‘ಹಿತ್ತಲ ಗಿಡ ಮದ್ದಲ್ಲ’ ಆದರೆ ಅಲ್ಲಿ ‘ತರಕಾರಿ’ಬೆಳೆಯಬಹುದಲ್ಲವೇ?

ಶ್ರೀ ಅನಿಲ್ ಕುಮಾರ್ ಎಸ್.ಎಸ್.

ರಾಮಣ್ಣ ಕೆಲಸ ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿರುವಾಗ ಹೆಂಡತಿ ತರಕಾರಿ ತರಲು ಹೇಳಿದ್ದು ನೆನಪಾಯಿತು. ಮೂರು ನಾಲ್ಕು ದಿನಕ್ಕಾಗುವಷ್ಟು ಇರಲಿ ಎಂದು ಕೆಲವು ತರಕಾರಿಗಳನ್ನು ಸ್ವಲ್ಪ, ಸ್ವಲ್ಪ ತೆಗೆದುಕೊಂಡರು. ಅಂಗಡಿಯ ಭೀಮಣ್ಣ ರೂ. 280 ಎಂದು ಚೀಟಿಯನ್ನು ಕೊಟ್ಟರು. ಹುಬ್ಬೇರಿಸಿದ ರಾಮಣ್ಣ ತರಕಾರಿಯ ಬೆಲೆ ಗಗನಕ್ಕೇರಿದೆ ಎಂದು ಗೊಣವಿಗೊಂಡನು. ರಾಮಣ್ಣನ ಮಾತಿನ ಒರಸೆ ಅರ್ಥ ಮಾಡಿಕೊಂಡ ಭೀಮಣ್ಣ, ತರಕಾರಿ ಬೆಲೆಯನ್ನು ಸಮರ್ಥಿಸಿಕೊಳ್ಳಲು ಶುರು ಮಾಡಿದ. ಒಂದೊoದು ತರಕಾರಿಯ ಹೆಸರಿನೊಂದಿಗೆ ಅವುಗಳನ್ನು ಪೂರೈಕೆ ಮಾಡುವ ದೂರದ ಜಿಲ್ಲೆಗಳ ಹೆಸರುಗಳನ್ನು ಹೇಳತೊಡಗಿದ. ಈ ತರಕಾರಿಗಳು 300 – 400 ಕಿಲೋ ಮೀಟರ್ ದೂರದ ಊರಿನಿಂದ ಬರುತ್ತಿದೆ ಎಂದು ತಿಳಿದ ರಾಮಣ್ಣ ದಿಗ್ಭçಮೆಗೊಂಡನು. ದಲ್ಲಾಳಿಗಳಿಂದ ದಲ್ಲಾಳಿಗಳಿಗೆ ಕೈ ಬದಲಾಗುತ್ತಾ, ಅನೇಕ ಲೋಡ್-ಅನ್‌ಲೋಡ್‌ನೊಂದಿಗೆ ಇಲ್ಲಿಗೆ ಬರುವಾಗ ಆ ತರಕಾರಿಗೆ ಜೀವವೇ ಹೋಗಿರುತ್ತದೆ. ಇನ್ನು ಅವರೆಲ್ಲರ ಕಮಿಷನ್, ಹಮಾಲಿ, ವೇಸ್ಟೇಜ್, ಸಾಗಾಟ ವೆಚ್ಚಗಳು ಸೇರಿ ಬಾಡಿ ಹೋದ ತರಕಾರಿ ಬೆಲೆ ಕೆ.ಜಿ.ಗೆ ಅರವತ್ತೋ, ಎಪ್ಪತ್ತೋ ಆಗುತ್ತದೆ. ನಮ್ಮ ದುಡಿಮೆಯಲ್ಲಿ ತರಕಾರಿಗೆ ಇಷ್ಟು ಕೊಟ್ರೆ, ಇನ್ನು ಉಳಿದಿದ್ದಕ್ಕೆ ಏನು ಮಾಡೋದು ಎಂದು ಯೋಚಿಸುತ್ತಾ ಇದ್ದ ರಾಮಣ್ಣನಿಗೆ ತಾನು ಚಿಕ್ಕವನಿದ್ದಾಗ ಅಮ್ಮ ಮನೆಯ ಹಿತ್ತಲಿನಿಂದ ತಾಜಾ ತರಕಾರಿಗಳನ್ನು ಆಗ ತಾನೇ ಕೊಯ್ದು ತರುತ್ತಿದ್ದ ದೃಶ್ಯ ಕಣ್ಣೆದುರಿಗೆ ಬಂತು. ಇಂದು 300 ಕಿಲೋ ಮೀಟರ್ ದೂರದಿಂದ ಬರುವ ತರಕಾರಿಗಳು ಅಂದು 30 ಹೆಜ್ಜೆಗಳಲ್ಲಿ ಮನೆಯ ಹಿತ್ತಲಿನಲ್ಲೇ ಸಿಗುತ್ತಿತ್ತು. ಕೊಯ್ದ ವಾರದ ನಂತರ ತರಕಾರಿಗಳು ಇಂದು ಕೈ ಸೇರಿದರೆ ಅಂದು ಆಗ ತಾನೇ ಗಿಡದಿಂದ ತರಬಹುದಿತ್ತು. ರುಚಿಯೂ, ಸತ್ವವೂ ಇಲ್ಲದ ತರಕಾರಿಗಳಿಗೆ ಇಂದು ದುಬಾರಿ ಬೆಲೆ ತೆರಬೇಕಾದರೆ, ಅಂದು ಒಂದು ರೂಪಾಯಿಯನ್ನೂ ಕೊಡಬೇಕಾಗಿರಲಿಲ್ಲ. ಮನೆಯಲ್ಲೇ ಉಪಯೋಗಿಸಿದ ತರಕಾರಿಗಳಿಂದ ಆಯ್ದ ಬೀಜಗಳನ್ನು ಬಿತ್ತಿ ವಿವಿಧ ತರಕಾರಿಗಳನ್ನು ಬೆಳೆಯುವುದು ಅಂದು ಸರ್ವೇ ಸಾಮಾನ್ಯವಾಗಿತ್ತು. ಜೊತೆಗೆ ಸೊಪ್ಪುಗಳನ್ನು ಕೂಡಾ. ಕನಿಷ್ಠ ಆಲಸಂಡೆ, ತೊಂಡೆಕಾಯಿ, ಬಸಳೆ ಚಪ್ಪರಗಳು ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ಇರುತ್ತಿತ್ತು. ಹಾಗೆಯೇ 365 ದಿನವೂ ಆ ಚಪ್ಪರಗಳು ತಾಜಾ ತರಕಾರಿಗಳನ್ನು ಕೊಡುತ್ತಿದ್ದವು. ಹಾಗೆಯೇ ಹಿತ್ತಲಿನಲ್ಲಿ ಬೆಂಡೆಕಾಯಿ, ಹೀರೆಕಾಯಿ, ಸೋರೆಕಾಯಿ, ಬದನೆ, ಕುಂಬಳಕಾಯಿ, ಮೆಣಸು, ಸೌತೆಕಾಯಿ ಇತ್ಯಾದಿಗಳನ್ನು ಬೆಳೆಯುತ್ತಿದ್ದರು. ಜೊತೆಗೆ ಹರವೆ ಸೊಪ್ಪು, ಕೊತ್ತಂಬರಿ ಸೊಪ್ಪುಗಳನ್ನು ಸ್ವಲ್ಪ ಬೆಳೆಯುತ್ತಿದ್ದರು, ನುಗ್ಗೆ, ಬೇವು, ಪಪ್ಪಾಯಿಗಳ ಕನಿಷ್ಠ ಒಂದೊAದಾದರೂ ಮರಗಳು ಇರುತ್ತಿದ್ದವು. ವಾರದ ಪ್ರತಿ ದಿನವೂ ವಿವಿಧ ರುಚಿಕರವಾದ ತರಕಾರಿಗಳನ್ನು ತಿನ್ನುತ್ತಿದ್ದರು. ಎಲ್ಲಾ ವಿಟಮಿನ್‌ಗಳು, ಪೌಷ್ಠಿಕಾಂಶಗಳಿAದ ಸಮೃದ್ಧವಾದ ತಾಜಾ ತರಕಾರಿಗಳು ಸದೃಢ ಆರೋಗ್ಯವನ್ನು ಮನೆ ಮಂದಿಗೆ ಮುಖ್ಯವಾಗಿ ಮಕ್ಕಳಿಗೂ ನೀಡುತ್ತಿತ್ತು. ಪಕ್ಕದ ಮನೆಯ ಬೆಂಡೆಕಾಯಿ ನಮ್ಮನೆಗೆ ಬರುವುದು, ನಮ್ಮನೆ ಹೀರೆಕಾಯಿ ಅವರ ಮನೆಗೆ ಹೋಗುವುದು ಇಬ್ಬರಿಗೂ ಬಹಳ ಖುಷಿಕೊಡುತ್ತಿತ್ತು. ಜೊತೆಗೆ ನೆರೆಕರೆಯ ಅನ್ಯೋನ್ಯತೆ ಸರಪಳಿಯಲ್ಲಿ ಅದು ಕೂಡ ಒಂದು ಕೊಂಡಿಯಾಗಿತ್ತು. ಅಂದು ಆರ್ಥಿಕ ಬಡತನವಿದ್ದರೂ ತರಕಾರಿಗಳಿಗೆ ಬಡತನ ಇರಲಿಲ್ಲ. ಸಾಕಷ್ಟು ತರಕಾರಿಗಳು ಮನೆಯ ಹಿತ್ತಲಲ್ಲಿ ಸಿಗುತ್ತಿತ್ತು.
ಇಂದು ಹಳ್ಳಿಯಲ್ಲಿಯೂ ಒಂದು ತರಕಾರಿ ಅಂಗಡಿ ಅಗತ್ಯವಾಗಿ ಬೇಕಾಗಿದೆ. ಆ ಅಂಗಡಿಗೆ ದೂರದ ಪಟ್ಟಣದಿಂದ ತಾಜಾವೂ ಅಲ್ಲದ, ಅಗ್ಗವೂ ಅಲ್ಲದ ತರಕಾರಿ ಸರಬರಾಜು ಆಗಬೇಕಾಗಿದೆ. ಇದು ಖಂಡಿತ ಉತ್ತಮ ಆರ್ಥಿಕ ವ್ಯವಸ್ಥೆ ಅಲ್ಲ್ಲ. ಪಟ್ಟಣದ ಮನೆಗಳಲ್ಲೇನೂ ಸ್ಥಳದ ಕೊರತೆಯಿದೆ. ಆದರೆ ಹಳ್ಳಿಯ ಮನೆಗಳಲ್ಲಿ ಒಂದು ಸಣ್ಣ ಕೈ ತೋಟಕ್ಕೆ ಖಂಡಿತ ಸ್ಥಳ ಇದೆ. ‘ನಮ್ಮ ಮನೆಯ ಹಿತ್ತಲಗಿಡ ಮದ್ದಲ್ಲ’ ಆದರೆ ತರಕಾರಿಗಿಡವಂತಾದರೂ ಆಗಬಹುದಲ್ಲವೇ? ಮನೆಗೆ ಆಗುವಷ್ಟು ತರಕಾರಿ ಬೆಳೆಯುವಷ್ಟು ನೀರಿನ ವ್ಯವಸ್ಥೆಯೂ ಇದೆ. ಉತ್ತಮ ತರಕಾರಿ ಬೀಜಗಳು ಇಂದು ಎಲ್ಲೆಡೆಯೂ ಲಭ್ಯ, ಆನ್‌ಲೈನ್‌ನಲ್ಲೂ ಸಿಗುತ್ತದೆ. ಮನೆಯಲ್ಲಿ ಸಿಗುವ ಹಸಿ ತ್ಯಾಜ್ಯಗಳೇ ಇವುಗಳಿಗೆ ಗೊಬ್ಬರ. ತರಕಾರಿಗಳ ರಕ್ಷಣೆಗೆ ದುಬಾರಿಯಲ್ಲದ ‘ನೆಟ್’ ಕೂಡಾ ಇಂದು ಸಿಗುತ್ತಿದೆ. ಎಷ್ಟೊ ಮನೆಗಳಲ್ಲಿ ಇಂದು ೧೦೦-೨೦೦ ಪಾಟ್‌ಗಳಲ್ಲಿ ಹೂವಿನ ಗಿಡ ಬೆಳೆಸುತ್ತಿದ್ದಾರೆ. ಆದರೆ ಒಂದೂ ತರಕಾರಿ ಗಿಡಗಳು ಇರುವುದಿಲ್ಲ. ಹೂವಿನ ಗಿಡ ಬೇಕು ಹಾಗೆಯೇ ಅದಕ್ಕೆ ತೋರುವ ಕಾಳಜಿ ಸ್ವಲ್ಪ ತರಕಾರಿ ಬೆಳೆಯುವುದಕ್ಕೆ ನೀಡಿದ್ದಲ್ಲಿ ನಮ್ಮ ಸದೃಢ ಆರೋಗ್ಯಕ್ಕೆ ಬೇಕಾಗಿರುವ ಸ್ವಾದಿಷ್ಟ ತರಕಾರಿಗಳು ನಮಗೆ ಸಿಗುತ್ತವೆ. ದೂರದ ಮಾರುಕಟ್ಟೆಯಿಂದ ಬರುವ ತರಕಾರಿಗಳನ್ನು ಬೆಳೆಗಾರರು ವಾಣಿಜ್ಯ ಉದ್ದೇಶಕ್ಕೆ ಬೃಹತ್ ಗಾತ್ರದಲ್ಲಿ ಬೆಳೆಸುವುದರಿಂದ ಬಹಳಷ್ಟು ರಾಸಾಯನಿಕ ಔಷಧಿಗಳನ್ನು ಸಿಂಪಡಿಸುತ್ತಾರೆ. ಕೃತಕವಾಗಿ ತಾಜಾವಾಗಿಡಲು ಅನೇಕ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಮಾರಕ, ನೀವು ಮನೆಯಲ್ಲಿ ಬಳಸಬಹುದಾದ ತರಕಾರಿಗಳು ಒಂದು ರೀತಿಯ ಸಾವಯವ ತರಕಾರಿಯಾಗಿರುತ್ತದೆ. ಇಂದಿನ ಮಕ್ಕಳ ಆರೋಗ್ಯಕ್ಕೆ ಇದು ಬಹುಮುಖ್ಯವಾಗಿ ಬೇಕಾಗಿರುತ್ತದೆ. ಹೀಗೆ ತರಕಾರಿಯನ್ನು ಬೆಳೆಸುವುದರಿಂದ ಕೇವಲ ಆರ್ಥಿಕ ಪ್ರಯೋಜನ ಅಷ್ಟೇ ಅಲ್ಲ ಜೊತೆಗೆ ಆ ಕೆಲಸದಲ್ಲಿ ನೆಮ್ಮದಿಯೂ ಸಿಗುತ್ತದೆ. ಮನೆಯ ಪರಿಸರವು ಅಹ್ಲಾದಕರವಾಗಿರುತ್ತದೆ.
ನಮ್ಮ ಸ್ವ-ಸಹಾಯ ಸಂಘಗಳ ಸಮಸ್ತ ಸದಸ್ಯರು ತಮ್ಮ ಮನೆಗೆ ಬೇಕಾಗುವಷ್ಟು ತರಕಾರಿಗಳನ್ನು ತಾವೇ ಬೆಳೆಯುವ ಸಂಕಲ್ಪ ಮಾಡಬೇಕಾಗಿದೆೆ. ಶ್ರೀ ಹೆಗ್ಗಡೆಯವರು ನಮ್ಮ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಕೃಷಿ ಅಭಿವೃದ್ಧಿಗಾಗಿ ಯೋಜನೆಯ ಮೂಲಕ ಎಲ್ಲಾ ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷಿ ಮೇಲ್ವಿಚಾರಕರುಗಳನ್ನು ನೇಮಿಸಿದ್ದಾರೆ. ಅವರು ನಿಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಮ್ಮ ರಾಜ್ಯದಲ್ಲಿ ಇನ್ನು ಮುಂದೆ ಹಳ್ಳಿಯ ಪ್ರತಿ ಮನೆಯಲ್ಲಿಯೂ ತರಕಾರಿ ಬೆಳೆಯುವ ಸಂಸ್ಕೃತಿಗೆ ಮರಳಿ ಬರುವಂತಾಗಲಿ, ಮುಂದೆ ದೇಶಕ್ಕೆ ಅದು ಮಾದರಿಯಾಗಲಿ.

Facebook
Twitter
WhatsApp
LinkedIn
Telegram

Leave a Reply

Your email address will not be published. Required fields are marked *