ಡಾ| ಚಂದ್ರಹಾಸ್ ಚಾರ್ಮಾಡಿ
ಮುಂಬೈ ಬದುಕನ್ನು ಬಿಟ್ಟು ತವರು ನೆಲದಲ್ಲಿ ಸ್ವಂತ ಬೇಕರಿ ಉದ್ಯಮವನ್ನು ಆರಂಭಿಸಿ ಊರಿನ ಒಂದಷ್ಟು ಮಂದಿಯ ಬದುಕನ್ನು ಸಿಹಿಯಾಗಿಸಿದ ಅನಿತಾ – ರವೀಂದ್ರ ಪೂಜಾರಿ ದಂಪತಿಗಳ ಸಾಹಸದ ಕಥೆಯನ್ನು ಅನಿತಾರವರೇ ಹೇಳುತ್ತಾರೆ…
‘ನಾನು ಹುಟ್ಟು ಶ್ರೀಮಂತೆಯಲ್ಲ. ಮೂರು ಮಂದಿ ಹೆಣ್ಮಕ್ಕಳಲ್ಲಿ ನಾನೇ ದೊಡ್ಡವಳು. ಬಜಗೋಳಿಯಲ್ಲಿ ನಮಗಿದ್ದುದು ಕೇವಲ ಐದು ಸೆನ್ಸ್ ಜಮೀನು. ತಂದೆ ಹೋಟೆಲ್‌ನಲ್ಲಿ ದುಡಿದರೆ, ತಾಯಿ ಬೀಡಿ ಕಟ್ಟಿದರೆ ಮಾತ್ರ ಹೊಟ್ಟೆ ತುಂಬುತ್ತಿತ್ತು. ಪಿಯುಸಿವರೆಗಾದರೂ ಓದಬೇಕೆಂಬ ನಿಟ್ಟಿನಲ್ಲಿ ಸಂಜೆ 6 ಗಂಟೆಯಿoದ 9 ರವರೆಗೆ ಎಸ್.ಟಿ.ಡಿ. ಬೂತ್‌ನಲ್ಲಿ ಕೆಲಸ ಮಾಡತೊಡಗಿದೆ. ಇದರಿಂದ ತಿಂಗಳಿಗೆ ದೊರೆಯುತ್ತಿದ್ದ ಮುನ್ನೂರು ರೂಪಾಯಿ ನನ್ನ ಶಾಲಾ ಫೀಸ್, ಪುಸ್ತಕ, ಇತರ ಖರ್ಚುಗಳಿಗೆ ಆಧಾರವಾಯಿತು. ಪಿಯುಸಿ ಮುಗಿಯುವಷ್ಟರಲ್ಲಿ ಕಾರ್ಕಳ ತಾಲೂಕಿನ ರೆಂಜಾಳದ ಹುಡುಗನೊಬ್ಬನನ್ನು ಹುಡುಕಿ ಮದುವೆ ಮಾಡಿಬಿಟ್ಟರು.
ಪತಿ ರವೀಂದ್ರರವರದ್ದು 6 ಮಂದಿ ಗಂಡು, ಒಬ್ಬಳು ತಂಗಿಯೊoದಿಗಿನ ಕೂಡುಕುಟುಂಬ. ಒಟ್ಟು ಐದುವರೆ ಎಕರೆಯಷ್ಟು ಭೂಮಿ ಇತ್ತಾದರೂ ಆರು ಮಂದಿ ಅಣ್ಣ – ತಮ್ಮಂದಿರ ನಡುವೆ ಹಂಚಿ ಹೋಗುವಾಗ ಒಂದು ಕುಟುಂಬದ ನಿರ್ವಹಣೆಗೆ ಅದು ಸಾಕಾಗುವಂತಿರಲಿಲ್ಲ. ಆ ದಿನಗಳಲ್ಲಿ ರವೀಂದ್ರರವರು ಮುಂಬೈಯಲ್ಲಿ ಬೀಡಾ ಅಂಗಡಿಯೊoದರ ಮಾಲಕರಾಗಿದ್ದರು. ನಾನು ಉದ್ಯೋಗವನ್ನು ಗಿಟ್ಟಿಸಿಕೊಂಡು ಬಡತನದ ಬೇಗೆಯಿಂದ ಹೊರಬರಬೇಕೆಂದು ಯೋಚಿಸುತ್ತಾ ಮದುವೆಯಾದ ವರ್ಷವೇ ಗಂಡನೊoದಿಗೆ ಮುಂಬೈಯ ರೈಲು ಹತ್ತಿದೆ. ಅಲ್ಲಿ ನನಗೆ ಸರಿಯಾದ ಉದ್ಯೋಗ ದೊರೆಯಲಿಲ್ಲ. 6 ತಿಂಗಳುಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದೆ. ಗಂಡನ ಬೀಡಾ ವ್ಯಾಪಾರವಂತೂ ಚೆನ್ನಾಗಿತ್ತು. ಅಷ್ಟರಲ್ಲಿ ಮುಂಬೈಯಲ್ಲಿ ನಾವೊಂದು ದಿನಸಿ ಅಂಗಡಿ ತೆರೆಯುವ ನಿರ್ಧಾರಕ್ಕೆ ಬಂದೆವು. ಅದಕ್ಕಾಗಿ ಮಾಡಿದ ಸಾಲ ಬೆಟ್ಟದಷ್ಟು. ಆದರೆ ದಿನಸಿ ಅಂಗಡಿ ಮಾತ್ರ ನಮ್ಮ ಲೆಕ್ಕಾಚಾರವನ್ನೆಲ್ಲ ತಲೆಕೆಳಗೆ ಮಾಡಿತು. ರೂಮು, ಅಂಗಡಿ ಬಾಡಿಗೆಗೆ ಸಾಕಾಗುವಷ್ಟು ಸಂಪಾದನೆ ಕೂಡಾ ಕೈ ಸೇರಲಿಲ್ಲ. ಬೀಡಾದ ಅಂಗಡಿಯಿoದ ಬಂದ ಲಾಭವೆಲ್ಲವೂ ದಿನಸಿ ಅಂಗಡಿಯ ಪಾಲಾಯಿತು. ಕೈ ಸಾಲವನ್ನು ತೀರಿಸುವ ನಿಟ್ಟಿನಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳು ಬ್ಯಾಂಕಿನ ಕದ ತಟ್ಟಿದವು. ಅಂತೂ ಕಷ್ಟ – ನಷ್ಟಗಳ ನಡುವೆ ಆರು ವರ್ಷಗಳು ಕಳೆದು 2010ರಲ್ಲಿ ಮುಂಬೈ ಜೀವನವನ್ನು ಬಿಟ್ಟು ಊರಿನತ್ತ ಮರಳುವ ಯೋಚನೆ ಮಾಡಿದೆವು.
ಹೈನುಗಾರಿಕೆಯಿಂದ ಬದುಕು ಆರಂಭ
‘ಮುoಬೈ ಬಿಟ್ಟು ಬಂದ್ರು’ ಎಂಬ ಊರವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ಕೂಡು ಕುಟುಂಬದಲ್ಲಿದ್ದುಕೊoಡು ಹೊಸ ಬದುಕು ಆರಂಭಿಸುವ ನಿಟ್ಟಿನಲ್ಲಿ ರವೀಂದ್ರರವರು ಹೈನುಗಾರಿಕೆಯತ್ತ ಒಲವು ತೋರಿದರು. ಆದರೆ ಬರಿಕೈಲಿ ಮುಂಬೈಯಿoದ ಬಂದ ನಮಗೆ ದನ ಖರೀದಿ, ಕೊಟ್ಟಿಗೆ ರಚನೆಗೆ ಹಣದ ಅಗತ್ಯತೆ ಇತ್ತು. ಆಗ ಅತ್ತೆ ಧರ್ಮಸ್ಥಳ ಸಂಘದಲ್ಲಿದ್ದರು. ಅವರು ನಮಗೆ ಸಂಘದ ಮೂಲಕ ಹಣಕಾಸಿನ ವ್ಯವಸ್ಥೆ ಮಾಡಿಸಿದರು. ನನ್ನನ್ನು ‘ಶಾರದಾಂಬಾ’ ಜ್ಞಾನವಿಕಾಸ ಕೇಂದ್ರದ ಸದಸ್ಯರನ್ನಾಗಿಯೂ ಮಾಡಿದರು. ಒಂದು ದನದಿಂದ ಆರಂಭವಾದ ಹೈನುಗಾರಿಕೆ ಎರಡು ವರ್ಷ ಆಗುವಾಗ ನಾಲ್ಕಕ್ಕೆ ಏರಿಕೆಯಾಯಿತು. ನಾನು ಕಾರ್ಕಳದ ಗೇರುಬೀಜದ ಫ್ಯಾಕ್ಟರಿಯೊಂದರಲ್ಲಿ ದಿನಕೂಲಿ ನೌಕರಳಾಗಿ ದುಡಿಯತೊಡಗಿದೆ. ಒಂದು ದಿನ ಗಂಡ ಅತಿಯಾಗಿ ಪ್ರೀತಿಸುತ್ತಿದ್ದ ದನವೊಂದು ಇಹಲೋಕ ತ್ಯಜಿಸಿತು. ಈ ಒಂದು ಘಟನೆ ಪತಿ ಹೈನುಗಾರಿಕೆಯಿಂದ ವಿಮುಖರಾಗುವಂತೆ ಮಾಡಿತು. ಮತ್ತೆ ಗಂಡ ಕೂಲಿ ಕೆಲಸಕ್ಕೆ ತೆರಳಿದರು.
ಬೀಜ ಫ್ಯಾಕ್ಟರಿಯಿಂದ ಬೇಕರಿಯೆಡೆಗೆ
ಐದು ವರ್ಷಗಳ ಹಿಂದೆ ಮಾವ ಮತ್ತು ಗಂಡನ ಅಕ್ಕನ ಮಗ ಸೇರಿಕೊಂಡು ಕಾರ್ಕಳದ ರೆಂಜಾಳದಲ್ಲೊoದು ಸಿಹಿ ಮತ್ತು ಖಾರದ ತಿಂಡಿಗಳನ್ನು ತಯಾರಿಸುವ ‘ಮಹಮ್ಮಾಯಿ’ ತಿಂಡಿ ಘಟಕವನ್ನು ಆರಂಭಿಸಿದರು. ಬೀಜ ಫ್ಯಾಕ್ಟರಿ ಕೆಲಸ ಬಿಟ್ಟು ನಾನು ತಿಂಡಿ ಘಟಕವನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಿಕೊಂಡೆ.
ಆಗ ಹದಿನೈದು ಜನ ಕೆಲಸಕ್ಕಿದ್ದರು. ಇನ್ನೇನು ಲಾಭ ಕೈ ಸೇರುತ್ತದೆ ಎನ್ನುವಾಗ ಕೊರೊನಾ ದೊಡ್ಡ ಆಘಾತವನ್ನು ನೀಡಿತು. ಮೂರು ತಿಂಗಳು ಫ್ಯಾಕ್ಟರಿಗೆ ಬೀಗ ಜಡಿಯುವುದು ಅನಿವಾರ್ಯವಾಯಿತು. ಎಣ್ಣೆ, ಇತರ ಕಚ್ಚಾ ವಸ್ತುಗಳ ಬೆಲೆಯು ಗಗನಕ್ಕೇರಿತು. ಅಷ್ಟರಲ್ಲಿ ಮಾವ ತಾನು ಹಾಕಿದ ಬಂಡವಾಳವನ್ನು ಹಿಂದೆಗೆದುಕೊಳ್ಳುವ ನಿರ್ಧಾರ ಮಾಡಿದರು.
ಸಿಹಿ ತಿಂಡಿಯ ಮಾಲಕಿಯಾದ ಅನಿತಾ
ನಾನು ಮತ್ತೆ ಬೀಜದ ಫ್ಯಾಕ್ಟರಿಯತ್ತ ಮುಖ ಮಾಡುವ ಬದಲು ಹೇಗಾದರೂ ಮಾಡಿ ಬೇಕರಿ ಉದ್ಯಮದಲ್ಲಿ ಇಂದಲ್ಲ ನಾಳೆ ಲಾಭ ಗಳಿಸಲೇಬೇಕು ಎಂಬ ದೃಢ ನಿರ್ಧಾರದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಮೂಲಕ ಬ್ಯಾಂಕಿನಿoದ ಪ್ರಗತಿನಿಧಿ ಪಡೆದು ಗಂಡನ ಅಕ್ಕನ ಮಗನಿಂದ ಘಟಕವನ್ನು ಲೀಸ್‌ಗೆ ಪಡೆದುಕೊಂಡೆ. ಕೊರೊನಾ ನಂತರ ‘ಮಹಮ್ಮಾಯಿ ಹೋಂ ಪ್ರಾಡಕ್ಟ್’ ಮತ್ತೆ ನನ್ನ ಮಾಲಕತ್ವದಲ್ಲಿ ಶುಭಾರಂಭಗೊoಡಿತು. ಖಾರದ ತಿಂಡಿಗಳಿಗೆ ಗುಡ್‌ಬೈ ಹೇಳಿ ಕೇವಲ ಸಿಹಿ ತಿಂಡಿಗಳನ್ನು ಮಾತ್ರ ತಯಾರಿಸತೊಡಗಿದೆ.
ಸಿಹಿ ನೀಡುತ್ತಿರುವ ಉದ್ಯಮ
ತಾಸುಗಳನ್ನು ಲೆಕ್ಕಿಸದೆ ನಾನು ಸ್ವತಃ ದುಡಿಯುತ್ತಿರುವ ಪರಿಣಾಮ ಇದೀಗ ಬದುಕು ಸಿಹಿಯಾಗಿದೆ. ಈ ಹಿಂದೆಯೇ ಮಾರುಕಟ್ಟೆಯನ್ನು ಗುರುತಿಸಿಕೊಂಡಿರುವುದರಿoದ, ಲೈನ್‌ಸೇಲ್‌ಗೆ ಹೋಗಲು ಓಮ್ನಿಯನ್ನು ಅವರೇ ನೀಡಿರುವುದರಿಂದ ಮಾರುಕಟ್ಟೆ ಹುಡುಕುವುದು ಕಷ್ಟವಾಗಲಿಲ್ಲ.
ಇದೀಗ ಪ್ಯಾಕಿಂಗ್ ಮತ್ತು ಇತರ ಕೆಲಸಗಳನ್ನು ಮಾಡಲು 6 ಮಂದಿ ಮಹಿಳೆಯರು, ತಿಂಡಿ ತಯಾರಿಗೆ ಎರಡು ಮಂದಿ, ಮಾರಾಟ ಮಾಡಲು ಎರಡು ಮಂದಿ ಹೀಗೆ ಒಟ್ಟು ಹತ್ತು ಮಂದಿ ದುಡಿಯುತ್ತಿದ್ದೇವೆ. ಎಲ್ಲ ವಿಧದ ಸಿಹಿ ತಿಂಡಿಯನ್ನು ತಯಾರಿಸಲಾಗುತ್ತದೆ. ಬಿಡುವಿದ್ದಾಗ ಮಕ್ಕಳು ಕೂಡಾ ಪ್ಯಾಕಿಂಗ್ ಕೆಲಸಗಳಲ್ಲಿ ಕೈಜೋಡಿಸುತ್ತಾರೆ.
ಹೆಚ್ಚುತ್ತಿರುವ ಬೇಡಿಕೆ
ಗುಣಮಟ್ಟದಲ್ಲಿ ರಾಜಿಯನ್ನು ಮಾಡಿಕೊಳ್ಳದ ಕಾರಣ ನಮ್ಮಲ್ಲಿ ತಯಾರಾಗುವ ಎಲ್ಲ ತಿಂಡಿಗಳಿಗೆ ಉಡುಪಿ, ಬೆಳ್ತಂಗಡಿ, ಮೂಡುಬಿದಿರೆ, ಬೈಲೂರು, ಅಜೆಕಾರು, ಬೆಳ್ಮಣ್ಣು ಹೀಗೆ ಬೇರೆ ಬೇರೆ ಕಡೆಗಳಲ್ಲಿ ಬಹು ಬೇಡಿಕೆಯಿದೆ. ವಾರದಲ್ಲಿ ಆರು ದಿನವೂ ತಯಾರಾಗುವ ಕಾಯಿ ಹೋಳಿಗೆಗೆ ದೊಡ್ಡ ಹೆಸರಿದೆ. ದಿನಕ್ಕೆ 500 ಹೋಳಿಗೆ ತಯಾರಿಸುತ್ತೇವೆ. ಇನ್ನು ಒಂದೆರಡು ಮಂದಿ ನುರಿತ ತಿಂಡಿ ತಯಾರಕರು ಲಭ್ಯವಾದರೆ ಈಗ ತಯಾರಿಸುವ ಎರಡರಷ್ಟು ಪ್ರಮಾಣದಲ್ಲಿ ತಿಂಡಿ ತಯಾರಿಸಿದರೂ ಬೇಡಿಕೆ ಇದೆ. ತಿಂಡಿ ತಯಾರಿ, ಮಾರುಕಟ್ಟೆ ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ತುಂಬಾ ಪೈಪೋಟಿ ಇಲ್ಲೂ ಇದೆ. ಆದರೆ ಗುಣಮಟ್ಟದ ತಿಂಡಿಗೆ ಯಾವಾಗಲೂ ಬೇಡಿಕೆ ಇದ್ದೆ ಇದೆ.
ಕೈಹಿಡಿದ ಗ್ರಾಮಾಭಿವೃದ್ಧಿ ಯೋಜನೆ
ನನ್ನ ಯಶಸ್ಸಿನ ಹಿಂದಿನ ಗುಟ್ಟು ಗ್ರಾಮಾಭಿವೃದ್ಧಿ ಯೋಜನೆ. ನನಗೆ ಆರಂಭದಲ್ಲಿ ಆರ್ಥಿಕ ಸಹಕಾರ ನೀಡಿದ್ದೇ ಯೋಜನೆ. ಪ್ರತಿ ಹಂತದಲ್ಲೂ ಪ್ರಗತಿನಿಧಿಯನ್ನು ಪಡೆದಿದ್ದೇನೆ. ಘಟಕವನ್ನು ಪುನರಾರಂಭಿಸಲು ತುರ್ತು ಸಾಲ ರೂ. 25 ಸಾವಿರವನ್ನು ಪಡೆದಿದ್ದೇನೆ. ಇದೀಗ ಸಿಡ್ಬಿ ಯೋಜನೆಯ ಮೂಲಕ ರೂ. 5 ಲಕ್ಷ ಪ್ರಗತಿನಿಧಿಯನ್ನು ಪಡೆದು ಉದ್ಯಮವನ್ನು ಉತ್ತುಂಗಕ್ಕೇರಿಸಿದ್ದೇನೆ. ಸೋಲಾರ್, ಕುಕ್‌ಸ್ಟವ್, ಎಲ್.ಐ.ಸಿ. ಪಾಲಿಸಿ, ಸಂಪೂರ್ಣ ಸುರಕ್ಷಾ ವಿಮೆ ಹೀಗೆ ಯೋಜನೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆದಿದ್ದೇನೆ. ಸುರಕ್ಷಾಕ್ಕೆ ಕಟ್ಟಿದ ಹಣದ ಹತ್ತು ಪಟ್ಟು ಪ್ರಯೋಜವನ್ನು ಪಡೆದಿದ್ದೇನೆ. ಯೋಜನೆಯ ಸಹಾಯದಿಂದಾಗಿ ಬ್ಯಾಂಕಿನಲ್ಲಿದ್ದ ಚಿನ್ನಾಭರಣವೆಲ್ಲವು ಇದೀಗ ನಮ್ಮ ಮನೆ ಸೇರಿದೆ. ಯೋಜನೆಯಿಂದಾಗಿ ಆರೋಗ್ಯ, ಧೈರ್ಯ, ಆರ್ಥಿಕ ಶಕ್ತಿ ಹೀಗೆ ಎಲ್ಲವು ದೊರೆತಿದೆ. ನನಗೆ ವ್ಯವಹಾರ ಕಲೆಯನ್ನು ಕಲಿಸಿದ ಹೆಗ್ಗಳಿಕೆ ಜ್ಞಾನವಿಕಾಸ ತಂಡಕ್ಕೆ ಸಲ್ಲುತ್ತದೆ.
ಸಿಹಿ ತಿಂಡಿ ಘಟಕದ ಪರವಾನಗಿಯ ಆಧಾರದ ಮೇಲೆ ಬ್ಯಾಂಕ್ ಮೂಲಕ ಸಾಲ ಮಾಡಿ ಸುಂದರವಾದ ಮನೆಯೊಂದನ್ನು ಕಟ್ಟಿಸಿದ್ದೇನೆ. ನನಗೆ ಈಗ 35 ವರ್ಷ. ಮಗ ಎಸ್ಸೆಸೆಲ್ಸಿ ಓದುತ್ತಿದ್ದಾನೆ. ಅವನನ್ನು ಸೇನೆಯ ‘ಅಗ್ನಿಪಥ್’ಗೆ ಸೇರಿಸಬೇಕು, ಮಗಳನ್ನು ಗಗನಸಖಿ ಮಾಡಬೇಕೆಂಬ ಕನಸಿನೊಂದಿಗೆ ದಿನಗಳು ಸಾಗುತ್ತಿವೆ. ಬೀಜದ ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿದ್ದ ದಿನಗಳಲ್ಲಿ ಯೋಜನೆಯಿಂದ ಪ್ರಗತಿನಿಧಿ ಪಡೆದು ಬಜಗೋಳಿಯಲ್ಲಿ ಖರೀದಿಸಿದ ಮನೆಯಿಂದಲೂ ಇದೀಗ ಸಣ್ಣ ಮೊತ್ತದ ಬಾಡಿಗೆ ಬರುತ್ತಿದೆ. ಅಂತೂ ಯೋಜನೆ ನಮ್ಮ ಕಷ್ಟದ ದಿನಗಳನ್ನು ದೂರವಾಗಿಸಿದೆ.
ರವೀಂದ್ರ ‘ವಡಾಪಾವ್’ ಅಂಗಡಿ ಮಾಲಕ
ಪತಿ ರವೀಂದ್ರ ಪೂಜಾರಿಯವರು ಗ್ರಾಮಾಭಿವೃದ್ಧಿ ಯೋಜನೆಯ ‘ವಿನಾಯಕ’ ಸ್ವಸಹಾಯ ಸಂಘವನ್ನು ಸೇರಿದ್ದಾರೆ. ಯೋಜನೆಯ ಮೂಲಕ ಪ್ರಗತಿನಿಧಿ ಪಡೆದು ಕಾರ್ಕಳದಲ್ಲಿ ವಡಾಪಾವ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಇದರಿಂದಲೂ ಉತ್ತಮ ಆದಾಯ ಕೈಸೇರುತ್ತಿದೆ. ‘ಗ್ರಾಮಾಭಿವೃದ್ಧಿ ಯೋಜನೆ’ಗೆ ಸೇರುತ್ತಿಲ್ಲವಾದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ದೇವರೆ ಬಲ್ಲ. ಆದರೆ ಯೋಜನೆ ನಮ್ಮ ಬದುಕನ್ನು ಬೆಳಗಿದೆ.’
ಉಡುಪಿ ಜಿಲ್ಲೆಯ ಕಾರ್ಕಳದ ಜೋಡುಕಟ್ಟೆ ಎಂಬ ಊರಿನಿಂದ ಎಂಟು ಕಿ.ಮೀ. ದೂರದ ರೆಂಜಾಳ ಎಂಬಲ್ಲಿ ಅನಿತಾರವರ ಸಿಹಿತಿಂಡಿ ತಯಾರಿಯ ಫ್ಯಾಕ್ಟರಿ ಇದೆ. ನೀವು ಆ ಕಡೆಗೆ ಹೋದಾಗ ಭೇಟಿ ನೀಡಬಹುದು. ಇವರ ಧೈರ್ಯ, ಸಾಧನೆ ಒಂದಷ್ಟು ಮಂದಿಗೆ ಪ್ರೇರಣೆ ನೀಡಬಲ್ಲದು. ಅವರ ಮೊಬೈಲ್ ಸಂಖ್ಯೆ : 9591083817.