ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನಿತ್ಯವೂ ಪತ್ರಿಕೆಯನ್ನು ಓದುವುದು ನನ್ನ ಅಭ್ಯಾಸ ಮತ್ತು ಹವ್ಯಾಸ. ಇತ್ತೀಚೆಗೆ ಪತ್ರಿಕೆ ಓದುವಾಗ ‘ನಿಮ್ಮ ಮನೆಯ ಸ್ವಚ್ಛತೆಗಾಗಿ ದಿನಕ್ಕೆ ಹತ್ತು ನಿಮಿಷ ಮೀಸಲಿಡಿ’ ಎನ್ನುವ ಸಂದೇಶ ಓದಿದೆ. ಇದನ್ನು ಓದಿದಾಗ ನೆನಪಾದ ವಿಚಾರವೆಂದರೆ ನಮ್ಮ ಮನೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ನಾವೇ ಕಾಪಾಡದಿದ್ದರೆ ಇನ್ಯಾರು ಕಾಪಾಡಬೇಕು? ಎನ್ನುವುದು. ನಮ್ಮ ಮನೆಯ ಬೇಲಿ ಅಥವಾ ಕಾಂಪೌoಡ್ ಎಲ್ಲಿಯವರೆಗೆ ಇದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಪರಿಸರ. ಉಳಿದ ಸುತ್ತಮುತ್ತಲಿನ ಜಾಗ ಸಾರ್ವಜನಿಕ ಪ್ರದೇಶ ಎನ್ನುವ ಭಾವನೆ ಬೆಳೆದದ್ದರಿಂದಲೇ ಅನೇಕ ಕಡೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವ, ಕಾಳಜಿ ವಹಿಸುವ ಪರಿಪಾಠವೂ ಇಲ್ಲವಾಗಿದೆ.
ನಾನೊಮ್ಮೆ ಹಳ್ಳಿಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಿತಿಯನ್ನು ಕಣ್ಣಾರೆ ಕಂಡು ಬೇಸರವಾಯಿತು. ಅಲ್ಲಿ ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶದವರೆಗೆ ಮನೆಗಳನ್ನು ನಿರ್ಮಿಸಿಕೊಂಡು ಅನೇಕ ಕುಟುಂಬಗಳು ವಾಸವಾಗಿದ್ದವು. ಇನ್ನು ಕೆಲವು ಮನೆಗಳು ನಿರ್ಮಾಣ ಹಂತದಲ್ಲಿದ್ದವು. ಮನೆಗಳ ಮುಂದೆಯೇ ಒಂದು ಕಾಲುವೆ ಇತ್ತು. ಕಾಲುವೆಯ ಬಳಿ ಮಕ್ಕಳನ್ನೆಲ್ಲ ಕರೆದುಕೊಂಡು ಬಂದು ಅಲ್ಲಿಯೇ ಪ್ರಕೃತಿಕರೆಗಳನ್ನು ಮಾಡಿಸುತ್ತಿದ್ದರು. ಮನೆ ಎದುರುಗಡೆ ಹಾದು ಹೋಗುವ ಅದೇ ಚರಂಡಿಯಲ್ಲಿ ಇತರ ತ್ಯಾಜ್ಯಗಳನ್ನು ಹೊತ್ತ ನೀರು ಹರಿಯುತ್ತಿತ್ತು. ದುರ್ವಾಸನೆಯನ್ನೂ ಬೀರುತ್ತಿತ್ತು. ಅಷ್ಟೊಂದು ಕಲುಷಿತಗೊಂಡು ಹರಿಯುತ್ತಿದ್ದ ತೆರೆದ ಚರಂಡಿಯ ಸ್ವಚ್ಛತೆಯ ಬಗ್ಗೆ ಯಾರಿಗೂ ಕಾಳಜಿ ಇದ್ದಂತಿರಲಿಲ್ಲ. ಚಿಂತೆಯೂ ಇರಲಿಲ್ಲ. ಮನೆಯ ಬಳಿ ಹರಿಯುವ ಚರಂಡಿಗಳು ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂಬುದರ ಬಗ್ಗೆಯೂ ಯಾರು ಅರಿತಂತಿರಲಿಲ್ಲ. ಬಹುಶಃ ಆ ಕಲುಷಿತ, ದುರ್ವಾಸನೆಯುಕ್ತ ವಾತಾವರಣದೊಂದಿಗೆ ಜೀವನ ಸಾಗಿಸುವುದು ಅವರಿಗೆ ರೂಢಿಯಾಗಿರಬೇಕು. ಇಲ್ಲದಿದ್ದಲ್ಲಿ ಕೊಂಚವಾದರೂ ಸ್ವಚ್ಛತೆಯ ಬಗ್ಗೆ ಗಮನ ಕೊಡುತ್ತಿದ್ದರು ಎಂದೆನಿಸಿತು. ಅಲ್ಲಿನ ಸ್ಥಿತಿಯನ್ನು ಪ್ರತ್ಯಕ್ಷವಾಗಿ ಕಂಡ ನಾನು ನಮ್ಮ ‘ಗ್ರಾಮಾಭಿವೃದ್ಧಿ ಯೋಜನೆ’ಯ ಕಾರ್ಯಕರ್ತರಲ್ಲಿ ಈ ಪರಿಸರದ ಜನರನ್ನು ಕರೆದು ಅವರಿಗೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಮಾಹಿತಿ ಕೊಡಿ. ತೆರೆದ ಚರಂಡಿಯನ್ನು ಒಳ ಚರಂಡಿಯನ್ನಾಗಿಸಲು ಇಲಾಖೆಗಳಿಗೆ ವಿನಂತಿಸಿಕೊಳ್ಳಿ. ಇನ್ನಾದರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅರಿವು ನೀಡಿ ಎಂದು ಹೇಳಿದ್ದೆ. ಅದರಂತೆ ಕಾರ್ಯಪ್ರವೃತ್ತರಾದ ಯೋಜನೆಯ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿದರು. ಮನವಿಗೆ ಸ್ಪಂದಿಸಿದ ಪಂಚಾಯತ್ ಚರಂಡಿಯನ್ನು ವ್ಯವಸ್ಥಿತವಾಗಿ ನಿರ್ಮಿಸಿಕೊಟ್ಟಿತು.
ಇದು ಆ ಪರಿಸರವೊಂದರ ಕಥೆ ಅಲ್ಲ. ಹೆಚ್ಚಿನ ಕಡೆ ಇಂತಹ ಅವ್ಯವಸ್ಥೆಗಳು ಕಾಣಸಿಗುತ್ತವೆ. ಮನೆಯ ಸುತ್ತಮುತ್ತ ಗಮನಿಸಿದಾಗ ತರಕಾರಿ ಸಿಪ್ಪೆಯಿಂದ ಹಿಡಿದು ಪ್ಲಾಸ್ಟಿಕ್, ಬಾಟಲಿ ಹೀಗೆ ಅನೇಕ ರೀತಿಯ ತ್ಯಾಜ್ಯಗಳನ್ನು ಬಿಸಾಡಿರುವುದನ್ನು ಕಾಣುತ್ತೇವೆ. ಎಸೆದ ತ್ಯಾಜ್ಯಗಳಲ್ಲಿ ಕೆಲವೊಂದನ್ನು ಕೋಳಿ, ನಾಯಿ ಅಥವಾ ಹಂದಿಗಳು ತಿನ್ನುತ್ತವೆ. ಆದರೆ ಹೊಲಸು ತಿನ್ನಲು ಕೋಳಿ, ನಾಯಿಗಳು ಇವೆಯಲ್ಲ ಎಂದುಕೊAಡು ಅಲ್ಲಲ್ಲಿ ಬಿಸಾಡುವುದು, ಗಲೀಜು ಮಾಡುವುದು ಸರಿಯಲ್ಲ. ಯಾಕೆಂದರೆ ತ್ಯಾಜ್ಯವಸ್ತುಗಳು ಕೊಳೆತು ನಾರಲು ಪ್ರಾರಂಭಿಸಿದರೆ ಪ್ರಾಣಿಗಳೂ ಕೂಡ ಅವುಗಳನ್ನು ಮುಟ್ಟುವುದಿಲ್ಲ. ಇಂತಹ ಅಸಹ್ಯವಾದ ವಾತಾವರಣವನ್ನು ನಿರ್ಮಿಸಿಕೊಂಡು, ಆಮೇಲೆ ಕಷ್ಟಪಡುವ ಬದಲು ದಿನಕ್ಕೆ ಕೇವಲ ಹತ್ತೇ ನಿಮಿಷ ಮನೆಯ ಸುತ್ತಮುತ್ತ ಸ್ವಚ್ಛತೆಗೆ ಮೀಸಲಿರಿಸಿದರೆ ಸ್ವಚ್ಛತೆಯ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ. ಈ ಪ್ರಜ್ಞೆ ನಮ್ಮಲ್ಲಿ ಬರಬೇಕಾದುದು ಬಹಳ ಅಗತ್ಯ. ಹಳ್ಳಿ ಮಾತ್ರವಲ್ಲದೆ ನಗರವಾಸಿಗಳಲ್ಲೂ ಈ ಪ್ರಜ್ಞೆ, ಅರಿವು ಮೂಡಬೇಕಿದೆ. ನಗರಗಳಲ್ಲೂ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ವ್ಯವಸ್ಥೆಗಳಿದ್ದರೂ ರಸ್ತೆಯ ಕೊನೆಗೋ, ಮೋರಿಗೋ ಕಸದ ಚೀಲಗಳನ್ನು ಎಸೆದು ಹೋಗುವವರು ಇದ್ದಾರೆ. ತೊಟ್ಟಿ ಇದ್ದರೂ ಅದಕ್ಕೆ ಕಸ ಹಾಕದೆ ಎಲ್ಲೆಂದರಲ್ಲಿ ಹಾಕುವವರನ್ನು ಕಾಣಬಹುದು. ಹಾಗಾಗಿ ನಗರ, ಹಳ್ಳಿ ಎಲ್ಲ ಕಡೆಗಳಲ್ಲಿ ನೈರ್ಮಲ್ಯದ ಕುರಿತು ಮತ್ತಷ್ಟು ಜಾಗೃತಿ, ಪರಿವರ್ತನೆ ಹೊಂದಬೇಕಿದೆ.
ನಾವು ಕೆಲವು ವರ್ಷಗಳ ಹಿಂದೆ ಅಮೆರಿಕ ದೇಶಕ್ಕೆ ಪ್ರವಾಸ ಹೋದಾಗ ಅಲ್ಲಿದ್ದ ಪರಿಚಿತರೊಬ್ಬರು ತಮ್ಮ ಮನೆಯಲ್ಲೇ ಉಳಿದುಕೊಳ್ಳಬೇಕು ಎಂದು ಬಹಳ ಹಠ ಮಾಡಿದರು. ಅವರ ಒತ್ತಾಯಕ್ಕೆ ಮಣಿದು ಒಂದು ದಿನ ಅಲ್ಲಿಯೇ ಉಳಿದುಕೊಂಡೆವು. ಅದು ಅಮೆರಿಕದ ವಾಸ್ತು ಶೈಲಿಯಲ್ಲಿ ನಿರ್ಮಿತವಾದ ಮನೆ. ಬಹಳ ತೆಳುವಾದ ಬಾಗಿಲು, ಪುಟ್ಟ ಮನೆ. ಅದನ್ನು ಸ್ವಚ್ಛವಾಗಿರಿಸಿಕೊಂಡಿದ್ದರು. ಮನೆಯ ಸುತ್ತಮುತ್ತ ವಿಶಾಲವಾದ ಜಾಗವಿತ್ತು. ಅಲ್ಲಿ ಹಸಿರು ತುಂಬಿತ್ತು. ಎಲ್ಲೂ ಕೂಡ ಕಸವನ್ನು ಕಾಣಲೇ ಇಲ್ಲ. ಅಷ್ಟೊಂದು ಸ್ವಚ್ಛತೆಯನ್ನು ಅಲ್ಲಿ ಕಾಪಾಡಿಕೊಂಡಿದ್ದರು. ಸುಂದರವಾದ ಹಸಿರು ಮನೆಯ ಸುತ್ತ ಇತ್ತು. ಕೆಲವು ಮರಗಳು ಇದ್ದವು. ಅವು ನೆರಳಿನ ಜೊತೆಗೆ ಹೂವು ಹಣ್ಣನ್ನು ಕೊಡುತ್ತಿದ್ದುವು. ಇಷ್ಟೊಂದು ಸ್ವಚ್ಛತೆಯಿಂದ ಪರಿಸರವನ್ನು ಇಟ್ಟುಕೊಳ್ಳಲು ಹೇಗೆ ಸಾಧ್ಯ! ಎಂದು ಆಶ್ಚರ್ಯವಾಯಿತು. ಜೊತೆಗೆ ಆ ಪರಿಸರವನ್ನು ಕಂಡು ಖುಷಿಯೂ ಆಯಿತು.
ವಿದೇಶಗಳ ಪರಿಸರ, ಅಲ್ಲಿನವರ ಮನೆಗಳನ್ನು, ಅವರು ಓಡಾಡುವ ರಸ್ತೆ, ಇನ್ನಿತರ ಜಾಗಗಳನ್ನು ನೋಡಿದರೆ ಎಲ್ಲವೂ ಹಚ್ಚ ಹಸಿರಿನಿಂದ ತುಂಬಿರುತ್ತವೆ. ಎಲ್ಲೂ ನಿರ್ಲಕ್ಷö್ಯವಹಿಸಿದ ಜಾಗ ಕಾಣಸಿಗುವುದಿಲ್ಲ. ಅಂದರೆ ಒಂದಿನಿತೂ ಜಾಗವನ್ನು ಖಾಲಿ ಬಿಡದೆ ಸದ್ವಿನಿಯೋಗ ಮಾಡಿಕೊಂಡಿರುತ್ತಾರೆ. ಒಂದೋ ಗಿಡ ನೆಟ್ಟಿರುತ್ತಾರೆ, ಇಲ್ಲವಾದರೆ ಕಾಂಕ್ರೀಟ್, ಇಂಟರ್‌ಲಾಕ್ ಹಾಕಿರುತ್ತಾರೆ. ಅಷ್ಟೊಂದು ಶುಚಿತ್ವ ಅಲ್ಲಿರುತ್ತದೆ ಮತ್ತು ಜಾಗವು ಅನಾಥ/ಬೇಡವಾಗಿರುವಂತೆ ಎಲ್ಲೂ ಕಾಣುವುದಿಲ್ಲ. ಎಷ್ಟೆಂದರೆ ಮರಗಳಿಂದ ದಿನವೂ ಉದುರುವ ಎಲೆಗಳೂ ಕೂಡ ಕಾಣಸಿಗುತ್ತಿರಲಿಲ್ಲ. ಅವೆಲ್ಲ ಬುಡವನ್ನು ಸೇರಿ ಪರಿಸರ ಸ್ವಚ್ಛವಾಗಿರುತ್ತದೆ. ಇವನ್ನೆಲ್ಲ ಕಂಡಾಗ ವಿದೇಶಗಳಲ್ಲೂ ಈ ರೀತಿಯ ಸ್ವಚ್ಛತೆ ಹೇಗೆ ಸಾಧ್ಯವಾಯಿತು? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ನಾವು ಉಳಿದುಕೊಂಡಿದ್ದ ಮನೆಯವರಲ್ಲಿ ‘ಮರಗಳಿಂದ ಬಿದ್ದ ತರೆಗೆಲೆಗಳೂ ಇಲ್ಲದಂತೆ ಶುಚಿತ್ವ ಕಾಪಾಡಿಕೊಂಡಿರುವುದು ಹೇಗೆ?’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ‘ಇಲ್ಲಿ ಈ ರಸ್ತೆಯಲ್ಲಿರುವಂತಹ ಐವತ್ತು-ನೂರು ಮನೆಗಳಿಗೆ ಒಂದು ಸಮಿತಿ ಇರುತ್ತದೆ. ಆ ಸಮಿತಿಯಲ್ಲಿ ನಾವೆಲ್ಲ ಒಪ್ಪಂದ ಮಾಡಿಕೊಂಡ ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ಜಾಗವನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ತರೆಗೆಲೆಗಳು ಬಿದ್ದು ಹಿಮ, ನೀರು ಸೇರಿಕೊಂಡು ಅಲ್ಲೇ ಕೊಳೆತು ಕ್ರಿಮಿಕೀಟಗಳು ಸೃಷ್ಟಿಯಾದರೆ ನಮ್ಮ ಮನೆಯ ಪರಿಸರಕ್ಕೂ, ಆರೋಗ್ಯಕ್ಕೂ ಮಾರಕ. ಅಲ್ಲದೆ ಅಕ್ಕ-ಪಕ್ಕದವರಿಗೂ ತೊಂದರೆಯಾಗುತ್ತದೆ. ಹಾಗಾಗಿ ಅದನ್ನೆಲ್ಲ ನಾವು ಸ್ವಚ್ಛ ಮಾಡಲೇಬೇಕಾಗುತ್ತದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳು ನಮಗೆ ರಜಾದಿನವಾಗಿದ್ದು ಈ ಎರಡು ರಜಾದಿನಗಳಲ್ಲಿ ವಿಶೇಷವಾಗಿ ಮನೆಯ ಯಜಮಾನ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಯನ್ನು ಮಾಡಬೇಕಾಗುತ್ತದೆ. ಅದು ಆತನ ಜವಾಬ್ದಾರಿಯೂ ಆಗಿರುತ್ತದೆ. ಮನೆಯ ಮಕ್ಕಳನ್ನೂ ಕೂಡ ಅವರೊಂದಿಗೆ ಸೇರಿಸಿಕೊಳ್ಳಲಾಗುತ್ತದೆ. ಬಾಲ್ಯದಿಂದಲೇ ಅವರಿಗೂ ಸ್ವಚ್ಛತೆಯ ಜಾಗೃತಿ ಮೂಡಿಸಲಾಗುತ್ತದೆ. ಎಲ್ಲ ತ್ಯಾಜ್ಯಗಳನ್ನು ತೆಗೆದು ಮನೆ ಹತ್ತಿರದಲ್ಲಿರುವ ತ್ಯಾಜ್ಯದ ಡ್ರಮ್‌ಗೆ ಹಾಕಿದರೆ ಆಯಾ ಪ್ರದೇಶದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಂಸ್ಥೆ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಿಸುವ ವ್ಯವಸ್ಥೆಯನ್ನು ಮಾಡುತ್ತದೆ. ಇಲ್ಲಿ ರಜಾ ದಿನಗಳಲ್ಲಿ ಆಲಸಿಗಳಾಗಿ ಇರಲಿಕ್ಕೆ ಸಾಧ್ಯವಿಲ್ಲ, ಸ್ವಚ್ಛತೆಯನ್ನು ಮಾಡಲೇಬೇಕು. ಒಂದು ವೇಳೆ ನಾವು ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ ನಮಗೆ ಇಂತಿಷ್ಟು ಎಂದು ದಂಡ ಹಾಕುತ್ತಾರೆ, ನಾವು ಅದನ್ನು ಕಟ್ಟಲೇಬೇಕು’ ಎಂಬ ಮಾತನ್ನು ಹೇಳಿದರು. ‘ದಂಡA ದಶಗುಣಂ’ ಎನ್ನುವಂತೆ ಕೆಲವು ಸಲ ದಂಡ ಹಾಕಿದರೆ ಮಾತ್ರ ಭಯಪಟ್ಟಾದರೂ ಆ ಕೆಲಸವನ್ನು ಮಾಡಿಯೇ ಮಾಡುತ್ತಾರೆ ಎನ್ನುವ ಮಾತು ಸತ್ಯ. ಹೀಗೆ ಅನೇಕ ದೇಶಗಳಲ್ಲಿ ಸ್ವಚ್ಛತೆ ಎನ್ನುವಂಥದ್ದು ಸಂಸ್ಕೃತಿಯಾಗಿ ಬದಲಾಗಿದೆ. ಜನಜೀವನದಲ್ಲಿ ಹಾಸುಹೊಕ್ಕಿದೆ. ಅವರು ಎಲ್ಲೇ ಓಡಾಡಿದರೂ ಶುಚಿತ್ವದ ಬಗ್ಗೆ ಎಚ್ಚರ ವಹಿಸುತ್ತಾರೆ.
ಬಹಳಷ್ಟು ಕಡೆಗಳಲ್ಲಿ ಅವಿದ್ಯಾವಂತರು ಅಥವಾ ಅತೀ ಕಡಿಮೆ ಶಿಕ್ಷಣ ಪಡೆದವರು ತಮ್ಮ ಹೊಟ್ಟೆಪಾಡಿಗಾಗಿ, ಜೀವನ ನಿರ್ವಹಣೆಗಾಗಿ ಶುಚಿಗೊಳಿಸುವ, ತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಮಾಡುತ್ತಿರುತ್ತಾರೆ. ಆದರೆ ಬಹಳಷ್ಟು ಕಡೆ ಅವರನ್ನು ತಾತ್ಸಾರದಿಂದ, ಅತ್ಯಂತ ಕೀಳಾಗಿ ನೋಡಲಾಗುತ್ತದೆ. ಇದು ಖಂಡಿತಾ ತಪ್ಪು. ಯಾಕೆಂದರೆ ಯಾವ ಕೆಲಸವೂ ಕೀಳು ಅಲ್ಲ, ಮೇಲೂ ಅಲ್ಲ. ಎಲ್ಲವೂ ಒಂದೇ. ಅವರು ತ್ಯಾಜ್ಯ ಸಂಗ್ರಹಣೆ, ಶುಚಿತ್ವದ ಕೆಲಸ ಮಾಡುವುದರಿಂದಲೇ ನಾವು ಇಂದು ಸುಂದರವಾದ ಪರಿಸರದಲ್ಲಿ ನೆಮ್ಮದಿಯಾಗಿರಲು ಸಾಧ್ಯ. ಅವರು ತ್ಯಾಜ್ಯ ಸಂಗ್ರಹಿಸಲು ಒಂದೆರಡು ದಿನ ಬಾರದೇ ಇದ್ದಲ್ಲಿ ನಮ್ಮ ಮನೆಗಳಲ್ಲೂ ಕಸ ಕೊಳೆತು ನಾರಲು ಶುರುವಾಗುತ್ತದೆ. ಅವರನ್ನು ಗೌರವದಿಂದ ಕಾಣುವುದಷ್ಟೇ ಅಲ್ಲದೆ ಅವರಿಗೆ ಸಹಕರಿಸುವುದು ಅಗತ್ಯ.
ಹೀಗೆ ನಮ್ಮ ದೇಶವನ್ನು, ರಾಜ್ಯವನ್ನು ವಿಶೇಷವಾಗಿ ನಮ್ಮ ಪರಿಸರವನ್ನು ನಾವು ರಕ್ಷಣೆ ಮಾಡಿಕೊಳ್ಳುವಂತಹದ್ದು ಬಹಳ ಅಗತ್ಯ. ಇದು ನನ್ನದ್ದಲ್ಲ ಎನ್ನುವಂತ ಭಾವನೆಯನ್ನು ತೊಡೆದು ಹಾಕಬೇಕು. ನಮ್ಮದು ಎನ್ನುವ ಭಾವನೆಯನ್ನು ಮೈಗೂಡಿಸಿಕೊಂಡು ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಪರಿಸರ ಎಂಬ ಧೋರಣೆ, ಮಾನೋಭಾವ ಇದ್ದರೆ ಮಾತ್ರ ಶುಚಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಇಂತಹ ಮನೋಭಾವವನ್ನು ಯುವಜನರು ಬೆಳೆಸಿಕೊಳ್ಳಬೇಕಿದೆ.