ಸುಸ್ಥಿರ ಮಾದರಿಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆ

ಬರಹ : ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು

ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸರಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು. ಸರಕಾರಿ ಸಂಸ್ಥೆಗಳು ಸರಕಾರದ ಹಣದಿಂದ ಎಲ್ಲ ಖರ್ಚು ವೆಚ್ಚಗಳನ್ನು ನಿರ್ವಹಿಸಿದರೆ ಖಾಸಗಿ ಸಂಸ್ಥೆಗಳು ವ್ಯವಹಾರ ಮಾಡಿ ಆದಾಯ ಗಳಿಸಿ ಖರ್ಚನ್ನು ನಿರ್ವಹಿಸುತ್ತವೆ. ಸ್ವಯಂಸೇವಾ ಸಂಸ್ಥೆಗಳಾದರೋ ದಾನಿಗಳು ನೀಡುವ ಬಂಡವಾಳವನ್ನು ಉಪಯೋಗಿಸಿಕೊಂಡು ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತವೆ. 40 ವರ್ಷಗಳ ಹಿಂದೆ ಪ್ರಾರಂಭಗೊ೦ಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧರ್ಮಸ್ಥಳದ ಪೂಜ್ಯ ಶ್ರೀ ಹೆಗ್ಗಡೆಯವರು ನೀಡುವ ದಾನದಿಂದ ತನ್ನ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮಕ್ಕೆ ಪೂಜ್ಯರೇ ಕನಸುಗಾರರಾಗಿದ್ದರು. ಮತ್ತು ಅವರೇ ನಾಯಕರಾಗಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ಹರಿದು ಬರುತ್ತಿದ್ದ ದೇಣಿಗೆಯಿಂದ ಯೋಜನೆಯು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿತು. ಆದರೆ ಈ ಕಾರ್ಯಕ್ರಮಗಳನ್ನು ವಿಸ್ತೃತವಾಗಿ ವಿವಿಧ ಪ್ರದೇಶಗಳಿಗೆ ಕೊಂಡೊಯ್ಯಲು ಹಣದ ಅವಶ್ಯಕತೆ ಇತ್ತು.
ಇದನ್ನು ಮನಗಂಡ ಪೂಜ್ಯರು ಬೇರೆಯವರ ಬಳಿ ದೇಣಿಗೆಯನ್ನು ಪಡೆಯುವುದಕ್ಕಿಂತ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಫಲಾನುಭವಿಗಳೇ ಕಾರ್ಯಕ್ರಮವನ್ನು ನಿರ್ವಹಿಸಿದರೆ ಉತ್ತಮವೆಂದು ಭಾವಿಸಿ ಯೋಜನೆಯ ಕಾರ್ಯಕ್ರಮಗಳ ಸುಸ್ಥಿರತೆಯತ್ತ ಗಮನಹರಿಸಿದರು. ಇದರ ಪರಿಣಾಮ ಊಹಿಸಲಸಾಧ್ಯ. ಕೇವಲ 20 ವರ್ಷಗಳಲ್ಲಿ ಯೋಜನೆಯು ಸಾಮಾನ್ಯ ಜನರ ಬದುಕಿನ ಎಲ್ಲ ಮಜಲುಗಳನ್ನು ತಲುಪಿ ಜನಪರ ಚಳುವಳಿಯಾಗಿ ಬೆಳೆದು ಬಂದಿದೆ. ಅದಕ್ಕಾಗಿಯೇ ಪೂಜ್ಯರು ಯೋಜನೆಯ ಸದಸ್ಯರನ್ನು ‘ಪಾಲುದಾರರು’ ಎಂದು ಕರೆದರು.
