ಶ್ರೀ ಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ

ಶ್ರೀ ಕ್ಷೇತ್ರದ ಬೀಡಿಗೆ ಬರುವ ಅನೇಕರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವುದು ಧರ್ಮಾಧಿಕಾರಿಗಳಾದ ಶ್ರೀ ಹೆಗ್ಗಡೆಯವರ ನಿತ್ಯ ಕಾಯಕವಾಗಿತ್ತು. ಹೆಚ್ಚಿನ ಸಮಸ್ಯೆಗಳಿಗೆ ಆ ಸಂದರ್ಭಕ್ಕೊ0ದು ಪರಿಹಾರವನ್ನು ಸೂಚಿಸುತ್ತಿದ್ದರು. ಆದರೆ ಅವುಗಳಿಗೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆ0ಬುವುದು ಶ್ರೀ ಹೆಗ್ಗಡೆಯವರ ಮಹಾನ್ ಚಿಂತನೆಯಾಗಿತ್ತು. ಏಕಾಂತದಲ್ಲಿರುವಾಗಲೆಲ್ಲ ಈ ಬಗ್ಗೆ ಸುದೀರ್ಘವಾಗಿ ಯೋಚನೆಗಳನ್ನು ಮಾಡುತ್ತಿದ್ದರು. ದಿನಕಳೆದಂತೆ ಕೆಲವೊಂದು ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳತೊಡಗಿದರು. ಅಂತಹ ಕಾರ್ಯಕ್ರಮಗಳಲ್ಲಿ ಉಚಿತ ಸಾಮೂಹಿಕ ವಿವಾಹವು ಒಂದು. ಪೂಜ್ಯರ ಬಳಿ ಬರುವ ಅನೇಕರು ನನ್ನ ಮಗಳ, ಮಗನ ಮದುವೆಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿದೆ, ಇದ್ದ ಸ್ವಲ ಜಮೀನನ್ನು ಅಡಮಾನ ಇಟ್ಟಿದ್ದು ಬಿಡಿಸಿಕೊಳ್ಳಲಾಗದೆ ಬೇರೆಯವರ ಪಾಲಾಗಿದೆ, ಮಗಳ ಮದುವೆಯನ್ನು ಮಾಡಿ ಇದ್ದ ಮನೆಯನ್ನೂ ಮಾರಿದ್ದೇನೆ. ಈಗ ಯಾವ ಆಸರೆಯೂ ಇಲ್ಲದೆ ನಿರ್ಗತಿಕನಾಗಿದ್ದೇನೆ. ಇಂತಹ ಅನೇಕ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದ್ದರು. ಕೆಲವೊಂದು ವಿಚಿತ್ರವಾಗಿದ್ದರೂ ಸತ್ಯವಾಗಿತ್ತು. ದೊಡ್ಡ ಮೊತ್ತದ ಸಾಲ ಮಾಡಿ ಮಗಳ ಮದುವೆಯನ್ನು ಮಾಡಿ ಸಾಲ ತೀರಿಸಲಾಗದೆ ಅಳಿಯನನ್ನೇ ಸಾಲ ಕೊಟ್ಟವರ ಮನೆಯ ಆಳಾಗಿ ಧಾರೆಯೆರೆದಿದ್ದೂ ಇದೆ.
ಪ್ರತಿಷ್ಠೆಗಾಗಿ ಅದ್ಧೂರಿಯಾಗಿ ಮದುವೆ ಮಾಡಿ ಕೊನೆಗೆ ಸಾಲ ತೀರಿಸಲಾಗದೆ, ಇದ್ದ ಎಲ್ಲ ಗೌರವವನ್ನು ಕಳೆದುಕೊಳ್ಳುತ್ತಿರುವುದು ಒಂದು ದುರಂತವೇ ಸರಿ. ಜೀವನದಲ್ಲಿ ಒಮ್ಮೆ ಮಾತ್ರ ಮದುವೆ ಆಗುವುದು, ಕುಟುಂಬದ ಪ್ರತಿಷ್ಠೆಯ ಪ್ರಶ್ನೆ, ಮದುವೆ ವಿಚಾರದಲ್ಲಿ ಹಿಂದೆ ಮುಂದೆ ನೋಡಬಾರದು ಇಂತಹ ಪುಕ್ಕಟೆ ಸಲಹೆಗಳಿಂದ ಇದ್ದಲ್ಲೆಲ್ಲ ಸಾಲ ಮಾಡಿ ನಂತರ ತೀವ್ರ ಸಂಕಷ್ಟಕ್ಕೀಡಾದವರು ಬಹುತೇಕರಿದ್ದಾರೆ. ಜನಸಾಮಾನ್ಯರನ್ನು ಇಂತಹ ಸಂಕಷ್ಟಗಳಿAದ ಪಾರು ಮಾಡುವ ಸಲುವಾಗಿ ಪೂಜ್ಯ ಶ್ರೀ ಹೆಗ್ಗಡೆಯವರು ಪ್ರಾರಂಭಿಸಿದ ಒಂದು ಶ್ರೇಷ್ಠ ಕಾರ್ಯಕ್ರಮವೇ ಉಚಿತ ಸಾಮೂಹಿಕ ವಿವಾಹ. ಸುಮಾರು ೫೩ ವರ್ಷಗಳ ಹಿಂದೆ ಅಂದರೆ 1972ರಲ್ಲಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹವನ್ನು ಆರಂಭಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮದುವೆ ಆಗುವುದೇ ಒಂದು ಭಾಗ್ಯ. ಅದೂ ಪೂಜ್ಯ ಶ್ರೀ ಹೆಗ್ಗಡೆಯವರ ಮತ್ತು ಮಾತೃಶ್ರೀಯವರ ಕೃಪಾಶೀರ್ವಾದ ಮತ್ತು ಸಾವಿರಾರು ಜನರ ಸಮ್ಮುಖದಲ್ಲಿ ಪುರೋಹಿತರಿಂದ ಶಾಸ್ತೊçÃಕ್ತವಾಗಿ ಮಂತ್ರ ಘೋಷದೊಂದಿಗೆ ಅತ್ಯಂತ ಗೌರವಯುತವಾಗಿ ವಿವಾಹ ಆಗುವುದೆಂದರೆ ಇದಕ್ಕಿಂತ ಭಾಗ್ಯ ಆ ದಂಪತಿಗಳಿಗೆ ಇನ್ನೊಂದಿದೆಯೇ? ಅದೂ ಯಾವುದೇ ಖರ್ಚಿಲ್ಲದೆ ಉಚಿತವಾಗಿ.
ಮದುವೆಯಾಗುವ ವರನಿಗೆ ಧೋತಿ ಮತ್ತು ಶಾಲು, ವಧುವಿಗೆ ಸೀರೆ, ಬಳೆ, ರವಿಕೆ ಕಣ, ಚಿನ್ನದ ತಾಳಿ ಹಾಗೂ ಗೃಹೋಪಯೋಗಿ ವಸ್ತುಗಳ ಕೊಡುಗೆಯ ಕಿಟ್ ಅನ್ನು ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹದಲ್ಲಿ ಪೂಜ್ಯರು ನೀಡುತ್ತಾರೆ. ಮಾಂಗಲ್ಯ ಧಾರಣೆ ಮುಗಿದ ನಂತರ ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆಯೂ ಇರುತ್ತದೆ. ಪ್ರತೀ ವರ್ಷ ಸಾಮೂಹಿಕ ವಿವಾಹಕ್ಕೆ ರಾಜ್ಯದ ಪ್ರಖ್ಯಾತ ಚಲನಚಿತ್ರ ನಟರು ಅಥವಾ ಗಣ್ಯ ವ್ಯಕ್ತಿಗಳು ಅತಿಥಿಗಳಾಗಿ ಆಗಮಿಸುತ್ತಾರೆ. ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಯಶ್, ಸುದೀಪ್, ಅರವಿಂದ್ ರಮೇಶ್, ಗಣೇಶ್ ಮುಂತಾದ ಚಲನಚಿತ್ರ ನಟರಲ್ಲದೆ, ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸ್, ವೀರಪ್ಪ ಮೊÊಲಿ, ಡಾ. ಸುಧಾಮೂರ್ತಿ, ಶಾಲಿನಿ ರಜನೀಶ್, ಸಂದೀಪ್ ರಂಜನ್ ಘೋಷ್ ಮೊದಲಾದವರು ಭಾಗವಹಿಸಿ ವಧುವರರನ್ನು ಹರಸಿರುತ್ತಾರೆ. ಈ ಸಾಮೂಹಿಕ ವಿವಾಹದಲ್ಲಿ ಯಾವುದೇ ಕಾರಣಕ್ಕೂ ವರದಕ್ಷಿಣೆಗೆ ಅವಕಾಶ ಇರುವುದಿಲ್ಲ. ಅಲ್ಲದೇ ಮದುವೆಯ ನಂತರ ಅದ್ಧೂರಿ ಆರತಕ್ಷತೆಗಳನ್ನು ನಡೆಸುವಂತಿಲ್ಲ. ಎರಡನೇ ಮದುವೆಗೆ ಅವಕಾಶವಿಲ್ಲ. ಜಾತಿ, ಮತ, ಪಂಗಡದ ಬೇಧ ಇಲ್ಲಿಲ್ಲ. ವಧುವಿಗೆ ೧೮ ಮತ್ತು ವರನಿಗೆ ೨೧ ವರ್ಷ ತುಂಬಿರಬೇಕು. ಜನನ ಪ್ರಮಾಣಪತ್ರ ಕಡ್ಡಾಯವಾಗಿರುತ್ತದೆ. ಪೋಷಕರ ಒಪ್ಪಿಗೆ ಇದ್ದು, ವಿವಾಹದ ದಿನ ಅವರು ಉಪಸ್ಥಿತರಿರಬೇಕು. ಈ ಮದುವೆಯ ದಾಖಲಾತಿಗಾಗಿ ಉಪನೋಂದಾವಣಾಧಿಕಾರಿಯವರ ಕಛೇರಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾಗುತ್ತದೆ. ಪ್ರತೀ ವರ್ಷ ಸಾಮಾನ್ಯವಾಗಿ ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಗೋಧೋಳಿ ಲಗ್ನ ಸುಮುಹೂರ್ತದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ೫೩ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ವರ್ಷ ಮೇ ತಿಂಗಳ 3ನೇ ತಾರೀಖಿನಂದು ಧರ್ಮಸ್ಥಳದಲ್ಲಿ ಆಯೋಜಿಸಲಾಗಿದೆ. ಇಲ್ಲಿಯವರೆಗೆ ಸುಮಾರು 19,900 ಜೊತೆ ವಧುವರರು ಈ ಶ್ರೇಷ್ಠ ಕಾರ್ಯಕ್ರಮದ ಮೂಲಕ ಸತಿಪತಿಗಳಾಗಿ ಅನ್ಯೋನ್ಯ ಜೀವನವನ್ನು ನಡೆಸುತ್ತಿದ್ದಾರೆ. ಅವರ ಪೋಷಕರು ಮಕ್ಕಳ ಮದುವೆಗಾಗಿ ಯಾವುದೇ ದೊಡ್ಡ ಮೊತ್ತದ ಸಾಲವನ್ನು ಮಾಡದೆ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹದಿಂದಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಜನಸಾಮಾನ್ಯರ ಬದುಕಿಗೆ ಇದು ಒಂದು ಅಮೂಲ್ಯವಾದ ವರದಾನವಾಗಿದೆ. ಪೂಜ್ಯರ ಈ ವಿನೂತನ ಪರಿಕಲ್ಪನೆಯಿಂದ ಪ್ರೇರಣೆ ಪಡೆದುಕೊಂಡ ಎಷ್ಟೋ ಧಾರ್ಮಿಕ ಸಂಘಸAಸ್ಥೆಗಳು ಕೂಡಾ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆರಂಭಿಸಿವೆ. ಇದೀಗ ಇದರಿಂದ ಸಾವಿರಾರು ಬಡವರಿಗೆ ಅನುಕೂಲವಾಗಿದೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *