ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಪ್ರತೀ ವರ್ಷ ಮಾರ್ಚ್ 22 ಅನ್ನು ‘ವಿಶ್ವ ಜಲ ದಿನ’ವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನ ಪ್ರತಿಯೊಂದು ದೇಶಕ್ಕೂ ಇಂದು ನೀರಿನ ಮಹತ್ವದ ಅರಿವಾಗಿದೆ. ಪ್ರಾಣವಾಯುವಿನ ನಂತರ ಪ್ರತಿಯೊಂದು ಜೀವ ಸಂಕುಲದ ಅತೀ ಅಗತ್ಯ ವಸ್ತು ಅಂದರೆ ಅದು ಜೀವಜಲ. ‘ನೀರು ಜೀವನದ ಬೇರು’ ಎಂದು ಹೇಳುತ್ತಾರೆ. ಮನುಕುಲದ ನಾಗರೀಕತೆಯ ಇತಿಹಾಸದ ಮೇಲೆ ಕಣ್ಣಾಡಿಸಿದಾಗ ನಾಗರೀಕತೆ ಪ್ರಾರಂಭವಾಗಿರುವುದು ಜೀವನದಿಗಳು ಹಾದುಹೋಗುವ ತಟಗಳಲ್ಲಿಯೇ ಎಂಬುವುದು ಸ್ಪಷ್ಟವಾಗುತ್ತದೆ. ಇದು ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಬದುಕಿನಲ್ಲಿ ನೀರಿನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ನಮ್ಮ ಭೂಮಿಯಲ್ಲಿ ಅಗಣಿತ ಜಲರಾಶಿಯಿದೆ. ಆದರೆ ಇದರಲ್ಲಿ ಕೇವಲ ಶೇ. 2.3 ರಷ್ಟು ಸಿಹಿನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಉಳಿದ ಶೇ. 97.7 ರಷ್ಟು ನೀರು ಸಮುದ್ರದಲ್ಲಿ ಉಪ್ಪುನೀರಿನ ರೂಪದಲ್ಲಿದೆ. ಸರಳವಾಗಿ ಹೇಳಬೇಕೆಂದರೆ 1 ಲೀಟರ್ ನೀರಿನಲ್ಲಿ ಕೇವಲ ಅರ್ಧ ಚಮಚ ನೀರನ್ನು ಮಾತ್ರ ನಾವು ಬಳಕೆ ಮಾಡಬಹುದಾಗಿದೆ. ನಮಗೆ ಲಭ್ಯವಾಗುವ ಶೇ. 2.3 ಸಿಹಿನೀರಿನಲ್ಲಿ ಬಹುಪಾಲು ನೀರು ಕೃಷಿಗೆ ಉಪಯೋಗವಾಗುತ್ತಿದೆ. ಇನ್ನುಳಿದ ಅತ್ಯಲ್ಪ ನೀರನ್ನು ನಮ್ಮ ದೈನಂದಿನ ಬಳಕೆಗೆ ಅಂದರೆ ಕಛೇರಿ, ಕೈಗಾರಿಕೆ ಮುಂತಾದ ಹತ್ತು ಹಲವು ಉದ್ದೇಶಗಳಿಗೆ ಬಳಸಿಕೊಳ್ಳಬೇಕಾಗಿದೆ. ಈ ಅತ್ಯಲ್ಪ ಭಾಗದ ಸಿಹಿನೀರು ಪ್ರಕೃತಿ ಸಹಜವಾಗಿ ಅಂದರೆ ನದಿ, ತೊರೆ, ಕೆರೆ, ಕೊಳಗಳಿಂದ ನಮಗೆ ಲಭ್ಯವಾಗಿದೆ. ಆದರೆ ನಮಗದು ಸಾಕಾಗದೆ ಭೂತಾಯಿಯ ಗರ್ಭದಲ್ಲಿರುವ ನೀರನ್ನು ಬಗೆದು ತೆಗೆಯಲು ಪ್ರಾರಂಭಿಸಿದೆವು. ನಮ್ಮ ದುರಾಸೆಗೆ ಭೂತಾಯಿ ಮುನಿಸಿಕೊಳ್ಳದೆ ಸಿಹಿನೀರನ್ನೇ ಚಿಮ್ಮಿಸಿದಳು. ದುರಾಸೆಯಿಂದ ಅವುಗಳ ಬಳಕೆಯೂ ಮಿತಿ ಮೀರಿದಾಗ ಆ ನೀರೂ ಬತ್ತಿ ಹೋಗಲಾರಂಭವಾಯಿತು. ಅಷ್ಟಕ್ಕೂ ಬಿಡದ ನಾವು ಇನ್ನೂ ಆಳವಾಗಿ ಭೂಮಿಯನ್ನು ರಂಧ್ರ ಮಾಡುತ್ತಲೇ ಹೋದೆವು. ಭೂತಾಯಿ ಮುನಿಸಿಕೊಳ್ಳದೆ ಜೋಪಾನವಾಗಿ ಮುಂದಿನ ಪೀಳಿಗೆಗಾಗಿ ಉಳಿಸಿ ಕೂಡಿಟ್ಟ ನೀರನ್ನೂ ವೇದನೆಯಿಂದ ನೀಡುವಂತಾಯಿತು. ಅದೂ ಬತ್ತಿದರೆ ಮುಂದೇನೆ0ಬುದು ಯಾರಿಗೂ ಗೊತ್ತಿಲ್ಲ. ಇದೀಗ ಪ್ರಕೃತಿ ಸಹಜವಾಗಿದ್ದ ನದಿ, ತೊರೆ, ಕೆರೆ ಕೊಳ, ಬಾವಿಗಳು ಬತ್ತಲಾರಂಭಿಸಿವೆ. ಅದರಿಂದಾಗಿ ಇನ್ನು ಮೋಡವಾಗಿ ಸಾಕಷ್ಟು ಮಳೆ ಬರುವುದಾದರೂ ಹೇಗೆ? ಆಳದಲ್ಲಿದ್ದ ಭವಿಷ್ಯತ್ತಿನ ನೀರಿನ ಸಂಗ್ರಹವೂ ಕೂಡಾ ಬರಿದಾಗುತ್ತಾ ಬರುತ್ತಿರುವುದರಿಂದ ಮುಂದಿನ ಪೀಳಿಗೆಯ ಬದುಕಿಗೆ ಅನ್ಯಗ್ರಹದಿಂದಲೇ ನೀರನ್ನು ತರಬೇಕೇನೋ! ನೀರನ್ನು ಅತ್ಯಂತ ಮಿತವ್ಯಯ ಮಾಡುವುದರೊಂದಿಗೆ ಉಳಿದಿರುವ ಅಲ್ಪ ನೀರನ್ನು ಉಳಿಸುವುದು ಇಂದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ನಮ್ಮ ಪೂರ್ವಜರು ನೀರನ್ನು ಉಳಿಸಿರುವುದು ನಮ್ಮ ಮುಂದಿನ ಪೀಳಿಗೆಗೆ ಜವಾಬ್ದಾರಿಯಿಂದ ವರ್ಗಾಯಿಸಲೆಂದೇ ಹೊರತು, ಬತ್ತಿಸಿ ಖಾಲಿ ಮಾಡುವುದಕ್ಕಲ್ಲ. ನೀರನ್ನು ಅತ್ಯಂತ ವಿವೇಚನೆಯಿಂದ ಮಿತವ್ಯಯ ಮಾಡಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ.
ಪೂಜ್ಯ ಹೆಗ್ಗಡೆಯವರು ಮತ್ತು ಮಾತೃಶ್ರೀ ಅಮ್ಮನವರು ಯೋಜನೆಯ ಅನೇಕ ಕಾರ್ಯಕ್ರಮಗಳ ಮೂಲಕ ಪ್ರಕೃತಿಯನ್ನು ಸಂರಕ್ಷಿಸಿದ್ದಾರೆ. ಅವುಗಳಲ್ಲಿ ‘ನೀರು ಉಳಿಸಿ’ ಕಾರ್ಯಕ್ರಮವೂ ಅತ್ಯಂತ ಮಹತ್ವದ್ದಾಗಿದೆ. ವಿಶ್ವದ ಪ್ರತಿಷ್ಠಿತ ಸಂಸ್ಥೆಯಾದ ಯುನಿಸೆಫ್ (UUNICEF) ನೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯೂ ಜಂಟಿಯಾಗಿ ಕರ್ನಾಟಕ ರಾಜ್ಯದಲ್ಲಿ ‘ನೀರು ಉಳಿಸಿ’ ಎನ್ನುವ ಬೃಹತ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮದಡಿ ರಾಜ್ಯದ ಪ್ರಮುಖ ಬರಪೀಡಿತ 14 ಜಿಲ್ಲೆಗಳ ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ, ಸಾಮಾನ್ಯ ಜನರಲ್ಲಿ ನೀರಿನ ಮಹತ್ವ ಮತ್ತು ಮಿತವ್ಯಯದ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ. ಇದಕ್ಕೆ ಒಂದು ವಿಶೇಷ ಆ್ಯಪ್ ಅನ್ನು ಸಿದ್ಧಪಡಿಸಲಾಗಿದ್ದು ನಿತ್ಯ ತಾವು ಉಳಿಸಿದ ನೀರನ್ನು ಅದರಲ್ಲಿ ದಾಖಲಿಸುವ ಮೂಲಕ ಯುವಜನತೆಯನ್ನು ನೀರು ಉಳಿಸುವ ಕಾರ್ಯಕ್ರಮದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಉತ್ತಮ ಸ್ಪಂದನೆಯೂ ದೊರಕಿದೆ.
ಈ ಕಾರ್ಯಕ್ರಮದಡಿ ಪ್ರಸ್ತುತ ೨೦೦೦ಕ್ಕೂ ಮಿಕ್ಕಿದ ‘ನೀರು ಉಳಿಸಿ’ ಕಾರ್ಯಕ್ರಮಗಳ ಮೂಲಕ 3.83 ಮಿಲಿಯನ್ ಕ್ಯೂಬಿಕ್ ಲೀಟರ್ ನೀರನ್ನು ಉಳಿಸಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿ ದೇಶಕ್ಕೇ ಮಾದರಿಯಾಗುವಂತಹ ಈ ‘ನೀರು ಉಳಿಸಿ’ ಕಾರ್ಯಕ್ರಮದ ಯಶಸ್ಸಿಗೆ ಯೋಜನೆಯ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಯೋಜನೆಯ ಈ ಎಲ್ಲಾ ಸಾಧನೆಗಳು ಅಂತಾರಾಷ್ಟಿçÃಯ ಸಂಸ್ಥೆಯಾದ ಯುನಿಸೆಫ್ನ (UNICEF) ವಿಶೇಷ ಗೌರವಕ್ಕೆ ಪಾತ್ರವಾಗಿದೆ.
‘ವಿಶ್ವ ಜಲ ದಿನ’ ಕೇವಲ ಆಚರಣೆಗೆ ಮಾತ್ರ ಸಿಮೀತವಾಗದೆ ಎಲ್ಲರೂ ನೀರನ್ನು ಉಳಿಸುವತ್ತ ಪ್ರಯತ್ನಿಸಿದಲ್ಲಿ ಆ ದಿನಕ್ಕೊಂದು ವಿಶೇಷ ಅರ್ಥ ಬರುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ. ಪೂಜ್ಯರ ಮಾತಿನಂತೆ ಭೂಮಿಯನ್ನು ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಸಮೃದ್ಧವಾದ ಜಲಮೂಲಗಳೊಂದಿಗೆ ವರ್ಗಾಯಿಸೋಣ.