ಸ್ವಾವಲಂಬಿ ಜೀವನದ ಹಂಬಲ ಎಲ್ಲಾ ಪ್ರಾಣಿಗಳಲ್ಲಿಯೂ ಇರುತ್ತದೆ. ದೇಣಿಗೆ, ದಾನ, ಭಿಕ್ಷೆಯನ್ನು ಯಾರೂ ಬಯಸುವುದಿಲ್ಲ. ಗಿಡವೊಂದಕ್ಕೆ ಗೊಬ್ಬರ ಹಾಕಿದರೆ ಅದಕ್ಕೆ ಇಮ್ಮಡಿಯಾಗಿ ಅದು ಫಸಲನ್ನು ನೀಡುತ್ತದೆ. ನಾಯಿಗೆ ಒಂದು ತುತ್ತು ಅನ್ನವನ್ನು ಹಾಕಿದರೆ ಅದು ಸಾಯುವವರೆಗೂ ನಿಮ್ಮನ್ನು ಕಾಯುತ್ತದೆ. ಆಕಳಿಗೆ ಆಹಾರ ನೀಡಿದರೆ ಅದು ಹಾಲನ್ನು ನೀಡಿ ನಿಮ್ಮ ಋಣವನ್ನು ತೀರಿಸುತ್ತದೆ. ಅದೇ ರೀತಿ ಇದರಿಂದ ಮನುಷ್ಯರೇನೂ ಹೊರತಲ್ಲ. ಯಾರೇ ಆಗಲಿ ಇಷ್ಟಪಟ್ಟು ಭಿಕ್ಷೆ ಬೇಡುವುದಿಲ್ಲ. ಎಲ್ಲರೂ ಸ್ವಾವಲಂಬಿಗಳಾಗಲೇ ಬಯಸುತ್ತಾರೆ. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವಾವಲಂಬಿ ಕುಟುಂಬ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲಾಗಿದೆ. ಅದರ ಜೊತೆಗೆ ಸ್ವಾವಲಂಬಿ ಸುಸ್ಥಿರ ಯೋಜನೆ ಮತ್ತು ಸುಸ್ಥಿರ ಕಾರ್ಯಕ್ರಮಗಳನ್ನು ಬೆಳೆಸಲಾಗುತ್ತಿದೆ.
ಇಂದು ಈ ಪರಿಯಲ್ಲಿ ಜನರನ್ನು ಒಳಗೊಂಡು ಸುಸ್ಥಿರವಾಗಿರುವ ಇನ್ನೊಂದು ಸ್ವಯಂಸೇವಾ ಸಂಸ್ಥೆಯನ್ನು ಕಾಣುವುದು ಈ ಜಗತ್ತಿನಲ್ಲಿ ಕಷ್ಟಸಾಧ್ಯ. ಸಂಸ್ಥೆಗೆ ಬರುವ ಆದಾಯವನ್ನು ಸದ್ವಿನಿಯೋಗಗೊಳಿಸಲು ಪೂಜ್ಯರು ಯೋಜನೆಯನ್ನು ‘ಟ್ರಸ್ಟ್’ ಆಗಿ ನೋಂದಾಯಿಸಿದ್ದಾರೆ. ಸರಕಾರದ ನಿಯಮದಂತೆ ‘ಟ್ರಸ್ಟ್’ನಿಂದ ಯಾವುದೇ ರೀತಿಯ ಲಾಭವನ್ನು ಅದರ ಪ್ರವರ್ತಕರು ಅಂದರೆ ಪೂಜ್ಯರು ಪಡೆಯುವಂತಿಲ್ಲ. ಈ ಸಂಸ್ಥೆಗೆ ಬರುವ ಆದಾಯದ ಕೊನೆಯ ರೂಪಾಯಿ ಕೂಡಾ ಜನರಿಗೇ ಬಳಕೆಯಾಗುವಂತೆ ಯೋಜನೆಯ ನಿಯಮಗಳನ್ನು ಪೂಜ್ಯರು ರಚಿಸಿದ್ದಾರೆ.
ಯೋಜನೆಯ ಯಶಸ್ಸಿಗೆ ಪೂಜ್ಯರ ದೂರದರ್ಶಿತ್ವ ಮತ್ತು ಜನರ ಪಾಲ್ಗೊಳ್ಳುವಿಕೆಯೇ ಕಾರಣ. ಇದು ಹೀಗೆಯೇ ಮುಂದುವರಿಯಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *

Latest Updates