು ಉಜಿರೆ ಹಾಗೂ ರಾಜ್ಯದ ನಾನಾ ಕಡೆ ಬೆಳೆಸಿ ಇಂದು ದೇಶದಲ್ಲಿಯೇ ತನ್ನ ಕೀರ್ತಿಯ ಛಾಪು ಮೂಡಿಸುವಂತೆ ಮಾಡಿದರು. ಪೂಜ್ಯರ ಕನಸು ಹಾಗೂ ಆಶಯಗಳನ್ನು ಕಾರ್ಯಗತಗೊಳಿಸುತ್ತಿದ್ದವರು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಹೆಮ್ಮೆಯ ಕಾರ್ಯದರ್ಶಿಗಳಾಗಿದ್ದ ಶ್ರೀಯುತ ಡಾ. ಬಿ. ಯಶೋವರ್ಮರವರು. ಮಾತೃಶ್ರೀ ಅಮ್ಮನವರ ಪ್ರೀತಿಯ ತಮ್ಮನಾದ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಮೂಲಕ ಸುಂದರ ಭವಿಷ್ಯ ರೂಪಿಸುವುದಕ್ಕೆ ವಿಶೇಷ ಪ್ರಾಧಾನ್ಯತೆಯನ್ನು ಎಲ್ಲಾ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಮೂಲಕ ನೀಡಿದರು. ಅವರು ಬಹಳ ಮೊದಲೇ ಹೈಟೆಕ್ ಡಿಜಿಟಲ್ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ಪ್ರಾರಂಭಿಸಿದರು. ಎಸ್.ಡಿ.ಎಮ್ ಕಾಲೇಜ್ ಅನ್ನು ಡಿಜಿಟಲೈಸ್ಡ್ ಕ್ಯಾಂಪಸ್ ಮಾಡಿದರು. ವಿದ್ಯಾರ್ಥಿಗಳ ಸಮಗ್ರ ಚಟುವಟಿಕೆಗಳನ್ನು ದಾಖಲಿಸಲು ತಮ್ಮ ಸಂಸ್ಥೆಯಿAದಲೇ ಒಂದು ಹೊಸ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿ ಬಳಸಿದರು. ಪೇಪರ್‌ಲೆಸ್ ಆಡಳಿತವನ್ನು ಕಾರ್ಯಗತಗೊಳಿಸಿದರು. ಎಜುಸ್ಯಾಟ್ ಶಿಕ್ಷಣ ಸೌಲಭ್ಯವನ್ನು ಪ್ರಾರಂಭದಿ0ದಲೇ ನೀಡಲಾರಂಭಿಸಿದರು. ಅಂದು ವಿದೇಶದಲ್ಲಿ ಪ್ರಚಲಿತವಿದ್ದ ಇ-ಲರ್ನಿಂಗ್ ಮತ್ತು ಇ-ಪ್ರಾಕ್ಟಿಕಲ್ಸ್ ವ್ಯವಸ್ಥೆಯನ್ನು ಆಗಲೇ ಎಸ್.ಡಿ.ಎಮ್‌ನಲ್ಲೂ ಪ್ರಾರಂಭಿಸಿದರು. ಹೀಗೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ, ಗೂಗಲ್ ಕ್ಲಾಸ್ ರೂಂ ಉಪನ್ಯಾಸಗಳು ಮುಂತಾದ ಅನೇಕ ಇ-ಲರ್ನಿಂಗ್ ಸೌಲಭ್ಯಗಳಿಂದ ಪ್ರಧಾನವಾಗಿ ಗ್ರಾಮೀಣ ವಿದ್ಯಾರ್ಥಿಗಳಿಂದಲೇ ಕೂಡಿದ ಎಸ್.ಡಿ.ಎಮ್ ಕಾಲೇಜ್‌ಗಳಿಗೆ ದೇಶದ ಪರಿಣಿತ ಶಿಕ್ಷಣ ತಜ್ಞರಿಂದ ಶಿಕ್ಷಣ ಪಡೆಯುವಂತಾಯಿತು. ಒಂದು ರೀತಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆನ್‌ಲೈನ್ ಪರೀಕ್ಷೆಗಳನ್ನು ತಂದ ಕೀರ್ತಿ ಎಸ್.ಡಿ.ಎಮ್‌ಗೆ ಸಲ್ಲುತ್ತದೆ. ಲ್ಯಾಂಗ್‌ವೇಜ್ ಲ್ಯಾಬ್‌ಗಳನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ, ಅದರಲ್ಲೂ ಮುಖ್ಯವಾಗಿ ಇಂಗ್ಲೀಷ್ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿದರು. ಗ್ರಂಥಾಲಯಗಳಲ್ಲಿ ಇ-ಬುಕ್, ಓಪೆಕ್, ಇ-ಲೈಬ್ರರಿಯನ್ನು ವಿಶೇಷವಾಗಿ ಅಳವಡಿಸಿದರು. ಈ ಎಲ್ಲಾ ವ್ಯವಸ್ಥೆಗಳಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನ, ಬುದ್ಧಿಮತ್ತೆ, ಕೌಶಲ್ಯ ಹಾಗೂ ಆತ್ಮವಿಶ್ವಾಸ ಯಾವ ನಗರದ ವಿದ್ಯಾರ್ಥಿಗಳಿಗೂ ಕಡಿಮೆ ಇಲ್ಲದಂತೆ ಬೆಳೆಸಿದರು. ತಮ್ಮ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ದೊಡ್ಡ ನಗರದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸಿಗುವಂತಹ ಅವಕಾಶಗಳನ್ನು ಇಲ್ಲಿ ಕಲಿತ ವಿದ್ಯಾರ್ಥಿಗಳು ಗಿಟ್ಟಿಸಿಕೊಳ್ಳುತ್ತಿದ್ದರು. ಅಂತಹ ಉದ್ಯೋಗಾವಕಾಶವನ್ನು ಪಡೆಯಲು ಜಯಿಸಬೇಕಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ, ಸಂದರ್ಶನಗಳಲ್ಲೂ ಬಹಳ ಉತ್ತಮ ಸಾಧನೆಯನ್ನು ಇವರು ಮಾಡುತ್ತಿದ್ದರು. ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಈ ಎಲ್ಲಾ ಕೌಶಲ್ಯಗಳನ್ನು ಅವರಲ್ಲಿ ಎಸ್.ಡಿ.ಎಮ್ ಬೆಳೆಸುತ್ತಿದ್ದದ್ದು ಇದಕ್ಕೆ ಮೂಲ ಕಾರಣವಾಗಿತ್ತು.
