ಅನಿಲ್ ಕುಮಾರ್ ಎಸ್.ಎಸ್.
ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶಗಳಿಗೆ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಪ್ರಗತಿನಿಧಿ ಸಾಲ ವಿತರಣೆಗೆ ಅತ್ಯಂತ ಪ್ರಾಶಸ್ತö್ಯ ನೀಡಲಾಗುವುದೆಂದು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೆವು.
ತಾವು ಪಡೆದುಕೊಂಡ ಸಾಲದ ಮರುಪಾವತಿಯ ಎಲ್ಲಾ ವಿವರಗಳನ್ನು ‘ಮರುಪಾವತಿ ಚೀಟಿ’ಯ ಮೂಲಕ ಸದಸ್ಯರು ತಿಳಿದುಕೊಳ್ಳುತ್ತಾರೆ. ಪ್ರಗತಿನಿಧಿ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಮರುಪಾವತಿ ಚೀಟಿಯನ್ನು ಪಡೆದುಕೊಂಡು ತಾವು ಪ್ರತೀ ವಾರ ಕಟ್ಟಿದ ಮೊತ್ತವನ್ನು ಆ ಮರುಪಾವತಿ ಚೀಟಿಯ ಕೊನೆಯ ಕಾಲಂನಲ್ಲಿ ನಮೂದಿಸಿ ತಮ್ಮ ಮರುಪಾವತಿಯ ಲೆಕ್ಕಾಚಾರವನ್ನು ಅತ್ಯಂತ ನಿಖರತೆಯಿಂದ ನಿರ್ವಹಿಸುತ್ತಾರೆ. ಈ ‘ಮರುಪಾವತಿ ಚೀಟಿ’ ಪ್ರಕಾರ ಮೊತ್ತವನ್ನು ತಿಂಗಳಿಗೊಮ್ಮೆ ನೀಡುವ ಕಂಪ್ಯೂಟರೀಕೃತ ಮಾಸಿಕ ವರದಿಯಲ್ಲಿ ನಮೂದಿಸಿದ ಮೊತ್ತದೊಂದಿಗೆ ತಾಳೆ ಮಾಡಿಕೊಂಡು ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಪ್ರತೀ ವಾರ ಸದಸ್ಯರು ಮಾಡಿದ ಮರುಪಾವತಿಗೆ ಸದಸ್ಯವಾರು ಕಂಪ್ಯೂಟರೀಕೃತ ರಶೀದಿ ಸಿಗುವುದರಿಂದ ಪ್ರತೀ ವಾರವೂ ಸದಸ್ಯರು ಪರಿಶೀಲಿಸಬಹುದಾಗಿದೆ. ಹೀಗೆ ಅತ್ಯಂತ ಪಾರದರ್ಶಕ ವ್ಯವಸ್ಥೆಯಲ್ಲಿ ತಮ್ಮ ಲೆಕ್ಕಾಚಾರವನ್ನು ಇಟ್ಟುಕೊಳ್ಳಬಹುದಾಗಿದೆ.
ಸದಸ್ಯರು ಪಡೆದುಕೊಂಡ ಸಾಲದ ಮರುಪಾವತಿಗೆ ಸಂಘದಲ್ಲಿ ‘ವಾರದ ಮರುಪಾವತಿ’ಯ ಒಂದು ಉತ್ತಮ ವ್ಯವಸ್ಥೆ ಇದೆ. ವಾರದ ಮರುಪಾವತಿಯ ಬಹಳಷ್ಟು ಪ್ರಯೋಜನವು ಸಂಘದಿoದ ಸದಸ್ಯರಿಗೆ ಸಿಗುತ್ತಿದೆ. ಕಡಿತದ ಬಡ್ಡಿದರದ ವ್ಯವಸ್ಥೆಯಲ್ಲಿ ವಾರದ ಮರುಪಾವತಿ ಮಾಡುವುದರಿಂದ ಒಟ್ಟು ಕಟ್ಟಿದ ಬಡ್ಡಿಯ ಮೊತ್ತ ಕಡಿಮೆ ಆಗುತ್ತದೆ. ಸಣ್ಣ ಮೊತ್ತದ ವಾರದ ಕಂತುಗಳ ಮೂಲಕ ಸುಲಭವಾಗಿ ಕಟ್ಟಬಹುದಾಗಿದೆ. ವಾರದ ಸಭೆಗಳು ಸಂಘದ ಜೀವಾಳ ಆಗಿರುವುದರಿಂದ ಇದೇ ವಾರದ ಸಭೆಯಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಸುಲಭವಾಗಿ ಕೈಗೊಳ್ಳಬಹುದಾಗಿದೆ. ಹೀಗೆ ಹತ್ತು ಹಲವು ಪ್ರಯೋಜನಗಳಿವೆ. ಗ್ರಾಮಾಭಿವೃದ್ಧಿ ಯೋಜನೆಯ ವ್ಯವಸ್ಥೆಯಲ್ಲಿ ‘ವಸೂಲಾತಿ’ ಶಬ್ದಕ್ಕೆ ಪ್ರಾಶಸ್ತ್ಯವಿಲ್ಲ. ಬದಲಾಗಿ ಸ್ವಸಹಾಯ ಮಾದರಿಯಲ್ಲಿ ಉತ್ತಮ ‘ಮರುಪಾವತಿ’ ವ್ಯವಸ್ಥೆಗೆ ಪ್ರಾಶಸ್ತ್ಯವಿದೆ. ‘ಸ್ವಸಹಾಯ’ ಮಾದರಿಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವುದರ ಮೂಲಕ ಎಲ್ಲರು ಪ್ರಗತಿಯನ್ನು ಸಾಧಿಸುವುದು ಇಲ್ಲಿನ ಮೂಲಮಂತ್ರವಾಗಿದೆ. ಇದೇ ತತ್ವದ ಆಧಾರದಲ್ಲಿ ಒಂದು ಸಂಘದಲ್ಲಿ ಯಾವುದೇ ಸದಸ್ಯರಿಗೆ ಸಾಲ ಸೌಲಭ್ಯ ಬೇಕಾದರೂ ಉಳಿದ ಎಲ್ಲಾ ಸದಸ್ಯರು ಮರುಪಾವತಿಯ ಜವಾಬ್ದಾರಿಯನ್ನು ಹೊತ್ತುಕೊಂಡು, ಬ್ಯಾಂಕ್ ಸಂಘಕ್ಕೆ ನೀಡಿದ ಸಾಲದಿಂದ ಬೇಡಿಕೆ ಇಟ್ಟ ಸದಸ್ಯರಿಗೆ ಸಾಲವನ್ನು ದೊರಕಿಸಿಕೊಡಲಾಗುವುದು. ಅಂದರೆ ಯಾವುದೇ ಸದಸ್ಯರು ಸಂಘದಿoದ ಪಡೆಯುವ ಸಾಲಕ್ಕೆ ಉಳಿದ ಎಲ್ಲಾ ಸದಸ್ಯರು ಜವಾಬ್ದಾರರಾಗಿರುತ್ತಾರೆ. ಸಂಘಗಳಿಗೆ ಬ್ಯಾಂಕಿನಿoದ ಸಾಲ (ಕ್ಯಾಶ್ ಕ್ರೆಡಿಟ್) ಸೌಲಭ್ಯ ಪಡೆಯಲು ಬ್ಯಾಂಕಿನ ದಾಖಲೆಗೆ (ಲೋನ್ ಡಾಕ್ಯುಮೆಂಟ್ಸ್) ಎಲ್ಲಾ ಸದಸ್ಯರು ಸಹಿ ಹಾಕುತ್ತಾರೆ. ಕೆವೈಸಿ ಲಿಂಕ್ ಆಗುತ್ತದೆ. SHG inter-se document ಬ್ಯಾಂಕಿನ ಒಂದು ಪ್ರಮುಖ ದಾಖಲೆ ಆಗಿದ್ದು ಈ ದಾಖಲೆಯಲ್ಲಿ ಎಲ್ಲಾ ಸದಸ್ಯರು ಸಹಿ ಮಾಡುವುದರ ಮೂಲಕ ಸಂಘ ಬ್ಯಾಂಕಿನಿoದ ಪಡೆದುಕೊಂಡ ಸಾಲದ ಮರುಪಾವತಿಯ ಸಂಪೂರ್ಣ ಜವಾಬ್ದಾರಿ ಪ್ರತಿಯೊಬ್ಬ ಸದಸ್ಯರಿಗೆ ಆಗಿರುತ್ತದೆಂದು ಕಾನೂನಾತ್ಮಕವಾಗಿ ಬ್ಯಾಂಕಿನೊoದಿಗೆ ಮಾಡಿಕೊಂಡ ಒಂದು ಒಪ್ಪಂದ ಆಗಿರುತ್ತದೆ. ಈ ಒಪ್ಪಂದ ಹಾಗೂ ಇತರ ದಾಖಲೆಯ ಆಧಾರದ ಮೇಲೆ ಯಾವುದಾದರೂ ಸದಸ್ಯರು ಮರುಪಾವತಿ ಮಾಡದೇ ಇರುವಾಗ ಬ್ಯಾಂಕುಗಳು ಕಾನೂನಾತ್ಮಕವಾಗಿಯೂ ಪ್ರತಿಯೊಬ್ಬ ಸದಸ್ಯರ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ. ಯೋಜನೆಯ ವ್ಯವಸ್ಥೆಯಲ್ಲಿ ಇದುವರೆಗೆ ಅಂತಹ ಅವಕಾಶವನ್ನು ಬ್ಯಾಂಕುಗಳಿಗೆ ನೀಡಿಲ್ಲ. ಏಕೆಂದರೆ ಯೋಜನೆಯ ನಿರ್ವಹಣೆಗೆ ಉತ್ತಮ ಸಂಘಗಳ ಸದಸ್ಯರು ಅತ್ಯಂತ ಪ್ರಾಮಾಣಿಕವಾಗಿ, ಜವಾಬ್ದಾರಿಯಿಂದ, ಬದ್ಧತೆಯಿಂದ ಮರುಪಾವತಿ ಮಾಡುತ್ತಾರೆಂದು ಖಚಿತಪಡಿಸಲಾಗುತ್ತಿದೆ. ಯಾವುದಾದರೂ ಸದಸ್ಯರಿಗೆ ಸಮಸ್ಯೆ ಇದ್ದಾಗ ಇತರ ಸದಸ್ಯರು ಸಹಕಾರ ಮಾಡಿ ತಮ್ಮ ಸಂಘದಲ್ಲಿ ಕಂತು ಬಾಕಿ ಆಗದಂತೆ ಉತ್ತಮ ಗ್ರೇಡಿಂಗ್ನಲ್ಲಿಟ್ಟುಕೊಳ್ಳುತ್ತಾರೆ. ಒಂದು ಕುಟುಂಬದoತಿರುವ ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಉತ್ತಮವಾಗಿ ಮರುಪಾವತಿ ಕೈಗೊಳ್ಳಲಾಗುತ್ತದೆ. ಯಾವುದೇ ಸದಸ್ಯರಿಗೆ ಅನಿವಾರ್ಯವಾಗಿ ಒಂದು ವಾರದಲ್ಲಿ ಕಂತು ಕಟ್ಟಲು ಅಸಾಧ್ಯವಾದಲ್ಲಿ ಇತರ ಸದಸ್ಯರು ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಸೂಚಿಸುತ್ತಾರೆ. ಯಾವುದಾದರೂ ಅನಾರೋಗ್ಯಕ್ಕೆ ತುತ್ತಾಗಿ, ಕೆಲವು ತಿಂಗಳುಗಳ ಕಾಲ ದುಡಿಮೆಯನ್ನು ಮಾಡಲು ಸಾಧ್ಯವಾಗದೇ ಇದ್ದಲ್ಲಿ, ಆ ಸದಸ್ಯರು ತಮ್ಮ ಸಂಘದ ಇತರ ಎಲ್ಲಾ ಸದಸ್ಯರ ಅನುಮತಿಯೊಂದಿಗೆ ತಮ್ಮ ಸಾಲದ ಮರುಪಾವತಿಯನ್ನು ಮುಂದಿನ 3 ತಿಂಗಳವರೆಗೆ ಸಂಘದ ನಿರ್ಣಯದೊಂದಿಗೆ ಮುಂದೂಡಬಹುದಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಯೋಜನೆಯ ಈ ವ್ಯವಸ್ಥೆಯಲ್ಲಿ ಒತ್ತಡದ ವಸೂಲಾತಿ ಪ್ರಕ್ರಿಯೆಗಳಿಗೆ ಅವಕಾಶವಿಲ್ಲ. ಬದಲಾಗಿ ಸೌಹಾರ್ದಯುತವಾದ ಸ್ವಸಹಾಯ ಮಾದರಿಯಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಒಂದು ಉತ್ತಮ ಮರುಪಾವತಿ ವ್ಯವಸ್ಥೆಯನ್ನು ಹೊಂದಲಾಗಿದೆ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳೋಣ