ಶೌರ್ಯದ ಸಾಹಸಿಗರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು

ಒಂದು ಕುಟುಂಬ, ಸಮಾಜ, ದೇಶಕ್ಕೆ ಯಾವುದೇ ಸಂದರ್ಭದಲ್ಲಾದರೂ ವಿಪತ್ತು, ದುರ್ಘಟನೆಗಳು, ಆಪತ್ತುಗಳು ಎದುರಾಗಬಹುದು. ಇಂಥಾ ಸಂದರ್ಭದಲ್ಲಿ ಸರಕಾರದ ವಿಪತ್ತು ನಿರ್ವಹಣಾ ಪಡೆಗಳು, ಪೊಲೀಸರು, ಇನ್ನೂ ದೊಡ್ಡ ಘಟನೆಗಳು ನಡೆದಲ್ಲಿ ಸೇನೆಯವರು ಸಹ ಪಾಲ್ಗೊಂಡು ಜನರನ್ನು ರಕ್ಷಿಸುವ, ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯುವ ಕೆಲಸವನ್ನು ಮಾಡುತ್ತಾರೆ. ವಿಪತ್ತು ನಿರ್ವಹಣೆ ತಕ್ಷಣಕ್ಕೆ ಆಗಬೇಕಾದ ಕೆಲಸ. ಇಲ್ಲಿ ಮತ್ತೆ ಮಾಡುತ್ತೇವೆ, ನಾಳೆ ನೋಡೋಣ ಎನ್ನುವಂತಿಲ್ಲ. ಇದೂ ಒಂದು ರೀತಿಯಲ್ಲಿ ನಮ್ಮ ಸೈನಿಕರು ಗಡಿಯಲ್ಲಿ ಹೋರಾಡಿದಂತೆಯೇ. ಅಲ್ಲಿ ನಮ್ಮವರ ರಕ್ಷಣೆಗಾಗಿ ಜೀವವನ್ನು ಮುಡಿಪಿಡಬೇಕಾಗುತ್ತದೆ. ಸೈನ್ಯ ಸೇರಬೇಕಾದರೆ ಅಲ್ಲಿ ಒತ್ತಾಯ, ಒತ್ತಡದಿಂದಲ್ಲ. ಸ್ವ ಇಚ್ಛೆ, ಸ್ವಂತ ನಿರ್ಧಾರದಿಂದಲೇ ಸೇರಬೇಕಾಗುತ್ತದೆ. ಹಾಗೆ ವಿಪತ್ತು ನಿರ್ವಹಣೆಗೆ ಸೇರುವವರು ತಮ್ಮ ಮನೆಯವರ ಒಪ್ಪಿಗೆ ಪಡೆಯುವುದಲ್ಲದೆ ತಾವೇ ಆಸಕ್ತಿಯಿಂದ ಈ ಕೆಲಸ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಕಳೆದ ಒಂದು ವರ್ಷದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಜನೋಪಯೋಗಿ ಕಾರ್ಯಕ್ರಮಗಳ ಜೊತೆಗೆ ವಿಪತ್ತು ನಿರ್ವಹಣೆಯ ಘನವಾದ ಉದ್ದೇಶವನ್ನಿಟ್ಟುಕೊಂಡು ‘ಶೌರ್ಯ’ ಎನ್ನುವ ಹೆಸರಿನಲ್ಲಿ ಸುಮಾರು 13 ಜಿಲ್ಲೆಗಳ 74 ತಾಲೂಕುಗಳಲ್ಲಿ ವಿಪತ್ತು ನಿರ್ವಹಣೆ ಘಟಕಗಳು ಸ್ಥಾಪನೆಯಾಗಿದ್ದು, 9,280 ಮಂದಿ ಈಗಾಗಲೇ ಬೇಕಾದ ಆವಶ್ಯಕ ತರಬೇತಿಗಳನ್ನು ಪಡೆದು ಸೇವೆ ಮಾಡುತ್ತಿದ್ದಾರೆ. ಘಟಕ ಆರಂಭವಾದoದಿನಿoದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಒಂದಲ್ಲ ಒಂದು ವಿಪತ್ತುಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ವಿಪತ್ತು ಹೇಳಿ ಕೇಳಿ ಬರುವಂಥದ್ದಲ್ಲ. ರಾತ್ರಿ ಸುಖ ನಿದ್ದೆಯಲ್ಲಿದ್ದವರಿಗೆ ಎಚ್ಚರವಾದಾಗ ಮನೆಯ ಒಳ, ಹೊರಗೆ ನೆರೆ ನೀರು ತುಂಬಿ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ, ಒಮ್ಮೆಲೇ ಗುಡ್ಡ ಕುಸಿದು ಬುಡದಲ್ಲಿರುವ ಮನೆಗಳು ನಾಶವಾಗುವುದು, ಜೋರಾದ ಗಾಳಿ, ಮಳೆಗೆ ತೋಟ, ಮನೆಗಳು ಜಖಂಗೊoಡು ಹೊರಗೆ ಓಡಿ ಹೋಗಬೇಕಾದ ಸ್ಥಿತಿ, ಅಗ್ನಿ ಆಕಸ್ಮಿಕಗಳು, ಕೆಲವೊಮ್ಮೆ ಫ್ಯಾಕ್ಟರಿಗಳಿಂದ ಹೊರಹೊಮ್ಮುವ ವಿಷ ಅನಿಲಗಳಿಂದ ಆಗುವ ಅನಾಹುತ, ರೈಲು, ಬಸ್ಸು, ಕಾರು, ಸ್ಕೂಟರ್‌ಗಳ ಅಪಘಾತದಿಂದಾಗುವ ಜೀವಹಾನಿ ಹೀಗೆ ಯಾವುದೇ ರೀತಿಯ ಚಿಕ್ಕ, ದೊಡ್ಡ ವಿಪತ್ತುಗಳು ಸಂಭವಿಸಿದರೂ ಶೌರ್ಯ ಸ್ವಯಂಸೇವಕರು ತಕ್ಷಣ ನೆರವಿಗೆ ಬರುತ್ತಾರೆ. ಆಗ ವಿಪತ್ತಿಗೆ ಒಳಗಾದವರಲ್ಲಿ ಆ ಸಂದರ್ಭದಲ್ಲಿ ಪರಮಾತ್ಮನೇ ‘ಶೌರ್ಯ ಸೇನಾನಿ’ಗಳ ರೂಪದಲ್ಲಿ ಬಂದು ನಮ್ಮನ್ನು ರಕ್ಷಿಸಿದ ಎಂಬ ಭಾವನೆ ಕಂಡು ಬರುತ್ತದೆ.
ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೊನಾ ಸಾಂಕ್ರಾಮಿಕ ಕಾಯಿಲೆಯಂತೂ ಜನರ ಜೀವ, ಜೀವನಗಳೆರಡನ್ನು ತಲ್ಲಣಗೊಳಿಸಿದೆ. ಇಂಥಾ ಸಂದರ್ಭದಲ್ಲೂ ‘ಶೌರ್ಯ ವಿಪತ್ತು ನಿರ್ವಹಣಾ ತಂಡ’ದವರು ಅವರನ್ನು ಆಸ್ಪತ್ರೆಗೆ ಸಾಗಿಸುವ, ಅವರಿಗೆ ಸಾಂತ್ವನ ಹೇಳುವ, ಅನ್ನ – ಆಹಾರವನ್ನು ಒದಗಿಸುವ ಸಹಾಯ ಮಾಡಿದ್ದಲ್ಲದೆ ಸತ್ತ ಬಂಧುಗಳ ಹೆಣ ಸುಡಲು ಮನೆ ಮಂದಿ ಹಿಂಜರಿದ ಸಂದರ್ಭದಲ್ಲಿ ತಾವೇ ನಿಂತು ಅಂತ್ಯ ಸಂಸ್ಕಾರ ನೆರವೇರಿಸಿದ್ದೂ ಇದೆ.
ವಿಪತ್ತು ನಿರ್ವಹಣೆಯ ಜೊತೆಗೆ ಅನೇಕ ಸಮಾಜ ಸೇವಾಕಾರ್ಯಗಳಲ್ಲೂ ಕೈಜೋಡಿಸುವ ಉತ್ಸಾಹ ‘ಶೌರ್ಯ ತಂಡಗಳ’ ಯುವಕರದ್ದಾಗಿದೆ. ಒಟ್ಟಿನಲ್ಲಿ ಹತ್ತು ಕಡೆ ಹರಿಯುತ್ತಿದ್ದ ಯುವಶಕ್ತಿಯನ್ನು ಒಂದೆಡೆ ಸೇರಿಸಿ ಅದರ ಸದುಪಯೋಗ ಪಡೆಯುವ ಕಾರ್ಯಕ್ರಮ ಇದಾಗಿದೆ. ಸುಮ್ಮನೆ ಹರಿಯುವ ನದಿಗೆ ಅಣೆಕಟ್ಟು ಕಟ್ಟಿ ಆ ನೀರನ್ನು ಕೃಷಿಗೆ ಉಪಯೋಗಿಸುವುದರ ಜೊತೆಗೆ ವಿದ್ಯುತ್ ಉತ್ಪಾದನೆಗೂ ಬಳಸುವಂತೆ ಯುವಶಕ್ತಿ ಜನರ ಬದುಕಿನಲ್ಲಿ ಸಮೃದ್ಧಿ ಮತ್ತು ಬೆಳಕನ್ನು ನೀಡುವಲ್ಲಿ ಸಫಲವಾಗಿದೆ ಎಂದರೆ ತಪ್ಪಲ್ಲ.
‘ಶೌರ್ಯ’ ಹೆಸರೇ ಸೂಚಿಸುವಂತೆ ಆಪತ್ಕಾಲದಲ್ಲಿ ನೆರವಿಗೆ ಬರುವ ತಂಡವಾಗಿದೆ. ಸಮಾಜಸೇವೆ ಮಾಡಬೇಕೆಂಬ ಆಸಕ್ತಿ ಉಳ್ಳವರ ಸಂಘಟನೆ ಇದು. ಎಷ್ಟೋ ಮಂದಿಗೆ ಸಮಾಜಕ್ಕೆ ತನ್ನಿಂದಾದ ಸಹಾಯ ಮಾಡಬೇಕೆಂಬ ಹಂಬಲ ಇರುತ್ತದೆ. ಆದರೆ ಅವಕಾಶಗಳು ದೊರೆತಿರುವುದಿಲ್ಲ. ಇತ್ತೀಚೆಗೆ ಸಮಾಜಸೇವೆಯ ಕನಸನ್ನು ಹೊತ್ತು ‘ಶೌರ್ಯ’ ತಂಡಕ್ಕೆ ಸೇರಬೇಕೆನ್ನುವ ಯುವಕ – ಯುವತಿಯರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಎಲ್ಲೇ ಆಪತ್ತುಗಳು ಎದುರಾದರೂ ಶೌರ್ಯದ ಸದಸ್ಯರು ಅಲ್ಲಿರುತ್ತಾರೆ. ಹಲವಾರು ಜೀವಹಾನಿಗಳನ್ನು ತಡೆದ ಕೀರ್ತಿಯು ಇವರದ್ದು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ದಿನದ ಇಪ್ಪತ್ನಾಲ್ಕು ಗಂಟೆಯೂ ಸೇವೆಗೆ ಸಿದ್ಧವಿರುವ ಈ ತಂಡದ ಪ್ರಯತ್ನ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಜೀವನದಲ್ಲಿ ಸುಖ – ದುಃಖದ ಕ್ಷಣಗಳು ಬರುತ್ತಿರುತ್ತವೆ. ಆದರೆ ಜೀವನ ಸಾರ್ಥಕವಾಯಿತು ಎನ್ನುವಂತಹ ಸಂತೋಷದ ಕ್ಷಣಗಳು ಬರುವುದು ಅಪರೂಪ. ಇವರ ಸೇವೆ ಬದುಕಿನಲ್ಲಿ ಇಂತಹ ಸಾರ್ಥಕತೆಯನ್ನು ತಂದಿದೆ.
ಕ್ಷೇತ್ರಕ್ಕೆ, ಕ್ಷೇತ್ರದ ಕಾರ್ಯಕ್ರಮಕ್ಕೆ ಹೆಮ್ಮೆ ತರುವಂತಹ ಯುವಪಡೆ ‘ಶೌರ್ಯ’ದ ಹೆಸರಿನಲ್ಲಿ ತಯಾರಾಗಿದೆ. ಹೆತ್ತವರಿಗೂ, ಊರಿಗೂ ಹೆಮ್ಮೆ ತರುವಂತಹ ನಿಮ್ಮ ಈ ಸೇವಾಕಾರ್ಯಕ್ಕೆ ಸ್ಫೂರ್ತಿ ತುಂಬುತ್ತಿರುವ ವಿವೇಕ್ ಪಾಯಸ್ ಹಾಗೂ ತಂಡದ ನಿಮ್ಮೆಲ್ಲರಿಗೂ ದೇವರ ಶ್ರೀರಕ್ಷೆ ಸದಾ ಬೆಂಗಾವಲಾಗಿರಲಿ ಎಂದು ಹಾರೈಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *