ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ., ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.)
‘ಇನ್ನು ಗುರುವಾರಕ್ಕೆ ಕೇವಲ ಎರಡೇ ದಿನ ಬಾಕಿ’ ಎಂದು ಸಂಭ್ರಮದಿoದ ಶಾಂತಮ್ಮ ಬೀಗುತ್ತಿದ್ದರು. ಏಕೆಂದರೆ ನಾಡಿದ್ದು ಗುರುವಾರ ಸಂಘದ ವಾರದ ಸಭೆಗೆ ಶಾಂತಮ್ಮನೇ ಅಧ್ಯಕ್ಷೆ. ಹತ್ತು ಜನರ ಸರದಿಯಂತೆ ಎರಡುವರೆ ತಿಂಗಳಿನ ಹಿಂದೆ ತನ್ನ ಅಧ್ಯಕ್ಷತೆಯಲ್ಲಿ ನಡೆದ ವಾರದ ಸಭೆಯ ಸಂತೋಷವನ್ನು ನೆನಪಿಸಿಕೊಂಡರು.
ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಬಂದು ವೃತ್ತಾಕಾರದಲ್ಲಿ ಕುಳಿತುಕೊಳ್ಳುವುದು, ದೇವರ ಫೋಟೋ ಇಟ್ಟು, ದೀಪ ಹಚ್ಚಿ ಮಾತೃಶ್ರೀ ಹೇಮಾವತಿ ಅಮ್ಮನವರಿಂದ ರಚಿತವಾದ ಧ್ಯೇಯ ಗೀತೆಯನ್ನು ಸಾಮೂಹಿಕವಾಗಿ ಹೇಳಿದ್ದು, ಶಾಂತಮ್ಮನವರು ಅಧ್ಯಕ್ಷರೆಂದು ಗಿರಿಜಮ್ಮ ಸ್ವಾಗತದಲ್ಲಿ ಹೇಳಿದ್ದು, ಶಾಂತಮ್ಮನ ಅಧ್ಯಕ್ಷತೆಯಲ್ಲಿ ಅನೇಕ ವಿಷಯಗಳಲ್ಲಿ ನಡೆಸಿದ ಒಳ್ಳೆಯ ಚರ್ಚೆಗಳು, ಯೋಜನೆಯ ಕಾರ್ಯಕ್ರಮಗಳ ಸದ್ಬಳಕೆಯ ಚರ್ಚೆ. ಪಿ.ಆರ್.ಕೆ. ರಿನಿವಲ್ ಬಗ್ಗೆ ವಿಶೇಷ ಮಂಡನೆ, ಸದಸ್ಯೆ ಶ್ರೀಮತಿಯಕ್ಕನಿಗೆ ಒಂದು ಲಕ್ಷ ಪ್ರಗತಿನಿಧಿ ಬೇಡಿಕೆಯ ಬಗ್ಗೆ ಚರ್ಚಿಸಿದ್ದು, ಜಲಜನ ಗಂಡ ರಾಮಣ್ಣನನ್ನು ಮುಂದಿನ ತಿಂಗಳು ಮದ್ಯವರ್ಜನ ಶಿಬಿರಕ್ಕೆ ಸೇರಿಸುವ ಬಗ್ಗೆ ಹೀಗೆ ಅನೇಕ ವಿಷಯಗಳ ಬಗೆಗಿನ ಚರ್ಚೆ ಮಾಡಿದ್ದೆಲ್ಲವೂ ನೆನಪಿಗೆ ಬಂತು. ಎಲ್ಲಾ ಸದಸ್ಯರು ಚರ್ಚೆಯಲ್ಲಿ ತಲ್ಲೀನರಾಗಿದ್ದು ಇನ್ನು ಒಂದಿಷ್ಟು ಚರ್ಚೆ ಬೇಕೆನಿಸುತ್ತಿದ್ದರೂ ಆಗಲೇ ಅರ್ಧ ಗoಟೆಯಾಗಿದ್ದರಿoದ ನಿರ್ಣಯ ಪುಸ್ತಕವನ್ನು ಸೇವಾಪ್ರತಿನಿಧಿಯವರ ಉಪಸ್ಥಿತಿಯಲ್ಲಿ ಸುಮಕ್ಕ ಬರೆದರು.
ಎಲ್ಲಾ ಸದಸ್ಯರ ವಾರದ ಹಣವನ್ನು ಸಂಗ್ರಹಣೆ ಮಾಡಿ ನಿರ್ಣಯ ಪುಸ್ತಕದಲ್ಲಿ ನಮೂದಿಸಿ ಹಣ, ಪುಸ್ತಕ, ಸಂಘದ ಕಾರ್ಡ್ ಎಲ್ಲವನ್ನೂ ಶಾಂತಮ್ಮನಿಗೆ ಸಭೆಯಲ್ಲಿ ಒಪ್ಪಿಸಿದ್ದನ್ನು ನೆನಪಿಸಿದಾಗಂತೂ ಒಮ್ಮೆ ರೋಮಾಂಚನವಾಯಿತು. ತನ್ನ ಅಧ್ಯಕ್ಷೀಯ ಭಾಷಣದ ಬಗ್ಗೆ ಶಾಂತಮ್ಮನಿಗೆ ಸದಸ್ಯರಾದ ವಾರಿಜಮ್ಮ, ಶಕುಂತಲಾ, ಆ ದಿನ ಫೋನ್ ಮಾಡಿ ‘ಬಹಳ ಚೆನ್ನಾಗಿ ಮಾತನಾಡಿದ್ದೀಯ’ ಎಂದು ಬಹುಪರಾಕ್ ನೀಡಿದಾಗ ಆಕಾಶಕ್ಕೆ ಮೂರೆ ಗೇಣು. ಮರುದಿನ ಸಮಯಕ್ಕೆ ಸರಿಯಾಗಿ ಯೋಜನೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಹೋಗಿ ಸಂಘದ ಆ ಮೊತ್ತವನ್ನು ಪಾವತಿಸಿ ರಶೀದಿ ಪಡೆದು ಮುಂದಿನ ವಾರದ ಸಭೆಯಲ್ಲಿ ಅವುಗಳನ್ನು ಸಲ್ಲಿಸಿ ಆ ವಾರದ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಶಾಂತಮ್ಮನಿಗೆ ಎಲ್ಲಿಲ್ಲದ ಸಾರ್ಥಕತೆಯನ್ನು ನೀಡಿತ್ತು. ಪುನಃ ಅಂತಹ ಅದ್ಭುತ ಕ್ಷಣಗಳು ಇನ್ನೆರಡೆ ದಿನಗಳಲ್ಲಿ ಶಾಂತಮ್ಮನ ಪಾಲಿಗೆ ಸರದಿಯಲ್ಲಿತ್ತು.
ವಾರವಿಡೀ ಮನೆಗೆಲಸ, ಸಂಸಾರ ಇತ್ಯಾದಿಗಳಿಂದ ದಣಿದ ಜೀವಕ್ಕೆ ವಾರದ ಸಭೆ ಒಂದು ಚಾರ್ಜಿಂಗ್ ಸ್ಟೇಷನ್. ಅಷ್ಟೇ ಅಲ್ಲ ಶಾಂತಮ್ಮನoತಹ ನಿರಕ್ಷರಕುಕ್ಷಿಗೂ ಅಧ್ಯಕ್ಷೆಗಿರಿ ಕೊಡುವ ವೇದಿಕೆ ಸಂಘದ ವಾರದ ಸಭೆಯಾಗಿತ್ತು. ಸಂಘ ಸೇರುವ ಮೊದಲು ಕೇವಲ ಮನೆ ಕೆಲಸಕ್ಕೆ ಸೀಮಿತವಾಗಿದ್ದ ಶಾಂತಮ್ಮ, ಈಗ ತನ್ನ ಸಂಸಾರಕ್ಕೆ ಮಾರ್ಗದರ್ಶಿ. ಶಾಲೆಯ ಮೆಟ್ಟಿಲೆ ಹತ್ತದಿದ್ದರೂ, ಸಂಘದ ವಾರದ ಸಭೆ ಶಾಂತಮ್ಮನಿಗೆ ಬದುಕಿನ ಶಿಕ್ಷಣ, ವ್ಯವಹಾರ ಜ್ಞಾನಗಳನ್ನು ನೀಡಿತ್ತು. ಹಿಂದೆ ಸರ್ಕಾರಿ ಕಚೇರಿಗಳಿಗೆ ಗಂಡನಿಗೆ ಹೋಗಬೇಕಾದಲ್ಲಿ ಒಳ್ಳೆಯ ಬಟ್ಟೆಯನ್ನು ತೊಳೆದು, ಇಸ್ತ್ರಿ ಹಾಕಿ ಸಮಯಕ್ಕೆ ಸರಿಯಾಗಿ ಸಿದ್ಧಪಡಿಸುವುದಕ್ಕೆ ಮಾತ್ರ ಬೇಕಾಗಿದ್ದ ಶಾಂತಮ್ಮ, ಇಂದು ಅದೇ ಕಛೇರಿಗೂ, ಬ್ಯಾಂಕಿಗೂ ಹೋಗುವಾಗ ತನ್ನ ಗಂಡನಿಗೆ ರೈಟ್ ಹ್ಯಾಂಡ್ ಆಗಿ ಹೋಗುತ್ತಿದ್ದಾಳೆ. ಏಕೆಂದರೆ ಅವನಿಗಿಂತ ಅಧಿಕಾರಿಗಳೊಂದಿಗೆ ಶಾಂತಮ್ಮ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡು ಮಾತನಾಡಿ ಆ ಕೆಲಸಗಳು ಸುಸೂತ್ರವಾಗಿ ಆಗುವಂತೆ ಮಾಡುತ್ತಿದ್ದಳು. ಇದೆಲ್ಲವೂ ಸಂಘದ ವಾರದ ಸಭೆಯ ಮಹಿಮೆ.
ವಾರದ ಸಭೆಗಳು ಸಂಘದ ಗುಣಮಟ್ಟದ ಜೀವಾಳವಾಗಿದೆ. ನಾವು ಯೋಜನೆಯಲ್ಲಿ ಪರಿಶೀಲಿಸಿದಾಗ ಅತ್ಯುತ್ತಮ ಶ್ರೇಣಿಯಲ್ಲಿರುವ ಎಲ್ಲಾ ಸಂಘಗಳ ಮೂಲ ಮಂತ್ರ ವರ್ಷದಲ್ಲಿ 52 ವಾರವೂ ತಪ್ಪದೇ ವಾರದ ಸಭೆ ಮಾಡುವುದಾಗಿದೆ. ವಾರದ ಸಭೆಯಿಂದಾಗಿ ಸದಸ್ಯರು ಒಬ್ಬರನ್ನು ಒಬ್ಬರು ಅರ್ಥೈಸಿಕೊಳ್ಳುತ್ತಾರೆ, ಆತ್ಮೀಯತೆ ಬೆಳೆಯುತ್ತದೆ. ಇದು ಸದಸ್ಯ ಹಾಗೂ ಸಂಘದ ಭದ್ರತೆಯನ್ನು ಬೆಸೆಯುತ್ತದೆ. ಸಮಯಕ್ಕೆ ಸರಿಯಾಗಿ ಸಭೆ ಸೇರುವುದು, ಶಿಸ್ತನ್ನು ಕಲಿಸಿದರೆ, ಸಭೆಯಲ್ಲಿ ಚರ್ಚೆಯಾಗುವ ಅನೇಕ ವಿಷಯಗಳು ಬದುಕಿನ ಶಿಕ್ಷಣ ಹಾಗೂ ವ್ಯವಹಾರದ ಜ್ಞಾನವನ್ನು ಕಲಿಸುತ್ತದೆ. ಊರಿನ ಆಗುಹೋಗುಗಳಲ್ಲದೇ, ದೇಶದ ಆಗುಹೋಗುಗಳೂ ತಿಳಿಯುತ್ತದೆ. ಸೇವಾಪ್ರತಿನಿಧಿಗಳು ಪ್ರತಿ ವಾರ ಸಭೆಗೆ ಭೇಟಿಯಲ್ಲಿ ಯೋಜನೆಯ ಏನಾದರೂ ಹೊಸ ವಿಷಯಗಳನ್ನು ಅಥವಾ ಕಾರ್ಯಕ್ರಮಗಳನ್ನು ಹೊತ್ತು ತರುತ್ತಾರೆ. ಮೇಲ್ವಿಚಾರಕರು ಬಂದಾಗ ವಿಷಯಗಳ, ಮಾಹಿತಿಗಳ ಹಬ್ಬವೇ ಆಗುತ್ತಿತ್ತು. ಉಳಿತಾಯ, ಪ್ರಗತಿನಿಧಿ ಪಡೆದುಕೊಳ್ಳುವುದು, ವಾರದ ಸಭೆಯಲ್ಲಿ ಸಮರ್ಪಕ ಮರುಪಾವತಿಯು ಪರಿಶೀಲನೆಯೊಂದಿಗೆ ಸಂಗ್ರಹವಾಗುವುದು, ಎಲ್ಲವೂ ವ್ಯವಹಾರ ಜ್ಞಾನ ಹಾಗೂ ಆರ್ಥಿಕ ಶಿಸ್ತನ್ನು ಕಲಿಸಿದೆ. ಯೋಜನೆಯ ಅನೇಕ ಸಮುದಾಯಭಿವೃದ್ಧಿ ಕಾರ್ಯಕ್ರಮಗಳು, ಎಲ್ಲಾ ವಿಮಾ ಯೋಜನೆಗಳು, ಸಿ.ಎಸ್.ಸಿ. ಮೂಲಕ ಸರ್ಕಾರಿ ಸೇವೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳು ವಾರದ ಸಭೆಯಿಂದ ತಿಳಿಯುವುದು. ಪ್ರತಿಯೊಬ್ಬರು ಸರದಿಯಂತೆ ಸಭೆಯ ಅಧ್ಯಕ್ಷರಾಗುವುದರಿಂದ ಎಲ್ಲರಿಗೂ ಮಾತನಾಡುವ ಹಾಗೂ ನಾಯಕತ್ವದ ಗುಣಗಳು ಬರುತ್ತದೆ. ಒಟ್ಟಿನಲ್ಲಿ ವಾರದ ಸಭೆ ಸದಸ್ಯರ ಹಾಗೂ ಸಂಘದ ಪ್ರಬುದ್ಧತೆಯನ್ನು ಉಳಿಸಿ ಬೆಳೆಸುವ ದೀಪವಾಗಿದೆ. ಕೋವಿಡ್‌ನ ಲಾಕ್‌ಡೌನ್‌ನ ಅನುಭವದಿಂದಾಗಿಯೆನೊ ಯಾಕೋ ಕೆಲವು ಸಂಘಗಳು ವಾರದ ಸಭೆಗಳಿಗೆ ಮಧ್ಯೆ ಮಧ್ಯೆ ಕೋಕ್‌ನೀಡುತ್ತಿರುವುದನ್ನು ಗಮನಿಸಲಾಗಿದೆ. ಇದು ಯಾವ ಕಾರಣಕ್ಕೂ ಒಳ್ಳೆಯದಲ್ಲ. ಪೂಜ್ಯ ಶ್ರೀ ಹೆಗ್ಗಡೆಯವರು ಪ್ರತಿವಾರವೂ ಸಂಘಗಳು ವಾರದ ಸಭೆಯನ್ನು ನಡೆಸಿ ನಿರಂತರ ಅಭಿವೃದ್ಧಿಹೊಂದಬೇಕೆನ್ನುವ ಆಶಯವನ್ನು ಯಾವಾಗಲೂ ವ್ಯಕ್ತಪಡಿಸುತ್ತಾರೆ. ಪೂಜ್ಯರ ಮಾರ್ಗದರ್ಶನದಲ್ಲಿಯೇ ನಡೆಯುವ ನಾವೆಲ್ಲರೂ ನಮ್ಮ ಹಾಗೂ ಸಂಘಗಳ ಶ್ರೇಯೋಭ್ಯುದಯಕ್ಕೆ ಚಾಚು ತಪ್ಪದೇ ವಾರದ ಸಭೆಯನ್ನು ಎಲ್ಲಾ ಸದಸ್ಯರ ಹಾಜರಾತಿಯೊಂದಿಗೆ ಕಡ್ಡಾಯವಾಗಿ ಮಾಡೋಣ.