ಹೆತ್ತವರ ಕೈಯಲ್ಲಿದೆ ಮಕ್ಕಳ ಭವಿಷ್ಯ

ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು

ಸುಮಾರು4-5 ಗಂಟೆಗಳ ರೈಲು ಪ್ರಯಾಣದಲ್ಲಿ ಅನೇಕ ವಿಚಾರಗಳು ನಮ್ಮ ಗಮನವನ್ನು ಸೆಳೆಯುತ್ತಿರುತ್ತವೆ. ಇದುವರೆಗೆ ನಿದ್ದೆಯೇ ಮಾಡಿಲ್ಲವೇನೋ ಎಂಬoತೆ ಗೊರಕೆ ಹೊಡೆಯುತ್ತಾ ಮಲಗಿದವರು, ಯಾವಾಗ ತಾನಿಳಿಯುವ ಸ್ಥಳ ಬರುವುದೋ ಎಂದು ಕಾತರದಿಂದ ಗಂಟೆ ನೋಡುತ್ತಾ ಕಾಯುವವರು, ತನ್ನ ಮೊಬೈಲ್‌ನಲ್ಲಿ ಹಾಡು, ವೀಡಿಯೋ ನೋಡುವುದರಲ್ಲೇ ಮಗ್ನರಾಗಿ ಪ್ರಪಂಚವನ್ನೆ ಮರೆತವರು, ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡಿ ನಗುವವರು ಹೀಗೆ ಎಲ್ಲರೂ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ.
ಅವರೆಲ್ಲರ ಮಧ್ಯೆ ಪುಸ್ತಕ ಓದಿನಲ್ಲಿ ತಲ್ಲೀನಳಾಗಿ ತನ್ನಷ್ಟಕ್ಕೆ ನಗುತ್ತಿರುವ ಹುಡುಗಿಯೊಬ್ಬಳನ್ನು ನೋಡಿ ವಯಸ್ಸಾದ ವ್ಯಕ್ತಿಯೊಬ್ಬರು ನಿಮ್ಮ ಮಗಳಿಗೆ ಮೊಬೈಲ್ ಕೊಡಿಸಿಲ್ಲವೇನೋ! ಎಲ್ಲಾ ಮಕ್ಕಳು ಮೊಬೈಲ್‌ನಲ್ಲಿ ಆಟ ಆಡುತ್ತಾ ಖುಷಿಪಡುತ್ತಿರುವಾಗ ಇವಳಿಗೆ ಪುಸ್ತಕ ಓದಲು ಬೇಸರವಾಗುವುದಿಲ್ಲವೆ? ಅಂದಾಗ ತಾಯಿ ಹಾಗಲ್ಲ ಸಾರ್, ಅವಳಲ್ಲೂ ಮೊಬೈಲ್ ಇದೆ ಆದರೆ ಅದನ್ನು ಎಲ್ಲಿ, ಯಾವಾಗ, ಯಾವುದಕ್ಕೆ, ಎಷ್ಟು ಬೇಕೋ ಅಷ್ಟು ಬಳಸುತ್ತಾಳೆಯೇ ವಿನಹ ಅದಕ್ಕೆ ಜೋತು ಬೀಳುವವಳಲ್ಲ’. ಅಂದಾಗ ಮತ್ತೆ ಕೆಣಕಿದ ವೃದ್ಧರು,ಓಹೋ| ಹಾಗಾದರೆ ನಿಮ್ಮ ಮಗಳನ್ನು ತುಂಬಾ ಹದ್ದು ಬಸ್ತಿನಲ್ಲಿ ಶಿಸ್ತಿನಲ್ಲಿ ಬೆಳೆಸಿದ್ದೀರಿ ಎಂದಾಯ್ತು’ ಎಂದಾಗ, ಇಲ್ಲ ಅವಳಿಗೆ ಸಂಪೂರ್ಣ ಸ್ವಾತಂತ್ರ÷್ಯ ಕೊಟ್ಟಿದ್ದೇವೆ ಜೊತೆಗೆ ಮೊಬೈಲ್‌ನಿಂದ ಆಗುವ ಒಳಿತು – ಕೆಡುಕುಗಳ ಬಗ್ಗೆ ಪೂರ್ಣ ಮಾಹಿತಿ ಕೊಟ್ಟಿದ್ದೇವೆ. ಮೊಬೈಲ್ ನೋಡಬಹುದಾದರೂ ಅದರಲ್ಲಿ ಮನೆ ಮಂದಿಯಿAದ ಮುಚ್ಚಿಡುವಂತಹ ವಿಷಯಗಳಾಗಲೀ ಅಪರಿಚಿತರೊಂದಿಗೆ ಮಾತುಕತೆ, ಭಾವಚಿತ್ರಗಳನ್ನು ಹಾಕುವುದಾಗಲೀ ಮಾಡಬಾರದೆಂಬ ಎಚ್ಚರಿಕೆಯನ್ನು ಕೊಟ್ಟಿದ್ದೇವೆ. ಮೊಬೈಲ್‌ನಿಂದ ಆಗುವ ಅನಾಹುತಗಳ ಬಗ್ಗೆ ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಓದಿ ಅವಳೂ ಎಚ್ಚರಿಕೆ ವಹಿಸುತ್ತಿದ್ದಾಳೆ. ಅವಳು ಮಾತ್ರವಲ್ಲ ನಾವು ಮನೆ ಮಂದಿ ಎಲ್ಲಾ ಒಂದು ಮಿತಿಯಲ್ಲೇ ಮೊಬೈಲ್ ಅನ್ನು ಬಳಕೆ ಮಾಡುತ್ತೇವೆ. ಬಿಡುವಿನ ಸಮಯದಲ್ಲಿ ಮನೆ ಮಂದಿ ಎಲ್ಲಾ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಓದುವುದು, ಹೂತೋಟದ ಕೆಲಸ ಇತ್ಯಾದಿ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೇವೆ. ಇದರೊಂದಿಗೆ ಮಕ್ಕಳು ಕೈ ಜೋಡಿಸುತ್ತಿದ್ದಾರೆ.
ಇಂದಿನ ದಿನಗಳಲ್ಲಿ ಬಹುತೇಕ ಮಕ್ಕಳು ಮೊಬೈಲ್ ಮಾಯೆಯ ಬಲೆಗೆ ಸಿಲುಕಿ ಅದರಿಂದ ಹೊರಬರಲಾಗದಂತಹ ಪರಿಸ್ಥಿತಿಯಲ್ಲಿದ್ದಾರೆ. ಮೊಬೈಲ್ ಎಂದರೆ ಏನು ಎಂಬುದನ್ನು ಕೂಡಾ ತಿಳಿಯದ ಮಗು ಮೊಬೈಲ್ ಕಂಡೊಡನೆ ತನ್ನ ಅಳುವನ್ನು ನಿಲ್ಲಿಸುತ್ತದೆ. ಒಂದು ವೇಳೆ ಅದರ ಕೈಯಿಂದ ಮೊಬೈಲನ್ನು ತೆಗೆದಿರಿಸಿದರೆ ಸಾಕು ಜೋರಾಗಿ ಕೂಗಿ, ನೆಲದಲ್ಲಿ ಹೊರಳಾಡಿ ದೊಡ್ಡ ರಂಪಾಟವನ್ನೇ ಮಾಡುತ್ತದೆ.
ಶಾಲೆ – ಕಾಲೇಜಿಗೆ ಹೋಗುವ ಮಕ್ಕಳಿಗಂತೂ ಮೊಬೈಲ್ ಜೊತೆಗಿದ್ದರೆ ಊಟವೂ ಬೇಡ, ನಿದ್ರೆಯೂ ಬೇಡ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅದು ಅವರ ಆಪ್ತಬಾಂಧವ. ಇದೀಗ ಶೈಕ್ಷಣಿಕವಾಗಿ ಪಠ್ಯ ಕಾರ್ಯಕ್ರಮಗಳಿಗಾಗಿ ಮೊಬೈಲ್ ಅನಿವಾರ್ಯವಾದರೂ ಅತಿಯಾದ ಬಳಕೆಯಿಂದ ಒಂದಲ್ಲ ಒಂದು ರೀತಿಯ ದುಷ್ಪರಿಣಾಮ ಬೀರುವುದಂತೂ ಸತ್ಯ. ಈ ಬಗ್ಗೆ ಸಾಕಷ್ಟು ಮಾಹಿತಿ, ಜಾಗೃತಿಯಿದ್ದರೂ ಮೊಬೈಲ್ ವ್ಯಾಮೋಹವೇನೂ ಕಡಿಮೆಯಾಗಿಲ್ಲ.
ಮೊಬೈಲ್‌ನಿಂದ ಸಾಕಷ್ಟು ಪ್ರಯೋಜನಗಳಿವೆ. ಅಂತೆಯೇ ಎಚ್ಚರ ತಪ್ಪಿದರೆ ಅಷ್ಟೇ ಅಪಾಯವೂ ಇದೆ. ಮೊಬೈಲ್‌ನ ಓದು, ಆಟ, ಮಾತು, ಮನರಂಜನೆ ಇತ್ಯಾದಿ ಎಲ್ಲವೂ ಇತಿ-ಮಿತಿಯಲ್ಲಿದ್ದರೇನೇ ಒಳ್ಳೆಯದು. ಅದು ಮಿತಿ ಮೀರಿದರೆ ಅಮೃತವೂ ವಿಷವಾದಂತೆ. ಇಂತಹ ವಿಚಾರಗಳ ಬಗ್ಗೆ ಮಕ್ಕಳ ಹೆತ್ತವರು ಹೆಚ್ಚು ಎಚ್ಚರ ವಹಿಸುವುದು ಅಗತ್ಯ.
ಇತ್ತೀಚೆಗೆ ಒಂದು ಸಿನಿಮಾ ಬಂದಿತ್ತು Selfy Mummy Google Daddy ಎಂದು, ತಾಯಿಗೆ ಅಡುಗೆ, ಮಕ್ಕಳಿಗಿಂತ ಹೆಚ್ಚು ತಾನು ಮೇಕಪ್ ಮಾಡಿ ಸೆಲ್ಫಿ ತೆಗೆದು ಮೊಬೈಲ್‌ನಲ್ಲಿ ಹಾಕುವುದು ಮತ್ತು ಎಷ್ಟು ಲೈಕ್ ಬರ್ತದೆ ಎಂದು ಕಾಯುವುದು ಅದೇ ಕೆಲಸ. ಗಂಡನೂ ಇಡೀ ದಿನ ಗೂಗಲ್‌ನಲ್ಲಿ ಏನನ್ನೋ ಹುಡುಕುತ್ತಾ ಅವನದೇ ಧ್ಯಾನದಲ್ಲಿ ತಲ್ಲೀನ. ಮಕ್ಕಳ ಬಗ್ಗೆ ಅಂತೂ ಕೇಳಲೇಬೇಕಿಲ್ಲ. ಒಬ್ಬೊಬ್ಬರು ಒಂದೊoದು ಮೂಲೆಯಲ್ಲಿ ಕುಳಿತು ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಓರ್ವ ಒಂದು ಮೊಬೈಲ್ ಗೀಳು ಬಿಡಿಸುವ ಸಂಸ್ಥೆಯನ್ನು ಆರಂಭಿಸಿದರೆ ಎಲ್ಲರೂ ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಧಾವಿಸುತ್ತಾರೆ. ಆತ ಹೇಳುತ್ತಾನೆ, `ಮೊದಲು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬನ್ನಿ. ಈಗ ಕ್ಲಾಸ್ ತಗೋ ಬೇಕಾಗಿರುವುದು ನಿಮಗೆ. ಯಾಕೆಂದ್ರೆ, ಒಂದು ಮಂಗನ ಮರಿ ಮರದಿಂದ ಮರಕ್ಕೆ ಹಾರುವುದನ್ನು ಕಲಿಯುವುದು ತನ್ನ ತಾಯಿಯನ್ನು ನೋಡಿ. ಹಾಗೇ ಮರಿಹಕ್ಕಿ ಹಾರುವುದು ಅಮ್ಮ ಹಾರುವುದನ್ನು ನೋಡಿ.’ ಹೀಗೆ ಮಕ್ಕಳು ಇವತ್ತು ಇಷ್ಟೊಂದು ಮೊಬೈಲ್ ಗೀಳು ಅಂಟಿಸಿಕೊಳ್ಳಬೇಕಾದರೆ ಅದಕ್ಕೆ ನೀವೇ ಕಾರಣ ಅಂತಾರೆ. ಆದ್ದರಿಂದ ನಿಮ್ಮ ಮೊಬೈಲ್ ಗೀಳನ್ನು ಮೊದಲು ಬಿಡಿಸಬೇಕಾಗಿದೆ.
ತಮ್ಮ ತಂದೆ – ತಾಯಿ, ಗುರು-ಹಿರಿಯರು, ಸ್ನೇಹಿತರು, ನೆರೆ-ಹೊರೆಯವರನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಅವರನ್ನೇ ಅನುಕರಣೆ ಮಾಡುತ್ತಾರೆ. ಹಾಗಾಗಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಮೊಬೈಲ್ ಬಳಕೆಯ ಚಟವನ್ನು ಬಿಡಿಸಿ ಅಗತ್ಯವಿದ್ದಾಗಷ್ಟೇ ಬಳಸಲು ಹೇಳಬೇಕು. ನಮ್ಮ ಸಂಸ್ಕೃತಿ, ಪರಂಪರೆಯ ಉತ್ತರಾಧಿಕಾರಿಗಳು ಅವರು. ಅವರ ಸಮಯ, ಬದುಕು, ಭವಿಷ್ಯ ಅಮೂಲ್ಯವಾದದ್ದು.
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು

Facebook
Twitter
WhatsApp
LinkedIn
Telegram

2 Responses

Leave a Reply

Your email address will not be published. Required fields are marked *

Latest Updates