ಡಾ. ಚಂದ್ರಹಾಸ್ ಚಾರ್ಮಾಡಿ
ನಾಗ ಪ್ರತಿಷ್ಠೆಯನ್ನು ಸಾಮಾನ್ಯವಾಗಿ ಅವರವರ ಭೂಮಿಯಲ್ಲಿ ಮಾಡುತ್ತಾರೆ. ನಾಗ ಪ್ರತಿಷ್ಠೆಗೆ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶವನ್ನು ಕೊಡುವುದು ತುಂಬಾ ವಿರಳ. ಆದರೆ ಅಂತಹ ಕ್ಷೇತ್ರವೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೋಡು ಗ್ರಾಮದ ವಿದುರಾಶ್ವತ್ಥ ಎಂಬ ಊರಿನಲ್ಲಿದೆ.
ನಾಗನಿಗೆ ಮೊದಲ ಪೂಜೆ : ಸರ್ಪದೋಷಕ್ಕೆ ನಾಗಾರಾಧನೆ, ಹಾಲಿನ ಅಭಿಷೇಕ, ಆಶ್ಲೇಷಬಲಿ, ಪ್ರತಿಷ್ಠೆ ಹೀಗೆ ಹಲವಾರು ಪರಿಹಾರಗಳಿವೆ. ಹಾಗೆಂದು! ನಾಗಪ್ರತಿಷ್ಠೆಯನ್ನು ನಮ್ಮ ಸ್ವಂತ ಜಾಗದಲ್ಲಿ ಮಾಡುವುದು ಅಷ್ಟು ಸುಲಭವಲ್ಲ. ಅಲ್ಲಿ ಸಾಕಷ್ಟು ಸವಾಲುಗಳು ಇವೆ. ಶುದ್ಧತೆಗೂ ವಿಶೇಷ ಗಮನವನ್ನು ನೀಡಬೇಕಾಗುತ್ತದೆ.
ವಿದುರಾಶ್ವತ್ಥ ದೇವಾಲಯದಲ್ಲಿ ಭಕ್ತರಿಗೆ ನಾಗನನ್ನು ಪ್ರತಿಷ್ಠಾಪಿಸಲು ಮುಕ್ತ ಅವಕಾಶಗಳಿವೆ. ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ ನಾಗನಂತೆ ಇಲ್ಲಿಯೂ ತಾವು ಪ್ರತಿಷ್ಠಾಪಿಸಿದ ನಾಗನಿಗೆ ಬೇಕಾದ ಸಂದರ್ಭದಲ್ಲಿ ಹಾಲು ಸಮರ್ಪಣೆ, ವಿಶೇಷ ಪೂಜೆಯನ್ನು ಸಲ್ಲಿಸಬಹುದಾಗಿದೆ.
ನಾಗಪ್ರತಿಷ್ಠೆ ಹೇಗೆ? : ನಾಗ ದೇವರನ್ನು ಪ್ರತಿಷ್ಠಾಪಿಸಲು ಸಂಕಲ್ಪ ಪಟ್ಟವರು ಭಾನುವಾರ ವಿದುರಾಶ್ವತ್ಥ ದೇವಸ್ಥಾನಕ್ಕೆ ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಬಂದು ಕ್ಷೇತ್ರದಲ್ಲಿ ನಾಗ ಪ್ರತಿಷ್ಠಾಪನೆ ಬಗ್ಗೆ ಪ್ರಾರ್ಥಿಸಬೇಕು. ನಂತರ ಪ್ರತಿಷ್ಠಾಪನೆಯ ಒಂದು ದಿನಾಂಕವನ್ನು ದೇವಾಲಯದವರು ನೀಡುತ್ತಾರೆ. ಪ್ರತಿಷ್ಠಾಪನೆ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ತಂಗಬೇಕಾಗುತ್ತದೆ. ಭಾನುವಾರ ಇಲ್ಲಿ ವಿಶೇಷ ದಿನವಾಗಿದ್ದು ಸಾಮಾನ್ಯವಾಗಿ ಭಾನುವಾರ ನಾಗ ಪ್ರತಿಷ್ಠಾಪನೆ ಕೆಲಸಗಳು ನಡೆಯುತ್ತವೆ. ಶನಿವಾರ ರಾತ್ರಿ ಸಂಜೆ 8 ಗಂಟೆಯಿಂದ 9 ಗಂಟೆಯವರೆಗೆ ಪೂಜೆಗಳು ನಡೆದು ಭಾನುವಾರ ಬೆಳಗ್ಗೆ 5 ರಿಂದ 9 ಗಂಟೆಯ ಒಳಗೆ ಪ್ರತಿಷ್ಠಾಪನೆ ಕೆಲಸಗಳು ನೆರವೇರುತ್ತವೆ. ಆಷಾಢ ಮತ್ತು ಪುಷ್ಯ ಮಾಸದಲ್ಲಿ ನಾಗಪ್ರತಿಷ್ಠೆಗೆ ಅವಕಾಶವಿಲ್ಲ.
ಇಷ್ಟಾರ್ಥ ನಿವಾರಕ ನಾಗ : ವಿವಾಹ, ಸಂತಾನ ಭಾಗ್ಯ, ಆರೋಗ್ಯ ಭಾಗ್ಯಗಳಿಗಾಗಿ ಇಲ್ಲಿಗೆ ಹರಕೆ ಹೊತ್ತು ನಾಗನನ್ನು ಪ್ರತಿಷ್ಠಾಪಿಸುವ ದೊಡ್ಡ ಭಕ್ತ ಸಮುದಾಯವೇ ಇದೆ.
ಸಾವಿರಾರು ನಾಗನ ಕಲ್ಲುಗಳಿವೆ : ಈಗಾಗಲೇ ಭಕ್ತರು ಪ್ರತಿಷ್ಠಾಪಿಸಿದ ಸಾವಿರಾರು ನಾಗನ ಕಲ್ಲುಗಳು ಕಣ್ಮನ ಸೆಳೆಯುತ್ತಿವೆ. ಪ್ರತಿಷ್ಠಾಪಿಸಿದ ನಾಗನಿಗೆ ವರ್ಷಕ್ಕೊಮ್ಮೆ, ತಿಂಗಳಿಗೊಮ್ಮೆ ಹೀಗೆ ನಿತ್ಯ ಭಕ್ತರು ಬಂದು ಪೂಜೆ ಸಲ್ಲಿಸುತ್ತಿರುತ್ತಾರೆ. ಇನ್ನು ಸಾಮಾನ್ಯ ಭಕ್ತರು ಇಲ್ಲಿಗೆ ಪೂಜಾ ಪರಿಕರಗಳೊಂದಿಗೆ ಬಂದು ತಮಗೆ ಬೇಕಾದ ನಾಗನಿಗೆ ಪೂಜೆ ಮಾಡಿ ತೆರಳಲು ಅವಕಾಶಗಳಿವೆ.
ವಿದೇಶಗಳಿಂದ ಬರುವ ಭಕ್ತರು : ಭಾರತದಿಂದ ತೆರಳಿ ಅಮೆರಿಕಾ, ಕೆನಡಾದಲ್ಲಿ ನೆಲೆಸಿರುವ ಭಕ್ತರು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನಿತ್ಯ ಆಂಧ್ರ, ತಮಿಳುನಾಡಿನ ಭಕ್ತರಿಂದ ಕ್ಷೇತ್ರ ತುಂಬಿರುತ್ತದೆ. ಮಾರ್ಚ್ ಅಂದರೆ ಚೈತ್ರಾ ಶುದ್ಧ ಹುಣ್ಣಿಮೆಯ ಒಂಭತ್ತು ದಿನಗಳ ಕಾಲ ವಿಜೃಂಭಣೆಯ ಜಾತ್ರಾ ಮಹೋತ್ಸವ ಇಲ್ಲಿ ನಡೆಯುತ್ತದೆ. ರಾಜ್ಯ ಮತ್ತು ಹೊರರಾಜ್ಯಗಳ ಲಕ್ಷಾಂತರ ಭಕ್ತರು ಸೇರುತ್ತಾರೆ.
ಎತ್ತಿನ ಜಾತ್ರೆ : ಯುಗಾದಿಯಿಂದ ಶ್ರೀರಾಮ ನವಮಿಯವರೆಗೆ ಇಲ್ಲಿ ನಡೆಯುವ ಎತ್ತಿನ ಜಾತ್ರೆಯಲ್ಲಿ ಎತ್ತುಗಳ ಮಾರಾಟ, ಖರೀದಿ ಭರಾಟೆ ಜೋರಾಗಿರುತ್ತದೆ. ಇಲ್ಲಿ ನಿತ್ಯ ಅನ್ನದಾನ ವ್ಯವಸ್ಥೆಯಿದೆ.
ಇದೊಂದು ಕರುನಾಡು ಕಂಡ ಅಪೂರ್ವ ಕ್ಷೇತ್ರವಾಗಿದ್ದು ಚಿಕ್ಕಬಳ್ಳಾಪುರ ಕಡೆ ಹೋದಾಗ ವಿದುರಾಶ್ವತ್ಥ ದೇವಾಲಯವನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.