ಡಾ| ಎಲ್. ಎಚ್. ಮಂಜುನಾಥ್
ಒಂದು ಕಾಲ ಇತ್ತು, ಹಳ್ಳಿಗಳಲ್ಲಿ ಹೆಚ್ಚಿನ ಮನೆಗಳಲ್ಲಿ ದನ – ಕರುಗಳು, ಎಮ್ಮೆ ಮುಂತಾದ ಜಾನುವಾರುಗಳನ್ನು ಸಾಕುವುದು ವಾಡಿಕೆಯಾಗಿತ್ತು. ಎಷ್ಟೇ ಬಡವರಾಗಿದ್ದರೂ ಮನೆಯಲ್ಲಿ ಜಾನುವಾರುಗಳನ್ನು ಇಟ್ಟುಕೊಳ್ಳುವುದು ಪುಣ್ಯದ ಕೆಲಸ ಎಂದು ಭಾವಿಸುತ್ತಿದ್ದರು. ನಮ್ಮ ರಾಜ್ಯದ ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಹೈನುಗಾರಿಕೆ ಇಲ್ಲದೇ ಹೋದರೂ ಕಡಿಮೆ ಹಾಲು ಕೊಡುವ ಮಲೆನಾಡು ಗಿಡ್ಡ, ಅಮೃತಮಹಲ್, ಹಳ್ಳಿಕಾರ್ ಮುಂತಾದ ದನಗಳನ್ನು ರೈತರು ಸಾಕುತ್ತಿದ್ದರು. ಸಾಗಾಟದಲ್ಲಿ ಯಾಂತ್ರೀಕರಣವಾದ ನಂತರ ಜಾನುವಾರು ಸಾಕಣೆಗೆ ಬಹಳ ದೊಡ್ಡ ಆಘಾತವಾಯಿತೆಂದೇ ಹೇಳಬಹುದು. ಎತ್ತಿನ ಗಾಡಿಗಳು ಇದ್ದ ಕಾಲದಲ್ಲಿ ರೈತನ ಮನೆಯಲ್ಲಿ ಎತ್ತುಗಳು, ಹೋರಿಗಳು, ದನಗಳು ಅನಿವಾರ್ಯವಾಗಿದ್ದವು. ಟ್ರಾö್ಯಕ್ಟರ್, ಟಿಲ್ಲರ್, ಆಟೋ ರಿಕ್ಷಾ, ಪಿಕ್ಅಪ್ ಮುಂತಾದ ವಾಹನಗಳು ರೈತನ ಉತ್ಪನ್ನಗಳನ್ನು ಸಾಗಾಟ ಮಾಡತೊಡಗಿದ ಮೇಲೆ ರೈತರಿಗೆ ಎತ್ತಿನ ಗಾಡಿ ಮತ್ತು ಎತ್ತು ಹೊರೆಯೆನ್ನಿಸತೊಡಗಿದ ಮೇಲೆ ಈ ಜಾನುವಾರುಗಳು ರೈತನ ಹಟ್ಟಿಯಿಂದ ಕಣ್ಮರೆಯಾಗತೊಡಗಿದವು. ಇದೀಗ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳನ್ನು ಬಿಟ್ಟರೆ ಎತ್ತುಗಳನ್ನು ಸಾಕುವವರು ಅಪರೂಪ ಎಂದೇ ಹೇಳಬಹುದು.
ಇನ್ನು ಹಾಲಿನ ದನಗಳ ವಿಚಾರಕ್ಕೆ ಬಂದರೆ ಕಡಿಮೆ ಹಾಲು ಕೊಡುವ ಜಾನುವಾರುಗಳನ್ನು ಸಾಕಿಕೊಂಡು ಪ್ರತಿಯೊಂದು ಮನೆಯಲ್ಲಿಯೂ ಅಲ್ಪ ಸ್ವಲ್ಪ ಹಾಲನ್ನು ಉತ್ಪಾದಿಸುವಂತಹ ವಾಡಿಕೆ ಸೊಸೈಟಿಯಲ್ಲಿ ಹಾಲು ಮಾರಾಟ ಪ್ರಾರಂಭವಾದ ಮೇಲೆ ಕಣ್ಮರೆಯಾಗತೊಡಗಿತು. ಈಗಂತೂ ಹಳ್ಳಿಯಲ್ಲಿ ಉತ್ಪಾದನೆಯಾದ ಹಾಲು ಪೇಟೆಗೆ ಹೋಗಿ ಪರಿಷ್ಕರಣೆಗೊಂಡು ಪುನಃ ಹಳ್ಳಿಗೇ ವಾಪಸ್ ಬರುತ್ತದೆ. ‘ಮಿಶ್ರತಳಿ’ ಎಂಬ ಹೆಚ್ಚು ಹಾಲು ಉತ್ಪಾದನೆ ಮಾಡುವ ಜಾನುವಾರುಗಳು ಬಂದ ಮೇಲೆ ಹೈನುಗಾರಿಕೆ ಎಂಬ ಉದ್ಯಮ ಪ್ರಾರಂಭಗೊoಡು