ನಾನು ೨೦೧೧ ರಲ್ಲಿ ಪ್ರತಿಷ್ಠಿತ ವಿಜಯ ಬ್ಯಾಂಕ್‌ನ ಕೇಂದ್ರ ಕಛೇರಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಒಂದು ಬೃಹತ್ ಕ್ಲೆರಿಕಲ್ ಕ್ಯಾಂಪಸ್ ಪ್ಲೇಸ್‌ಮೆಂಟ್ ಇನ್‌ಚಾರ್ಜ್ ಆಗಿದ್ದೆ. ದೇಶಾದ್ಯಂತ ಆಯ್ದ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಸುಮಾರು ೭೫೦ ಪ್ರೊಬೇಷ್‌ನರಿ ಕ್ಲೆರಿಕಲ್ ಹುದ್ದೆಗಳು ತುಂಬಬೇಕಿತ್ತು. ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಆಯ್ಕೆ ಮಾಡಿಕೊಂಡ ಸುಮಾರು ೨೫೦ ಕಾಲೇಜ್‌ಗಳಲ್ಲಿ ಎಸ್.ಡಿ.ಎಮ್ ಕಾಲೇಜ್ ಕೂಡಾ ಒಂದಾಗಿತ್ತು. ದೇಶಾದ್ಯಂತ ನಡೆದ ಪ್ಲೇಸ್‌ಮೆಂಟ್‌ನಲ್ಲಿ ಅನೇಕ ಕಠಿಣ ಸುತ್ತಿನ ಆಯ್ಕೆಗಳನ್ನು ಜಯಿಸಿ ಕೊನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಯಿತು. ದೇಶದ ಉದ್ದಗಲದ ಅನೇಕ ರಾಜ್ಯಗಳ ಕಾಲೇಜುಗಳಿಂದ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ ಸರಾಸರಿ ೪ ರಿಂದ ೫ ಇತ್ತು. ಆದರೆ, ಉಜಿರೆಯ ಎಸ್.ಡಿ.ಎಮ್ ಕಾಲೇಜ್‌ವೊಂದರಲ್ಲೇ ೨೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಇನ್ನೂ ವಿಶೇಷವೆಂದರೆ ಅವರೆಲ್ಲರೂ ಗ್ರಾಮೀಣ ವಿದ್ಯಾರ್ಥಿಗಳೇ ಆಗಿದ್ದರು. ಆ ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ದೇಶದಲ್ಲೆ ಅತೀ ಹೆಚ್ಚು ಉತ್ತಮ ಅಭ್ಯರ್ಥಿಗಳನ್ನು ನೀಡಿದ ಕಾಲೇಜ್ ಎಸ್.ಡಿ.ಎಸ್ ಆಗಿತ್ತು.
ಇಲ್ಲಿಯ ವಿದ್ಯಾರ್ಥಿಗಳು ಮುಂದೆ ಉದ್ಯೋಗಸ್ಥರಾಗಲಿ,
ಸ್ವ-ಉದ್ಯೋಗಸ್ಥರಾಗಲಿ ಎರಡರಲ್ಲೂ ಯಶಸ್ಸು ಕಾಣುವರು. ಆಧುನಿಕ ಹಾಗೂ ಮೌಲ್ಯಯುತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಯಶೋಗಾಥೆಗೆ ಭದ್ರ ಬುನಾದಿ ಹಾಕಿದವರು
ಡಾ. ಬಿ. ಯಶೋವರ್ಮರವರು. ಈ ಮೇರು ವ್ಯಕ್ತಿತ್ವದ ವ್ಯಕ್ತಿಯನ್ನು ಕಳೆದ ಮೇ ತಿಂಗಳ ೨೩ ತಾರೀಕಿನಂದು ಕಳೆದುಕೊಂಡ ನಾವೆಲ್ಲರು ದುರಾದೃಷ್ಟರಾದೆವು. ಅವರು ಇನ್ನಿಲ್ಲವಾದರೂ, ತಮ್ಮ ಉನ್ನತ ವ್ಯಕ್ತಿತ್ವದಿಂದಾಗಿ ಅವರ ಹೆಸರು ಎಂದಿಗೂ ಉಳಿದಿರುವಂತಾಯಿತು. ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳು ಸದಾ ಅಮರವಾಗಿ ಇರುವವು.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *