ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
‘ರಾಮ’ನನ್ನು ದೇವರಾಗಿ ಭಕ್ತಿಯಿಂದ ಪೂಜಿಸುವ ಒಂದು ವರ್ಗವಾದರೆ ಆತನ ಆದರ್ಶಗಳಿಗಾಗಿ, ಆತನ ಗುಣಗಳಿಗೆ ಆತನನ್ನು ಮೆಚ್ಚುವ ಇನ್ನೊಂದು ವರ್ಗವೇ ಇದೆ. ಕಷ್ಟಗಳಿಗೆ ಯಾವತ್ತೂ ಅಂಜದವ, ಪಿತೃವಾಕ್ಯ ಪರಿಪಾಲಕ, ಕುಟುಂಬ ವತ್ಸಲಿ ಮತ್ತು ಏಕಪತ್ನಿವೃತಸ್ತ ಹೀಗೆ ರಾಮ ಗುಣಗಳ ಗಣಿ. ರಾಮ ಹುಟ್ಟಿ7000 ವರ್ಷಗಳಾದರೂ ಇನ್ನು ಜನಮಾನಸದಲ್ಲಿ ನೆಲೆನಿಂತಿರುವುದಕ್ಕೆ ಕಾರಣ ಆತ ಯಾವುದೇ ಸಂದರ್ಭದಲ್ಲಿ ತನ್ನ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳದಿರುವುದೇ ಆಗಿದೆ. ದಶರಥ ಶ್ರೀರಾಮನಿಗೆ ಪಟ್ಟಾಭೀಷೇಕನಾಗುವಂತೆ ಹೇಳಿದಾಗ ಮತ್ತು ವನವಾಸಕ್ಕೆ ತೆರಳಲು ಹೇಳಿದಾಗ ಹೀಗೆ ಎರಡೂ ಪರಿಸ್ಥಿತಿಯಲ್ಲೂ ಅವನು ವಿಚಲಿತನಾಗಲೇ ಇಲ್ಲ. ಇದು ಅವನ ಗುಣಗಳ ಶ್ರೇಷ್ಠತೆ.
ರಾಮ ಚಿಕ್ಕವನಿರುವಾಗ ವಿಶ್ವಾಮಿತ್ರರು ಆತನನ್ನು ಯಜ್ಞ ರಕ್ಷಣೆಗಾಗಿ ಕಾಡಿಗೆ ಕಳುಹಿಸುವಂತೆ ಕೇಳಿದಾಗ ದಶರಥ ಪ್ರಾಣಪ್ರಿಯರಾಮನನ್ನೊಪ್ಪದೆ ರಾಮ – ಲಕ್ಷö್ಮಣರ ಬದಲಾಗಿ ಭರತ – ಶತ್ರುಘ್ನರನ್ನು ಕರೆದುಕೊಂಡು ಹೋಗಿ ಎಂದು ಹೇಳಿದನಂತೆ. ಭರತ ಶತ್ರುಘ್ನರನ್ನು ಕರೆದುಕೊಂಡು ಹೋಗಲು ಮನಸ್ಸಿಲ್ಲದೇ ಇದ್ದರೂ ದಶರಥನ ಒತ್ತಾಯಕ್ಕೆ ಕರೆದುಕೊಂಡು ಹೋಗುತ್ತಾರೆ. ಕಾಡಿನ ಮಧ್ಯೆ ಕವಲು ದಾರಿಯಲ್ಲಿ ನಿಂತು ಕಷ್ಟದ ದಾರಿಯಲ್ಲಿ ಹೋಗೋಣವೇ? ಅಥವಾ ಸುಲಭದ ದಾರಿಯಲ್ಲಿ ಹೋಗೋಣವೇ? ಎಂದು ವಿಶ್ವಾಮಿತ್ರರು ಕೇಳುತ್ತಾರೆ. ಭರತ – ಶತ್ರುಘ್ನರು ಸುಲಭದ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಕ್ಷಣ ವಿಶ್ವಾಮಿತ್ರರು ಅವರನ್ನು ಮರಳಿ ಕರೆದುಕೊಂಡು ಬಂದು ರಾಮ – ಲಕ್ಷö್ಮಣರೇ ಬೇಕು ಎಂದು ಕೇಳುತ್ತಾರೆ. ರಾಮ – ಲಕ್ಷö್ಮಣರಲ್ಲಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ ನಾವು ಕಷ್ಟದ ದಾರಿಯಲ್ಲಿ ಹೋಗುವ, ಯಾಕೆಂದರೆ ಈ ದಾರಿಯಲ್ಲಿ ಸಂಚಾರವಿಲ್ಲದೆ ಇರುವುದರಿಂದ ಋಷಿಮುನಿಗಳಿಗೆ ಅಲ್ಲಿ ತುಂಬಾ ಉಪದ್ರಗಳು, ಕಷ್ಟಗಳು, ಬರಬಹುದು ಎಂಬ ಮಾತನ್ನು ಹೇಳುತ್ತಾರಂತೆ. ಹೀಗೆ ರಾಮ ಧ್ಯೇಯ ಸಾಧನೆಗೆ ಹೊರಡುವಾಗ ಯಾವುದೇ ರೀತಿಯ ಕಷ್ಟಗಳಿಗೆ ಅಂಜುವವನಲ್ಲ.
ದಶರಥ ರಾಮನನ್ನು ಕಾಡಿಗೆ ಕಳುಹಿಸುವ ಸಂದರ್ಭದಲ್ಲಿ ಸಹಜವಾಗಿ ರಾಮನ ಮೇಲೆ ಪ್ರೀತಿ ಇರುವ ಲಕ್ಷö್ಮಣನಿಗೆ ಬಹಳಷ್ಟು ಸಿಟ್ಟು ಬರುತ್ತದೆ. ನಮ್ಮ ತಂದೆಯವರಿಗೆ ಪ್ರಾಯವಾಗಿದೆ. ಅವರಿಗೆ ಮುದಿಬ್ರಾಂತು ನೀನು ಈ ಅಯೋಧ್ಯೆಗೆ ನಿಜವಾದ ಹಕ್ಕುದಾರ. ಯಾರೇ ಹೇಳಲಿ, ತಂದೆಯೇ ಹೇಳಲಿ ನೀನು ಮಾತ್ರ ಪಟ್ಟಕ್ಕೆ ಯೋಗ್ಯನಾದ ವ್ಯಕ್ತಿ, ಹಾಗಾಗಿ ಅವರ ಆಜ್ಞೆಯನ್ನು ಪಾಲಿಸಬೇಕಾಗಿಲ್ಲ ಎಂದು ಹೇಳುತ್ತಾನೆ. ಆದರೆ ಲಕ್ಷö್ಮಣನ ಮಾತನ್ನು ರಾಮ ಖಂಡಿಸುತ್ತಾನೆ. ಪೂಜ್ಯರಾದ ತಂದೆಯ ಬಗ್ಗೆ ಇಂತಹ ಮಾತುಗಳನ್ನು ಆಡಬಾರದು ಅನ್ನುತ್ತಾನೆ. ಮುಂದೆ ಭರತ ಕಾಡಿಗೆ ಬಂದು ನಾನಾ ವಿಧದಲ್ಲಿ ರಾಮನನ್ನು ಬೇಡಿಕೊಳ್ಳುತ್ತಾನೆ. ನೀನು ನಾಡಿಗೆ ಬಂದು ನೀನೇ ರಾಜ್ಯಭಾರ ವಹಿಸಿಕೊಳ್ಳಬೇಕು ಎನ್ನುತ್ತಾನೆ. ಆಗಲೂ ರಾಮ ನಾನಾ ರೀತಿಯಲ್ಲಿ ಅವನನ್ನು ಸಮಾಧಾನ ಪಡಿಸಿ ಮತ್ತೆ ಹಿಂದೆ ಕಳುಹಿಸುತ್ತಾನೆ. ಇದು ರಾಮನ ನಿಶ್ಚಲವಾದ ನಿಲುವು ಮತ್ತು ಅಧಿಕಾರದ ಆಸೆ ಇಲ್ಲದೆ ಇರುವಂತಹ ಮನೋಧರ್ಮವನ್ನು ಸೂಚಿಸುತ್ತದೆ.