ಹಾಲು ಉತ್ಪಾದನೆ ಮಾಡುವವರದ್ದೇ ಒಂದು ವರ್ಗವಾಯಿತು. ಇವರು ಹಾಲನ್ನು ಉತ್ಪಾದಿಸಿ ತಮ್ಮ ಹತ್ತಿರದ ಹಾಲಿನ ಸೊಸೈಟಿಗೆ ಪೂರೈಸುವುದರಿಂದ ಇದೊಂದು ಉದ್ದಿಮೆಯಾಗಿ ಬೆಳೆಯಿತು. ಇದಾದ ನಂತರ ಸಣ್ಣಪುಟ್ಟ ರೈತರು ತಮ್ಮ ಸಣ್ಣಪುಟ್ಟ ದನಗಳನ್ನು, ಕಡಿಮೆ ಹಾಲು ಕೊಡುವ ದನಗಳನ್ನು ತ್ಯಜಿಸತೊಡಗಿದರು. ಹೀಗಾಗಿ ಜಾನುವಾರು ಸಾಕಣೆ ಮಾಡುವವರಿದ್ದರೆ ಹಾಲಿಗಾಗಿಯೇ ಸಾಕುವವರಿದ್ದಾರೆ ಬಿಟ್ಟರೆ ಪ್ರೀತಿಗಾಗಿ ಜಾನುವಾರು ಸಾಕುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಜಾನುವಾರು ಸಾಕಣೆ ಅವಗಣನೆಗೆ ತುತ್ತಾಗಲು ಇನ್ನೊಂದು ಮುಖ್ಯ ಕಾರಣ ಹಳ್ಳಿಯ ಮಕ್ಕಳಿಗೆ ಜಾನುವಾರು ಸಾಕಣೆಯ ಬಗ್ಗೆ ಪ್ರೀತಿ ಕಡಿಮೆಯಾಗಿರುವುದು. ಹಳ್ಳಿಯ ಮಕ್ಕಳು ಶಾಲೆಗೆ ಹೋಗತೊಡಗಿದ ನಂತರ ಅವರ ತಂದೆ – ತಾಯಂದಿರೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಗಮನಹರಿಸತೊಡಗಿದ್ದರಿಂದ ಮಕ್ಕಳು ಹಟ್ಟಿಗೆ ಬರುವುದು ಬಹಳಷ್ಟು ಕಡಿಮೆಯಾಗಿದೆ. ಇದರಿಂದಾಗಿ ಮನೆಯಲ್ಲಿರುವ ಆಕಳು ಸಾಕಣೆ ಮಾಡಲು ಜನರೇ ಇಲ್ಲದಿರುವಂತಹ ಸಂದರ್ಭ ಒದಗಿ ಬಂದು ಜಾನುವಾರುಗಳನ್ನು ಮಾರಾಟ ಮಾಡಿ ಹಟ್ಟಿಯನ್ನು ಖಾಲಿ ಮಾಡುವಂತಹ ಮನೋಭಾವ ಇಂದು ಕೃಷಿಕರಲ್ಲಿ ಕಾಣುತ್ತೇವೆ.
ಇದರ ಪರಿಣಾಮ ಭೂಮಿತಾಯಿಯ ಮೇಲೆ ಎದ್ದು ಕಾಣುತ್ತದೆ. ಇಂದು ಕೃಷಿಯಿಂದ ಇಳುವರಿ ಪಡೆಯಬೇಕೆಂದರೆ ರಾಸಾಯನಿಕ ಗೊಬ್ಬರಗಳನ್ನು ಸುರಿಯಬೇಕು. ರಾಸಾಯನಿಕ ಗೊಬ್ಬರಗಳನ್ನು ತಿಂದುoಡು ಬೆಳೆದ ಗಿಡ ಮರಗಳು ಪೌಷ್ಟಿಕಾಂಶದ ಕೊರತೆಯಿಂದ ಬಳಲತೊಡಗುವುದರಿಂದ ಅವುಗಳಿಗೆ ಕ್ರಿಮಿನಾಶಕ, ಕೀಟನಾಶಕಗಳ ಬಳಕೆ ಯಥೇಚ್ಛವಾಗಬೇಕು. ಇದಾದ ನಂತರ ಸುತ್ತಮುತ್ತಲಿನಲ್ಲಿ ಕೀಟಗಳು, ಚಿಟ್ಟೆಗಳು ಕಣ್ಮರೆಯಾಯಿತು. ಕೀಟಗಳು, ಚಿಟ್ಟೆಗಳು ಕಣ್ಮರೆಯಾದ ನಂತರ ನೈಸರ್ಗಿಕವಾಗಿ ಉಂಟಾಗುತ್ತಿದ್ದ ಪರಾಗಸ್ಪರ್ಶ ಕ್ರಿಯೆ ಮಾಯವಾಗಿ ಹೂವು, ಹಣ್ಣುಗಳನ್ನು ಉತ್ಪಾದಿಸುವುದು ದುಸ್ತರವಾಗತೊಡಗಿತು.
ಜಾನುವಾರಿನ ಸೆಗಣಿ ಮತ್ತು ಮೂತ್ರದಿಂದ ನಮ್ಮ ಕೃಷಿಯನ್ನು ಬಹಳಷ್ಟು ಸಮೃದ್ಧಭರಿತವಾಗಿ ಮಾಡಲು ಸಾಧ್ಯವಿದೆ. ಹಾಲಿಗೆ ಸಹಕಾರಿ ಸಂಘಗಳ ಅವಿರತ ಪ್ರಯತ್ನದಿಂದಾಗಿ ಉತ್ತಮ ಬೆಲೆ ಲಭ್ಯವಾಗಿದೆ. ಇಂದಿನ ಮಾರುಕಟ್ಟೆಯ ಬೆಲೆಯಲ್ಲಿ ಈ ಬೆಲೆ ಸಾಕಾಗುತ್ತಿಲ್ಲವೆಂಬ ಕೂಗು ಇದ್ದರೂ ಪ್ರಾಕೃತಿಕವಾಗಿ ಲಭ್ಯವಾಗುವ ಹಸಿರು ಹುಲ್ಲು, ಸೊಪ್ಪು ಮತ್ತು ಕೃಷಿ ತ್ಯಾಜ್ಯಗಳಾದ ಎಲೆ, ಹುಲ್ಲು ಮುಂತಾದವುಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹಾಲು ಉತ್ಪಾದನೆ ಮಾಡಲು ಇಂದಿಗೂ ಸಾಧ್ಯವಿದೆ. ಹಾಲು ಕರೆಯುವ ಒಂದೆರಡು ದನಗಳನ್ನು ಇಟ್ಟುಕೊಂಡರೆ ಕೃಷಿ ತಾಕಿಗೆ ಬೇಕಾಗುವಷ್ಟು ಗೊಬ್ಬರವನ್ನು ಉತ್ಪಾದಿಸಿಕೊಳ್ಳಲು ಸಾಧ್ಯವಿದೆ. ಮಾತ್ರವಲ್ಲದೆ ಮನೆಯಲ್ಲಿಯೂ ಕೂಡಾ ಹಾಲಿನ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ನಿರಂತರವಾಗಿ ಹಾಲು ಮಾರಾಟದಿಂದ ಆದಾಯವನ್ನು ಮಾಡಿಕೊಳ್ಳಬಹುದಾಗಿದೆ. ಯೋಜನೆಯ ವಿವಿಧ ಸ್ವಸಹಾಯ ಸಂಘಗಳ ಸದಸ್ಯರಾಗಿರುವ ನಾವೆಲ್ಲರೂ ಕೆಳಮಧ್ಯಮ ವರ್ಗದವರಾಗಿರುವುದರಿಂದ ನಮ್ಮ ಮನೆಗಳಲ್ಲಿ ಒಂದೆರಡು ದನಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡುವುದರಿಂದ ನಿರಂತರವಾಗಿ ಆದಾಯವನ್ನು ಪಡೆದುಕೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಈ ಸಂಚಿಕೆಯಲ್ಲಿ ಹೈನುಗಾರಿಕೆಯ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ನೀಡಲಾಗಿದೆ. ಉತ್ತರದ ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಗ್ರಾಮಾಭಿವೃದ್ಧಿ ಯೋಜನೆ ವಿಶೇಷವಾದ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದೆ. ರಾಜ್ಯದಾದ್ಯಂತ ಇರುವ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ಯೋಜನೆಯ ವತಿಯಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ನೀಡಲಾಗುತ್ತಿದೆ. ಇವುಗಳೆಲ್ಲದರ ಹಿಂದಿರುವ ಉದ್ದೇಶ ನಮ್ಮ ಯೋಜನೆಯ ಸದಸ್ಯರು ಹೈನುಗಾರಿಕೆಯನ್ನು ಕೈಗೊಂಡು ಆದಾಯ ಮಾಡಿಕೊಳ್ಳುವುದಲ್ಲದೆ ತಮ್ಮ ಕೃಷಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಆಗಿದೆ.
ಸಹೋದರಿಯರು ಮತ್ತು ಸಹೋದರರು ಈ ನಿಟ್ಟಿನಲ್ಲಿ ಗಮನ ಹರಿಸುತ್ತಾರೆಂದು ಆಶಿಸುತ್ತೇನೆ.