ಶ್ರೀ ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು
ಕಾಲಮಾನ ಪರಿಗಣನೆ ವಿಶ್ವದಾದ್ಯಂತ ವಿಭಿನ್ನವಾಗಿದೆ. ಹೊಸ ಸಂವತ್ಸರದ ಪ್ರಾರಂಭದ ದಿನದಿಂದ ಹಿಡಿದು ಅವುಗಳನ್ನು ಸ್ವಾಗತಿಸುವ, ಆಚರಿಸುವ ವಿಧಿವಿಧಾನದಲ್ಲೂ ಪ್ರಪಂಚದಾದ್ಯಂತ ಬಹಳಷ್ಟು ವೈವಿಧ್ಯಗಳಿವೆ. ಹಾಗೆಯೇ ವೈವಿಧ್ಯತೆಯ ಪರಮೋಚ್ಛ ರಾಷ್ಟçವಾದ ಭಾರತದಲ್ಲಿ ಹೊಸ ವರ್ಷಾಚರಣೆ ರಾಜ್ಯದಿಂದ ರಾಜ್ಯಗಳಲ್ಲಿ ವಿಭಿನ್ನವಾಗಿ ನಡೆಯುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೂತನ ಸಂವತ್ಸರದ ಆರಂಭ ಪ್ರಕೃತಿಯ ನಿಯಮಗಳಿಗೆ ಬಹಳಷ್ಟು ಸನಿಹವಾಗಿದೆ. ಪ್ರಕೃತಿಯು ಎಲ್ಲ ಆಯಾಮಗಳಲ್ಲಿ ನವನವೀನತೆಯನ್ನು ಹೊಂದುವುದು ಚೈತ್ರ ಮಾಸದಲ್ಲಿಯೇ.
ಪ್ರಪಂಚದ ಹೆಚ್ಚು ರಾಷ್ಟçಗಳು ಜನವರಿ 1 ಅನ್ನು ಹೊಸ ವರ್ಷದ ಪ್ರಾರಂಭದ ದಿನ ಎಂದು ಆಚರಿಸುತ್ತವೆ. ಹೊಸ ವರ್ಷವನ್ನು ಸ್ವಾಗತಿಸುವ ದಿನ ಎಂಬ ಕಾರಣಕ್ಕಾಗಿ ಡಿಸೆಂಬರ್ 31ಅನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ವಿಧಾನಗಳು ಬೇರೆ ಬೇರೆಯದ್ದಾಗಿವೆ. ರಷ್ಯಾದಲ್ಲಿ ಗಿಡಗಳನ್ನು ನೆಡುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಇನ್ನು ಕೆಲವು ದೇಶಗಳ ನಂಬಿಕೆಗಳೆ ಕುತೂಹಲಕಾರಿಯಾಗಿವೆ. ಸ್ಪೇನ್ ದೇಶದಲ್ಲಿ ಮಧ್ಯರಾತ್ರಿ 12 ಗಂಟೆಗೆ 12 ದ್ರಾಕ್ಷಿಗಳನ್ನು ತಿನ್ನುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ದ್ರಾಕ್ಷಿ ಅದೃಷ್ಟದ ಸಂಕೇತವಂತೆ. ಗ್ರೀಸ್ನಲ್ಲಿ ಈರುಳ್ಳಿಗಳನ್ನು ನೇತು ಹಾಕುವ, ಜಪಾನ್ನಲ್ಲಿ ಗಂಟೆಗಳನ್ನು ಮೊಳಗಿಸುವ ಸಂಪ್ರದಾಯವಿದೆ.
ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಆಚರಿಸುವ ಸಂಸ್ಕೃತಿ ವೇಗವಾಗಿ ಕ್ಷೀಣಿಸುತ್ತಿದೆ. ಬದಲಾಗಿ ಮೋಜಿನ ಆಚರಣೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ದುಂದುವೆಚ್ಚಗಳನ್ನು, ಕೆಲವೊಂದು ಅಂಕಿಅಂಶಗಳನ್ನು ಗಮನಿಸಿದರೆ ಮೈಜುಮ್ಮೆನಿಸುತ್ತದೆ. ಕಳೆದ ವರ್ಷ ಕೇವಲ ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ 2024ರ ಡಿಸೆಂಬರ್ 31ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ನಾಟಕವೊಂದರಲ್ಲೆ ರೂ. 308 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಂಠಪೂರ್ತಿ ಮದ್ಯ ಸೇವಿಸಿ ಕುಣಿದು ಕುಪ್ಪಳಿಸುವ ವಿದೇಶಿ ಸಂಸ್ಕೃತಿ ಇಂದು ಯುವಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಬಹಳ ಆತಂಕಕಾರಿ ವಿಷಯವಾಗಿದೆ.
ಹೊಸ ವರ್ಷಾಚರಣೆಯ ನೆಪದಲ್ಲಿ ಮದ್ಯಪಾನ ಎಂಬ ದುಶ್ಚಟವನ್ನು ಪ್ರಥಮವಾಗಿ ಆರಂಭಿಸುವ ಯುವಕರು ಸಾಕಷ್ಟು ಮಂದಿ ಇದ್ದಾರೆ. ನಂತರ ಮದ್ಯಪಾನ ಎನ್ನುವ ರಾಕ್ಷಸ ಆ ಯುವಕರನ್ನು ಬೆನ್ನು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನವರು ನಿತ್ಯ ಮದ್ಯವ್ಯಸನಿಗಳಾಗಿರುವುದು ಒಂದು ದುರಂತವೇ ಸರಿ. ಇನ್ನು ರಾತ್ರಿಯ ವೇಳೆ ಹೊಸ ವರ್ಷಾಚರಣೆ ಸಂಭ್ರಮದ ನೆಪದಲ್ಲಿ ಆಗುವ ಪಾರ್ಟಿಗಳ, ಸಮಾಜದಲ್ಲಿ ಶಾಂತಿ ಕದಡುವ, ಅಸಭ್ಯವಾಗಿ ವರ್ತಿಸುವವರ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯುವತಿಯರು ಕೂಡಾ ಮದ್ಯದ ನಶೆಯಲ್ಲಿ ತೇಲುವ, ಆಶ್ಲೀಲವಾಗಿ ವರ್ತಿಸುವ ದೃಶ್ಯಗಳು ಪ್ರತಿವರ್ಷ ಮಾಧ್ಯಮಗಳಲ್ಲಿ ಭಿತ್ತರವಾಗುತ್ತದೆ. ಸರಕಾರ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮುಂತಾದ ಹಲವಾರು ಮುಂಜಾಗರೂಕತಾ ಕ್ರಮಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ. ಆದರೂ ರಾಜ್ಯದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಒಂದಷ್ಟು ಕೊಲೆ, ಅಪರಾಧ ಕೃತ್ಯಗಳು ನಡೆಯುತ್ತವೆ.
ಹೊಸ ವರ್ಷಾಚರಣೆಯಂದು ವರ್ಷದುದ್ದಕ್ಕೂ ನಮ್ಮ ಜೀವನ ಸಾಗಿ ಬಂದ ಬಗ್ಗೆ ಒಮ್ಮೆ ಅವಲೋಕನ ಮಾಡೋಣ. ತಿಳಿದೋ, ತಿಳಿಯದೆಯೋ ಮಾಡಿರುವ ತಪ್ಪುಗಳಿದ್ದರೆ ಎಲ್ಲವನ್ನು ಒಪ್ಪಿಕೊಂಡು ಅವುಗಳನ್ನು ತಿದ್ದಿಕೊಂಡು ಸಜ್ಜನತೆಯಿಂದ ಬದುಕುವ ಪರಿವರ್ತನೆಯ ಸಂಕಲ್ಪ ಕೈಗೊಳ್ಳೋಣ. ಕುಟುಂಬದ ಸದಸ್ಯರೊಂದಿಗೆ ಸೇರಿ ಹಬ್ಬದ ಸಂಭ್ರಮದಂತೆ ಹೊಸ ವರ್ಷಾಚರಣೆ ಮಾಡುವುದು ಒಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ. ಅನಾಥಾಶ್ರಮ, ಆಸ್ಪತ್ರೆ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಒಂದಷ್ಟು ಸೇವೆ ಮಾಡಬಹುದು ಅಥವಾ ಹಣ್ಣು, ಆಹಾರ ಸಾಮಾಗ್ರಿಗಳನ್ನು ಹಂಚಬಹುದು. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬಹುದು. ರಕ್ತದಾನ ಮಾಡಿ ಜೀವ ಉಳಿಸಬಹುದು. ಗಿಡ ನಾಟಿ, ಜಲ, ಪರಿಸರ ಸಂರಕ್ಷಣೆಗೆ ಕೆಲವು ಸೂಕ್ತ ಕಾರ್ಯಗಳನ್ನು ಮಾಡಬಹುದು. ಒಟ್ಟಿನಲ್ಲಿ ತನಗೂ, ಪರರಿಗೂ ಒಳಿತನ್ನುಂಟುಮಾಡುವ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಹೊಸ ವರ್ಷಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸೋಣ.
ಹೊಸ ವರ್ಷವು ಕೇವಲ ದಿನಾಂಕದ ಬದಲಾವಣೆಯಲ್ಲ. ಅದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಒಂದು ಅಪೂರ್ವ ಅವಕಾಶ. ಕಳೆದ ವರ್ಷದ ತಪ್ಪುಗಳಿಂದ ಪಾಠ ಕಲಿತು ಮುಂದಿನ ವರ್ಷವನ್ನು ಉತ್ತಮವಾಗಿ ಕಳೆಯಲು ಪ್ರೇರಣೆ ನೀಡುತ್ತದೆ. ಹೊಸ ವರ್ಷಾಚರಣೆ ಎಂಬುದು ಆನಂದ, ನಂಬಿಕೆ ಮತ್ತು ಆಶಯಗಳ ಸಂಗಮ. ಇದು ಪ್ರಪಂಚದಾದ್ಯಂತ ಜನರನ್ನು ಒಂದುಗೂಡಿಸಿ ಹೊಸ ಆರಂಭದ ಭರವಸೆಯನ್ನು ಮೂಡಿಸುತ್ತದೆ. ಈ ದಿನದಂದು ನಾವು ನಮ್ಮ ಗುರಿಗಳನ್ನು ಮರುಪರಿಶೀಲಿಸಿ, ಸಕಾರಾತ್ಮಕ ಚಿಂತನೆಗಳಿಂದ ಮುನ್ನಡೆಯಲು ಸಂಕಲ್ಪಿಸೋಣ.
ಆತ್ಮೀಯರೇ, ನಿಮ್ಮೆಲ್ಲ ಗೆಳೆಯರಿಗೂ, ಆತ್ಮೀಯರಿಗೂ ಈ ಒಂದು ಸಂದೇಶವನ್ನು ನೀಡಿರಿ. ಹೊಸ ವರ್ಷಾಚರಣೆಯನ್ನು ‘ಪಾರ್ಟಿಯ ಬದಲು ಪರಿವರ್ತನೆಯ ದಿನ’ ಎಂದು ಮಾದರಿಯಾಗಿ ಪ್ರಪಂಚದ ಇತರ ದೇಶಗಳಿಗೆ ಆದರ್ಶವಾಗುವಂತೆ ಆಚರಿಸೋಣ.