ನಾವು ಶ್ರೀರಾಮನ ಫೋಟೋವನ್ನು ನೋಡಿದರೆ ಅವನು ಏಕಾಂಗಿಯಾಗಿರುವುದು ಬಹಳ ಕಡಿಮೆ. ಅದಕ್ಕೆ ಹೆಚ್.ಎಸ್.ವಿ.ಯವರು ಹೇಳುತ್ತಾರೆ. ಅವನು ಶ್ರೀ ಸಂಸಾರಿ ಎಂದು. ಅವನ ಸಂಸಾರ ದೊಡ್ಡದು. ಅದರಲ್ಲಿ ರಾಮ, ಸೀತೆ, ಲಕ್ಷö್ಮಣ, ಹನುಮಂತ, ಸುಗ್ರೀವ ಎಲ್ಲರೂ ಇರುತ್ತಾರೆ. ಹೀಗೆ ತುಂಬು ಸಂಸಾರಿ ಆತ. ಅವರು ಬರೆಯುತ್ತಾರೆ ‘ಶ್ರೀರಾಮನೊಬ್ಬನೇ ನಿಂತ ಫೋಟೋ ಕಡಿಮೆ. ಎಲ್ಲರ ಜೊತೆ ನಿಂತ ತುಂಬು ಸಂಸಾರದ ಫೋಟೋಗಳೇ ಜಾಸ್ತಿ. ಇದು ನಿಜವಾದ ಕುಟುಂಬ ಪೂಜೆ’ ಮುಂದುವರಿದು ಅವರು ಕವನದ ಮುಂದಿನ ಪಂಕ್ತಿಯಲ್ಲಿ ಹೀಗೆ ಬರೆಯುತ್ತಾರೆ.
ಕರಿಯ ಮುಸುಕಿನ ಬಿಂಬಗ್ರಾಹಿ ಮಂದ್ರÀ್ರದಲ್ಲಿ ಗೊಣಗಿದ
ಹೆಗಲಬಿಲ್ಲ ಕೆಳಗಿಳಿಸಿರಿ ಸ್ವಾಮಿ ಜಾಗವುಂಟು ಇನ್ನೊಬ್ಬರಿಗೆ
ತಟ್ಟನೆ ನೆನಪಾಯಿತು ಸೇತುರಾಮನಿಗೆ ಮರಳ ಸೇವೆಯ ಅಳಿಲ ಮರಿ
ರಾಮ ಧ್ಯಾನಿಸಿದ ಮರುಕ್ಷಣದಲ್ಲಿ ಅಳಿಲಿದೆ ಅವನ ಹೆಗಲಲ್ಲಿ.
ರಾಮ ಬಿಲ್ಲನ್ನು ಸ್ವಲ್ಪ ಕೆಳಗೆ ಮಾಡಿದಾಗ ತಕ್ಷಣ ಅಲ್ಲಿ ಅಳಿಲು ಬಂದು ಕುಳಿತುಕೊಳ್ಳುತ್ತದೆ.
ರಾಮ ಸ್ಮಿತಭಾಷಿ ಮಾತ್ರವಲ್ಲ, ಅವನು ಪೂರ್ವಭಾಷಿ. ಅವನು ಯಾವಾಗಲೂ ನಗುತ್ತಾ ಮಾತನಾಡುವವ ಮತ್ತು ಬೇರೊಬ್ಬರು ಮಾತನಾಡುವ ಮುನ್ನ ತಾನು ಮಾತನಾಡಿಸುವವ. ಅನೇಕ ಸಲ ನಾವು ಯಾರನ್ನೂ ಮೊದಲಾಗಿ ಮಾತನಾಡಿಸುವುದಿಲ್ಲ. ಆದರೆ ಬೇರೆ ಯಾರಾದರೂ ಮಾತನಾಡಿಸದಿದ್ದರೆ ಅವರಿಗೆ ಬಹಳ ಅಹಂಕಾರ ಎನ್ನುತ್ತೇವೆ. ಈ ಪೂರ್ವಭಾಷಿತ್ವ ಮತ್ತು ಸ್ಮಿತಭಾಷಿತ್ವ ರಾಮನ ಬಹಳ ದೊಡ್ಡ ಗುಣ.
ಆಂಜನೇಯನ ತಾಯಿ ಅಂಜನಾ ದೇವಿ ಒಂದು ದಿವಸ ಆಂಜನೇಯನಿಗೆ ಹೇಳುತ್ತಾಳಂತೆ ‘ಅಲ್ಲ ನಿನ್ನಲ್ಲಿ ಇಷ್ಟೊಂದು ಶಕ್ತಿ ಇದೆ. ನೀನು ಸಮುದ್ರವನ್ನು ದಾಟಿ ಹೋಗಿದ್ದಿ, ಅನೇಕ ರಾಕ್ಷಸಿಯರನ್ನು ಕೊಂದಿದ್ದಿ, ಸಂಜೀವಿನಿಗಾಗಿ ಪರ್ವತವನ್ನೇ ಎತ್ತಿಕೊಂಡು ಬಂದಿದ್ದಿ, ಹಾಗಿರಬೇಕಾದರೆ ನೀನು ಒಬ್ಬನೇ ಹೋಗಿ ರಾವಣನನ್ನು ಕೊಂದು ಸೀತೆಯನ್ನು ಯಾಕೆ ಕರೆತರಬಾರದಿತ್ತು? ಇಷ್ಟೆಲ್ಲಾ ಕಷ್ಟ ಬೇಕಿತ್ತಾ! ಸೇತುವೆ ಕಟ್ಟುವುದು, ಕಪಿ ಸೈನ್ಯವನ್ನು ಒಟ್ಟು ಸೇರಿಸುವುದು ಇದೆಲ್ಲ ಯಾಕೆ ಬೇಕಿತ್ತು’ ಎಂದು ಕೇಳುತ್ತಾಳೆ. ಆಗ ಆಂಜನೇಯ ಹೇಳುತ್ತಾನೆ, ಅಮ್ಮಾ, ನನಗೆ ರಾಮ ಹಾಗೆ ಆಜ್ಞೆ ಮಾಡಲಿಲ್ಲ. ಮಾತ್ರವಲ್ಲ ಇದು ನನ್ನ ಕಥೆಯಲ್ಲ, ಇದು ರಾಮನ ಕಥೆ ಎನ್ನುತ್ತಾನೆ. ಈ ವಿನೀತ ಭಾವ ಇದ್ದವರು ಮಾತ್ರ ದಾಸರಾಗಲು ಸಾಧ್ಯ ಇದೆ. ‘ಹನು’ ಎಂದರೆ ನಾಶಮಾಡು, ಮಾನ್ ಅಂದರೆ ಮಾನ. ಮಾನವನ್ನು ನಾಶ ಮಾಡಿದವನೇ ಹನುಮಾನ್ ಎಂದು ಹೇಳುತ್ತಾರೆ.
