ವಿವೇಚನೆ ಮುಖ್ಯ

ದಂಪತಿಗಳಿಬ್ಬರು ಕಟ್ಟಿಗೆ ಹೊರೆ ಹೊತ್ತುಕೊಂಡು ಮನೆಯತ್ತ ಸಾಗುತ್ತಿದ್ದಾಗ ಪತಿಯ ಕಾಲಿಗೇನೋ ತಾಗಿ ಎಡವಿ ಆತ ಬಿದ್ದು ಬಿಟ್ಟ. ಎಬ್ಬಿಸಿ ನೋಡಿದರೆ ಒಂದು ಲೋಹದ ಪಾತ್ರೆ ಅಲ್ಲಿತ್ತು. ಮಣ್ಣು ಸರಿಸಿ ಅದನ್ನೆತ್ತಿಕೊಂಡು ಮನೆಗೆ ಬಂದಾಗ ಏನೋ ದೊಡ್ಡ ನಿಧಿ ಸಿಕ್ಕಿದೆ ಎಂಬ ಸಂತೋಷ. ಅದರ ಮುಚ್ಚಳ ತೆಗೆದು ನೋಡಿದಾಗ ಅದರಲ್ಲಿ ತಾಳೆಗರಿಗಳ ಸಂಗ್ರಹವಿತ್ತು. ನಿರಾಸೆಗೊಂಡ ದಂಪತಿಗಳು ಅದನ್ನು ಅಲ್ಲೆ ಹೊಂಡಕ್ಕೆ ಎಸೆಯುತ್ತಾರೆ. ಇದನ್ನು ನೋಡಿದ ಓರ್ವ ವಿದ್ಯಾವಂತ ಯುವಕ ಅದನ್ನು ಹೊಂಡದಿoದ ತೆಗೆದು ಇದು ಪ್ರಯೋಜನವಿಲ್ಲದ ವಸ್ತುವಾಗಿದ್ದಲ್ಲಿ ಇಷ್ಟು ಭದ್ರಪಡಿಸಿ ಮಣ್ಣಿನಡಿ ಹೂಳುತ್ತಿರಲಿಲ್ಲ ಎಂದು ಚಿಂತಿಸಿ ಅದನ್ನು ವಿದ್ವಾಂಸರಲ್ಲಿ ತೆಗೆದುಕೊಂಡು ಹೋಗುತ್ತಾನೆ. ಅದನ್ನು ಓದಿದ ವಿದ್ವಾಂಸರು ಊರಿನ ಹಳೆಯ ದೇವಾಲಯದ ಪಕ್ಕ ಒಂದು ದೊಡ್ಡ ನಿಧಿ ಇದೆ. ಅದನ್ನು ದೇಗುಲದ ಜೀರ್ಣೋದ್ಧಾರಕ್ಕೆ ಬಳಸಬೇಕೆಂದು ಇದರಲ್ಲಿ ಬರೆದಿದೆ ಎನ್ನುತ್ತಾರೆ. ಮುಂದಕ್ಕೆ ನಿಧಿ ದೊರೆಯಿತು. ಹುಡುಕಿಕೊಟ್ಟವನಿಗೆ, ಓದಿಸಿದವನಿಗೆ ಎಲ್ಲರಿಗೂ ದೊಡ್ಡ ಬಹುಮಾನವನ್ನು ಕೊಡಲಾಯಿತು. ಹೀಗೆ ಯಾವುದನ್ನು ಕೂಡಾ ನಿರುಪಯುಕ್ತ ಎನ್ನುವಂತಿಲ್ಲ. ಎಲ್ಲಾ ಸಂಪತ್ತಿಗಿoತ ಶ್ರೇಷ್ಠವಾದುದು ‘ವಿದ್ಯೆ’ ಮತ್ತು ‘ವಿವೇಚನೆ’. ವಿವೇಚನೆ ಇಲ್ಲದೆ ಇದ್ದವನ ಕೈಯಲ್ಲಿ ವಜ್ರವನ್ನು ಕೊಟ್ಟರು ಅದನ್ನು ಅವನು ಕತ್ತೆಯ ಕುತ್ತಿಗೆಗೆ ಕಟ್ಟುತ್ತಾನೆ. ಕೆಲವೊಮ್ಮೆ ಎಂಥೆAಥಾ ಅವಕಾಶಗಳು ಬಂದಾಗಲೂ ಅದರ ಪೂರ್ವಾಪರ ವಿವೇಚಿಸದೆ ಅದು ಕಷ್ಟ, ಅದು ನನ್ನಂಥವನಿಗೆ ಹೇಳಿಸಿದ್ದಲ್ಲ ಎಂದು ಅವಕಾಶಗಳನ್ನು ತಿರಸ್ಕರಿಸುವುದಿದೆ.
ಯಾವಾಗಲೂ ಎಲ್ಲೆಡೆಯಲ್ಲೂ ಒಳಿತನ್ನೆ ಕಾಣುವಾತ ಕತ್ತಲೆಗೆ ಅಂಜುವುದಿಲ್ಲ, ಮತ್ತೆ ಬೆಳಕು ಬರಬಹುದೆಂದು ಕಾಯುತ್ತಾನೆ.ಮಗದೊಬ್ಬ ಬೆಳಕಲ್ಲೇ ಇದ್ದರೂ ಕತ್ತಲನ್ನೇ ಕಾಣುತ್ತಾನೆ. ಯಾವುದೇ ಒಂದು ಕೆಲಸವನ್ನು ಆರಂಭಿಸುವ ಮೊದಲು ಅದರಲ್ಲಿನ ನ್ಯೂನತೆಗಳ, ಕಷ್ಟ-ನಷ್ಟಗಳ ಬಗ್ಗೆ ಹೆಚ್ಚು ಚಿಂತಿಸುತ್ತಾನೆ. ತಾವರೆ ನೋಡುವ ಬದಲು ಅದರ ಕೆಳಗಿನ ಕೆಸರನ್ನು ಕಂಡು ತಾವರೆಯನ್ನೇ ನಿರಾಕರಿಸುವವನು ಒಬ್ಬನಾದರೆ, ಆ ಕೆಸರಿನಲ್ಲೂ ಅರಳಿನಿಂತ ತಾವರೆ ಕೆಸರನ್ನು ಸೋಂಕದೆ ಹೇಗೆ ಶುಭ್ರವಾಗಿದೆ ಎಂದು ಭಾವಿಸಿ ದೇವರಿಗೆ ಅರ್ಪಿಸಲು ಬಯಸುವವ ಮಗದೊಬ್ಬ. ವಿವೇಚನೆ ಇದ್ದವ ಕೈಯಲ್ಲಿರುವ ಬೀಜದಲ್ಲಿ ಮುಂದೆ ಬರಬಹುದಾದ ಫಲವನ್ನು ನೋಡುತ್ತಾನೆ. ಅದನ್ನು ಜಾಗೃತೆಯಾಗಿ ಒಳ್ಳೆಯ ಜಾಗದಲ್ಲಿ ಬಿತ್ತುತ್ತಾನೆ. ವಿವೇಚನೆ ಇಲ್ಲದವನು ಇದನ್ನು ಬಿತ್ತಿದರೂ ಬದುಕುತ್ತದೆಯೋ, ಇಲ್ಲವೋ, ದನ ತಿಂದು ಹೋದರೆ, ಕೀಟಬಾಧೆ ಆದರೆ ಏನು ಗತಿ? ಇದು ದೊಡ್ಡ ಮರವಾಗುವಾಗ ಯಾವ ಕಾಲವಾಗುತ್ತೋ! ಆಗ ಅದರ ಫಲ ತಿನ್ನಲು ನಾವಿರುತ್ತೇವೋ, ಇಲ್ಲವೋ! ಎಂದು ಯೋಚಿಸುತ್ತಾ ಬೀಜವನ್ನು ಹಾಗೆ ಎಸೆಯುತ್ತಾನೆ.
ನಮಗೆ ಬೇಕಾದದ್ದು ದೊರೆತಾಗ ಮಾತ್ರ ಸಂತೋಷವಾಗುತ್ತದೆ. ಅನೇಕ ಸಲ ನಾವಂದುಕೊoಡoತೆ ಲಾಭ, ಹಣ, ಸಂಪತ್ತು ಅಷ್ಟು ಸುಲಭದಲ್ಲಿ ನಮ್ಮ ಕೈವಶವಾಗುವುದಿಲ್ಲ. ಯಾವುದೋ ಬೇಡದ ದಂಧೆ ಮಾಡಿ ಹಣಗಳಿಸಬಹುದಾದರೂ ಅದು ಬಹಳ ದಿನದವರೆಗೆ ಉಳಿಯುವುದಿಲ್ಲ. ಮಾತ್ರವಲ್ಲ ಸಮಾಜದಲ್ಲಿ ಅಂಥ ಸಿರಿವಂತಿಗೆಗೆ ಬೆಲೆ ಇರುವುದಿಲ್ಲ. ಆಗ ಎಲ್ಲಿ, ಹೇಗೆ, ಯಾವ ಕೆಲಸ ಮಾಡಿದರೆ ನಮ್ಮ ಬದುಕು ಹಸನಾಗಬಹುದೆಂಬ ವಿವೇಚನೆಯಿಂದ ಕಾರ್ಯಸಾಧನೆ ಮಾಡಬೇಕಾಗುತ್ತದೆ.
ಒಂದು ಮಾತಿದೆ, ನಮಗೆ ಸಿಟ್ಟು ಬಂದಾಗ, ಉದ್ವೇಗ ಆದಾಗ ನಮ್ಮ ವಿವೇಕ ಹೊರಗೆ ಹೋಗುತ್ತದೆ. ತಕ್ಷಣಕ್ಕೆ ನಾವು ಬಾಯಿಗೆ ಬಂದ ಮಾತನ್ನು ಆಡಿ ಬಿಡುತ್ತೇವೆ. ಹಿರಿಯರು, ಹೆತ್ತವರು, ಗುರುಗಳು ಹೀಗೆ ಯಾರೇ ಇದ್ದರೂ ಅವರಲ್ಲಿ ನಾವು ವಿವೇಕವನ್ನು ಕಳೆದುಕೊಂಡು ವಿವೇಚನೆ ಇಲ್ಲದೆ ಮಾತನಾಡುತ್ತೇವೆ. ಸಿಟ್ಟು ಶಾಂತವಾದಾಗ ವಿವೇಕ ಉದಯವಾಗುತ್ತದೆ. ಆಗ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಮುಂದೆ ಪಶ್ಚತ್ತಾಪಪಡುವುದು, ಕ್ಷಮೆ ಕೇಳುವುದು ಏನೇ ಇರಲಿ, ಆದರೆ ಆಡಿದ ಮಾತನ್ನು ಹಿಂದೆ ಪಡೆಯುವುದಕ್ಕೆ ಆಗುವುದಿಲ್ಲ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ನಮ್ಮ ವೈರಿಯೇ ನಮ್ಮ ಎದುರು ಬಂದು ನಿಂತಾಗಲೂ ನಾವು ಏನು ಮಾಡಬೇಕು, ಏನು ಮಾಡಬಾರದು ಎನ್ನುವುದು ನಮ್ಮ ವಿವೇಚನೆಗೆ ಬಿಟ್ಟ ವಿಷಯ. ನಾವು ಮೌನವಾಗಿರಬಹುದು ಅಥವಾ ಆ ಜಾಗದಿಂದ ಎದ್ದು ಹೋಗಬಹುದು. ಹೀಗೆ ಆ ಸಂದರ್ಭಕ್ಕೆ ಉದ್ರೇಕಗೊಳ್ಳದೆ ಬೇರೆ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಅವಕಾಶಗಳೂ ಇವೆ.
ಅನೇಕ ಸಲ ನಾವು ವಿವೇಚನೆ ಇಲ್ಲದೆ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಆದ್ದರಿಂದ ಯಾವುದೇ ಹೊಸ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನಾಲ್ಕು ಜನ ಹಿತೈಷಿಗಳ ಸಲಹೆ ಕೇಳುವುದು, ಯಾವುದೇ ವಿಷಯವನ್ನು ಪೂರ್ವಾಗ್ರಹವಿಲ್ಲದೆ ಸಮಚಿತ್ತದಿಂದ ಚಿಂತಿಸುವುದು ಅಥವಾ ಮಾತನಾಡುವುದು, ಎಚ್ಚರಿಕೆಯಿಂದ ಇರುವುದು ಉತ್ತಮ. ಇದನ್ನೇ ‘ವಿವೇಚನೆ’ ಎನ್ನುತ್ತಾರೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates