ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕಾದರೆ, ಪ್ರಸಿದ್ಧಿ ಪಡೆಯಬೇಕಾದರೆ, ತನ್ನ ಜೀವನ ಯಶೋಗಾಥೆಯ ವಸ್ತುವಾಗಬೇಕಾದರೆ ಅದರ ಹಿಂದೆ ಸಾಕಷ್ಟು ಹೋರಾಟ, ಸಾಧನೆಗಳಿರುತ್ತವೆ. ಶೇ. 99ರಷ್ಟು ಜನರಿಗೆ ತಮ್ಮ ಸೋಲನ್ನು ಹೇಳಿಕೊಳ್ಳಲು ಅನೇಕ ಕಾರಣಗಳು, ಸಮರ್ಥನೆಗಳಿರುತ್ತವೆ. ಆದರೆ ಯಾರೂ ಯಶಸ್ಸನ್ನು ತನ್ನದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿರುತ್ತಾರೋ ಅವರನ್ನು ಸೋಲಿಸುವುದು ಕಷ್ಟ. ಸೋಲು ಸೋಲುವವರನ್ನು ಸೋಲಿಸಿದರೆ, ಅದೇ ಸೋಲು ಗೆಲ್ಲುವವರಲ್ಲಿ ಹುಮ್ಮಸ್ಸನ್ನು ತುಂಬುತ್ತದೆ. ಸೋತವರು ಒಂದು ಸೋಲಿಗೆ ಅಂಜಿ ಹಿಂಜರಿದರೆ, ಗೆಲ್ಲಬೇಕೆನ್ನುವವರು ಯಶಸ್ಸು ಪಡೆಯುವವರೆಗೂ ಸೋಲುತ್ತಲೇ ಇರುತ್ತಾರೆ. ಪ್ರಯತ್ನಿಸಿದಾತ ಸೋತರೂ ಅದಕ್ಕೊಂದು ಬೆಲೆಯಿದೆ. ಆದರೆ ಪ್ರಯತ್ನಿಸದೆ ಸೋಲುವುದು ಮತ್ತು ತನ್ನ ಸೋಲಿಗೆ ಕಾರಣಗಳನ್ನು ಹುಡುಕಿ ಅದನ್ನು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಚೆನ್ನಾಗಿ ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಕಡಿಮೆ ಅಂಕ ಬಂದಾಗ ಆತನ ಬಗ್ಗೆ ಸಹಾನುಭೂತಿ ಹುಟ್ಟುತ್ತದೆ. ಓದುವ ಪ್ರಯತ್ನವನ್ನೇ ಮಾಡದೆ ಪ್ರತಿ ಸಲ ಅನುತ್ತೀರ್ಣನಾಗುವ ವಿದ್ಯಾರ್ಥಿಯನ್ನು ಶಿಕ್ಷಕರು, ಹೆತ್ತವರು ಯಾರೂ ಕೂಡಾ ಕ್ಷಮಿಸಲಾರರು. ಮನಸ್ಸಿದ್ದವನಿಗೆ ಮಾರ್ಗವಿದೆ. ಮನಸ್ಸಿಲ್ಲದವನಿಗೆ ಕಾರಣಗಳಿವೆ ಅಷ್ಟೆ. ‘ನನ್ನ ಕಾಳಜಿ ಇರುವುದು ನಿನ್ನ ಸೋಲಿನಲ್ಲಲ್ಲ, ಆದರೆ ಸೋಲಿನಲ್ಲೇ ತೃಪ್ತಿಪಟ್ಟುಕೊಂಡು ಕುಳಿತುಕೊಳ್ಳುವ ನಿನ್ನ ಮನಸ್ಥಿತಿಯಲ್ಲಿ’ ಎನ್ನುತ್ತಾರೆ ಲಿಂಕನ್.
ನೀರಿಗೆ ಬೀಳುವುದು ದೊಡ್ಡ ವಿಚಾರವಲ್ಲ, ಆದರೆ ಬಿದ್ದು ಒದ್ದಾಡಿ ಮೇಲೆ ಬಂದವ ಮಾತ್ರ ಮತ್ತಷ್ಟು ಶಕ್ತಿಶಾಲಿ ಅನ್ನಿಸಿಕೊಳ್ಳುತ್ತಾನೆ. ಅನೇಕ ಸಲ ಸೋಲಿನ ಭಯವೇ ಸೋಲುವುದಕ್ಕೆ ಕಾರಣವಾಗಬಲ್ಲದು. ಒಂದು ಉದ್ಯಮವನ್ನು ಆರಂಭಿಸುವ ಮೊದಲೇ ಇಪ್ಪತ್ತೆöÊದು ಕಡೆ ಹರಕೆ ಹೇಳಿಕೊಂಡು ನನಗೆ ಏನೂ ಅನುಭವವಿಲ್ಲ. ನಾನು ಉದ್ಯಮದ ಬಗ್ಗೆ ಅರಿತವನಲ್ಲ. ಹಾಗಾಗಿ ಹೇಗಾಗುತ್ತೊ ಏನೋ! ಹಾಕಿದ ದುಡ್ಡು ಮತ್ತೆ ಕಿಸೆ ಸೇರುತ್ತದೆಯೋ, ಇಲ್ಲವೋ..! ಎಂದು ಭಯಪಟ್ಟರೆ ಆ ಭಯವೇ ಆತನ ಸೋಲಿಗೆ ಕಾರಣವಾಗಬಹುದು. ‘ಗೆಲುವು ತಲೆಗೆ ಏರಬಾರದು, ಸೋಲು ಮನಸ್ಸಿಗೆ ಇಳಿಯಬಾರದು’ ಎಂಬ ಮಾತಿದೆ. ಕೆಲವರಿಗೆ ಉದ್ಯಮದಲ್ಲಿ ಸ್ವಲ್ಪ ಏಳಿಗೆ ಆದರೆ ನನ್ನಷ್ಟು ದೊಡ್ಡ ಉದ್ಯಮಿ, ಮೇಧಾವಿ, ಯಶಸ್ವಿ ಸಾಧಕ ಯಾರೂ ಇಲ್ಲ ಎಂಬ ಅಹಂಕಾರ ತಲೆಗೆ ಏರಿ ಬಿಡುತ್ತದೆ. ಅದಕ್ಕಿಂತ ದೊಡ್ಡ ಸೋಲು ಬೇರೊಂದಿಲ್ಲ. ಹಾಗೆಯೇ ಉದ್ಯಮದಲ್ಲಿ ಸ್ವಲ್ಪ ಏರುಪೇರಾದರೂ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುವುದರಿಂದ ಉದ್ಯಮದಲ್ಲಿ ಮತ್ತಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಯಶಸ್ಸಿನ ಜೊತೆ ಜೊತೆಗೆ ಸಂತೋಷವಿಲ್ಲವಾದಲ್ಲಿ ಅಂಥಾ ಯಶಸ್ಸು ಕೂಡಾ ಸೋಲಿಗೆ ಸಮಾನವೆನಿಸುತ್ತದೆ. ನಮ್ಮ ಯಶಸ್ಸಿಗೆ ಅನೇಕರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳಬೇಕಲ್ಲದೆ ಎಲ್ಲಾ ತಾನೇ, ತನ್ನಿಂದಲೇ ಎಂಬ ಮಾತು ಬರಬಾರದು. ಯಾಕೆಂದರೆ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಅನೇಕರ ಚಿಂತನೆ, ಸಹಕಾರ, ಶ್ರಮ ಇದ್ದೆ ಇರುತ್ತದೆ.
ಒಬ್ಬ ನಿಜವಾದ ಸಂಗೀತ ವಿದ್ವಾಂಸ ನನ್ನ ಸಾಧನೆಗೆ ತನ್ನ ಗುರುಗಳೇ ಮುಖ್ಯ ಕಾರಣ ಎಂದು ಭಾವಿಸುತ್ತಾನೆ. ಜೊತೆಗೆ ತನ್ನನ್ನು ಪ್ರೇರೆಪಿಸಿ ಪ್ರೋತ್ಸಾಹಿಸಿದ ತಂದೆ-ತಾಯಿ, ಗೆಳೆಯರು ಮಾತ್ರವಲ್ಲ ಸಂಗೀತವನ್ನು ಕೇಳಿ ಆಸ್ವಾದಿಸುತ್ತಿರುವ ಸಹೃದಯರಿಗೂ ಕೃತಜ್ಞತೆ ಹೇಳಲು ಆತ ಮರೆಯುವುದಿಲ್ಲ.
‘ಎಲ್ಲಿಯವರೆಗೆ ನನಗೊಂದು ಗುರಿ ಇರುವುದಿಲ್ಲವೋ ಅಲ್ಲಿಯವರೆಗೆ ನಾನೊಬ್ಬ ಒಳ್ಳೆಯ ಬಿಲ್ಲುಗಾರನಾಗಲು ಸಾಧ್ಯವಿಲ್ಲ’ ಎನ್ನುತ್ತದೆ ಇಟಲಿ ಗಾದೆ. ಸಮುದ್ರ ಬದಿಯಲ್ಲಿ ಕಟ್ಟಿರುವ ನಾವೆಗೆ ಮುಳುಗುವ ಭಯವಿಲ್ಲ. ಬುದ್ಧಿವಂತನಾದ ನಾವಿಕ ಗಾಳಿ ಬೀಸುವ ದಿಕ್ಕನ್ನು ಅರಿತುಕೊಂಡು ನಾವೆಯನ್ನು ಮುನ್ನಡೆಸಬಲ್ಲ.
ಯಶಸ್ಸಿನ ಹಿಂದೆ ನಾಲ್ಕು ಸೂತ್ರಗಳು ಇದ್ದೇ ಇರುತ್ತವೆ. ಪ್ರಯೋಗಶೀಲತೆ, ಸೋಲು, ಸೋಲಿನಿಂದ ಕಲಿತ ಪಾಠ ಮತ್ತು ಹಿಂದಿನ ಅನುಭವದಿಂದ ಪ್ರಯತ್ನಶೀಲನಾಗುವುದು. ಯಾವುದೇ ಆಟಗಾರ ಮೊದಲಿಗೆ ಆರಂಭದ ಆಟಗಾರನೇ ಆಗಿರುತ್ತಾನೆ. ಯಾವುದೇ ಓಟ ಮೊದಲ ಹೆಜ್ಜೆಯಿಂದಲೇ ಆರಂಭವಾಗಬೇಕು. ಓಟದ ಯಶಸ್ಸು ಕೊನೆ ಹೆಜ್ಜೆಗೆ ಸಂಬoಧಿಸಿದ್ದಾದರೂ ಆರಂಭ ಮೊದಲ ಹೆಜ್ಜೆಯಿಂದಲೇ. ಅಕ್ಷರ ಲೋಕದ ಅನಾವರಣವಾಗುವುದು ಮೊದಲ ‘ಅ’ ಅಕ್ಷರದಿಂದಲೇ. ದೊಡ್ಡ ಬೆಂಕಿಗೆ ಕಾರಣವಾಗುವುದು ಸಣ್ಣ ಕಿಡಿ. ಆದ್ದರಿಂದ ಒಬ್ಬ ಸಾಧಕನನ್ನು, ಯಶಸ್ವಿ ವ್ಯಕ್ತಿಯನ್ನು ಆತನ ಇಂದಿನ ಔನ್ನತ್ಯದಲ್ಲಿ, ಯಶಸ್ಸಿನ ಶಿಖರದಲ್ಲಿ ನೋಡುವ ಮೊದಲು ಆತನ ಹಿಂದಿನ ಹೆಜ್ಜೆಗಳನ್ನು, ಸಣ್ಣ-ಪುಟ್ಟ ಏಳು ಬೀಳುಗಳೊಂದಿಗೆ ಆತ ನಡೆದು ಬಂದ ದಾರಿಯನ್ನು ಗಮನಿಸಿದಾಗ ಆತನ ಯಶಸ್ಸಿನ ಗುಟ್ಟು ಏನು ಎಂಬುದನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.
ಮೊದಲ ಸಲ ರ್ಯಾಂಕ್ ಪಡೆದ ವಿದ್ಯಾರ್ಥಿ, ಕ್ರೀಡೆಯಲ್ಲಿ ಪ್ರಥಮ ಬಹುಮಾನ ಪಡೆದ ಆಟಗಾರ, ಕ್ರಿಕೆಟ್ನಲ್ಲಿ ಶತಕಗಳನ್ನು ಭಾರಿಸುತ್ತಾ ರೆಕಾರ್ಡ್ ಗಳಿಸಿಕೊಳ್ಳುವ ಓರ್ವ ವ್ಯಕ್ತಿ ಆ ಸ್ಥಾನಕ್ಕೆ ಬರುವಲ್ಲಿ ಆತನ ಅದೃಷ್ಟ, ದೇವರ ದಯೆಯಷ್ಟೇ ಸಾಕಾಗುವುದಿಲ್ಲ. ನಿರಂತರ ಶ್ರಮ, ಏಕಾಗ್ರತೆಗಳೂ ಬೇಕಾಗುತ್ತದೆ.
ಚಾಯ್ವಾಲಾ ಆಗಿದ್ದ ಮೋದಿಯವರು ಇಂದು ದೇಶದ ಪ್ರಧಾನಿ ಆಗಿದ್ದಾರೆಂದಾದರೆ ಅಲ್ಲಿಂದ ಇಲ್ಲಿಯವರೆಗಿನ ಅವರ ನಡಿಗೆ, ಧೈರ್ಯ, ಆತ್ಮವಿಶ್ವಾಸಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಇಂಥವರು ಮಾತ್ರ ಸೋಲನ್ನು ಸೋಲಿಸಬಲ್ಲರು.