ರಾಮ ಕಾಡಿಗೆ ಹೋಗಬೇಕಾದರೆ ನದಿ ದಾಟುವಾಗ ಗುಹ ಸಿಗುತ್ತಾನೆ. ಗುಹನಿಗೆ ನದಿ ದಾಟಿಸಿದ ಮೇಲೆ ಕೊಡಲು ರಾಮನಲ್ಲಿ ಏನೂ ಇರುವುದಿಲ್ಲ, ಆಗ ರಾಮ ‘ನನ್ನ ಬಳಿ ನಿನಗೆ ಕೊಡಲು ಏನು ಇಲ್ಲ.’ ಅಂದಾಗ ಗುಹ ಹೇಳುತ್ತಾನೆ ‘ನಾವಿಬ್ಬರು ಒಂದೇ ಕಸುಬಿನವರು. ಹಾಗಾಗಿ ಒಂದೇ ಕಸುಬಿನವರು ಪರಸ್ಪರರಿಗೆ ದುಡ್ಡು ಕೊಡಬೇಕಾಗಿಲ್ಲ’ ಅಂದಾಗ ಲಕ್ಷö್ಮಣನಿಗೆ ಕೋಪ ಬರುತ್ತದೆ. ಆಗ ಮತ್ತೆ ಗುಹಾ ಹೇಳುತ್ತಾನೆ. ‘ನಾನು ನದಿಯನ್ನು ದಾಟಿಸುತ್ತಿದ್ದೇನೆ ಆದರೆ ನೀನು ಭವಸಾಗರವನ್ನು ದಾಟಿಸುತ್ತಿದ್ದೀಯಾ ಹಾಗಾಗಿ ನಾವಿಬ್ಬರು ಒಂದೇ ಕಸುಬಿನವರು.’
ಸೇತು ಕಟ್ಟುವಲ್ಲಿ ಅಳಿಲು ಸಹಾಯ ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದು ಸಹಾಯ ಮಾಡುವಾಗ ಅಲ್ಲಿದ್ದ ಕಾಲಿಗೆ ಅಡ್ಡ ಬರುತ್ತಿತ್ತಂತೆ. ಎಲ್ಲರೂ ಕಾಲಿನಿಂದ ಅದನ್ನು ಆಚೆ ಈಚೆ ದೂಡುತ್ತಿದ್ದರಂತೆ. ಆದರೆ ರಾಮ ಅದನ್ನು ಗಮನಿಸಿ ಕೈಯಲ್ಲಿ ಎತ್ತಿಕೊಂಡು ಅದರ ಬೆನ್ನನ್ನು ಸವರುತ್ತಾನೆ. ಆಗ ಸುಗ್ರೀವ ಕೇಳುತ್ತಾನೆ. ‘ಈ ನಿಕೃಷ್ಟ ಪ್ರಾಣಿಗೆ ಯಾಕೆ ಇಷ್ಟು ಬೆಲೆ ಕೊಡುತ್ತೀ? ಏನು ಕೆಲಸ ಮಾಡಿದೆ ಅದು?’ ಅಂದಾಗ ರಾಮ ಹೇಳುತ್ತಾನೆ ‘ನಿಮ್ಮ ದೃಷ್ಟಿಯಲ್ಲಿ ಅದರ ಸೇವೆ ಅಲ್ಪ ಇರಬಹುದು. ಆದರೆ ಅದರ ದೃಷ್ಟಿಯಲ್ಲಿ ಅದರ ಸೇವೆಗೆ ಬಹಳ ಮಹತ್ವವಿದೆೆ.ಯಾಕೆಂದರೆ ಸೇವೆ ಮಾಡುವುದು ದೊಡ್ಡದಲ್ಲ, ಸೇವೆ ಮಾಡಬೇಕೆನ್ನುವ ಮನಸ್ಸು, ಭಾವ ದೊಡ್ಡದು’ ಎನ್ನುತ್ತಾನೆ.
ರಾಮನನ್ನು ಜನಮಾನಸದಲ್ಲಿ ಸಾವಿರ ವರ್ಷಗಳಿಂದ ಉಳಿಸಿಕೊಂಡು ಬಂದವರು ನಮ್ಮ ಯಕ್ಷಗಾನದವರು, ತಾಳಮದ್ದಳೆಯವರು, ನಾಟಕ, ಭಕ್ತಿಪಂಥದ ಹರಿದಾಸರು, ಮೀರ, ಕಬೀರ, ಪುರಂದರದಾಸರು, ಕನಕದಾಸರು, ವೈಷ್ಣವಆಳ್ವಾರರು ಇವರೆಲ್ಲ ನಾವು ರಾಮನನ್ನು ಮರೆಯದ ಹಾಗೆ ಮಾಡಿದ್ದಾರೆ. ಕವಿಗಳು ಜನಪದರಿಂದ ಹಿಡಿದು, ಶಿಷ್ಟಸಂಪ್ರದಾಯದವರೆಗೆ ಸಾಹಿತ್ಯದಲ್ಲಿ ನಾನಾ ರೀತಿಯಲ್ಲಿ ವೈವಿಧ್ಯಮಯವಾದ ರಾಮಾಯಣಗಳನ್ನು ರಚಿಸಿದ್ದಾರೆ. ಕನ್ನಡದಲ್ಲೇ ಎಷ್ಟೊಂದು ರಾಮಾಯಣಗಳಿವೆ ತೊರವೇಯಿಂದ ಹಿಡಿದು ಕುಮದೇಂದ್ರು, ಕುವೆಂಪು, ಮಂದಾರ, ಮುಳಿಯ ತಿಮ್ಮಪ್ಪಯ್ಯ, ಚಾಮರಾಜ ಒಡೆಯರ್, ಮುದ್ದಣ್ಣ ಇತ್ಯಾದಿ. ಇವತ್ತಿಗೂ ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು ಮತ್ತೆ ಮತ್ತೆ ಚಿಂತನೆಗೆ, ವಿಮರ್ಶೆಗೆ ಒಳಪಡುತ್ತಿವೆ. ಕುವೆಂಪುರವರನ್ನು ಯಾರೋ ಕೇಳಿದ್ದರಂತೆ ಎಲ್ಲ ಬಿಟ್ಟು ಮತ್ತೆ ರಾಮಾಯಣದ ಕಥೆಯನ್ನು ಯಾಕೆ ಆಯ್ಕೆಮಾಡಿಕೊಂಡಿರಿ? ಎಂದು. ಆಗ ಅವರು ಹೇಳುತ್ತಾರೆ, ‘ಕಲೆಯನ್ನಲ್ಲದೆ ಶಿಲ್ಪಿ ಶಿಲೆಯನೇನ್ ಸೃಷ್ಟಿಪನೇ.’ ಶಿಲ್ಪಿ ಕಲೆಯನ್ನಲ್ಲದೆ ಕಲ್ಲನ್ನು ಸೃಷ್ಟಿ ಮಾಡುವುದಿಲ್ಲ. ರಾಮಾಯಣ ಬಹಳ ಹಳೆಯದ್ದಿರಬಹುದು ಆದರೆ ನನ್ನ ಕಲ್ಪನೆಯಲ್ಲಿ ಅದಕ್ಕೆ ಹೊಸ ರೂಪವನ್ನು ಕೊಟ್ಟಿದ್ದೇನೆ ಎನ್ನುವ ಮಾತನ್ನು ಹೇಳುತ್ತಾರೆ.
ರಾಮ ಕಾಡಿಗೆ ಹೋಗುವಾಗ ಅತ್ತು ಕರೆದು ನಾವು ಬರುತ್ತೇವೆ ಎಂದು ಹೇಳಿದಂತಹ ಅಯೋಧ್ಯೆಯ ಜನ, ಅವನು ಪುನಃ ಬಂದು ಪಟ್ಟಾಭಿಷಿಕ್ತನಾಗಿ ಪತ್ನಿಯೊಂದಿಗೆ ಕುಳಿತಾಗ ಸೀತೆಯ ಬಗ್ಗೆ ಒಂದು ಕೆಟ್ಟ ಮಾತನ್ನು ಆಡಿ ತುಂಬುಗರ್ಭಿಣಿಯನ್ನು ಮತ್ತೆ ಕಾಡಿಗೆ ಅಟ್ಟುತ್ತಾನೆ. ಆಗ ಯಾರೂ ಸೀತೆಯ ಒಟ್ಟಿಗೆ ಕಾಡಿಗೆ ಹೋಗುವುದಿಲ್ಲ, ಯಾರೂ ಅಳುವುದಿಲ್ಲ. ಇದು ಮಾನವ ಸ್ವಭಾವ. ಇದು ಎಲ್ಲಾ ಕಾಲದಲ್ಲೂ ಇದ್ದದ್ದೇ.
ರಾಮನನ್ನು ಎಷ್ಟರ ಮಟ್ಟಿಗೆ ಜನ ಹಚ್ಚಿಕೊಂಡಿದ್ದರೆ ಎಂಬುವುದಕ್ಕೆ ಛತ್ತಿಸ್ಗಡದಲ್ಲಿರುವ ಒಂದು ಹಳ್ಳಿ ಉತ್ತಮ ಉದಾಹರಣೆ. ಆ ಹಳ್ಳಿಯ ಮಂದಿಗೆ ಹಿಂದೆ ರಾಮಮಂದಿರ ಪ್ರವೇಶ ನಿರಾಕರಿಸಿದ್ದಕ್ಕಾಗಿ ಸುಮಾರು ನೂರು ವರ್ಷಗಳಿಂದ ಅಲ್ಲಿನ ಜನ ಮೈಯಲ್ಲಿ ರಾಮನನ್ನು ಧರಿಸಿದ ಹಾಗೆ ಮೈ, ಮುಖ ತುಂಬಾ ‘ರಾಮನಾಮದ ಹಚ್ಚೆ’ಯನ್ನು ಹಾಕಿಕೊಳ್ಳುತ್ತಿದ್ದಾರೆ. ಅವರನ್ನು ‘ರಾಮ್ನಾಮಿ’ ಸಮಾಜ ಎಂದೇ ಗುರುತಿಸಲ್ಪಡುತ್ತಾರೆ. ಇಂತಹ ಸಾಕಷ್ಟು ಕತೆಗಳಿವೆ.
ಅಚ್ಚುತ ದಾಸರು ರಾಮನನ್ನು ಯಾರು, ಯಾವ ಯಾವ ಹೆಸರುಗಳಿಂದ ಕರೆಯುತ್ತಿದ್ದರೆಂಬುವುದನ್ನು ಶ್ಲೋಕವೊಂದರ ಮೂಲಕ ಸುಂದರವಾಗಿ ವರ್ಣಿಸುತ್ತಾರೆ.
ರಾಮಾಯ ರಾಮ ಭದ್ರಾಯ,
ರಾಮಚಂದ್ರಾಯ ವೇಧಸೇ
ರಘು ನಾಥಾಯ ನಾಥಾಯ
ಸೀತಾಯ ಪತಯೇ ನಮಃ
ದಶರಥ ರಾಮಾ ಎಂದು ಕರೆದರೆ, ತಾಯಿ ಕೌಸಲ್ಯೆ ಪ್ರೀತಿಯಿಂದ ರಾಮಭದ್ರಾ ಎನ್ನುತ್ತಿದ್ದಳಂತೆ. ಕೈಕೇಯಿ ರಾಮಚಂದ್ರ ಅಂದರೆ ಮಹರ್ಷಿಗಳು ವೇಧಸೇ ಎಂದೂ, ಊರಪುರಜನರು ರಘುನಾಥ ಎಂದರೆ ಸೀತೆ ‘ನಾಥ’ ಎಂದಷ್ಟೇ ಕರೆಯುತ್ತಿದ್ದಳಂತೆ. ಹೀಗೆ ಶ್ರೀರಾಮನನ್ನು ಹಲವಾರು ಹೆಸರುಗಳಿಂದ ಕರೆಯುತ್ತಿದ್ದರಂತೆ. ಹೀಗೆ ರಾಮನ ಗುಣಗಳು ಎಂದೆoದಿಗೂ ಪ್ರಸ್ತುತ.