ಮೂರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಆ ದಿನಗಳಲ್ಲಿ ನಾಲ್ಕು ಮಕ್ಕಳನ್ನು ಓದಿಸುವುದೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂತೂ ದಿವಾಕರ್‌ರವರು ಆರನೇ ತರಗತಿಯವರೆಗೆ ಶಾಲಾ ಮೆಟ್ಟಿಲನ್ನು ಹತ್ತಿದರು. ನಂತರ ಶಿವಮೊಗ್ಗ, ಬೆಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡರು. ಇದರಿಂದ ಕೈ ಸೇರುತ್ತಿದ್ದ ಸಂಬಳ ಕಡಿಮೆಯೆಂದೆನಿಸಿದಾಗ ಮತ್ತೆ ತನ್ನ ಹುಟ್ಟೂರು ಹೊಸನಗರ ತಾಲೂಕಿನ ವಡಾಹೊಸಳ್ಳಿಗೆ ಬಂದು ಕಾಡಿನಲ್ಲಿ ಕದ್ದು ಮರ ಕತ್ತರಿಸುವ ಕೆಲಸದಲ್ಲಿ ತೊಡಗಿದರು.
ಸಣ್ಣ ವಯಸ್ಸಿನಲ್ಲೆ ಮದುವೆ : ಇಪ್ಪತ್ತೊಂದು ವರ್ಷ ತುಂಬುತ್ತಿದ್ದ0ತೆ ದಿವಾಕರ್‌ರವರಿಗೆ ಮನೆಮಂದಿ ಸೇರಿ ಮದುವೆಯನ್ನು ಮಾಡಿಸಿಬಿಟ್ಟರು. ಎರಡು ವರ್ಷಗಳ ನಂತರ ತನ್ನ ಪತ್ನಿ ಜೊತೆ ಬೇರೆ ಗುಡಿಸಲೊಂದನ್ನು ಕಟ್ಟಿಕೊಂಡು ಅಲ್ಲಿ ಸಂಸಾರ ಸಾಗಿಸತೊಡಗಿದರು.
ಮದ್ಯ ವ್ಯಸನಿಯನ್ನಾಗಿಸಿದ ಸಹವಾಸ ದೋಷ
ಮರ ಕತ್ತರಿಸುವ ಕೆಲಸದಲ್ಲಿ ಜೊತೆಯಾಗುತ್ತಿದ್ದ ಮಿತ್ರರೆಲ್ಲರೂ ಮದ್ಯಪಾನ ಮಾಡುತ್ತಿದ್ದರು. ಒಂದು ದಿನ ಅವರ ಒತ್ತಾಯಕ್ಕೆ ದಿವಾಕರ್ ಕೂಡಾ ಮದ್ಯದ ರುಚಿ ನೋಡಿದರು. ಒಂಚೂರು ಕುಡಿದಾಗ ತನ್ನ ಧೈರ್ಯ, ಶಕ್ತಿ ಎಲ್ಲವೂ ಇಮ್ಮಡಿಗೊಂಡಿತು. ಈ ಖುಷಿಯಿಂದ ಮದ್ಯಪಾನ ಮಾಡುವ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಮರ ಕತ್ತರಿಸುವ ಕೆಲಸದೊಂದಿಗೆ ವಿವಾಹ ಸಂಬoಧಗಳನ್ನು ಹುಡುಕಿಕೊಡುವ ದಲ್ಲಾಳಿ ಕೆಲಸವನ್ನು ಮಾಡುತ್ತಿದ್ದರು. ಇದರಿಂದ ಬಂದ ಹಣವು ಬಾಟಲಿ ಪಾಲಾಗುತ್ತಿತ್ತು.
ಕಳ್ಳಬಟ್ಟಿ ತಯಾರಿ : ದಿವಾಕರ್‌ರವರು ಕಬ್ಬು ಬೆಳೆಯುತ್ತಿದ್ದರು. ಬೆಲ್ಲ ತಯಾರಿಸಿ ಗಾಣದಲ್ಲಿ ಉಳಿಯುವ ಕಬ್ಬಿನ ಜಲ್ಲೆಯನ್ನು ಉಪಯೋಗಿಸಿ ಕಳ್ಳಬಟ್ಟಿ ತಯಾರಿಸತೊಡಗಿದರು. ಇದು ಸಾಲದಾದಾಗ ಊರಿನ ಪ್ರತಿ ಮನೆ ಮನೆಗಳಲ್ಲಿ ದೊರೆಯುತ್ತಿದ್ದ ಕಳ್ಳಬಟ್ಟಿಯ ಮೊರೆ ಹೋದರು. ನಿತ್ಯ ದುಡಿಯುತ್ತಿದ್ದ ರೂ. 600 ಮಾತ್ರ ಗೆಳೆಯರಿಗೆಲ್ಲ ಕುಡಿಸಿ ಖಾಲಿಯಾಗುತ್ತಿತ್ತು. ಹೆಂಡತಿಯ ಬುದ್ಧಿವಾದದ ಮಾತನ್ನು ಕೇಳುವ ಸ್ಥಿತಿಯಲ್ಲಂತೂ ಇವರಿರಲಿಲ್ಲ. ಅಣ್ಣ-ತಮ್ಮಂದಿರು, ತಂದೆ-ತಾಯಿ ಜೊತೆಗಿರದ ಕಾರಣ ಎಷ್ಟು ಕುಡಿದರೂ ಯಾವುದೇ ಭಯವಿರಲಿಲ್ಲ.
ಅಪ್ಪ ನೀ ಶಾಲೆಗೆ ಬರಬೇಡ
ತನ್ನ ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಒಂದು ದಿನ ಮಗಳು ಏಳನೇ ತರಗತಿಯಲ್ಲಿ ಅಂಕಪಟ್ಟಿಗೆ ಸಹಿ ಹಾಕಲು ಶಾಲೆಗೆ ಕರೆದಳು. ಕಂಠಪೂರ್ತಿ ಕುಡಿದು ಶಾಲೆಗೆ ಹೋಗಿದ್ದರು. ಇವರನ್ನು ಕಂಡು ಅವಳಿಗೆ ಎಲ್ಲರೂ ತಮಾಷೆ ಮಾಡಿದ ಕಾರಣ ಅಂದೇ ರಾತ್ರಿ ಮಗಳು; ‘ಅಪ್ಪಾ! ಇನ್ನು ನೀನು ಶಾಲೆಯತ್ತ ಬರುವುದೇ ಬೇಡ’ ಅಂದುಬಿಟ್ಟಳು.
ಪರಿಚಯವಿಲ್ಲದ ಬದುಕು : ರಾತ್ರಿ ಕಾಡಿನಿಂದ 8 ಗಂಟೆಗೆ ಮನೆಗೆ ಬಂದು ನಂತರ ಪೇಟೆಗೆ ಹೋದರೆ ಮತ್ತೆ ತೂರಾಡುತ್ತಾ ಮನೆ ಸೇರುವಾಗ ಮಧ್ಯರಾತ್ರಿಯಾಗುತ್ತಿತ್ತು. ರಾತ್ರಿ ಮಕ್ಕಳನ್ನು ಎಬ್ಬಿಸುವುದು, ಕುಡಿದ ಮತ್ತಿನಲ್ಲಿ ಹೆಂಡತಿಗೆ ಬಡಿಯುವುದು, ಜಗಳವಾಡುವುದು ಸಾಮಾನ್ಯವಾಗಿತ್ತು. ಬೆಳಗ್ಗೆ ಬೇಗ ಮತ್ತೆ ಕಾಡಿನತ್ತ ತೆರಳುವ ಕಾರಣ ಮಕ್ಕಳ ಪಾಲಿಗಂತೂ ಇವರು ಅಪರಿಚಿತರಾಗಿದ್ದರು.
ಕುಡಿತ ಬಿಡಿಸಲು ಹತ್ತಾರು ಪ್ರಯತ್ನ
ತನ್ನ ಮನೆಯವರು, ಹೆಂಡತಿ ಮನೆಯವರು ಸೇರಿ ಕುಡಿತ ಬಿಡಿಸಲೆಂದು ಹತ್ತಾರು ಪ್ರಯತ್ನಗಳನ್ನು ಮಾಡಿದ್ದಾರೆ. ನೂರಾರು ಬಾರಿ ಪಂಚಾತಿಗೆ ಮಾಡಿಸಿ ದೇವರ ಹೆಸರು ಹೇಳಿಸಿ ಕುಡಿತ ಬಿಡಿಸಲು ಪ್ರಯತ್ನಿಸಿದರೂ ದಿವಾಕರ್ ಬದಲಾಗಲಿಲ್ಲ. ಪಂಚಾತಿಗೆ ನಡೆದ ಒಂದೆರಡು ದಿನಗಳವರೆಗೆ ಕುಡಿತದ ವಾಸನೆ ಬಾರದ ಮದ್ಯವನ್ನು ಸೇವಿಸಿ ನಂತರ ಮತ್ತೆ ಸಾಮಾನ್ಯ ಕುಡುಕನಾಗುವುದು ಇವರಿಗೆ ಮಾಮೂಲಿಯಾಗಿತ್ತು.
ಸಂಬoಧಿಗಳು ಶಿಬಿರ ಸೇರಿಸಿದರು : ಹೇಗಾದರೂ ಮಾಡಿ ದಿವಾಕರ್‌ರವರ ಕುಡಿತವನ್ನು ಬಿಡಿಸಬೇಕೆಂದು ಇವರ ಬಾವ ಮತ್ತು ಇತರ ಇಬ್ಬರು ಸಂಬ0ಧಿಗಳು ಒಟ್ಟು ಸೇರಿ ಹುಡುಗಿಯೊಬ್ಬಳ ಮದುವೆಗೆ ಹುಡುಗನನ್ನು ನೋಡಲು ಹೋಗೋಣವೆಂಬ ನೆಪವನ್ನು ಹೇಳಿ ದಿವಾಕರ್‌ರವರನ್ನು ಕರೆದುಕೊಂಡು ಹೋಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯಿಂದ ನಡೆಯುವ ಮದ್ಯವರ್ಜನ ಶಿಬಿರಕ್ಕೆ ಸೇರಿಸುತ್ತಾರೆ.
ಐದನೇ ದಿನವೇ ಕುಡಿತ ಬಿಡುವ ನಿರ್ಧಾರ : ಶಿಬಿರಾಧಿಕಾರಿಗಳ ಮಾತುಗಳು, ಕುಡಿತ ಬಿಟ್ಟವರ ಅನುಭವಗಳು ದಿವಾಕರ್‌ರವರ ಮನಮುಟ್ಟಿದವು. ಶಿಬಿರದ ಐದನೇ ದಿನ ಮುಂದೆoದೂ ತಾನು ಮದ್ಯಪಾನ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ದಿವಾಕರ್ ಬಂದರು.
ತಮ್ಮನನ್ನು ನೋಡಿ ಅಣ್ಣಂದಿರು ಮದ್ಯಬಿಟ್ಟರು : ದಿವಾಕರ್‌ರವರು ತನ್ನ ಸ್ವಂತ ತಮ್ಮನನ್ನೂ ಶಿಬಿರಕ್ಕೆ ಸೇರಿಸಿ ಮದ್ಯಮುಕ್ತಗೊಳಿಸಿದರು. ಇಬ್ಬರು ಸಹೋದರರು ದಿವಾಕರ್ ಅಮಲುಮುಕ್ತನಾದುದನ್ನು ಕಂಡು ತಾವು ಸ್ವಯಂಪ್ರೇರಿತರಾಗಿ ಪಾನಮುಕ್ತರಾದರು.
ಬದಲಾದ ಬದುಕು : ದಿವಾಕರ್‌ರವರ ಪಾನಮುಕ್ತ ಬದುಕಿಗೆ ಇದೀಗ ಹದಿಮೂರು ವರ್ಷಗಳು ಸಂದಿವೆ. ಕುಡಿತ ಬಿಟ್ಟ ನಂತರ ಮರ ಕತ್ತರಿಸುವ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ. ತನಗಿರುವ ಮೂರು ಎಕರೆಯನ್ನು ಹಸಿರಾಗಿಸಿದ್ದಾರೆ. ಮೀನು ಸಾಕಣೆಯನ್ನು ಕೈಗೊಂಡಿದ್ದಾರೆ. ಕೃಷಿಯಿಂದ ಬಂದ ಹಣವನ್ನು ಉಳಿಸಿ ಸುಂದರವಾದ ಮನೆಯೊಂದನ್ನು ಕಟ್ಟಿದ್ದಾರೆ. ಕೃಷಿಗೆ ಪೂರಕವಾಗಿ ಕೊಳವೆಬಾವಿಯನ್ನು ಕೊರೆಸಿದ್ದಾರೆ. ಸುಮಾರು ಒಂಭತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಮಗಳಿಗೆ ಓದಿಸಿ ಸಾಫ್ಟ್ವೇರ್ ಇಂಜಿನಿಯರ್ ಮಾಡಿಸಿದ್ದಾರೆ. ಮಗಳಿಗೆ ಮದುವೆಯೂ ಆಗಿದೆ. ಮಗನಿಗೆ ವಾಹನವೊಂದನ್ನು ಖರೀದಿಸಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಗ ಅದರಲ್ಲಿ ದುಡಿಯುತ್ತಿದ್ದಾರೆ.
ಮದ್ಯಮುಕ್ತ ಗ್ರಾಮವನ್ನಾಗಿಸಿದ ಹೆಗ್ಗಳಿಕೆ
ತನ್ನಂತೆ ಊರಿನ ಒಂದಷ್ಟು ಮಂದಿ ಅಮಲಿಗೆ ದಾಸರಾಗಿ ತಮ್ಮ ಬದುಕನ್ನು ನರಕವನ್ನಾಗಿಸಿಕೊಂಡಿರುವುದನ್ನು ಕಣ್ಣಾರೆ ಕಂಡ ದಿವಾಕರ್ ತನ್ನ ಗ್ರಾಮವನ್ನೇ ಮದ್ಯಮುಕ್ತಗೊಳಿಸುವ ನಿಟ್ಟಿನಲ್ಲಿ ಪಣತೊಟ್ಟರು. ಇವರು ಅಧ್ಯಕ್ಷರಾಗಿರುವ ‘ತ್ರಿನೇತ್ರ’ ನವಜೀವನ ಸಮಿತಿಯ ಸದಸ್ಯರೆಲ್ಲ ಮನೆ ಮನೆಗೆ ತೆರಳಿ ಮದ್ಯ ತಯಾರಿ, ಮಾರಾಟ, ಮದ್ಯಸೇವನೆಯನ್ನು ನಿಲ್ಲಿಸುವಂತೆ ಭಿನ್ನವಿಸಿಕೊಂಡರು. ಇವರ ಪ್ರಯತ್ನದ ಫಲವಾಗಿ ೮ ವರ್ಷಗಳ ಹಿಂದೆ ‘ವಡಾಹೊಸಳ್ಳಿ’ ಗ್ರಾಮ ಮದ್ಯಮಾರಾಟಮುಕ್ತ ಗ್ರಾಮವಾಗಿದೆ. ಗ್ರಾಮದ ಜನರಲ್ಲಿ ಮದ್ಯಪಾನದ ಕುರಿತು ಜಾಗೃತಿ ಬಂದ ಕಾರಣ ದಿನಕಳೆದಂತೆ ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆಯಾಗಿ ಇದೀಗ ಈ ಗ್ರಾಮದಲ್ಲಿರುವ 100 ಮನೆಗಳಲ್ಲಿ ಹೆಚ್ಚೆಂದರೆ ಹತ್ತು ಮಂದಿ ಮದ್ಯಪಾನ ಮಾಡುವವರಿರಬಹುದು.
26 ಮಂದಿಯನ್ನು ಮದ್ಯಮುಕ್ತಗೊಳಿಸಿದರು : ಈಗಾಗಲೇ 29 ಮಂದಿಯನ್ನು ಶಿಬಿರಕ್ಕೆ ಸೇರಿಸಿ ಮದ್ಯಮುಕ್ತರನ್ನಾಗಿಸಿದ್ದಾರೆ. ಇವರ ಈ ಪ್ರಯತ್ನಕ್ಕೆ ಜನಜಾಗೃತಿ ವೇದಿಕೆ ‘ಜಾಗೃತಿ ಮಿತ್ರ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದಿವಾಕರ್ ಸೇರಿದ ಮದ್ಯವರ್ಜನ ಶಿಬಿರದಲ್ಲಿ 139 ಮಂದಿ ಇದ್ದು ಅವರುಗಳಲ್ಲಿ 130 ಮಂದಿ ಮದ್ಯಮುಕ್ತ ಬದುಕನ್ನು ಸಾಗಿಸುತ್ತಿದ್ದಾರೆ.
ಶಿಬಿರದಲ್ಲಿ ಅನುಭವ ಹಂಚಿಕೆ : ಮದ್ಯವರ್ಜನ ಶಿಬಿರ ನಡೆಯುವಲ್ಲಿಗೆ ಹೋಗಿ ತನ್ನ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಜೊತೆಗೆ ಸ್ವಯಂ ಸೇವಕರಾಗಿ ಒಂದೆರಡು ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ.
ಮಗ ಅಮಲುಮುಕ್ತನಾಗುವುದನ್ನು ಕಂಡು ತಾಯಿ ಪಟ್ಟ ಖುಷಿ ಅಷ್ಟಿಷ್ಟಲ್ಲ. ಇದೀಗ ದಿವಾಕರ್‌ರವರಿಗೆ ಕುಟುಂಬ, ಸಮಾಜದಲ್ಲಿ ವಿಶೇಷ ಗೌರವವಿದೆ. ಓರ್ವ ಉತ್ತಮ ಕೃಷಿಕ ಕೂಡಾ ಹೌದು. ಮದುವೆಯ ದಲ್ಲಾಳಿ ಕೆಲಸವನ್ನು ಮಾಡುತ್ತಾರೆ. ತನ್ನ ಗ್ರಾಮದ ದೇವಾಲಯದ ಕಮಿಟಿಯಲ್ಲಿ ಸದಸ್ಯರಾಗಿದ್ದಾರೆ. ಹಾಡುಗಾರಿಕೆ, ಭಾಗವತಿಕೆ ಮುಂತಾದ ತನ್ನಲ್ಲಿದ್ದ ಕಲೆಗಳಿಗೆ ಮರುಜೀವ ಬಂದಿದೆ. ದಿವಾಕರ್‌ರವರ ಛಲ ಬಿಡದ ಪ್ರಯತ್ನ ಇಂದಿನ ಯುವಜನತೆಗೆ ಸ್ಫೂರ್ತಿಯಾಗಲಿ.